ಬುಧವಾರ, ಜನವರಿ 22, 2020
25 °C

ನ್ಯಾಯಮಂಡಳಿಯ ಚಾಟಿಯೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆರೆಹೊರೆಯವರು ಪರಸ್ಪರ ಕಷ್ಟಸುಖಕ್ಕೆ ಆಗುವವರು. ನೆರೆಯವರಿಗೆ ನಾವು ಯಾವತ್ತೂ ‘ಹೊರೆ’ ಆಗಬಾರದು. ಪರಸ್ಪರ ಕೊಡುಕೊಳ್ಳುವ ವ್ಯವಹಾರಕ್ಕೆ ಆಗಿಬರಬೇಕು; ಕಷ್ಟ-ಸುಖಗಳಿಗೆ ಸ್ಪಂದಿಸಬೇಕು. ವ್ಯಕ್ತಿಗಳಿಗೆ ಅನ್ವಯವಾಗುವ ಈ ತತ್ವ ರಾಜ್ಯಗಳಿಗೂ ಅನ್ವಯಿಸುತ್ತದೆ. ಆದರೆ ನಮ್ಮ ನೆರೆಯ ತಮಿಳುನಾಡಿನ ಆಳುವ ಪಕ್ಷದ ಮುಖಂಡರಿಗೆ ಈ ಸ್ನೇಹತತ್ವದ ಪ್ರಾಮುಖ್ಯ ಗೊತ್ತಿದ್ದಂತಿಲ್ಲ.ಸುಪ್ರೀಂಕೋರ್ಟ್‌ ಮಂಗಳವಾರ ತಮಿಳು­ನಾಡಿನ ಈ ವಿಘ್ನಸಂತೋಷಿ ಪ್ರವೃತ್ತಿಯನ್ನು ಸರಿಯಾಗಿಯೇ ಗುರುತಿಸಿ, ಮಾತಿನ ಛಡಿಯೇಟು ನೀಡಿದೆ. ಕಾವೇರಿ ನ್ಯಾಯಮಂಡಳಿಯ ಐತೀರ್ಪು ಅನುಷ್ಠಾನಕ್ಕೆ ‘ನಿರ್ವಹಣಾ ಮಂಡಳಿ’ ರಚಿಸಬೇಕೆಂಬ ತಮಿಳುನಾಡಿನ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟಿನ ತ್ರಿಸದಸ್ಯ ನ್ಯಾಯಪೀಠ ನಿರಾಕರಿಸಿದೆ.‘ತಮಿಳುನಾಡಿನ ಅರ್ಜಿಯ ತುರ್ತು ವಿಚಾರಣೆ ನಡೆಸುವ ಅಗತ್ಯ ಕಾಣುವುದಿಲ್ಲ. ಕಾವೇರಿ ನ್ಯಾಯಮಂಡಳಿಯ ಐತೀರ್ಪು ಸಂಬಂಧ ಸಲ್ಲಿಸಿರುವ ಸಿವಿಲ್‌ ಮೇಲ್ಮನವಿಯ ಜತೆಗೇ ಈ ಅರ್ಜಿಯನ್ನೂ ವಿಚಾರಣೆಗೆ ಎತ್ತಿಕೊಳ್ಳಬಹುದು’ ಎಂದು ನ್ಯಾ.ಆರ್‌.ಎಂ.­ಲೋಧಾ  ನೇತೃತ್ವದ  ತ್ರಿಸದಸ್ಯ ಪೀಠ ಹೇಳಿರುವುದು ಸೂಕ್ತವಾಗಿಯೇ ಇದೆ.‘ನಿಮ್ಮ ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳುವ ಅಗತ್ಯ ಕಾಣುತ್ತಿಲ್ಲ. ಕರ್ನಾಟಕ ನಿಮ್ಮ ಪಾಲಿನ ನೀರು ಬಿಡದೆ ವಂಚಿಸಿದೆಯೇ? ನೀವು ಒಂದೇ ಸಮನೆ ಕಾವೇರಿ ನಿರ್ವಹಣಾ ನ್ಯಾಯಮಂಡಳಿ ರಚನೆಗೆ ಪೀಡಿಸುತ್ತಿದ್ದೀರಿ. ಈಗ ಇರುವ ನೀರು ಹಂಚಿಕೆಯ ತಾತ್ಕಾಲಿಕ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದಿದ್ದರೆ ಮುಂದಿನ ಕ್ರಮದ ಬಗ್ಗೆ ಚಿಂತಿಸಬಹುದು’ ಎಂದು ನ್ಯಾಯಮೂರ್ತಿ ಲೋಧಾ ಹೇಳಿದ್ದಾರೆ.ಕಾವೇರಿ ನ್ಯಾಯಮಂಡಳಿಯನ್ನು ರಚಿಸಿದ್ದು 1990ರಲ್ಲಿ. ಈ ನ್ಯಾಯಮಂಡಳಿಯು 16 ವರ್ಷಗಳ ಕಾಲ ವಿಚಾರಣೆ ನಡೆಸಿ ಕೇರಳ, ಪುದುಚೇರಿ ಸಹಿತ ದಕ್ಷಿಣದ ನಾಲ್ಕು ರಾಜ್ಯಗಳು ಒಪ್ಪಬಹುದಾದಂತಹ ತೀರ್ಪನ್ನು ನೀಡಿದೆ. ಕಾವೇರಿಯ ಒಟ್ಟಾರೆ ನದಿ ನೀರಿನ ಪ್ರಮಾಣ 740 ಟಿಎಂಸಿ ಅಡಿ ಎಂದು ನಿರ್ಧರಿಸಿದ ನ್ಯಾಯಮಂಡಳಿಯು, ತಮಿಳುನಾಡಿನ ಬೇಡಿಕೆಯಾದ 562 ಟಿಎಂಸಿ ಅಡಿಯ ಬದಲು 419 ಟಿಎಂಸಿ ಅಡಿ ಪಾಲು ನೀಡಲು ಸೂಚಿಸಿದೆ.ಹಾಗೆಯೇ ಕರ್ನಾಟಕ 465 ಟಿಎಂಸಿ ಅಡಿ ನೀರಿನ ಬೇಡಿಕೆ ಇಟ್ಟಿದ್ದರೂ 270 ಟಿಎಂಸಿ ಅಡಿ ಪಾಲು ನೀಡಿದೆ. ಹಾಗೆ ನೋಡಿದರೆ ತಮಿಳುನಾಡಿಗೆ ಪಾಲು ಸ್ವಲ್ಪ ಹೆಚ್ಚೇ ಸಿಕ್ಕಿದೆ. ತೀರ್ಪು ಜಾರಿಯಾದ ಬಳಿಕ ಕರ್ನಾಟಕ ತನ್ನ ಕಷ್ಟ- ಸುಖವನ್ನೂ ಲೆಕ್ಕಿಸದೆ ತಮಿಳುನಾಡಿನ ಪಾಲಿನ ನೀರನ್ನು ಬಿಡುತ್ತಾ ಬಂದಿದೆ.ಮಳೆ ಸರಿಯಾಗಿ ಆಗದೇ ಇದ್ದ ಸಂದರ್ಭದಲ್ಲೂ, ಕನ್ನಡಿಗರ ಟೀಕೆಗಳನ್ನು ಎದುರಿಸಿಯೂ ಕರ್ನಾಟಕ ಸರ್ಕಾರ ನೀರು ಬಿಡಲು ಹಿಂದೆ ಮುಂದೆ ನೋಡಿಲ್ಲ. ಪರಿಸ್ಥಿತಿ ಹೀಗಿರುವಾಗ ಜಯಲಲಿತಾ ಅವರು ಪದೇ ಪದೇ ನೀರಿನ ಹಂಚಿಕೆಯನ್ನು ವಿವಾದದ ವಿಷಯವಾಗಿಸುವುದು ರಾಜಕೀಯ ಮುತ್ಸದ್ದಿತನದ ಲಕ್ಷಣವಲ್ಲ.ಇಂತಹ ವಿವಾದಗಳಿಂದ ತಮ್ಮ ಪಕ್ಷಕ್ಕೆ ರಾಜಕೀಯ ಲಾಭ ಸಿಗುತ್ತದೆ ಎಂದು ಅವರು ಭಾವಿಸಿದ್ದರೆ ಅದು ಮೂರ್ಖತನವಷ್ಟೇ. ಉಭಯ ರಾಜ್ಯಗಳ ರೈತರೂ ರಾಜಕಾರಣಿಗಳ ‘ಕಾವೇರಿ ರಾಜಕೀಯ ನಾಟಕ’ಗಳ ಬಗ್ಗೆ ಈಗ ತಿರಸ್ಕಾರ ಭಾವ ಹೊಂದಿದ್ದಾರೆ. ಇನ್ನಾದರೂ ಜಯಲಲಿತಾ ಅವರು ನೀರಿನ ವಿವಾದ ಕೆದಕುವುದನ್ನು ನಿಲ್ಲಿಸಲಿ.

ಪ್ರತಿಕ್ರಿಯಿಸಿ (+)