ಸೋಮವಾರ, ಮೇ 17, 2021
31 °C
ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಭಾರದ್ವಾಜ್ ಸಲಹೆ

ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಗೆ ಕ್ರಮ ಕೈಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಗೆ ಕ್ರಮ ಕೈಗೊಳ್ಳಿ

ಬೆಂಗಳೂರು: ನ್ಯಾಯಾಂಗಕ್ಕೆ ಅಗತ್ಯ ಇರುವ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಆದಷ್ಟು ಬೇಗ ನ್ಯಾಯಾಂಗ ವ್ಯವಸ್ಥೆಯ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದರು.ಕರ್ನಾಟಕ ರಾಜ್ಯ ಅಭಿಯೋಜನ ಅಧಿಕಾರಿಗಳ ಸಂಘ ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ 12ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಅಭಿಯೋಜಕರ ಸಂಘಕ್ಕೆ ಪ್ರತ್ಯೇಕ ಕಚೇರಿ, ಸ್ವಂತ ಕಟ್ಟಡ, ಸಿಬ್ಬಂದಿಗೆ ಮುಂಬಡ್ತಿ, ಸಂಬಳ ಹೆಚ್ಚಳ ಮುಂತಾದ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಅಭಿಯೋಜಕರು ಯಾವುದೇ ಒತ್ತಡಗಳಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಕ್ತವಾದ ವಾತಾವರಣ ಕಲ್ಪಿಸಬೇಕು ಎಂದು ಸಲಹೆ ನೀಡಿದರು.ಪ್ರಕರಣಗಳ ವಿಚಾರಣೆ ವೇಳೆ ಅಭಿಯೋಜಕರ ಮೇಲೆ ಪೊಲೀಸ್ ಅಥವಾ ರಾಜಕೀಯ ವ್ಯಕ್ತಿಗಳಿಂದ ಯಾವುದೇ ಒತ್ತಡಗಳು ಇರಬಾರದು. ಆಗ ಮಾತ್ರ ಪ್ರಕರಣಗಳ ವಿಚಾರಣೆ ಪಾರದರ್ಶಕವಾಗಿ ನಡೆದು, ನೊಂದವರಿಗೆ ನ್ಯಾಯ ಒದಗಿಸಲು ಸಾಧ್ಯ. ಈ ಮೂಲಕ ಜನಸಾಮಾನ್ಯರಲ್ಲಿ ನ್ಯಾಯಾಂಗದ ಮೇಲೆ ನಂಬಿಕೆ ಮೂಡಲಿದೆ ಎಂದರು.ವೀರಪ್ಪ ಮೊಯಿಲಿ ಅವರು ಕೇಂದ್ರದಲ್ಲಿ ಕಾನೂನು ಸಚಿವರಾಗಿದ್ದಾಗ ರಾಜ್ಯದ ಒಂದೆರಡು ಕಡೆ ಗ್ರಾಮ ನ್ಯಾಯಾಲಯ ಸ್ಥಾಪಿಸಿದ್ದರು. ಆದರೆ, ಈಗ ಅವು ಕಾರ್ಯನಿರ್ವಹಿಸುತ್ತಿಲ್ಲ.  ಕೇಂದ್ರ ಸರ್ಕಾರ ನೀಡುವ ಅನುದಾನ ಬಳಸಿಕೊಂಡು ಗ್ರಾಮ ನ್ಯಾಯಾಲಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳ ಬೇಕು. ಇದರಿಂದ ರೈತರು, ಮಹಿಳೆಯರು ಮತ್ತು ದುಡಿಯು ವವರಿಗೆ ಶೀಘ್ರವಾಗಿ ತಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.ನಕ್ಸಲ್ ಸಮಸ್ಯೆ, ಭಯೋತ್ಪಾದನೆ, ಲೈವ್‌ಬ್ಯಾಂಡ್, ಮಹಿಳೆ ಮತ್ತು ಮಕ್ಕಳ ಮೇಲಿನ ಹಿಂಸಾಚಾರ ಪ್ರಕರಣಗಳು ಸವಾಲಾಗಿ ಪರಿಣಮಿಸಿವೆ. ಪೊಲೀಸ್ ಇಲಾಖೆ ಮತ್ತು ಅಭಿಯೋಜನ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದರೆ, ಇಂತಹ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಉಮೇಶ್, ಪ್ರಭಾರ ಅಭಿಯೋಜನಾ ನಿರ್ದೇಶಕ ಚಂದ್ರಶೇಖರ್ ಹಿರೇಮಠ, ಸಂಘದ ಅಧ್ಯಕ್ಷ ಎನ್.ಎಂ. ಬೆಳ್ಳಕ್ಕಿ ಮತ್ತಿತರರು ಉಪಸ್ಥಿತರಿದ್ದರು.ಅಧಿಕಾರಿಗಳೇ ಹೊಣೆ

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಕೆ.ಜೆ.ಜಾರ್ಜ್, ನಗರದಲ್ಲಿ ಲೈವ್‌ಬ್ಯಾಂಡ್ ಮತ್ತಿತರ ಅನೈತಿಕ ಚಟುವಟಿಕೆಗಳು ತಲೆ ಎತ್ತದಂತೆ ಎಚ್ಚರ ವಹಿಸಲು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಇಂತಹ ಪ್ರಕರಣಗಳು ಬೆಳಕಿಗೆ ಬಂದಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.ಕರ್ನಾಟಕ ರಾಜ್ಯ ಅಭಿಯೋಜನ ಅಧಿಕಾರಿಗಳ ಸಂಘ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದು, ಕೆಲವನ್ನು ಇಲಾಖಾ ಮಟ್ಟದಲ್ಲಿ ಚರ್ಚೆ ನಡೆಸಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು. ಉಳಿದ ಬೇಡಿಕೆಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.