ಬುಧವಾರ, ಜನವರಿ 29, 2020
27 °C
ನನ್ನ ಕಥೆ

ನೃತ್ಯವೆಂಬ ಸಾಗರ ಯಾನ...

ಗುರುರಾಜ್‌ / ನಿರೂಪಣೆ –ಉಮಾ ಅನಂತ್ Updated:

ಅಕ್ಷರ ಗಾತ್ರ : | |

ನಾನಾಗ ತುಂಬ ಚಿಕ್ಕವನಿದ್ದೆ. ಬಹುಶಃ ಐದಾರು ವರ್ಷ ಇರಬಹುದು. ಟೀವಿಯಲ್ಲಿ ಕಲಾವಿದೆಯೊಬ್ಬಳು ತನ್ಮಯಳಾಗಿ ಭರತನಾಟ್ಯ ಮಾಡುತ್ತಿದ್ದಳು. ಅದನ್ನು ನೋಡುತ್ತಾ ಕುಳಿತಿದ್ದೆ. ಆ ಗೆಜ್ಜೆನಾದ, ಕೈಕಾಲುಗಳಿಗೆ ಹಚ್ಚಿದ್ದ ಬಣ್ಣ, ಮುಖಕ್ಕೆ ಹಚ್ಚಿದ್ದ ಮೇಕಪ್‌, ಅಲೆಅಲೆಯಾಗಿ ಲಯ ಕೊಡುವ ನಟುವಾಂಗ, ಕಲಾವಿದೆಯ ಉಡುಗೆ ತೊಡುಗೆ, ಹಾವಭಾವ, ಅಭಿನಯ ಭಂಗಿ ನೋಡಿ ಬಹಳ ಆಕರ್ಷಿತನಾದೆ.

ಹಿನ್ನಲೆಯಲ್ಲಿ ಬರುತ್ತಿದ್ದ ಹಿತವಾದ ಸಂಗೀತದ ಮಾಧುರ್ಯ ಆ ಎಳೆ ವಯಸ್ಸಿನಲ್ಲಿ ನನ್ನನ್ನು ಕಟ್ಟಿಹಾಕಿತ್ತು. ಅಮ್ಮ ಹೇಳಿದ್ದ ಕೃಷ್ಣನ ಬಾಲಲೀಲೆಗಳ ಕಥೆ ಮನಃಪಟಲದಲ್ಲಿ ಹಾಗೇ ಅಚ್ಚೊತ್ತಿತ್ತು. ಅದೇ ಚಿತ್ರಣ ಟೀವಿ ಪರದೆ ಮೇಲೆ ಬಂದಾಗ ಅಕ್ಷರಶಃ ಪುಳಕಗೊಂಡಿದ್ದೆ. ಆಗಲೇ ನೃತ್ಯ ಕಲಿಯಬೇಕು ಎನ್ನುವ ತುಡಿತ ಎದೆಯಾಳದಲ್ಲಿ ಮೂಡಿದ್ದು. ಅಲ್ಲಿಂದ ಮತ್ತೆ ಬೆಂಗಳೂರಿನಲ್ಲಿ ಎಲ್ಲಿಯೇ ಭರತನಾಟ್ಯ ಕಾರ್ಯಕ್ರಮ ನಡೆದರೂ ಅಮ್ಮನ ಜತೆಗೆ ನೋಡಲು ಹೋಗುತ್ತಿದ್ದೆ.ನೃತ್ಯದ ಮೇಲಿನ ನನ್ನ ಆಸಕ್ತಿ ಗುರುತಿಸಿದ ಅಮ್ಮ ಸುಮಾ ನಾಗೇಂದ್ರ ಅವರು ನನ್ನನ್ನು ವಿದುಷಿ ಶ್ರೀರಂಜಿನಿ ಉಮೇಶ್‌ ಅವರ ಬಳಿ ನೃತ್ಯ ಕಲಿಯಲು ಸೇರಿಸಿದರು. ಅವರ ಬಳಿ ಭರತನಾಟ್ಯದ ಕಲಾಕ್ಷೇತ್ರ ಶೈಲಿಯಲ್ಲಿ ನೃತ್ಯ ಕಲಿತೆ. ಆರಂಭಿಕ ಅಭ್ಯಾಸದ ಬಳಿಕ ಇದೀಗ ವಿದುಷಿ ಸೀತಾ ಗುರುಪ್ರಸಾದ್‌ ಅವರ ಬಳಿ ಭರತನಾಟ್ಯದ ಮಿಶ್ರ ಶೈಲಿಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದೇನೆ.‘ಭರತನಾಟ್ಯ ಏನಿದ್ದರೂ ಹೆಣ್ಣು ಮಕ್ಕಳು ಕಲಿಯಬೇಕು, ಅವರಿಗೇ ಅದು ಸೂಕ್ತವಾದದ್ದು, ನಿಮ್ಮ ಮಗನನ್ನು ಏಕೆ ನಾಟ್ಯ ಕಲಿಯಲು ಸೇರಿಸಿದಿರಿ...’ ಎಂದು ಅನೇಕರು ಅಮ್ಮನನ್ನು ಕೇಳುತ್ತಿದ್ದರಂತೆ. ಅದು ಹೆಣ್ಣು ಮಕ್ಕಳೇ ಕಲಿಯುವ ಕಲೆ ಅಲ್ಲ. ಪುರುಷರೂ ಇಂದು ಭರತನಾಟ್ಯದಲ್ಲಿ ಹೆಸರು ಮಾಡುತ್ತಿದ್ದಾರೆ; ಅಲ್ಲದೆ ಅದು ಮಕ್ಕಳ ಆಸಕ್ತಿ, ಅಭಿರುಚಿಯನ್ನು ಸೂಚಿಸುತ್ತದೆ ಎಂಬುದು ಅಮ್ಮನ ಸಮಜಾಯಿಷಿಯಾಗಿತ್ತು.ಹಾಗೆ ನೋಡಿದರೆ ಪೌರಾಣಿಕ ಕಥೆಗಳ ಪುಟ ತಿರುವಿದರೂ ಭರತನಾಟ್ಯದ ಮೂಲ ಪ್ರತಿಪಾದಕ, ಮೊದಲು ನಾಟ್ಯ ಆರಂಭಿಸಿದ್ದು ನಟರಾಜ. ಸದ್ಯ ನೃತ್ಯದಲ್ಲಿ ಹೆಸರುವಾಸಿಯಾಗಿರುವ ಶ್ರೀಧರ್‌, ಪಾರ್ಶ್ವನಾಥ ಉಪಾಧ್ಯ, ಯುವ ಕಲಾವಿದ ಸತ್ಯನಾರಾಯಣರಾಜು ಅವರ ನೃತ್ಯಶೈಲಿ ನನಗೆ ಪ್ರೇರಣೆ ನೀಡಿದೆ. ಹೀಗಾಗಿ ನಾನೂ ನೃತ್ಯದಲ್ಲಿ ಹೆಸರು ಮಾಡಬೇಕು ಎನ್ನುವ ತುಡಿತ ತೀವ್ರವಾಯಿತು.

ಸತತ ಅಭ್ಯಾಸ ಮಾಡಿದೆ. ಓದು, -ನೃತ್ಯ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಎರಡರಲ್ಲೂ ಪರಿಶ್ರಮ ಪಡುತ್ತಿದ್ದೇನೆ. ಈಗಾಗಲೇ ಸುಮಾರು 300ಕ್ಕೂ ಹೆಚ್ಚು ನೃತ್ಯ ಪ್ರದರ್ಶನ ನೀಡಿದ ಅನುಭವ ನನಗಿದೆ. ಅಂದ ಹಾಗೆ ನಾನು ಚಿಕ್ಕವನಿದ್ದಾಗ ಬೆಂಗಳೂರಿನ ನಾಗರಬಾವಿಯಲ್ಲಿ ಅರುಣಾ ಗೋಪಿನಾಥ್‌ ಎಂಬುವರು ಬೇಸಿಗೆ ಶಿಬಿರ ಮಾಡುತ್ತಿದ್ದರು. ಅಲ್ಲಿ ನೃತ್ಯ ಕಾರ್ಯಕ್ರಮವೂ ಇರುತ್ತಿತ್ತು. ಆಗ ನಾನೂ ಅಲ್ಲಿ ನೃತ್ಯ ಮಾಡಿದ್ದೇ. ಮೊದಲ ಬಾರಿಗೆ ವೇದಿಕೆ ಏರಿದ್ದು ಅಲ್ಲೇ. ಈ ನೆನಪು ಈಗಲೂ ನನ್ನ ಮನದಾಳದಲ್ಲಿ ಹಾಗೇ ನಿಂತಿದೆ.

ಗಂಗಜ್ಜಿಯವರ ಆಶೀರ್ವಾದ

ಅದು 2007ನೇ ಇಸವಿ. ಧಾರವಾಡದಲ್ಲಿ ಕಲಾ ವಿಕಾಸ ಪರಿಷತ್‌ ಆಯೋಜಿಸಿದ್ದ ಕಲಾ ಸಂಭ್ರಮ ಕಾರ್ಯಕ್ರಮ. ಹಿಂದೂಸ್ತಾನಿ ಸಂಗೀತ ಸಾಮ್ರಾಜ್ಞಿ ಡಾ.ಗಂಗೂಬಾಯಿ ಹಾನಗಲ್‌ ಅವರು ಬಂದಿದ್ದರು. ಅವರನ್ನು ಹತ್ತಿರದಿಂದ ನೋಡಿ ಮಾತನಾಡಿದಾಗ ಖುಷಿಯಾಯ್ತು. ಅಲ್ಲಿ ನಾನು ನೃತ್ಯ ಮಾಡಿದೆ. ಗಂಗಜ್ಜಿ ನನ್ನನ್ನು ಕರೆದು ಅಭಿನಂದಿಸಿದಾಗ ಅತ್ಯಂತ ಸಂಭ್ರಮಪಟ್ಟೆ. ಅಲ್ಲಿ ನನಗೆ ‘ಕಲಾ ಕಣ್ಮಣಿ’ ಪ್ರಶಸ್ತಿ ನೀಡಿದರು. ನನ್ನ ಅಪ್ಪ ಅಮ್ಮನಿಗೂ ತುಂಬ ಖುಷಿಯಾಯ್ತು.

ಈ ಸಮಾರಂಭ ನನಗೆ ಎಂದೆಂದೂ ಮನಸ್ಸಿನಲ್ಲಿ ಉಳಿಯುವಂಥದ್ದು. ಅಲ್ಲಿಂದ ನಂತರ ನನಗೆ ಭರತನಾಟ್ಯದಲ್ಲಿ ಅನೇಕ ಪ್ರಶಸ್ತಿಗಳು ಬಂದವು. ಆರ್ಯಭಟ ಸಾಂಸ್ಕೃತಿಕ ಸಂಸ್ಥೆ 2007ರ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ನೀಡಿದೆ. ಅದೇ ವರ್ಷ ಭಾರತ ಯುವ ಕೇಂದ್ರ ‘ಬಾಲರತ್ನ’ ಪ್ರತಿಭಾ ಪ್ರಶಸ್ತಿ, ಬೆಂಗಳೂರಿನ ನೆಹರು ಯುವ ಕೇಂದ್ರ ನೀಡುವ 2011ನೇ ಸಾಲಿನ ಸದ್ಭಾವನಾ ಪ್ರತಿಭಾ ಪುರಸ್ಕಾರ, ಗದಗದ ಕನ್ನಡ ಮಕ್ಕಳ ಮನೆ ನೀಡಿದ ‘ಬೆಳೆವ ಸಿರಿ’ ಪ್ರಶಸ್ತಿ, ಕರುನಾಡ ಜ್ಯೋತಿ ಪ್ರಶಸ್ತಿ, ಚಾಚಾ ನೆಹರು ಪ್ರಶಸ್ತಿ, ಪ್ರತಿಭಾ ಸಿರಿ ಪ್ರಶಸ್ತಿ, ಬಾಲ ಮಯೂರಿ ಪ್ರಶಸ್ತಿ, ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ನೀಡುವ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ... ಹೀಗೆ ಅನೇಕ ಪ್ರಶಸ್ತಿಗಳು ನನಗೆ ಒಲಿದಿವೆ.ದೂರದರ್ಶನ ಚಂದನ ಮತ್ತು ಅನೇಕ ಖಾಸಗಿ ಚಾನೆಲ್‌ಗಳಲ್ಲಿ ನನ್ನ ಭರತನಾಟ್ಯ ಕಾರ್ಯಕ್ರಮ ಪ್ರಸಾರವಾಗಿದೆ. ಮೈಸೂರು ದಸರಾ, ಬೆಂಗಳೂರಿನ ಯವನಿಕಾ, ಚಿತ್ರಕಲಾ ಪರಿಷತ್‌, ಮಂತ್ರಾಲಯ ರಾಘವೇಂದ್ರ ರಾಯರ ಆರಾಧನಾ ಮಹೋತ್ಸವ, ಬೆಂಗಳೂರು ಹಬ್ಬ, ಮುಂಬಯಿಯ ಕಲಾ ಪ್ರತಿಭೋತ್ಸವದಲ್ಲಿ,ತುಮಕೂರಿನ ಸಿದ್ಧಗಂಗಾ ಮಠದಲ್ಲಿ, ಗದಗದಲ್ಲಿ ನಡೆದ 76ನೇ ಕನ್ನಡ ಸಾಹಿತ್ಯ ಸಮ್ಮೇಳನ, ಇಸ್ಕಾನ್‌ ದೇವಾಲಯ... ಹೀಗೆ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ನಾನು ಭರತನಾಟ್ಯ ಮಾಡಿದ್ದೇನೆ.ಭರತನಾಟ್ಯದಲ್ಲಿ ಬರುವ ಎಲ್ಲ ನೃತ್ಯ ಪ್ರಕಾರಗಳೂ ನನಗಿಷ್ಟವೇ. ಶಿವ ತಾಂಡವ ನೃತ್ಯವನ್ನು ಬಹುವಾಗಿ ಮೆಚ್ಚುತ್ತೇನೆ. ಅನೇಕ ವೇದಿಕೆಗಳಲ್ಲಿ ಶಿವನ ನೃತ್ಯ ಮಾಡಿದ್ದೇನೆ. ವರ್ಣ, ತಿಲ್ಲಾನ, ಪುಷ್ಪಾಂಜಲಿ ಮುಂತಾದವುಗಳನ್ನು ಭಾವ ತುಂಬಿ ಅಭಿನಯಿಸಿದಾಗ ಅನೇಕರು ಇಷ್ಟಪಟ್ಟು ಕಾರ್ಯಕ್ರಮ ಮುಗಿದ ನಂತರ ನನ್ನನ್ನು ಅಭಿನಂದಿಸಿದ್ದು ಮನಸ್ಸಿಗೆ ತುಂಬ ಖುಷಿ ಕೊಡುತ್ತದೆ.ಭರತನಾಟ್ಯದಲ್ಲಿ ಆಂಗಿಕ ಅಭಿನಯಕ್ಕೆ, ಅಭಿವ್ಯಕ್ತಿಗೆ ಹೆಚ್ಚು ಗಮನಕೊಡಬೇಕಾಗುತ್ತದೆ. ಅಡವುಗಳಲ್ಲಿ ಸ್ಪಷ್ಟತೆ, ಸ್ಫುಟವಾದ ಚಲನೆ, ತನ್ಮಯದ ಅಭಿನಯ ಬಹಳ ಮುಖ್ಯ. ಸಾಂಪ್ರದಾಯಿಕ ಶೈಲಿಯನ್ನು, ಶೃಂಗಾರ, ಬೀಭತ್ಸ, ಕರುಣಾ ಮುಂತಾದ ‘ರಸ’ಗಳನ್ನು ಅಭಿನಯದಲ್ಲಿ ಚಾಚೂತಪ್ಪದೆ ಪಾಲಿಸಬೇಕಾಗುತ್ತದೆ. ಸತತ ಪರಿಶ್ರಮ, ಅಭ್ಯಾಸ ಇದ್ದರೆ ಮಾತ್ರ ಭರತನಾಟ್ಯದಲ್ಲಿ ಪರಿಪೂರ್ಣವಾಗಲು ಸಾಧ್ಯ. 

ಸಂಗೀತದ ವಾತಾವರಣ

ನಾನು ಹುಟ್ಟಿದ್ದು 1993ರಲ್ಲಿ ಬೆಂಗಳೂರಿನಲ್ಲಿ. ಮನೆಯಲ್ಲಿ ಸಂಗೀತದ ವಾತಾವರಣ ಇತ್ತು. ತಾಯಿ ಸುಮಾ ನಾಗೇಂದ್ರ ಮತ್ತು ತಂದೆ ವಿ. ನಾಗೇಂದ್ರ ಅವರು ಸಂಗೀತ, ನೃತ್ಯಕ್ಕೆ ಸದಾ ಪ್ರೋತ್ಸಾಹ ಕೊಡುತ್ತಾರೆ. ನನ್ನ ಅಣ್ಣ ಕರ್ನಾಟಕ ಸಂಗೀತ ಚೆನ್ನಾಗಿ ಹಾಡುತ್ತಿದ್ದ. ಕಳೆದ ವರ್ಷ ರಸ್ತೆ ಅಪಘಾತದಲ್ಲಿ ತೀರಿಕೊಂಡ. ನಾನು ಕಲೆಯಲ್ಲಿ ಏನೇ ಸಾಧಿಸಿದರೂ ಅದೆಲ್ಲ ನಮ್ಮಣ್ಣನಿಗಾಗಿಯೇ ಎಂದುಕೊಂಡಿದ್ದೇನೆ.ಸಂಗೀತ, ನೃತ್ಯದ ಬಗ್ಗೆ ನನಗೆ ಮತ್ತಷ್ಟು ಪ್ರೋತ್ಸಾಹ ಕೊಡುತ್ತಿರುವವರು ನನ್ನ ನೃತ್ಯ ಗುರುಗಳು. ಜತೆಗೆ ಸಂಗೀತ ವಿದುಷಿ ಡಾ. ವಸುಧಾ ಶ್ರೀನಿವಾಸನ್‌ ಅವರು. ನಾನು ಓದುತ್ತಿರುವುದು ಎಂಜಿನಿಯರಿಂಗ್‌ ಪದವಿ ಆದರೂ ನನಗೆ ಒಲಿದದ್ದು ಭರತನಾಟ್ಯ. ಭರತನಾಟ್ಯದಲ್ಲಿ ಇನ್ನಷ್ಟು, ಮತ್ತಷ್ಟು ಸಾಧಿಸುವಾಸೆಯಿದೆ.

ಸದ್ಯ ದಯಾನಂದ ಸಾಗರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದು. ನೃತ್ಯಾಭ್ಯಾಸ, ಜತೆಗೆ ಏರೋಬಿಕ್ಸ್‌ ಮಾಡುತ್ತಿದ್ದೇನೆ.  ಬೆಳಿಗ್ಗೆ ಏಳಕ್ಕೆ ಹೊರಟರೆ ರಾತ್ರಿ 8 ಗಂಟೆಗೆ ಮನೆ ಸೇರುವುದು. ಹೀಗಾಗಿ ವಾರದ ಮಧ್ಯೆ ನೃತ್ಯಾಭ್ಯಾಸ ಕಷ್ಟ. ಆದರೆ ವಾರಾಂತ್ಯ ಸಂಪೂರ್ಣ ನೃತ್ಯಕ್ಕೇ ಮೀಸಲು.

ಪ್ರತಿಕ್ರಿಯಿಸಿ (+)