ಗುರುವಾರ , ಜೂನ್ 17, 2021
29 °C

ನೆಲ್ಲಿಕಾರು ಬಸದಿಗೆ ರಥೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ: ತಾಲ್ಲೂಕಿನ ಅತಿಶಯ ಕ್ಷೇತ್ರ ನೆಲ್ಲಿಕಾರು ಬಸದಿಯ ಮಹಾರಥೋತ್ಸವ ಇದೇ 28ರಂದು ನಡೆಯಲಿದೆ. ನೆಲ್ಲಿಕಾರು ತಾಲ್ಲೂಕಿನ ಸಣ್ಣ ಗ್ರಾಮ. ಕಪ್ಪುಶಿಲೆಗೆ ಹೆಸರುವಾಸಿ. ಇಲ್ಲಿಯ ಕಪ್ಪುಶಿಲೆಗಳನ್ನು ಕೆತ್ತಿ ಸಹಸ್ರಾರು ಕಡೆ ಸುಂದರ ವಿಗ್ರಹಗಳನ್ನು ಸಿದ್ಧಗೊಳಿಸಲಾಗುತ್ತಿದೆ.ನೆಲ್ಲಿಕಾರಿನ ಹಿಂದಿನ ಹೆಸರು ಅಮಲಕಪುರ ಎಂಬುದು. ಊರಿನ ವಿಶಾಲ ಪ್ರಾಂಗಣದಲ್ಲಿ ಅನಂತನಾಥ ಸ್ವಾಮಿ ಬಸದಿಯಿದೆ. ವಿಜಯನಗರ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಬಸದಿ ಎರಡು ಅಂತಸ್ತಿನಲ್ಲಿ ರಚಿಸಲ್ಪಟ್ಟಿದೆ. ಗರ್ಭಗೃಹ, ಸುಖನಾಸಿ, ಮುಖಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಪೂಜಿಸಲ್ಪಡುವ ಅನಂತನಾಥ ಸ್ವಾಮಿಯ ಮೂಲ ವಿಗ್ರಹವು ಹೊಯ್ಸಳ ಶೈಲಿಯಲ್ಲಿದೆ. ಕುಸುರು ಕೆತ್ತನೆಗಳ ಕಲ್ಲಿನ ಪ್ರಭಾವಳಿ, ಅದರಲ್ಲಿ ಯಕ್ಷಯಕ್ಷಿಯರ ಉಬ್ಬುಶಿಲ್ಪ ಗಮನೀಯ.ಗರ್ಭಗುಡಿಯ ಎದುರಿನ ಸುಖನಸಿಯಲ್ಲಿ ಒಂದೇ ಅಳತೆಯ 24 ಬಿಂಬಗಳು, ಮಂದರ, ಶ್ರುತ, ಸಿದ್ಧರು, ಪದ್ಮಾವತಿ ಹಾಗೂ ಬ್ರಹಮ್ ದೇವರ ವಿಗ್ರಹಗಳಿವೆ. ಮೇಲೆ ಶಿಲೆ , ಕಂಚು ಹಿತ್ತಾಳೆಯಲ್ಲಿ ನಿರ್ಮಿಸಿದ ತೀರ್ಥಂಕರರ ಬಿಂಬಗಳಿವೆ. ನೆಲ್ಲಿಕಾರು ಜೈನಯತಿಯೂ ದ್ವಿಭಾಷಾ ಕವಿಯೂ ಆಗಿದ್ದ ಕಲ್ಯಾಣಕೀರ್ತಿಯ ನೆಲೆ. ಇಲ್ಲಿಯ ಬಸದಿಗೆ ಈತ ಮೂಲಕಾರಣ. ಈತನ ಕುರಿತು ಕನ್ನಡ ಸಾಹಿತ್ಯ ಚರಿತ್ರಕಾರರು ಉಲ್ಲೇಖಿಸಿದ್ದಾರೆ. ಈತನ ಕುರಿತು ನೆಲ್ಲಿಕಾರಿನಲ್ಲಿ ಮೂರು ಶಿಲಾಶಾಸನಗಳೂ ಇವೆ. ತನ್ನ ಪೂರ್ವಾಶ್ರಮದ ಸಂಪತ್ತನ್ನು ಬಸದಿ ನಿರ್ಮಾಣಕ್ಕಾಗಿ ಈತ ವಿನಿಯೋಗಿಸಿದ್ದು, ಕ್ರಮೇಣ ಮುನಿ ನೆಲೆನಿಂತ ಇಲ್ಲಿಯ ಮಠ ಧರ್ಮಶಾಲೆಯೆನಿಸಿತು. ಕ್ರಿ.ಶ. 1425ರ ವೇಳೆಗೆ ಇಲ್ಲಿನ ಬಸದಿ ಹಾಗೂ ಮಠಗಳು ನಿರ್ಮಾಣಗೊಂಡವು. ಸ್ಥಳೀಯ ಶ್ರಾವಕರ ಸತತ ಪ್ರಯತ್ನಗಳಿಂದ ಹಾಗೂ ಸಹಕಾರಗಳಿಂದ ಇವು ಇತ್ತೀಚೆಗೆ ಜೀರ್ಣೋದ್ಧಾರಗೊಂಡಿವೆ.ಜೈನಮಂದಿರಗಳ ರಥೋತ್ಸವಗಳನ್ನು ವಾರ್ಷಿಕೋತ್ಸವವೆಂದೂ, ರಥಯಾತ್ರಾ ಮಹೋತ್ಸವವೆಂದೂ ಕರೆಯಲಾಗುತ್ತದೆ. ರಥೋತ್ಸವದ ಪ್ರೇರೇಪಣೆ ಜಿನೇಶ್ವರನ ಸಮವಸರಣದ ಪ್ರತೀಕವಾಗಿರುವುದರಿಂದ ಸಮವಸರಣ ಉತ್ಸವೆಂದೂ ಕರೆಯಲಾಗುತ್ತದೆ. ನಮ್ಮ ಜಿಲ್ಲೆಯಾದ್ಯಂತ ನಡೆಯುವ ರಥೋತ್ಸವಗಳಲ್ಲಿ ನೆಲ್ಲಿಕಾರು ರಥೋತ್ಸವವೂ ಒಂದು.ನೆಲ್ಲಿಕಾರು ರಥೋತ್ಸವವು ತನ್ನದೇ ಆದ ವೈಶಿಷ್ಟ್ಯದಿಂದ ಕೂಡಿದೆ. ಅನೂಚಾನವಾಗಿ ನಡೆದು ಬರುತ್ತಿರುವ ಈ ರಥೋತ್ಸವದಲ್ಲಿ ನಾಡಿನ ಜೈನ, ಜೈನೇತರರೆಲ್ಲರೂ ಸಂಭ್ರಮ ದಿಂದ ಭಾಗವಹಿಸುತ್ತಾರೆ. ರಥೋ ತ್ಸವ ಪೂರ್ವಭಾವಿಯಾಗಿ ಚಂದ್ರನಾಥ ಸ್ವಾಮಿಗೆ ಅಟ್ಟಣಿಗೆಯ ಮೇಲೆ ಅಭಿಷೇಕ ಮತ್ತು ನಿರ್ದಿಷ್ಟವಾದ ಕೆಲವೆಡೆ ಕಟ್ಟೆಪೂಜೆ ಗಳೂ ನಡೆಯುತ್ತವೆ. ರಥೋತ್ಸವ ದಂದು ಮಧ್ಯಾಹ್ನ ಸ್ವಾಮಿ ರಥಾರೋಹಣ ಮಾಡುವ ಸನ್ನಿವೇಶ ಭಕ್ತದಿಗಳಿಗೆಲ್ಲ ಸಂಭ್ರಮ. ಒಂದೆಡೆ ಬ್ರಹ್ಮ ದೇವರ ಗಂಭೀರ ನಡೆ, ಇನ್ನೊಂದೆಡೆ ಕ್ಷೇತ್ರಪಾಳ ಪಾತ್ರಿಯ ದರ್ಶನ. ಈ ಹಿನ್ನೆಲೆಯಿಂದ ಈ ಕ್ಷೇತ್ರ ಅತಿಶಯ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದೆ.ರಥೋತ್ಸವದ ದಿನ ಧಾರ್ಮಿಕ ಸಾಂಸ್ಕೃತಿಕ ಸಮವಸರಣ ಪೂಜೆ ಮುಂತಾದ ಚಟುವಟಿಕೆ ಗಳು ಕಳೆದ ನಲ್ವತ್ತು ವರ್ಷಗಳಿಂದ ನಡೆದು ಬರುತ್ತಿದೆ. ಈ ಸಮಾರಂಭದಲ್ಲಿ ಭಟ್ಟಾರಕ ಸ್ವಾಮಿಜಿ, ಆಢ್ಯ ಜೈನ, ಜೈನೇತರ ವಿದ್ವಾಂಸರು, ಕಲಾಕಾರರೂ, ಸಾಹಿತಿಗಳೂ ಪಾಲ್ಗೊಂಡಿ ದ್ದಾರೆ. ಸ್ಥಳೀಯ ಅನಂತಕೀರ್ತಿ ಯುವಜನ ಸಂಘವು ಕೆಲವು ವರ್ಷಗಳಿಂದ ಯಕ್ಷಗಾನ ಬಯಲಾಟ ಜಿನಕಥೆ ನೃತ್ಯ ಗಾಯನ ಕಾರ್ಯಕ್ರಮಗಳನ್ನು ಏರ್ಪಡಿಸಿ ಗಣನೀಯ ಸೇವೆ ಸಲ್ಲಿಸುತ್ತಾ ಬರುತ್ತಿದೆ.         

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.