ಮಂಗಳವಾರ, ಜನವರಿ 21, 2020
19 °C

ನೇರ ತೆರಿಗೆ ಸಂಗ್ರಹ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ದೇಶದ ಒಟ್ಟು ನೇರ ತೆರಿಗೆ ಸಂಗ್ರಹವು ಶೇ 14ರಷ್ಟು ಹೆಚ್ಚಿದ್ದು, ರೂ. 3.97 ಲಕ್ಷ ಕೋಟಿಗಳಷ್ಟಾಗಿದೆ.

ಕಾರ್ಪೊರೇಟ್ ತೆರಿಗೆಯಲ್ಲಿ ಹೆಚ್ಚಳವಾಗಿದ್ದೇ ನೇರ ತೆರಿಗೆ ಸಂಗ್ರಹ ಏರಿಕೆಯಾಗಲು ಪ್ರಮುಖ ಕಾರಣ. 2010-11ನೇ ಸಾಲಿನ ಮೊದಲ ಮೂರು ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹವು ರೂ. 3,46,182 ಕೋಟಿಗಳಷ್ಟಾಗಿದೆ. ಈ ಅವಧಿಯಲ್ಲಿ ಆದಾಯ ತೆರಿಗೆ ಸಂಗ್ರಹವು  ಶೇ 19ರಷ್ಟು ಹೆಚ್ಚಿದ್ದು, ರೂ. 1,25,998 ಕೋಟಿಗಳಷ್ಟಾಗಿದೆ. ಸಂಪತ್ತು ತೆರಿಗೆ ಸಂಗ್ರಹ ಶೇ 54ರಷ್ಟು ಹೆಚ್ಚಿದ್ದು, ರೂ. 646 ಕೋಟಿಗಳಿಗೆ ಏರಿದೆ.

ಈ ಅವಧಿಯಲ್ಲಿ ಷೇರು ಪೇಟೆಯಲ್ಲಿ ತೀವ್ರ ಏರಿಳಿತ ಇದ್ದ ಹಿನ್ನೆಲೆಯಲ್ಲಿ, ಷೇರು ವಹಿವಾಟು ತೆರಿಗೆ ಶೇ 26ರಷ್ಟು ಕುಸಿದಿದ್ದು ರೂ. 3,763 ಕೋಟಿಗಳಾಗಿದೆ. ಕಾರ್ಪೊರೇಟ್ ತೆರಿಗೆ ಸಂಗ್ರಹವು ಶೇ 12ರಷ್ಟು ಹೆಚ್ಚಿದ್ದು, ರೂ. 2,69,850 ಕೋಟಿಗಳಷ್ಟಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ನೇರ ತೆರಿಗೆ ಮೂಲಕ ಒಟ್ಟು ರೂ. 5.32 ಲಕ್ಷ ಕೋಟಿಗಳನ್ನು ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಪ್ರತಿಕ್ರಿಯಿಸಿ (+)