ಶುಕ್ರವಾರ, ಮೇ 14, 2021
35 °C

ನೀರು ಸೋರಿಕೆ, ಹೆಗ್ಗಣಗಳ ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧದಲ್ಲಿ ನೀರು ಸೋರುತ್ತಿರುವುದು, ಹೆಗ್ಗಣಗಳು ಮನೆ ಮಾಡಿರುವುದು, ಕಟ್ಟಡದ ಮೆಟ್ಟಿಲು ಮತ್ತು ನೆಲಹಾಸುಗಳಲ್ಲಿ ಪಾಚಿ ಕಟ್ಟಿರುವ ಕುರಿತು ವಿಧಾನ ಪರಿಷತ್‌ನಲ್ಲಿ ಮಂಗಳವಾರ ಬಿರುಸಿನ ಚರ್ಚೆ ನಡೆಯಿತು. ತಕ್ಷಣವೇ ನವೀಕರಣ ಕಾಮಗಾರಿ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬಂತು.ಗಮನ ಸೆಳೆಯುವ ಸೂಚನೆ ಮಂಡಿಸಿ ಮಾತನಾಡಿದ ಬಿಜೆಪಿಯ ಅಮರನಾಥ ಪಾಟೀಲ, ವಿಧಾನಸೌಧದ ಕೆಲವೆಡೆ ಮಳೆನೀರು ಸೋರುತ್ತಿರುವುದು, ಮೆಟ್ಟಿಲುಗಳ ಬಣ್ಣ ಮಾಸಿರುವುದು, ಕಾರಂಜಿಗಳು ಹಾಳಾಗಿರುವ ಕುರಿತು ವಿವರ ನೀಡಿದರು. ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ ಅವರು ಹೆಗ್ಗಣಗಳ ಸಮಸ್ಯೆ    ಬಿಡಿಸಿಟ್ಟರು.ಬಳಿಕ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ನೀಡಿದ ಉತ್ತರದಲ್ಲಿ `ವಿಧಾನಸೌಧ ಪಾರಂಪರಿಕ ಕಟ್ಟಡ' ಎಂಬ ಉಲ್ಲೇಖ ಇತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು, `ಈ ಕಟ್ಟಡಕ್ಕೆ 56 ವರ್ಷ ಆಗಿದೆ ಅಷ್ಟೆ. 100 ವರ್ಷ ಆದ ಕಟ್ಟಡಗಳಿಗೆ ಮಾತ್ರ ಪಾರಂಪರಿಕ ಕಟ್ಟಡದ ಸ್ಥಾನಮಾನ ನೀಡಲಾಗುತ್ತದೆ. ಕೆಲಸ ಮಾಡಲಾಗದ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಾರೆ' ಎಂದು ಎಚ್ಚರಿಸಿದರು.ಈ ವಿಷಯ ತಮಗೂ ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಈ ವರ್ಷ ವಿಧಾನಸೌಧದಲ್ಲಿನ ನವೀಕರಣ ಕಾಮಗಾರಿಗಳಿಗಾಗಿ 2.70 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಅಗತ್ಯವಿದ್ದರೆ ಹೆಚ್ಚಿನ ಅನುದಾನ ಒದಗಿಸಲಾಗುವುದು. ಪರಿಶೀಲನೆ ನಡೆಸಿ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.