ಶನಿವಾರ, ಮೇ 21, 2022
23 °C

ನೇತ್ರ ತಪಾಸಣೆ ಶಿಬಿರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಆಶ್ರಯದಲ್ಲಿ ಸುಮಾರು 25 ಸಾವಿರ ಬಡವರು ಮತ್ತು ಗ್ರಾಮೀಣ ಜನರಿಗೆ ಉಚಿತ ನೇತ್ರ ತಪಾಸಣೆ ನಡೆಸುವ ಗುರಿಯನ್ನು ಹೊಂದಲಾಗಿದೆ ಎಂದು ಕೆಎಂಎಫ್ ನಿರ್ದೇಶಕ ಪಿ.ನಾಗರಾಜ್ ತಿಳಿಸಿದರು.ತಾಲ್ಲೂಕಿನ ಕೆಂಪನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘ ಮತ್ತು ಅಗರ್‌ವಾಲ್ ಕಣ್ಣಿನ ಆಸ್ಪತ್ರೆ ಜಂಟಿಯಾಗಿ ಸೋಮವಾರ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಹಳ್ಳಿಗಳಲ್ಲಿಯೂ ಶಿಬಿರವನ್ನು ಆಯೋಜಿಸಲಾಗುತ್ತಿದ್ದು ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.ಹಣಕಾಸಿನ ಕೊರತೆಯಿಂದ ಅನೇಕ ಗ್ರಾಮೀಣ ಹಾಗೂ ಕೂಲಿ ಕಾರ್ಮಿಕರು ಇಂದು ತಮ್ಮ ಆರೊಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇಂದಿನ ದುಬಾರಿ ಆಸ್ಪತ್ರೆ ವೆಚ್ಚಗಳನ್ನು ಭರಿಸಲಾಗದೆ ಸಾವಿರಾರು ರೈತರು ಆಸ್ಪತ್ರೆಗೆ ಹೋಗಲಾಗುತ್ತಿಲ್ಲ. ಹಾಲು ಉತ್ಪಾದಕ ಸಹಕಾರ ಸಂಘದ ವತಿಯಿಂದ ಯಶಸ್ವಿನಿ ಕಾರ್ಡ್‌ಗಳನ್ನು ವಿತರಿಸಿದ್ದರು, ಅದು ಸರಿಯಾದ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಇವುಗಳನ್ನು ಮನಗಂಡು ಹಳ್ಳಿಗಾಡು ಪ್ರದೇಶದಲ್ಲಿಯೇ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಲು ಚಿಂತನೆ ನಡೆಸಿ ಇದೀಗ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯ ಸೇವೆಯನ್ನು ಒದಗಿಸಲು ಬೆಂಗಳೂರಿನ ಡಾ.ಅಗರ್‌ವಾಲ್ ಕಣ್ಣಿನ ಆಸ್ಪತ್ರೆ ಮುಂದೆ ಬಂದಿದ್ದು, ಇವರೊಂದಿಗೆ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕ ಸಂಘಗಳ ಸಹಯೋಗದೊಂದಿಗೆ ಪ್ರತಿ ಹಳ್ಳಿಯಲ್ಲಿಯೂ ಇಂದಿನಿಂದನಿರಂತರವಾಗಿ ನೇತ್ರ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.ನೇತ್ರ ತಜ್ಞ ಡಾ.ಸಂಜಯ್ ಬದ್ದಿ ಮಾತನಾಡಿ, ನೇತ್ರಗಳು ಮನುಷ್ಯನ ಅಂಗಾಂಗಳಲ್ಲಿ ಬಹು ಮುಖ್ಯವಾಗಿದ್ದು, ನಲ್ವತ್ತು ವರ್ಷ ಮೀರಿದ ಪ್ರತಿಯೊಬ್ಬರು ತಪ್ಪದೆ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು. ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ವ್ಯಕ್ತಿಯ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವುದರಿಂದ ಇಂತಹ ವ್ಯಕ್ತಿಗಳು ಕಾಲ ಕಾಲಕ್ಕೆ ದೃಷ್ಟಿ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಎಂದು ವಿವರಿಸಿದರು.ಬೆಂಗಳೂರು ಡೇರಿ ರಾಮನಗರ ಶಿಬಿರ ಉಪ ವ್ಯವಸ್ಥಾಪಕ ಮಾಯಣ್ಣ, ವಿಸ್ತರಣಾಧಿಕಾರಿ ನಂಜಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆದಿತ್ಯ ಲೋಕೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚನ್ನಪ್ಪ, ಮುಖಂಡರಾದ ಮಾಯಗಾನಹಳ್ಳಿ ಮಂಜು, ಶಿವಣ್ಣ, ಪುಟ್ಟಸ್ವಾಮಯ್ಯ, ಹನುಮಯ್ಯ, ತಜ್ಞವೈದ್ಯೆ ಡಾ. ವಂದನಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.