ಮಂಗಳವಾರ, ಮೇ 18, 2021
22 °C
ರಾಣಿ ಚನ್ನಮ್ಮ ವಿವಿ

ನೇಮಕಾತಿ ಸಂದರ್ಶನ ಮುಂದೂಡಿಕೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಯ ನೇಮಕಾತಿಗಾಗಿ ಶುಕ್ರವಾರ ನಡೆಯಬೇಕಿದ್ದ ಸಂದರ್ಶನ ಮುಂದೂಡಿದ್ದನ್ನು ವಿರೋಧಿಸಿ ಆರ್‌ಸಿವಿವಿ ಆವರಣದಲ್ಲಿ ಅಭ್ಯರ್ಥಿಗಳು ಶುಕ್ರವಾರ ಪ್ರತಿಭಟಿಸಿದರು.ಇದೇ ಜೂ.14 ರಿಂದ 21 ರವರೆಗೆ ವಿಶ್ವವಿದ್ಯಾಲಯದ ವಿವಿಧ ಬೋಧಕೇತರ ಸಿಬ್ಬಂದಿ ನೇಮಕಾತಿಗಾಗಿ ಸಂದರ್ಶನ ನಡೆಯಬೇಕಿತ್ತು. 45 ಪ್ರಥಮ ದರ್ಜೆ ಸಹಾಯಕ ಹುದ್ದೆ, 35 ದ್ವಿತೀಯ ದರ್ಜೆ ಹುದ್ದೆ ಹಾಗೂ 40 ಕಂಪ್ಯೂಟರ್ ಸಹಾಯಕ ಹುದ್ದೆಗಳಿಗೆ ಸಂದರ್ಶನ ನಡೆಯಬೇಕಿತ್ತು.ಶುಕ್ರವಾರ ಬೆಳಿಗ್ಗೆ ಸಂದರ್ಶನ ಹಾಗೂ ಗಣಕಯಂತ್ರ ಕೌಶಲ ಪರೀಕ್ಷೆ  ಆರಂಭಗೊಂಡಿತ್ತು. ಆದರೆ, ಸರ್ಕಾರದಿಂದ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಲು ಆದೇಶ ಬಂದ ಹಿನ್ನಲೆಯಲ್ಲಿ ಸ್ಥಗಿತಗೊಳಿಸಲಾಯಿತು. ಸಂದರ್ಶನಕ್ಕೆ ಆಗಮಿಸಿದ್ದ ನೂರಾರು ಅಭ್ಯರ್ಥಿಗಳು ನಿರಾಶರಾಗಿ ಸರ್ಕಾರದ ಕ್ರಮವನ್ನು ಖಂಡಿಸಿದರು.ನೇಮಕಾತಿ ಪ್ರಕ್ರಿಯೆ ಮುಂದೂಡಿರುವ ಕ್ರಮವನ್ನು ಖಂಡಿಸಿ ಅಭ್ಯರ್ಥಿಗಳು ಪ್ರತಿಭಟನೆಗೆ ಮುಂದಾದರು. ಸುಮಾರು ಒಂದು ತಾಸಿಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಅಭ್ಯರ್ಥಿಗಳು, ಕೂಡಲೇ ನೇಮಕಾತಿ ಪ್ರಕ್ರಿಯೆಯ ದಿನಾಂಕವನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.`ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯ ನಿರ್ದೇಶನದ ಮೇರೆಗೆ ಶುಕ್ರವಾರ ನಡೆಯಬೇಕಾಗಿದ್ದ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.ಸರ್ಕಾರದಿಂದ ಆದೇಶ ಬಂದ ನಂತರ ಈ  ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಸಂಜೆ 4.03ಕ್ಕೆ ಫ್ಯಾಕ್ಸ್ ಮೂಲಕ ಸರ್ಕಾರದಿಂದ ಆದೇಶ ಬಂದಿದ್ದು, ಅದನ್ನು ನಾನು ಪಾಲಿಸಿದ್ದೇನೆ' ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ವಿಷ್ಣುಕಾಂತ ಚಟಪಲ್ಲಿ `ಪ್ರಜಾವಾಣಿ'ಗೆ ತಿಳಿಸಿದರು.`ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಥಮ ದರ್ಜೆ ಸಹಾಯಕ ಹುದ್ದೆಯ ಸಂದರ್ಶನಕ್ಕೆ ಪೂರ್ವ ತಯಾರಿಯೊಂದಿಗೆ ಸಿದ್ಧವಾಗಿ ಬಂದ್ದ್ದಿದೆ. ಆದರೆ, ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವುದು ಬೇಸರ ತಂದಿದೆ.ಪದೇ ಪದೇ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರದ ಕ್ರಮ ಖಂಡನೀಯವಾದುದು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಿರುದ್ಯೋಗಿಗಳನ್ನಾಗಿ ಮಾಡದೇ ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯಯನ್ನೂ ಆರಂಭಿಸಬೇಕು' ಎಂದು ಧಾರವಾಡದಿಂದ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿ ಈರಣ್ಣ ಭಾವಿ ಒತ್ತಾಯಿಸಿದರು.`ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನೌಕರಿ ಪಡೆಯುವದೇ ಒಂದು ದೊಡ್ಡ ಸವಾಲಾಗಿದೆ. ಯಾವುದೇ ಪದವಿಯಲ್ಲಿ ಹೆಚ್ಚು ಅಂಕ ಪಡೆದರೂ ನೌಕರಿ ಸಿಗುತ್ತದೆ ಎಂಬ ಭರವಸೆ ಉಳಿದಿಲ್ಲ.ಲಭಿಸುವ ಒಂದೊಂದು ಉದ್ಯೋಗಾವಕಾಶಗಳನ್ನು ಸಮರ್ಥವಾಗಿ ಬಳಸಿದರೆ ಮಾತ್ರ ನೌಕರಿ ಪಡೆಯಬಹುದು. ಆದರೆ, ಸರ್ಕಾರವು ಈ ರೀತಿಯಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಮುಂದೂಡುತ್ತಾ ಸಾಗಿದರೆ ನಮ್ಮ ಜೀವನದ ಗತಿ ಏನು' ಎಂದು ಹುಬ್ಬಳ್ಳಿಯಿಂದ ಬಂದಿದ್ದ ಸಂತೋಷಕುಮಾರ ಬೇಸರ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.