ಪಂಚಲಿಂಗಯ್ಯ ಪ್ರಕರಣ ಅಧಿಕಾರಿಗಳ ಬಂಧನ

ಶುಕ್ರವಾರ, ಜೂಲೈ 19, 2019
28 °C

ಪಂಚಲಿಂಗಯ್ಯ ಪ್ರಕರಣ ಅಧಿಕಾರಿಗಳ ಬಂಧನ

Published:
Updated:

ಬೆಂಗಳೂರು: ಜೆಡಿಎಸ್ ಮುಖಂಡ ಪಂಚಲಿಂಗಯ್ಯ ಅವರು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಗೆ ಪರಿಹಾರ ಪಡೆದಿರುವ ಎರಡು ಪ್ರಕರಣಗಳಲ್ಲಿ ಶಾಮೀಲಾದ ಆರೋಪದ ಮೇಲೆ ನಾಲ್ವರು ನಿವೃತ್ತ ಅಧಿಕಾರಿಗಳು ಮತ್ತು ಬಿಡಿಎ ಕಂದಾಯ ನಿರೀಕ್ಷಕರೊಬ್ಬರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಗಳನ್ನು ಇದೇ 16ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಬೆಂಗಳೂರು ದಕ್ಷಿಣ ತಾಲ್ಲೂಕಿನ ನಿವೃತ್ತ ವಿಶೇಷ ತಹಶೀಲ್ದಾರ್ ಕೆ.ಸದಾನಂದ, ಬಿಡಿಎ ನಿವೃತ್ತ ವಿಶೇಷ ಭೂಸ್ವಾಧೀನಾಧಿಕಾರಿ ಬಿ.ಆರ್.ಕೃಷ್ಣನ್, ಬೆಂಗಳೂರು ದಕ್ಷಿಣ ತಾಲ್ಲೂಕಿನ ನಿವೃತ್ತ ಕಂದಾಯ ನಿರೀಕ್ಷಕ ಕೆಂಪಶಿವನಯ್ಯ, ಬಿಡಿಎ ಕಂದಾಯ ನಿರೀಕ್ಷಕ ರಾಮೇಗೌಡ ಮತ್ತು ಬಿಡಿಎ ನಿವೃತ್ತ ಭೂಮಾಪನ ಅಧಿಕಾರಿ ಎಚ್.ಟಿ.ರಾಮೇಗೌಡ ಬಂಧಿತರು.ಕೆಂಗೇರಿ ಹೋಬಳಿಯ ಹೆಮ್ಮಿಗೆಪುರ ಗ್ರಾಮದ ವಿವಿಧ ಸರ್ವೆ ನಂಬರುಗಳಲ್ಲಿ ತಮ್ಮ ಸಹೋದರಿ ಜಯಮ್ಮ 5 ಎಕರೆ ಮತ್ತು ಸಹೋದರನ ಪುತ್ರ ಹೊಂಬಣ್ಣ 4 ಎಕರೆ ಭೂಮಿಯ ಒಡೆತನ ಹೊಂದಿದ್ದಾರೆ ಎಂದು ಪಂಚಲಿಂಗಯ್ಯ ನಕಲಿ ದಾಖಲೆ ಸೃಷ್ಟಿಸಿದ್ದರು. ಈ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಸಂದರ್ಭದಲ್ಲಿ ಅದೇ ನಕಲಿ ದಾಖಲೆಗಳನ್ನು ಬಳಸಿ ಪಂಚಲಿಂಗಯ್ಯ ಪರಿಹಾರ ಪಡೆದಿದ್ದರು.ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಗೆ ಪರಿಹಾರ ಪಡೆದ ಆರೋಪದ ಮೇಲೆ ಪಂಚಲಿಂಗಯ್ಯ ವಿರುದ್ಧ ಜಿ.ಎಸ್.ಸದಾನಂದ ಸ್ವಾಮಿ ಎಂಬುವರು ಮೂರು ಖಾಸಗಿ ದೂರು ಸಲ್ಲಿಸಿದ್ದರು. ಈ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಒಂದು ಎಕರೆ ಭೂಮಿಗೆ ಸಂಬಂಧಿಸಿದ ಪ್ರಕರಣದಲ್ಲಿ ಪಂಚಲಿಂಗಯ್ಯ ತಪ್ಪೆಸಗಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು. ಮೇ 25ರಂದು ಅವರನ್ನು ಬಂಧಿಸಿದ್ದ ಲೋಕಾಯುಕ್ತ ಡಿವೈಎಸ್‌ಪಿ ಎಚ್.ಎಸ್.ಮಂಜುನಾಥ್, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.ಉಳಿದ ಎರಡು ಪ್ರಕರಣಗಳ ತನಿಖೆಯನ್ನು ಡಿವೈಎಸ್‌ಪಿಗಳಾದ ಎಸ್.ಗಿರೀಶ್ ಮತ್ತು ಅಬ್ದುಲ್ ಅಹದ್ ಮುಂದುವರೆಸಿದ್ದರು. ಈ ಪ್ರಕರಣಗಳಲ್ಲಿ ಆರೋಪಿ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಗೆ ನೆರವಾಗಿರುವುದು ಮತ್ತು ಅವುಗಳನ್ನು ಬಳಸಿಕೊಂಡು ಪರಿಹಾರ ಮಂಜೂರು ಮಾಡಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.ಈ ಕುರಿತು ಆರೋಪಿಗಳನ್ನು ಕಚೇರಿಗೆ ಕರೆಸಿಕೊಂಡ ತನಿಖಾಧಿಕಾರಿಗಳು ಕೆಲಕಾಲ ಪ್ರಶ್ನಿಸಿದರು. ಮಧ್ಯಾಹ್ನ ಐವರನ್ನೂ ಬಂಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಗಳನ್ನು ಇದೇ 16ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶ ಎನ್.ಕೆ.ಸುಧೀದ್ರ ರಾವ್ ಆದೇಶ ಹೊರಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry