ಕಥೆ

ಊರಿಗೂ ಕೇರಿಗೂ ನಡುವೆ ಇರುವ ದೊಡ್ಡ ಹುಣಸೇಮರದ ಕೆಳಗೆ ನನಗೊಂದು `ನೆಲೆ~ ಮಾಡಿಕೊಡುವಂತೆ ಸಾಕ್ಷಾತ್ `ಸಣಿ~ ಮಹಾತ್ಮನೇ ನನ್ನ ಕನಸಿನಲ್ಲಿ ಬಂದು ಹೇಳಿದ ಎಂದು ದ್ಯಾಮ ಕೇರಿಯ ಜನರ ಎದುರು ಹೇಳಿದಾಗ ಅವನ ಮಾತು ಕೇಳಿಸಿಕೊಂಡವರು ಬಿದ್ದು ಬಿದ್ದು ನಕ್ಕಿದ್ದರು.

ತನ್ನನ್ನೇ ಗೇಲಿ ಮಾಡಿಕೊಂಡು ಇತರರನ್ನು ನಗಿಸುತ್ತಿದ್ದ ದ್ಯಾಮ ತಮಾಷೆ ಮಾಡುತ್ತಿದ್ದಾನೆ ಎಂದೇ ಅವರು ಭಾವಿಸಿದ್ದರು.

`ದೊಡ್ಡ ಹುಣಸೇಮರ ಇರೋ ಜಾಗ ಗ್ರಾಮಠಾಣ. ಅಲ್ಲಿ ಗುಡಿ ಕಟ್ಟಬೇಕು ಅಂದರೆ ಅದಕ್ಕೆ ಹೊಸಳ್ಳಿಯ ಸಮಸ್ತರು ಒಪ್ಪಬೇಕು. ಆ ಮೇಲೆ ಗ್ರಾಮ ಪಂಚಾಯ್ತಿಯಲ್ಲಿ ನಿರ್ಣಯ ಆಗಬೇಕು. ಅದು ತಹಸೀಲ್ದಾರರಿಗೆ ಹೋಗಬೇಕು.

ಅವರು ಅದನ್ನು ಡೀಸಿ ಸಾಹೇಬರಿಗೆ ಕಳಿಸುತ್ತಾರೆ. ಡೀಸಿ ಸಾಹೇಬರು ಖುದ್ದು ಸ್ಥಳ ಪರಿಶೀಲನೆ ಮಾಡಿ ಒಪ್ಪಿಗೆ ಕೊಡೋವರೆಗೆ ಅಲ್ಲಿ ಒಂದು ಇಟ್ಟಿಗೆ ಇಡುವುದೂ ರೂಲ್ಸಿನ ಪ್ರಕಾರ ತಪ್ಪಾಗುತ್ತದೆ~ ಎಂದು ಹೊಸಳ್ಳಿಯ ಮೀಸಲು ಕ್ಷೇತ್ರದಿಂದ ಗೆದ್ದು ತಾಲ್ಲೂಕು ಪಂಚಾಯ್ತಿಯ ಮೆಂಬರ್ ಆಗಿರುವ ದುರ್ಗಪ್ಪ ಹೇಳಿದಾಗ ದ್ಯಾಮನಿಗೆ ಬೇಸರವಾಗಿತ್ತು.

`ಶನಿ ದೇವರು ಕನಸಿನಲ್ಲಿ ಬಂದು ನನಗೊಂದು `ನೆಲೆ~ ಮಾಡಿಕೊಡು ಅಂತ ಹೇಳ್ತಾನೆ ಅಂದ್ರೆ ಅದು ಸಾಮಾನ್ಯ ವಿಷಯ ಅಲ್ಲ. ಶನಿ ಮಹಾತ್ಮ ಇಲ್ಲದ ನೆಲೆಯಾದರೂ ಯಾವುದೈತೆ? ಎಲ್ಲ ಕಡೆಯೂ ಆ `ಸ್ವಾಮಿ~ ಅದಾನೆ. ಮನೆಯ ಒಳಕ್ಕೆ ಹೋಗುವಾಗ ಸರಿಯಾಗಿ ಕಾಲು ತೊಳಕೊಳ್ಳದಿದ್ದರೆ ಹಿಮ್ಮಡಿಯಿಂದಲೇ ಹೆಗಲು ಏರಿ ಕುಳಿತುಬಿಡುತ್ತಾನೆ ಪುಣ್ಯಾತ್ಮ~ ಎಂದು ಕೇರಿಯ ಹಿರಿಯನೊಬ್ಬ ಹೇಳಿದ.

ಹೊಸಳ್ಳಿ ಪಾಳ್ಯದ ಸಣ್ಣತಿಮ್ಮಪ್ಪ ಮೇಷ್ಟರು ಆಡಿಸುತ್ತಿದ್ದ `ನಳ-ದಮಯಂತಿ~ ನಾಟಕದಲ್ಲಿ ಅಂಥದೊಂದು ದೃಶ್ಯವಿತ್ತು. ಅದನ್ನು ಕೇರಿಯವರೂ ನೋಡಿದ್ದರು. ಶನಿ ದೇವರಿಗೆ ಇರಲು ಒಂದು `ನೆಲೆ~ ಇಲ್ಲ ಅಂಬೋದನ್ನು ಒಪ್ಪಲು ಯಾರೂ ಸಿದ್ಧವಿರಲಿಲ್ಲ!
`ಪಾವಗಡದ ಸಣಿ ಮಹಾತ್ಮನನ್ನೇ ನಾನು ಕನಸಿನಲ್ಲಿ ಕಂಡದ್ದು. ಬೀಯಸ್ ಬಸ್ಸು ಬರುವ ಹೊತ್ತಲ್ಲಿ ಬಿದ್ದ ಕನಸು.

ಸ್ವಾಮಿಯ ತಲೆಯ ಮೇಲೆ ಕಿರೀಟ ಇರ್ಲಿಲ್ಲ. ಕೂದಲು ಕೆದರಿಕಂಡಿದ್ದ. ಕಣ್ಣುಗಳು ಕೆಂಡದಂತೆ ಹೊಳೀತಿದ್ದವು. ಸ್ವಾಮಿ ಮನೆ ಮಠ ಇಲ್ಲದ ಪರದೇಶಿಯಂತೆ ಕಂಡ! ಮೊದಲು ಅವನಿಗೊಂಡು ನೆಲೆ ಮಾಡಬೇಕು~ ಎಂದು ದ್ಯಾಮ ಕೇರಿಯಲ್ಲಿ ಸಿಕ್ಕ ಸಿಕ್ಕವರ ಎದುರು ಮಾತನಾಡಲು ಶುರು ಮಾಡಿದನಂತರ ಅವನಿಗೆ ತಲೆ ಕೆಟ್ಟಿರಬಹುದು ಎಂದು ಕೆಲವರು ಅನುಮಾನಿಸಿದ್ದರು.

ಪಾವಗಡದ ಶನಿ ದೇವರಿಗೆ `ನಡೆದು~ಕೊಳ್ಳುವ ಹತ್ತಾರು ಭಕ್ತ ಜನರು ಹೊಸಳ್ಳಿ ಮತ್ತು ಅದರ ಫಾಸಲೆಯ ಹದಿನೆಂಟು ಹಳ್ಳಿಗಳಲ್ಲಿರುವಾಗ ಶನಿ ದೇವರು ನನಗೊಂದು ಗುಡಿ ಕಟ್ಟಿಸೆಂದು ನಿನ್ನಂಥವನ ಕನಸಲ್ಲಿ ಬಂದು ಅಪ್ಪಣೆ ಕೊಡಿಸುವುದರಲ್ಲಿ ವಿಶೇಷ ಅರ್ಥವಿದೆ ಎಂದು ಕೇರಿಯ ಕೆಲವರು ದ್ಯಾಮನಿಗೆ ಸಮಾಧಾನ ಹೇಳುತ್ತಲೇ ಅವನನ್ನು ಇನ್ನೊಂದು ರೀತಿಯಲ್ಲಿ ಮೂದಲಿಸಿದ್ದರು. ಮಾರನೆಯ ದಿನವೂ ದ್ಯಾಮನ ಕನಸಿನಲ್ಲಿ ಶನಿ ದೇವರು ಕಾಣಿಸಿಕೊಂಡು ಗುಡಿ ಕಟ್ಟಿಸುವಂತೆ ಹೇಳಿದ್ದ.

ದ್ಯಾಮನ ಹೆಂಡತಿ ಸಣ್ಣತಿಮ್ಮಕ್ಕನಿಗೂ ಹಾಗೇ ಅನ್ನಿಸಿತು. ಶನಿ ದೇವರು ಗಂಡನ ಹೆಗಲೇರಿ ಪಟ್ಟಾಗಿ ಕುಳಿತಿದ್ದಾನೆ ಎಂದೇ ಅನ್ನಿಸಲು ಶುರುವಾಗಿ ಮನಸ್ಸಿನಲ್ಲಿಯೇ ದಿಗಿಲು ಪಟ್ಟುಕೊಂಡಳು. ಮುಂದಿನ ಶ್ರಾವಣದ ಕೊನೇ ಶನಿವಾರ ಪಾವಗಡಕ್ಕೆ ಬಂದು ನಿನಗೆ `ಹಣ್ಣುಕಾಯಿ~ ಕೊಡುತ್ತೇನೆ.

ಉಳಿದ ಮೂರು ಶನಿವಾರ ನಿನ್ನ ಹೆಸರಿನಲ್ಲಿ ಐದು ಎಳ್ಳಿನ ಗಂಟು ಕಟ್ಟಿ, ಹಸುವಿನ ತುಪ್ಪದಲ್ಲಿ ನೆನಸಿ ಪಾವಗಡದ ದಿಕ್ಕಿಗೆ ನಿಂತು ಸುಡುವ ಹರಕೆ ಕಟ್ಟಿಕೊಂಡ ಮೇಲೇ ಅವಳ ಮನಸ್ಸು ತಹಬಂದಿಗೆ ಬಂದಿತ್ತು.

ಸಣ್ಣತಿಮ್ಮಕ್ಕ ಹರಕೆ ಕಟ್ಟಿಕೊಂಡ ನಂತರ ಒಂದು ವಾರ ದ್ಯಾಮನಿಗೆ ಮತ್ತೆ ಶನಿ ದೇವರ ಕನಸು ಬೀಳಲಿಲ್ಲ! ಅವನು ಎಲ್ಲವನ್ನೂ ಮರೆತವನಂತೆ ಈಚಲಗೆರೆಯ ಪುಟ್ಟಸೋಮೇಗೌಡರ ಕೆಂತರಲು ಹೊಲದಲ್ಲಿ ಬೆಳೆದಿದ್ದ ಬಳ್ಳಾರಿ ಜಾಲಿ ಗಿಡಗಳನ್ನು ಕಡಿಯುವ ಒಪ್ಪಂದ ಮಾಡಿಕೊಂಡು ಕೇರಿಯ ಕೆಲವರನ್ನು ಕರೆದುಕೊಂಡು ಹೋಗಿ ಒಂದು ವಾರ ಜಾಲಿ ಗಿಡಗಳನ್ನೆಲ್ಲ ಕಡಿದು ಸಪಾಟು ಮಾಡಿಕೊಟ್ಟು ಕೈಯಲ್ಲಿ ಸಾವರದೊಂಬೈನೂರು ರೂಪಾಯಿ ಉಳಿಸಿಕೊಂಡು ಬಂದು ಹೆಂಡತಿಯ ಕೈಗೆ ಕೊಡುತ್ತ- `ಇದನ್ನು ಜೋಪಾನವಾಗಿ ತೆಗೆದಿಡು, ಮುಂದೆ ಬೇಕಾಗುತ್ತೆ~ ಎಂದಷ್ಟೇ ಹೇಳಿ ಅವಳಲ್ಲಿ ವಿಚಿತ್ರ ಸಂತೋಷ ಮತ್ತು ಅಚ್ಚರಿಯನ್ನು ಹುಟ್ಟಿಸಿದ್ದ.

ಕಣಜನಹಳ್ಳಿಯ ಹೆಣ್ಣುಮಗಳು ಸಣ್ಣತಿಮ್ಮಕ್ಕ ದ್ಯಾಮನನ್ನು ಮದುವೆಯಾಗಿ ಹೊಸಳ್ಳಿಗೆ ಬಂದು ಹನ್ನೆರಡು ವರ್ಷಗಳೇ ಕಳೆದಿವೆ. ಇಷ್ಟು ವರ್ಷಗಳಲ್ಲಿ ಗಂಡ ಕೂಲಿ ಹಣವನ್ನು ಕೈಗೆ ತಂದು ಕೊಟ್ಟದ್ದು ಅವಳಿಗೆ ನೆನಪಿಲ್ಲ.

ಅಷ್ಟು ದೊಡ್ಡ ಮೊತ್ತದ ಗಂಟನ್ನು ಅವಳು ಕೈಯಲ್ಲಿ ಹಿಡಿದವಳೂ ಅಲ್ಲ! ಐನೂರರ ಮೂರು ನೋಟುಗಳು ಮತ್ತು ನೂರರ ನಾಲ್ಕು ಗರಿಗರಿ ನೋಟುಗಳನ್ನು ಗಂಡ ಕೈಗೆ ಕೊಡುತ್ತಿದ್ದಂತೆ ಅವಳಲ್ಲಿ ಹತ್ತಾರು ಅಸೆ, ಕನಸುಗಳು ಚಿಗುರೊಡೆದು ಕುಣಿದಾಡಿದ್ದವು.

ಮನಸ್ಸು ನಾಗಲಮಡಿಕೆ, ನಾಯಕನಹಟ್ಟಿ ಜಾತ್ರೆಗಳಲ್ಲಿ ಗಂಡ, ಇಬ್ಬರು ಮಕ್ಕಳ ಜತೆಯಲ್ಲಿ ತಿರುಗಾಡಿದಂತೆ ಕನಸು ಕಂಡು, ಕೊನೆಗೆ ಸುಗ್ಗಿಯಲ್ಲಿ ಎರಡು ಚೀಲ ರಾಗಿ, ಇಪ್ಪತ್ತು ಸೇರು ತೊಗರಿ ಕಾಳು ಖರೀದಿಸಿಟ್ಟುಕೊಂಡರೆ ತನ್ನ ಸಂಸಾರ ಆರು ತಿಂಗಳು ನೆಮ್ಮದಿಯಾಗಿ ಕಾಲ ಹಾಕಬಹುದು ಎಂಬ ಆಲೋಚನೆಗೆ ಬಂದು ನಿಂತುಬಿಟ್ಟಿತ್ತು!

ಮಾರನೆ ದಿನದ ಬೆಳಗಿನ ಜಾವ ದ್ಯಾಮನಿಗೆ ಮತ್ತೆ ಅದೇ ಕನಸು ಬಿತ್ತು. `ಸಣಿ~ ಮಹಾತ್ಮ ಕನಸಿನಲ್ಲಿ ಅವೇ ಮಾತು ಆಡಿದ. ಅದೇ ಕೆದರಿದ ತಲೆಯ ಸ್ವಾಮಿ. ದೇವರು ಮತ್ತೆ ಮತ್ತೆ ತನ್ನ ಕನಸಿನಲ್ಲಿ ಬಂದು ನನಗೊಂದು `ನೆಲೆ~ ಕಟ್ಟಿಸಿಕೊಡು ಎಂದು ಕೇಳುತ್ತಿರುವುದಕ್ಕೆ ಏನೋ ಬಲವಾದ ಕಾರಣವೇ ಇರಬೇಕು.

ಹೊಸಳ್ಳಿಯಲ್ಲಿ ಹತ್ತಾರು ಜನ ಅನುಕೂಲವಂತ ಭಕ್ತರು ಇರುವಾಗ ಸ್ವಾಮಿ ನನ್ನನ್ನೇ ಗುಡಿ ಕಟ್ಟಿಸು ಅಂತ ಕೇಳುವುದರ ಮರ್ಮವಾದರೂ ಏನಿದ್ದೀತು ಎಂಬುದನ್ನೇ ಕುರಿತು ದ್ಯಾಮ ಯೋಚಿಸತೊಡಗಿದ. ಹತ್ತಾರು ವಿಷಯಗಳು ಅವನ ಮನಸ್ಸಿನಲ್ಲಿ ಸುಳಿದುಹೋದವು. ಯಾರನ್ನೂ ಕೇಳದ ಸ್ವಾಮಿ ನನ್ನನ್ನೇ ಗುಡಿ ಕಟ್ಟಿಸು ಅಂತ ಕೇಳೋದರ ಹಿಂದೆ ದೊಡ್ಡ ಕಾರಣ ಇರಬೇಕು ಎಂಬುದು ದ್ಯಾಮನಿಗೆ ಖಾತ್ರಿಯಾಗಿ ಬಿಟ್ಟಿತು.

ಸಣಿ ದೇವರಿಗೆ ಗುಡಿ ಕಟ್ಟುವ ಶಕ್ತಿ ತನಗಿದೆಯೇ ಎಂದು ಅವನು ಯೋಚಿಸಿದಾಗಲೆಲ್ಲ ಅವನಲ್ಲಿ ಮನಸ್ಸಿನಲ್ಲಿ ಒಂದು ಬಗೆಯ ಆವೇಶ ಬಂದು ಬಿಡುತ್ತಿತ್ತು. ತನಗೆ ಗುಡಿ ಕಟ್ಟುವ ಶಕ್ತಿ ಎಲ್ಲಿಂದ ಬರಬೇಕು ಎಂಬ ವಾಸ್ತವ ಅರಿವಿಗೆ ಬರುತ್ತಿದ್ದಂತೆ ಅವನ ಬಡತನ ನೆನಪಾಗುತ್ತಿತ್ತು.

ಅಂತಹ ಒಂದು ವಿಷಣ್ಣ ಮನಸ್ಥಿತಿಯಲ್ಲಿ ಪ್ರತಿ ವರ್ಷ ಕಾರ್ತೀಕದ ಕೊನೆಯ ಸೋಮವಾರ ನಡೆದ ಬಸವಪುರಾಣ ಪ್ರವಚನದ ಮಂಗಳದ ದಿನ ಸೂಗೂರು ಮಠದ ಶರಣಯ್ಯ ಸ್ವಾಮಿಗಳು ರಾಗವಾಗಿ ಹಾಡುತ್ತಿದ್ದ `ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಯ್ಯ ಬಡವ~ ಎಂಬ ವಚನ ನೆನಪಾಗಿತ್ತು.

ವಚನದಲ್ಲಿ ಸೊಗಸಾದ ಅರ್ಥವಿದೆ! ಬಡವನಾದ ನನ್ನಿಂದ ಸಣಿ ಮಹಾತ್ಮನಿಗೆ ಗುಡಿ ಕಟ್ಟುವುದಕ್ಕೆ ಸಾಧ್ಯವೇ? ಬದಲಾಗಿ ಶರಣಯ್ಯ ಸ್ವಾಮಿಗಳು ಹೇಳಿದಂತೆ ತನ್ನ ದೇಹವನ್ನೇ ಮಹಾತ್ಮನ `ನೆಲೆ~ ಮಾಡಿಕೊಂಡುಬಿಡಬೇಕು ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಿದ್ದ.

ಆದರೆ ಮರುಕ್ಷಣವೇ ಗುಡಿಯನ್ನು ದೊಡ್ಡ ಹುಣಸೇಮರದ ಕೆಳಗೇ ಕಟ್ಟಬೇಕು ಎಂದು ಸ್ವಾಮಿ ಹೇಳುತ್ತಿರುವಾಗ ತನ್ನ ದೇಹವನ್ನೇ ಗುಡಿ ಮಾಡಿಕೊಳ್ಳುವುದು ಕಷ್ಟ ಅನ್ನಿಸಿತು. ಹೊಸಳ್ಳಿ ಜನರು ಮನಸ್ಸು ಮಾಡಿದರೆ ಅದು ಒಪ್ಪೊತ್ತಿನ ಕೆಲಸ. ಕೇರಿಯ ಜನರು ಹೇಳಿದಂತೆ ಗುಡಿ ಕಟ್ಟಿಸುವ ಯೋಗ್ಯತೆ ತನಗಿಗಿಲ್ಲ ಅನ್ನಿಸುತ್ತಿದ್ದಂತೆ ಅವನ ಮನಸ್ಸು ಖಿನ್ನವಾಗಿ ಬಿಡುತ್ತಿತ್ತು.

ಮೊದಲು ಚೇರ್ಮನ್ನರನ್ನು ನೋಡಬೇಕು. ಅವರಿಗೆ ಸಣಿ ದೇವರು ನನ್ನ ಕನಸಿನಲ್ಲಿ ಬಂದು ಗುಡಿ ಕಟ್ಟಿಸುವಂತೆ ಹೇಳಿದ್ದನ್ನು ಹೇಳಬೇಕು. ಅವರು ಒಪ್ಪಿದರೆ ಪಂಚಾಯ್ತಿಯ ಮೆಂಬರುಗಳನ್ನು ಸುಲಭವಾಗಿ ಒಪ್ಪಿಸಬಹುದು. ಸಣಿ ಮಹಾತ್ಮನ ಗುಡಿ ಕಟ್ಟುತ್ತೇನೆ ಅಂದರೆ ಬ್ಯಾಡ ಅಂಬೋ ಧೈರ್ಯ ಯಾರಿಗಿದ್ದೀತು? ಎಂಬ ಯೋಚನೆ ಬಂದು ಮನಸ್ಸು ಗೆಲುವಾಗುತ್ತಿತ್ತು.

ಕೇರಿಯಲ್ಲಿರುವ ಹೊಸಳ್ಳಮ್ಮನ ಗುಡಿಯ ಪಕ್ಕ ಸ್ವಲ್ಪ ಜಾಗವಿತ್ತು. ಕೇರಿಯವರನ್ನು ಒಪ್ಪಿಸಿ ಅಲ್ಲಿ ಗುಡಿ ಕಟ್ಟಬಹುದಿತ್ತು. ಆದರೆ ಕನಸಿನಲ್ಲಿ ಸ್ವಾಮಿ ದೊಡ್ಡ ಹುಣಸೇಮರದ ಕೆಳಗೇ ಗುಡಿ ಕಟ್ಟುವಂತೆ ಅಪ್ಪಣೆ ಕೊಟ್ಟಿರುವಾಗ ಬೇರೆ ಜಾಗದ ಯೋಚನೆ ಮಾಡುವುದು ತಪ್ಪು ಅನ್ನಿಸಿ ಸುಮ್ಮನಾಗುತ್ತಿದ್ದ.

ಗುಡಿ ಕಟ್ಟುವುದನ್ನು ಬಿಟ್ಟರೆ ಉಳಿದ ಯೋಚನೆಗಳಿಗೆ ಈಗ ಅವನ ತಲೆಯಲ್ಲಿ ಬೇರೆ ಆಲೋಚನೆಗಳಿಗೆ ಜಾಗವೇ ಇಲ್ಲ ಎನ್ನುವಂತಾಯಿತು. ಮೂರು ದಿನ ದ್ಯಾಮ ಯಾವ ಕೆಲಸವನ್ನೂ ಮಾಡಲಿಲ್ಲ.

ತೊರೆಓಬೇನಹಳ್ಳಿಯ ತೋಪಿನಲ್ಲಿದ್ದ ಹಳೆಯ ಮಾವಿನ ಮರಗಳನ್ನು ಕಡಿಯುವ ಗುತ್ತಿಗೆ ಕೆಲಸ ಒಪ್ಪಿಕೊಳ್ಳುವಂತೆ ಮನೆಯ ಬಾಗಿಲಿಗೆ ಬಂದ ಅವಕಾಶವನ್ನು ಕೇರಿಯ ಇನ್ನೊಬ್ಬನಿಗೆ ವಹಿಸಿಕೊಟ್ಟು ನಿರಾಳನಾದ. ಬೆಳಗಿನಿಂದ ಸಂಜೆಯವರೆಗೆ, ರಾತ್ರಿ ನಿದ್ದೆ ಹತ್ತುವವರೆಗೆ ಮನಸ್ಸಿನಲ್ಲಿ ಶನಿ ದೇವರು ಕನಸಿನಲ್ಲಿ ಹೇಳಿದ ವಿಚಾರಗಳೇ ಸುಳಿಯ ತೊಡಗಿದವು. ಹಗಲು ಹೊತ್ತಿನಲ್ಲೂ ಅವನಿಗೆ ಅದೇ ಚಿಂತೆಯಾಗಿಬಿಟ್ಟಿತು.

`ಯಾಕೋ ದ್ಯಾಮ, ಒಂಥರಾ ಇದ್ದೀಯ~ ಎಂದು ಕೇರಿಯ ಜನರು ಕೇಳುವಷ್ಟು ದೈಹಿಕವಾಗಿ ನಿತ್ರಾಣನಾದ. ಇನ್ನು ಕೆಲವರು `ಮೈಯಲ್ಲಿ ಹುಷಾರಿಲ್ಲವೇನೋ~ ಎಂದು ನೇರವಾಗಿ ಕೇಳಿಬಿಟ್ಟರು. ಗಂಡ ಸರಿಯಾಗಿ ಊಟ, ನಿದ್ದೆ ಮಾಡುತ್ತಿಲ್ಲ ಎನ್ನುವುದನ್ನು ಸಣ್ಣತಿಮ್ಮಕ್ಕನೂ ಗಮನಿಸಿದ್ದಳು.

ಕೆಲಸಕ್ಕೂ ಹೋಗದೆ ಕೇರಿಯ ನಡುವೆ ಇದ್ದ ಜುವ್ವೆ ಮರದ ಕೆಳಗೆ ಹಾಕಿದ್ದ ಕಲ್ಲು ಚಪ್ಪಡಿಯ ಕೆಳಗೆ ಕುಂತು ಸದಾ ಏನನ್ನೋ ಯೋಚಿಸುತ್ತಿದ್ದ ಗಂಡನನ್ನು ಕಂಡು ಅವಳಿಗೆ ಆಶ್ಚರ್ಯದ ಜತೆಗೆ ಭಯವೂ ಆಗುತ್ತಿತ್ತು. `ಏನು ಯೇಚ್ನೆ ಮಾಡ್ತಿದೀಯ~ ಎಂದು ಆಗಾಗ ಅವನ ಹತ್ತಿರಕ್ಕೆ ಹೋಗಿ ಕೇಳುತ್ತಿದ್ದಳು.

ದ್ಯಾಮ ಅವಳ ಮಾತಿಗೆ ಉತ್ತರಿಸುತ್ತಿರಲಿಲ್ಲ. ಊಟಕ್ಕೆ ಕುಂತಾಗ ಗಂಡನ ಬಾಯಿ ಬಿಡಿಸಲು ನೋಡಿದಳು. ಆಗಲೂ ಅವನು ಏನನ್ನೂ ಹೇಳದೆ ಉಂಡು ಎ್ದ್ದದು ಹೋಗಿಬಿಡುತ್ತಿದ್ದ. ಅವನ ಮನಸ್ಸಿನಲ್ಲಿರುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ಹತಾಶಳಾದ ಅವಳು ಕೊನೆಗೆ ಏನಾದರೂ ಮಾಡಿಕೊಂಡು ಸಾಯಲಿ ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಳು.

ಹಗಲು ರಾತ್ರಿ ಗುಡಿ ಕಟ್ಟುವ ಚಿಂತೆಗೆ ಬಿದ್ದು ನಿದ್ದೆಗೆಟ್ಟಿದ್ದರಿಂದ ದ್ಯಾಮನ ಕಣ್ಣುಗಳು ಆಳದ ಕುಳಿಯಲ್ಲಿ ಬಿದ್ದಂತೆ ಕಾಣತೊಡಗಿದವು. ಕೇರಿಯ ಜನರು, ನೆರೆ ಹೊರೆಯವರು ಅವನಿಗೆ ಏನೋ ದೊಡ್ಡ `ಜಡ್ಡು~ ಆದಂಗಿದೆ. ಧರುಂಪುರದ ಆಸ್ಪತ್ರೆಗಾದರೂ ಕರಕೊಂಡೋಗಿ ಬಾಬಾಬುಡನ್ ಡಾಕ್ಟರಿಗೆ ತೋರಿಸಿಕೊಂಡು ಬಾ ಎಂದು ಸಣ್ಣತಿಮ್ಮಕ್ಕನಿಗೆ ಹೇಳತೊಡಗಿದರು.

ಬುಡನ್ ಡಾಕ್ಟರ ಕೈಗುಣ ಚೆನ್ನಾಗೈತೆ ಅಥವಾ ದುರ್ಗದ ದೊಡ್ಡಾಸ್ಪತ್ರೆಗಾದರೂ ಕರಕೊಂಡು ಹೋಗು ಎಂದು ಪದೇ ಪದೇ ಹೇಳತೊಡಗಿದ ಮೇಲೆ ಸಣ್ಣತಿಮ್ಮಕ್ಕನಿಗೂ ಗಂಡನಿಗೆ ಯಾವುದೋ `ದೊಡ್ಡ ರೋಗ~ವೇ ಬಂದಿರಬಹುದೆಂಬ ಅನುಮಾನ ಬಂತು.

ಸಂಜೆಯ ಹೊತ್ತಿಗೆ ಕೇರಿಯ ಕೆಲವು ಹಿರಿಯರು ದ್ಯಾಮನ ಆರೋಗ್ಯ ವಿಚಾರಿಸಲು ಅವನ ಮನೆಗೆ ಬಂದರು. `ನಾಳೆ ಮೊದಲ ಬಸ್ಸಿಗೆ ದುರ್ಗದ ಆಸ್ಪತ್ರೆಗೆ ಹೋಗಿ ಬರಾಣ ಣಡಿ~ ಎಂದು ಕೇರಿಯ ಹಿರಿಯನೊಬ್ಬ ಮಾತು ತೆಗೆಯುತ್ತಿದ್ದಂತೆ ದ್ಯಾಮ `ನಂಗೇನೂ ಆಗಿಲ್ಲ ದೊಡಪ್ಪ... ಸಣಿ ಮಹಾತ್ಮ ಕನಸಿನಲ್ಲಿ ಬಂದು ನನಗೊಂಡು ಗುಡಿ ಕಟ್ಟಿಸು ಎಂದು ಅಪ್ಪಣೆ ಕೊಡ್ತಲೇ ಅವುನೆ.

ನಂಗೆ ಗುಡಿ ಕಟ್ಟಿಸುವ ಶಕ್ತಿ ಎಲ್ಲಿಂದ ಬರಬೇಕು? ಏನು ಮಾಡಬೇಕು ಅಂಬೋದು ಗೊತ್ತಾಗ್ತಿಲ್ಲ. ಅದು ಬಿಟ್ಟರೆ ನಂಗೇನೂ ಆಗಿಲ್ಲ~ ಎಂದು ಹೇಳಿದ್ದನ್ನು ಕೇಳಿ ಕೇರಿಯ ಹಿರಿಯರು ದಂಗು ಬಡಿದವರಂತೆ ಕುಳಿತುಬಿಟ್ಟರು! ಗುಡಿ ಕಟ್ಟುವ ವಿಷಯವನ್ನು ದ್ಯಾಮ ಮೊದಲ ಸಲ ಹೇಳಿದಾಗ ಅವನು ತಮಾಷೆಗೆ ಹೇಳಿರಬಹುದು ಎಂದೇ ಭಾವಿಸಿದ್ದರು.

`ಶನಿ ದೇವರ ಗುಡಿ ಕಟ್ಟುವುದೆಂದರೆ ಹುಡಗಾಟ ಅನ್ಕಂಡಿದಿಯಾ? ಈ ಕಾಲದಲ್ಲಿ ಸಣ್ಣದೊಂದು ಗುಡಿ ಕಟ್ಟಕೂ ಸಾವಿರಾರು ರೂಪಾಯಿ ಬೇಕು. ನಿಂಗೆ ಹೆಂಡತಿ ಮಕ್ಕಳನ್ನು ಸಾಕದೇ ಕಷ್ಟ ಆಗಿರೋವಾಗ ಗುಡಿ ಕಟ್ಟುವ ಶಕ್ತಿ ಎಲ್ಲಿಂದ ಬರಬೇಕು? ಅದೆಲ್ಲ ಆಗದ ಮಾತು ತಗಿಯೋ ನಿನ್ನ....~

ಮೊದಲು ಪಾವಗಡಕ್ಕೆ ಹೋಗಿ ಸ್ವಾಮಿಗೆ ಹಣ್ಣುಕಾಯಿ ಕೊಟ್ಟು ನನ್ನಿಂದ ಗುಡಿ ಕಟ್ಟುವ ಶಕ್ತಿ ಇಲ್ಲ. ಅಂಥ ಶಕ್ತಿಯನ್ನು ನೀನು ಕೊಟ್ಟರೆ ತಿರುಪತಿ ತಿಮ್ಮಪ್ಪನ ಗುಡಿ ಐತಲ್ಲ, ಅದಕ್ಕಿಂತ ದೊಡ್ಡ ಗುಡಿಯನ್ನೇ ಕಟ್ಟಿಸ್ತೀನಿ ಅಂತ ದೇವರ ಮುಂದೆ ನಿಂತ್ಕಂಡು ಹೇಳಿಕೊಂಡು ಐದು ಪಾವಲಿ ತಪ್ಪು ಕಾಣಿಕೆ ಕೊಟ್ಟು ಬಾ ಎಂದು ತೀರ್ಪು ಕೊಟ್ಟವರಂತೆ ಹೇಳಿ ಎದ್ದು ಹೋದರು.

ಕೇರಿಯ ಹಿರಿಯರು ಹೇಳುವುದರ್ಲ್ಲಲೂ ಅರ್ಥವಿದೆ ಎಂದು ದ್ಯಾಮನಿಗೆ ಅನಿಸತೊಡಗಿತು. ಮುಂದಿನ ಶನಿವಾರ ಬೆಳಗಿನ ಪೂಜೆಯ ಹೊತ್ತಿಗೆ ಪಾವಗಡಕ್ಕೆ ಹೋಗಿ ಬಂದು ಬಿಡಬೇಕು ಎಂದು ನಿರ್ಧರಿಸಿದ ಮೇಲೆ ಅವನ ಮನಸ್ಸು ನಿರಾಳವಾಯಿತು.

ಆದರೆ ಮಾರನೆ ದಿನ ಕೊನೆಯ ಜಾವದ ಕೋಳಿ ಕೂಗುವ ಹೊತ್ತಿಗೆ ಮತ್ತೆ ಶನಿ ಮಹಾತ್ಮ ಕಾಣಿಸಿಕೊಂಡು ನನಗೊಂದು ಗುಡಿ ಕಟ್ಟುತ್ತೀಯೋ ಇಲ್ಲವೋ ಎಂದು ಪ್ರಶ್ನಿಸಿದಂತೆ ಕನಸು ಕಂಡ.

ಚೇರ್ಮನ್ನರ ಮನೆಯ ಮುಂದೆ ಎಂದಿನಂತೆ ಜನರ ಗುಂಪು ಸೇರಿತ್ತು. ಕೆಲವರು ಮನೆಯ ಪಡಸಾಲೆಯಲ್ಲಿ ಕುಂತು ಒಳಮನೆಯಿಂದ ಚೇರ್ಮನ್ನರು ಬರುವುದನ್ನೇ ಕಾಯುತ್ತಿದ್ದರು. ಇನ್ನು ಕೆಲವರು ಹೊರಗೆ ಕೂತಿದ್ದರು. ಅಂಗಳದ ಒಂದು ಮೂಲೆಯಲ್ಲಿ ರಾಗಿ ಕಣ ಮಾಡಿದ್ದರು. ಸಂಬಳದಾಳುಗಳು ಏಳೆಂಟು ಕರುಗಳು, ಎರಡು ಮುದಿ ಎತ್ತುಗಳನ್ನು ಕಟ್ಟಿ ರಾಗಿ ತೆನೆ ತುಳಿಸುತ್ತಿದ್ದರು.

ಇನ್ನೊಂದು ಮಗ್ಗುಲಲ್ಲಿ ರಾಗಿ ರಾಶಿ ಹಾಕಿದ್ದರು. ಕೆಲವು ಆಯಗಾರರು ಕಣ ಮಾಡುವುದನ್ನೇ ಕಾಯುತ್ತ ಕೂತಿದ್ದರು. ದ್ಯಾಮ ಚೇರ್ಮನ್ನರ ಮನೆಯ ಅಂಗಳಕ್ಕೆ ಬಂದದ್ದನ್ನು ಯಾರೂ ಗಮನಿಸಲಿಲ್ಲ. ಮನೆಯ ಎದುರು ಅಷ್ಟು ದೂರದಲ್ಲಿದ್ದ ಬೇವಿನ ಮರದ ಕೆಳಗೆ ಕೂತ.

ಚೇರ್ಮನ್ನರು ಹೊರಗೆ ಬಂದರೆ, ಅವರನ್ನು ಮಾತನಾಡಿಸಿ ತನ್ನ ಕನಸನ್ನು ಅವರಿಗೆ ಹೇಳಿ ಸಣಿ ದೇವರ ಗುಡಿ ಕಟ್ಟಲು ಸಹಾಯ ಮಾಡಿ ಎಂದು ಕೇಳಬೇಕೆಂದು ನಿಶ್ಚಯಿಸಿಕೊಂಡು ಬಂದಿದ್ದ. ಹನ್ನೆರಡು ಗಂಟೆಯ ಹೊತ್ತಿಗೆ ಚೇರ್ಮನ್ನರು ಪಡಸಾಲೆಗೆ ಬಂದು ಮಂಚದ ಮೇಲೆ ಸುತ್ತಿಟ್ಟ ಹಾಸಿಗೆಗೆ ಒರಗಿ ಕೂತು ತಮ್ಮ ಒಡ್ಡೋಲಗ ಆರಂಭಿಸಿದರು.

ಚೇರ್ಮನ್ನರು ನಿತ್ಯ ನಡೆಸುತ್ತಿದ್ದ ಒಡ್ಡೋಲಗ ಹೊಸಳ್ಳಿ ಸುತ್ತಲಿನ ಹದಿನೆಂಟು ಹಳ್ಳಿಗಳಲ್ಲಿ ಹೆಸರಾಗಿತ್ತು. ಗಂಡ-ಹೆಂಡಿರ ಜಗಳದಿಂದ ಹಿಡಿದು ಕೊಡುವ-ತೆಗೆದುಕೊಳ್ಳುವ ವಿಷಯದಲ್ಲಿನ ತಕರಾರುಗಳು ಮತ್ತು ಬುದ್ಧಿಮಾತು ಹೇಳುವುದರಿಂದ ಹಿಡಿದು ಹಲವಾರು ವಿಷಯಗಳು ಅಲ್ಲಿ ಪ್ರಸ್ತಾಪ ಆಗುತ್ತಿದ್ದವು.

ಹೊಸಳ್ಳಿಯಲ್ಲಿದ್ದ ಒಂಟಿ ಕೋಮುಗಳ ಜನರು, ಹೊಸಳ್ಳಿಗೆ ಬಂದ ಸರ್ಕಾರಿ ನೌಕರರು ಏನೇನು ಮಾಡುತ್ತಿದ್ದಾರೆ ಎಂಬುದನ್ನು ಕುರಿತು ತಮ್ಮ ಬೆಂಬಲಿಗರು ತರುತ್ತಿದ್ದ ಮಾಹಿತಿಗಳನ್ನು ಚೇರ್ಮನ್ನರು ಅಲ್ಲಿ ಕುಳಿತು ಕೇಳುತ್ತಿದ್ದರು. ಹಗಲೂಟದ ಹೊತ್ತಿನವರೆಗೆ ಒಡ್ಡೋಲಗ ನಡೆಯುತ್ತಿತ್ತು.

ಕೆಲವು ದಿನ ಚೇರ್ಮನ್ನರು ತಮ್ಮ ಹಿಂಬಾಲಕರ ಸಮೇತ ಪಂಚಾಯ್ತಿ ಆಫೀಸಿಗೆ ಬಂದು ಅಲ್ಲಿ ಒಡ್ಡೋಲಗ ನಡೆಸುತ್ತಿದ್ದರು. ಚೇರ್ಮನ್ನರ ವಿರೋಧಿಗಳು ಒಡ್ಡೋಲಗದಲ್ಲಿ ಪ್ರಸ್ತಾಪ ಆಗುತ್ತಿದ್ದ ವಿಷಯಗಳಿಗೆ ಸದಾ ಕಿವಿ ತೆರೆದುಕೊಂಡೇ ಇರುವಂತಹ ಪರಿಸ್ಥಿತಿ ಹೊಸಳ್ಳಿಯಲ್ಲಿತ್ತು.

ಎರಡು ಗಂಟೆ ದಾಟಿದ ಮೇಲೆ ಬರುವ ಹಿಂದೂಪುರದ ಕಡೆಗೆ ಹೋಗುವ ತಿಪ್ಪೇಸ್ವಾಮಿ ಬಸ್ಸು ಹೋದ ಮೇಲೆ ಚೇರ್ಮನ್ನರು ತಮ್ಮ ದೈನಂದಿನ ಸಭೆಯನ್ನು ಬರಖಾಸ್ತು ಮಾಡಿ ಮನೆಯಿಂದ ಹೊರಕ್ಕೆ ಬಂದು ಹಜಾರದ ಮುಂದಿನ ಕಟ್ಟೆಯ ಮೇಲೇ ನಿಂತು ಅಂಗಳದಲ್ಲಿ ನಡೆಯುತ್ತಿದ್ದ ರಾಗಿ ಕಣದತ್ತ ದೃಷ್ಟಿ ಹರಿಸಿದರು.

ಚೇರ್ಮನ್ನರು ಬಂದು ನಿಂತಿದ್ದನ್ನು ನೋಡಿದ ದ್ಯಾಮ ಎದ್ದು ನಿಂತು ಮೊಣಕಾಲ ಮೇಲಕ್ಕೆ ಎತ್ತಿ ಕಟ್ಟಿದ್ದ ಲುಂಗಿಯನ್ನು ಕೆಳಕ್ಕೆ ಬಿಟ್ಟು, ತಲೆಗೆ ಸುತ್ತಿದ್ದ ವಲ್ಲಿಯನ್ನು ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡ. ಚೇರ್ಮನ್ನರು ಅವನನ್ನು ನೋಡಿದರೂ ಏನು, ಎತ್ತ ಎಂದು ಕೇಳದೆ ಮನೆಯ ಒಳಕ್ಕೆ ಹೋಗಿಬಿಟ್ಟರು! ಇನ್ನು ಅವರು ಹಗಲೂಟ ಮಾಡಿ ಸ್ವಲ್ಪ ಹೊತ್ತು ಮಲಗುತ್ತಾರೆ ಎನ್ನುವುದನ್ನು ತಿಳಿದ ದ್ಯಾಮ ಅವರಿಗೆ ಕಾಯುವುದರಲ್ಲಿ ಅರ್ಥವಿಲ್ಲ ಅನ್ನಿಸಿ ಕೇರಿಯ ಕಡೆಗೆ ನಡೆದ.

ಐದಾರು ದಿನ ದ್ಯಾಮ ತಮ್ಮ ಮನೆಯ ಅಂಗಳದಲ್ಲಿರುವ ಬೇವಿನ ಮರದ ಕೆಳಗೆ ನಿಂತಿದ್ದನ್ನು ಚೇರ್ಮನ್ನರು ನೋಡಿದರೇ ಹೊರತು ಯಾಕೆ ಬಂದೆ ಎಂದು ವಿಚಾರಿಸಲಿಲ್ಲ. ಈ ನಡುವೆ ದ್ಯಾಮ ಊರಲ್ಲಿ ಗುಡಿ ಕಟ್ಟಿಸುತ್ತೇನೆ ಎಂದು ಓಡಾಡುತ್ತಿದ್ದಾನೆ ಎಂಬ ವದಂತಿ ಹಬ್ಬಿತು.

ಜನರಿಂದ ದುಡ್ಡು ವಸೂಲಿ ಮಾಡಲು ಈ ಹೊಸ ನಾಟಕ ಎಂದು ಕೆಲವರು ಮಾತಾಡಿಕೊಂಡರು. ಅವನು ಬಂದರೆ ದುಡ್ಡು ಕೊಡಬಾರದೆಂದು ಕೆಲವರು ತಮ್ಮ ತಮ್ಮಲ್ಲಿಯೇ ಮಾತಾಡಿಕೊಂಡರು. ಆದರೆ ಗುಡಿ ಕಟ್ಟಲು ದುಡ್ಡು ಕೊಡಿ ಎಂದು ದ್ಯಾಮ ಯಾರನ್ನೂ ಕೇಳಲಿಲ್ಲ.

ಊರ ಜನರ ಮಾತಿಗೆ ಕಿವಿಗೊಡದ ದ್ಯಾಮ ಪಂಚಾಯ್ತಿಯ ಸೆಕ್ರಟರಿಯವರಿಗೊಂದು ಅರ್ಜಿ ಬರೆದು ಕೊಟ್ಟುಬಂದ. ಅದರ ಒಕ್ಕಣೆ ಹೀಗಿತ್ತು

``ಹೊಸಳ್ಳಿ ಗ್ರಾಮಟಾಣ ದೊಡ್ಡುಸೇಮರದ ಕೆಳಗೆ ಗುಡಿ ಕಟ್ಟುವಂತೆ ಕನಸಿನಲ್ಲಿ ಬಂದು ನಮ್ಮ ಮನೆ ದೇವರು ನನಗೆ ಅಪ್ಪಣೆ ಮಾಡಿದ್ದಾನೆ. ಆ ಪ್ರಕಾರ ಸಣ್ಣದೊಂದು ಗುಡಿಯನ್ನು ನಾನೇ ಕಟ್ಟಿಸಬೇಕು ಅಂಬೋ ತಿರ್ಮಾಣ ಮಾಡಿದ್ದೇನೆ.

ಗುಡಿಗೆ ಶೇ18ರ ಅನುದಾನದಲ್ಲಿ ಕೈಲಾದಷ್ಟು ದುಡ್ಡು ಕೊಡಬೇಕೆಂದು ದಯಳುಗಳಾದ ತಮಲ್ಲಿ ಪ್ರಾರ್ತನೆ ಎಂದು ಬರೆದು, ದ್ಯಾಮಪ ಬಿನ್ ಹೊಸಳ್ಳಿಕೇರಿಯ ದೊಡ್ಡ ಕಣುಮಪ ಎಂದು ಸಹಿ ಮಾಡಿ, ಅದರ ಕೆಳಗೆ ದ್ಯಾಮಪ್ಪನ ರುಂಜು ಎಂದು ಆವರಣದಲ್ಲಿ ಬರೆದು ಪಂಚಾಯ್ತಿ ಸೆಕ್ರಟರಿ ತಿಪ್ಪೇಸ್ವಾಮಿಯ ಕೈಗೇ ಕೊಟ್ಟು ಬಂದಿದ್ದ. ದ್ಯಾಮ ಕೊಟ್ಟ ಅರ್ಜಿ ಹೊಸಳ್ಳಿಯಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿತು!

ಮಾರನೇ ದಿನವೇ ಪಂಚಾಯ್ತಿ ಜವಾನ ಹುಸೇನಿ ದ್ಯಾಮನನ್ನು ಹುಡುಕಿಕೊಂಡು ಕೇರಿಗೆ ಬಂದ. `ದ್ಯಾಮಣ್ಣ... ನಿನ್ನ ಕರಕಂಡು ಬಾ ಅಂತ ಚೇರ್ಮನ್ನರು ಮತ್ತು ಪಂಚಾಯ್ತಿ ಸೆಕ್ಟ್ರಿಗಳು ಹೇಳಿ ಕಳ್ಸಿದಾರೆ... ಕರಕಂಡ್ ಹೋಗಣ ಅಂತ ಬಂದೆ. ಬಿಟ್ಟಿದ್ ಬಿಟ್ಟಂಗೆ ಕರಕಂಡ್ ಬರಬೇಕು ಅಂತ ಚೇರ್ಮನ್ನರು ಹುಕುಂ ಆಗೈತೆ... ಬಾ ಓಗನ...~ ಎಂದು ವರಾತ ಮಾಡತೊಡಗಿದ.

ಗುಡಿ ಕಟ್ಟಲು ಪರ್ಮಿಷನ್ ಕೊಡುವಂತೆ ಬರೆದುಕೊಂಡ ಅರ್ಜಿಯ ಬಗ್ಗೆ ಮಾತನಾಡಲು ಚೇರ್ಮನ್ನರು ಕಳಿಸಿರಬೌದು ಎಂಬುದು ದ್ಯಾಮನಿಗೆ ಅರ್ಥವಾಗಿಬಿಟ್ಟಿತು.

ದ್ಯಾಮನ ಮುಖ ಕಂಡದ್ದೇ ತಡ ಚೇರ್ಮನ್ನರು `ಏನಲೇ ದ್ಯಾಮ ಎಷ್ಟು ದುರಂಕಾರ ನಿಂಗೆ? ಹುಣಸೇಮರದ ಜಾಗ ನಿಮ್ಮಪ್ಪನ ಜಹಗೀರಿ ಅಂದ್ಕಂಡಿದೀಯ? ಅದು ಗ್ರಾಮ ಠಾಣ. ಅಲ್ಲಿ ಸಂತೆ ನಡೆಸಬೇಕು ಅಂತ ಪಂಚಾಯ್ತಿ ತೀರ್ಮಾನ ಆಗಿರೋದು ನಿಂಗೆ ಗೊತ್ತಿಲ್ಲವೇನೊ? ಅಲ್ಲಿ ನೀನು ಗುಡಿ ಕಟ್ಟಬೇಕು ಅಂತ ಅಂದ್ಕಂಡಿದಿಯಂತೆ.

ಗುಡಿ ಕಟ್ತೀನಿ ಅಂತ ದುಡ್ಡು ವಸೂಲಿ ಮಾಡ್ತಿದೀಯಂತೆ ಏನ್ ಕತೆ ನಿಂದು? ಊರು ಸತ್ತೈತೆ ಅಂತ ತಿಳ್ಕಂಡಿದಿಯಾ ಎಂಗೆ? ಹೇಳೋರು ಕೇಳೋರು ಯಾರೂ ಇಲ್ಲ, ಏನು ಬೇಕಾದರೂ ಮಾಡಬಹುದು ಅಂದ್ಕಡಿದಿಯೋ?~ ಎಂದು ರೇಗಿದ ಧ್ವನಿಯಲ್ಲಿ ತಮ್ಮ ಸಿಟ್ಟನ್ನು ಹೊರಹಾಕಿದರು.

ಚೇರ್ಮನ್ನರಿಗೆ ಸಿಟ್ಟು ಬಂದಿದೆ ಅನ್ನಿಸಿ ಸ್ವಲ್ಪ ಹೊತ್ತು ಏನೂ ಮಾತಾಡದೆ ಸುಮ್ಮನೇ ನಿಂತಿದ್ದ. ಆಮೇಲೆ `ನಿಮ್ಮನ್ನು ಕೇಳಬೇಕು ಅಮ್ತಲೇ ಐದಾರು ದಿನ ನಿಮ್ಮ ಮನೆ ತವಕ್ಕೆ ಬಂದಿದ್ದೆ. ನನ್ನ ಮಕ ನೋಡಿದರೂ ಏನು ಎತ್ತ ಅಮ್ತ ಕೇಳಲಿಲ್ಲ... ಸಣಿ ದೇವರು ದಿನಾ ಕನಸಲ್ಲಿ ಬಂದು ಗುಡಿ ಕಟ್ಟಿಸು ಅಮ್ತ ಹೇಳ್ತನೇ ಅವುನೆ... ನಾನಾದರೂ ಏನು ಮಾಡ್ಲಿ ಸ್ವಮೇ?~ ಎಂದು ಹೇಳಿ ಚೇರ್ಮನ್ನರ ಮುಖ ನೋಡಿದ.

ದ್ಯಾಮ ಕಟ್ಟಬೇಕು ಅಂತಿರೋದು ಶನಿ ದೇವರ ಗುಡಿ ಅನ್ನುವುದು ಗೊತ್ತಾದಂತೆ ಚೇಮನ್ನರ ಸಿಟ್ಟು ತಕ್ಷಣ ಇಳಿದಂತೆ ಕಾಣಿಸಿತು. ಅದನ್ನು ದ್ಯಾಮ ಗಮನಿಸಿದ. `ಗುಡಿ ಕಟ್ಟಬೇಕು ಅಂತ ನಾನೇನೂ ಅಂದ್ಕಂಡಿಲ್ಲ.

ಸಣಿ ದೇವರು ಬಿಟ್ಟೂ ಬಿಡದೆ ದಿನಾ ಬೆಳಗಿನ ಬೀಯಸ್ ಬಸ್ಸು ಬರೋ ಹೊತ್ತಲ್ಲಿ ಕನಸಲ್ಲಿ ಬಂದು ಗುಡಿ ಕಟ್ಟು, ಗುಡಿ ಕಟ್ಟು ಅಮ್ತ ಹೇಳ್ತಲೇ ಅವುನೆ. ಅವನ ಕಾಟ ತಡೆಯಲಾರದೆ ನಾನು ಗುಡಿ ಕಟ್ಟಿ ಮುಗಿಸಬೇಕು ಅಂದ್ಕಂಡೆ. ಗುಡಿ ಕಟ್ಟಲು ನಂಗೆ ಸಾಯ ಮಾಡಿ ದೇವರು ಕನಸ್ಸಿನಲ್ಲಿ ಬಂದು ಕೇಳೋದನ್ನು ತಪ್ಪಿಸಿ ಸ್ವಮೇ~ ಎಂದು ಅಂಗಲಾಚಿದ.

ಚೇರ್ಮನ್ನರು ಇಕ್ಕಟಿನಲ್ಲಿ ಸಿಕ್ಕಿಬಿದ್ದರು. ಬೇರೆ ಯಾವುದೇ ದೇವರ ಗುಡಿಯಾದರೂ ಬೇಡ ಅಂದು ಬಿಡುತ್ತಿದ್ದರು. ಶನಿ ದೇವರ ಗುಡಿ ಕಟ್ಟುವುದನ್ನು ತಡೆಯಲು ಮನಸ್ಸು ಹಿಂಜರಿಯಿತು. ಶನಿ ಮಹಾತ್ಮ ಕೋಪ ಮಾಡಿಕೊಂಡು ನನ್ನ ಹೆಗಲೇರಿ ಕುಳಿತರೆ ಕಷ್ಟ ಎಂದು ಮನಸ್ಸಿನಲ್ಲಿ ಅನ್ನಿಸಿದ್ದೇ ತಡ, `ಎದುರಿಗೆ ನಿಂತಿದ್ದ ಪಂಚಾಯ್ತಿಯ ಸೆಕ್ರೆಟರಿಯ ಕಡೆಗೆ ನೋಡುತ್ತ, `ಏನ್ರಿ... ಅಲ್ಲಿ ಗುಡಿ ಕಟ್ಟಭೌದೇನ್ರಿ~ ಎಂದು ಕೇಳುವ ಮೂಲಕ ತಮ್ಮ ಮೇಲಿನ ಹೊರೆಯನ್ನು ಸೆಕ್ರೆಟರಿ ಹೆಗಲಮೇಲೆ ಹಾಕಿ ಸ್ವಲ್ಪ ನಿರಾಳವಾದಂತೆ ಕಂಡುಬಂದರು.

ಸೆಕ್ರೆಟರಿಗೆ ಏನು ಹೇಳಬೇಕು ಅನ್ನುವುದು ತಕ್ಷಣಕ್ಕೆ ತಿಳಿಯದೆ ಚೇರ್ಮನ್ನರ ಮುಖ ನೋಡುತ್ತಲೇ, `ಅಲ್ಲಿ ಸಂತೆ ನಡೀಬೇಕು ಅಂತ ಪಂಚಾಯ್ತಿ ಸರ್ವಾನುಮತದ ನಿರ್ಣಯ ಮಾಡಿದೆ. ಫೈಲು ಡೀಸಿ ಸಾಹೇಬರ ಅಪ್ರೂವಲಿಗೆ ಹೋಗಿದೆ.

ನಿಮಗೂ ಗೊತ್ತಲ್ಲ. ಅಲ್ಲಿ ಗುಡಿ ಕಟ್ಟಿದರೂ ಸಂತೆ ನಡೆಸಬಹುದು. ಆದರೆ ನಿರ್ಣಯ ಮಾಡಬೇಕಾದವರು ನೀವು ಮತ್ತು ಪಂಚಾಯ್ತಿ~ ಎಂದು ಹೇಳಿ ಅದರಲ್ಲಿ ನನ್ನ ಪಾತ್ರವೇನೂ ಇಲ್ಲ, ಗುಡಿ ಕಟ್ಟಲು ನನ್ನ ತಕರಾರೇನೂ ಇಲ್ಲ ಎಂಬ ಭಾವದಲ್ಲಿ ಹೇಳಿದ.

`ಸರಿ, ನೀನು ಹೋಗು... ದೊಡ್ಡ ಹುಣಸೇಮರದ ಕೆಳಗೆ ಶನಿ ದೇವರ ಗುಡಿ ಕಟ್ಟೋದಕ್ಕೆ ನನ್ನದೇನೂ ತಕರಾರಿಲ್ಲ. ಆದರೆ ಗ್ರಾಮಠಾಣದಲ್ಲಿ ಏನನ್ನೇ ಕಟ್ಟಬೇಕು ಅಂದರೂ ಊರು ಒಪ್ಪಬೇಕು. ಗುಡಿ ಕಟ್ಟೋದು ಸುಲಭ, ಅದನ್ನು ನೋಡಿಕಳ್ಳೋರು ಯಾರು. ಅಲ್ಲಿ ಪೂಜೆ ಪುನಸ್ಕಾರ ಆಗಬೇಕು.

ಶನಿ ದೇವರ ಗುಡಿ ಅಂದ ಮೇಲೆ ಮುಟ್ಟು ಚಟ್ಟು ಆಗಂಗಿಲ್ಲ. ಅಲ್ಲಿ ಪೂಜೆ ಮಾಡೋರು ಯಾರು ಅಂಬೋದನ್ನೂ ಯೋಚನೆ ಮಾಡಬೇಕು. ಊರ ಜನರನ್ನೆಲ್ಲ ಸೇರಿಸಿ ಅಲ್ಲಿ ತೀರ್ಮಾನ ಮಾಡಬೇಕು~ ಎನ್ನುತ್ತ, `ಗುಡಿ ಕಟ್ಟೋದಕ್ಕೆ ನನ್ನ ತಕರಾರೇನೂ ಇಲ್ಲಯ್ಯ~ ಎಂದು ಮತ್ತೊಮ್ಮೆ ಹೇಳಿ, `ಗುಡಿಗೆ ನಾನು ಸಾವಿರದ ನೂರಾ ಒಂದು ರೂಪಾಯಿ ಕೊಡುತ್ತೇನೆ~ ಎಂದರು. ಚೇರ್ಮನ್ನರು ಹಾಗೆ ಹೇಳುತ್ತಿದ್ದಂತೆ ದ್ಯಾಮನಿಗೆ ಕುಣಿದಾಡಿ ಬಿಡುವಷ್ಟು ಸಂತೋಷವಾಯಿತು.

ದೊಡ್ಡ ಹುಣಸೇಮರದ ಕೆಳಗೆ ದ್ಯಾಮ ಶನಿ ದೇವರ ಗುಡಿ ಕಟ್ಟಿಸುತ್ತಾನಂತೆ. ಅದಕ್ಕೆ ಚೇರ್ಮನ್ನರು ಒಪ್ಪಿಗೇನೂ ಕೊಟ್ಟಿದ್ದಾರಂತೆ. ಹುಣಸೇಮರದ ಕೆಳಗೆ ಸಂತೆ ಮಾಡುವ ತೀರ್ಮಾನ ಮುಂದೂಡಿದ್ದಾರಂತೆ. ಪಾವಗಡದ ಶನಿ ದೇವರ ಒಂದು ಬ್ರಾಂಚು ಹೊಸಳ್ಳಿಯಲ್ಲೂ ಶುರುವಾಗುತ್ತದಂತೆ ಎಂಬ ಸುದ್ದಿಗಳು ಹೊಸಳ್ಳಿ ಜನರ ಬಾಯಲ್ಲಿ ಹರಿದಾಡಿದವು.

ಗುಡಿಗೆ ದ್ಯಾಮನೇ ಪೂಜಾರಿಯಂತೆ ಇತ್ಯಾದಿ ವಿಷಯಗಳನ್ನು ಜನರ ಬಾಯಲ್ಲಿ ಹೊರಟು ಸುದ್ದಿಯಾಗಿ, ಹೊಸಳ್ಳಿ ಮಾತ್ರವಲ್ಲ ಹೋಬಳಿಯ ಹದಿನೆಂಟು ಊರುಗಳಲ್ಲೂ ಪ್ರಚಾರವಾಯಿತು. ಅದರ ಬೆನ್ನಿಗೆ ಶನಿ ದೇವರು ದ್ಯಾಮನ ಮೈಮೇಲೆ ಬರುತ್ತಾನಂತೆ ಎಂದೂ ಕೆಲವರು ತಮಾಷೆಗೆ ಹೇಳಿದ್ದನ್ನು ಅನೇಕರು ನಿಜ ಎಂದೇ ನಂಬಿಬಿಟ್ಟರು!

ಊರ ಜನರನ್ನು ಸೇರಿಸಿ ಗುಡಿ ಕಟ್ಟುವ ವಿಷಯ ತೀರ್ಮಾನ ಮಾಡುತ್ತೇನೆ ಎಂದು ದ್ಯಾಮನಿಗೆ ಹೇಳಿದ್ದ ಚೇರ್ಮನ್ನರು ಅದರ ಬಗ್ಗೆ ಯೋಜನೆಯನ್ನೂ ಮಾಡಲಿಲ್ಲ. ಈ ಮಧ್ಯೆ ಅವರು ಪಾವಗಡಕ್ಕೆ ಹೋಗಿ ಬಂದರು.

ಅಲ್ಲಿನ ದೇವಸ್ಥಾನದ ಸಮಿತಿ ಸದಸ್ಯರನ್ನು ಭೇಟಿಯಾಗಿ ಹೊಸಳ್ಳಿಯಲ್ಲಿ ಶನಿ ದೇವರ ಗುಡಿ ಕಟ್ಟುವುದಕ್ಕೆ ಅನುಮತಿ ಕೊಟ್ಟಿದ್ದೀರಾ ಎಂದು ವಿಚಾರಿಸಿದರಂತೆ. ಸ್ವಾಮಿಯ ಗುಡಿ ಕಟ್ಟುವುದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದು ದೇವಸ್ಥಾನ ಸಮಿತಿಯವರು ಹೇಳಿದರಂತೆ ಎಂದು ಜನರು ಮಾತಾಡಿಕೊಂಡರು.

ದೊಡ್ಡ ಹುಣಸೇಮರದ ಕೆಳಗೆ ಶನಿ ದೇವರ ಗುಡಿ ಕಟ್ಟುವುದಕ್ಕೆ ಚೇರ್ಮನ್ನರಿಗೆ ಇಷ್ಟವಿದೆಯೋ, ಇಲ್ಲವೋ ಎಂಬುದು ಮಾತ್ರ ಯಾರಿಗೂ ಗೊತ್ತಾಗಲಿಲ್ಲ.
ಚೇರ್ಮನ್ನರಂತೆ ಊರಿನ ಅನೇಕರು ಪಾವಗಡಕ್ಕೆ ಹೋಗಿ ಬಂದರು.

ಹಾಗೆ ಹೋಗಿ ಬಂದವರಲ್ಲಿ ಕೆಲವರು ದ್ಯಾಮನಿಗೆ ಶನಿ ದೇವರ ಗುಡಿ ಕಟ್ಟುವುದಕ್ಕೆ ಅವಕಾಶ ಕೊಡಬಾರದು. ಬದಲಿಗೆ ನಾವೇ ಒಂದು ಗುಡಿಯನ್ನು ಕಟ್ಟಿಬಿಡಬೇಕು ಎಂದು ತೀರ್ಮಾನಿಸಿದರು. ಅದಕ್ಕೆ ಊರ ಜನರ ಒಪ್ಪಿಗೆ ಇದೆ.

ದೊಡ್ಡ ಹುಣಸೇಮರದ ಗ್ರಾಮಠಾಣದ ಬದಲು ಊರ ಮುಂದಿನ ಹನುಮಂತ ದೇವರ ಗುಡಿಯ ಪಕ್ಕದಲ್ಲಿರುವ ಜಾಗದಲ್ಲಿ ಶನಿ ದೇವರ ಗುಡಿ ಕಟ್ಟುವುದೆಂದು ನಿರ್ಧರಿಸಿದರು.

ಕನಸಿಗೆ ಹೆದರಿ ದ್ಯಾಮ ನಿದ್ದೆ ಮಾಡುವುದನ್ನೇ ನಿಲ್ಲಿಸಿದ. ಅವನ ದೇಹ ಕೃಶವಾಯಿತು. ಕೆದರಿದ ತಲೆಯ ಕೂದಲು, ಗಡ್ಡ ಬೋಳಿಸದೆ ವಿಕಾರವಾಗಿ ಕಾಣತೊಡಗಿದ. ಮೊದಲೇ ಕಪ್ಪಗಿದ್ದ ದ್ಯಾಮ ಇನ್ನಷ್ಟ ಕರ್ರಗಾದ. ಹಗಲು ಹೊತ್ತಿನಲ್ಲಿ ಸಣ್ಣಗೆ ಜೋಮು ಹತ್ತಿದರೂ ಗಾಢ ನಿದ್ದೆಗೆ ಅವನೇ ಅವಕಾಶ ಕೊಡುತ್ತಿರಲಿಲ್ಲ. ಗುಡಿ ಕಟ್ಟಿ ಮುಗಿಸದೆ ಅತಗೆ ನಿದ್ದೆ ಬರುವುದಿಲ್ಲ ಎನ್ನುವುದು ಅವನಿಗೆ ಖಚಿತವಾಗಿಬಿಟ್ಟಿತು. ಕೊನೆಗೂ ಒಂದು ನಿರ್ಧಾರಕ್ಕೆ ಬಂದು ಬಿಟ್ಟ.

ಮಾರನೆ ದಿನ ಬೆಳಕು ಹರಿಯುವ ಹೊತ್ತಿಗೆ ದೊಡ್ಡ ಹುಣಸೇಮರದ ಕೆಳಗೆ ಮೂರೂವರೆ ಅಡಿ ಎತ್ತರದ ಮೂರು ಗೋಡೆಗಳ ಗುಡಿ ತಲೆ ಎತ್ತಿತ್ತು!
ಬೆಳಕು ಹರಿಯುವುದಕ್ಕೆ ಸ್ವಲ್ಪ ಮೊದಲು ದೇವರ ಹಳ್ಳದ ಕಡೆಗೆ ಹೊರಟವರು ಯಾರೋ ಅದನ್ನು ನೋಡಿ ಊರ ಜನರಿಗೆ ಸುದ್ದಿ ಮುಟ್ಟಿಸಿದರು.

ಸ್ವಲ್ಪ ಹೊತ್ತಿನೊಳಗೆ ಹೊಸಳ್ಳಿಯ ಜನರು ದೊಡ್ಡ ಹುಣಸೇಮರದ ಕಡೆಗೆ ದೊಡ್ಡ ಹೆಜ್ಜೆ ಹಾಕುತ್ತ ಬಂದರು.

ಮೂರು ಪುಟ್ಟ ಗೋಡೆಗಳು. ಅದರ ಮೇಲೆ ಎರಡು ಕಡಪಾ ಕಲ್ಲು ಜೋಡಿಸಿದ ಛಾವಣಿ. ಒಳಗೆ ಶನಿ ಮಹಾತ್ಮನ ಪಟ. ಗಾಜಿನ ಹರಳು ಹಾಕಿದ್ದ ಪಟದಲ್ಲಿ ತನ್ನ ವಾಹನದ ರಥದಲ್ಲಿ ಬಿಲ್ಲು ಬಾಣ ಹಿಡಿದು ಕೂತ ಪ್ರಸನ್ನ ಮುಖ ಭಾವದ ಶನಿ ಮಹಾತ್ಮ ಕುಳಿತಿದ್ದ!

ಗುಡಿಯ ಸುತ್ತ ಚೆಲ್ಲಿದ್ದ ಅನ್ನದ ಅಗುಳು ಮತ್ತು ಅಲ್ಲಲ್ಲಿ ಬಿದ್ದಿದ್ದ ಮಂಡಕ್ಕಿ ತಿನ್ನಲು ನೂರಾರು ಕಾಗೆಗಳು ಬಂದು ಕುಳಿತು ಕಾ ಕಾ ಎನ್ನುತ್ತ ಕೂತಿದ್ದವು, ಕೆಲವು ಕುಪ್ಪಳಿಸಿ ಹಾರುತ್ತಿದ್ದವು. ಭಾರಿ ಸಂಖ್ಯೆಯಲ್ಲಿದ್ದ ಕಾಗೆಗಳು ಮತ್ತು ಶನಿ ದೇವರನ್ನು ನೋಡಿ ಹೊಸಳ್ಳಿ ಜನರು ದಂಗು ಬಡಿದವರಂತೆ ನಿಂತುಬಿಟ್ಟರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.