ಬುಧವಾರ, ಮೇ 12, 2021
20 °C
ಚಿಕ್ಕಮಗಳೂರು: ಜಿ.ಪಂ. ಸಾಮಾನ್ಯ ಸಭೆ

ಪಂಚಾಯತ್‌ರಾಜ್ ತಿದ್ದುಪಡಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ವರ್ಷಕ್ಕೆ ಕನಿಷ್ಠ ಎರಡು ಬಾರಿ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ನಡೆಸಲು ವಿಫಲರಾಗುವ ಗ್ರಾಮ ಪಂಚಾಯಿತಿ ಅಧ್ಯಕ್ಷ, ಆಯಾ ವಾರ್ಡಿನ ಸದಸ್ಯರನ್ನು ಅನರ್ಹಗೊಳಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗುರುವಾರ ನಿರ್ಣಯ ಕೈಗೊಳ್ಳಲಾಯಿತು.ಜಿಲ್ಲಾ ಪಂಚಾಯಿತಿ ನಜೀರ್‌ಸಾಬ್ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಸರ್ಕಾರ ಪಂಚಾಯಿತಿಗೆ ಹೆಚ್ಚು ಅನುದಾನ ನೀಡಿ ಆಯಾ ವಾರ್ಡ್‌ಗಳ ಅಭಿವೃದ್ಧಿಗೆ ಸಹಕರಿಸದೆ ವರ್ಷಕ್ಕೆ ಎರಡು ಬಾರಿ ಗ್ರಾಮಸಭೆ ಮತ್ತು ವಾರ್ಡ್‌ಸಭೆ ನಡೆಸದ ಅಧ್ಯಕ್ಷರು ಮತ್ತು ಸದಸ್ಯರನ್ನು ಅನರ್ಹಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದರು.ಪಂಚಾಯತ್‌ರಾಜ್ ಮಸೂದೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತಾಗಿದೆ. ಇದನ್ನು ವಿರೋಧಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದಾಗ ಸದಸ್ಯ ಕಲ್ಮರಡಪ್ಪ ಸಹಮತ ವ್ಯಕ್ತಪಡಿಸಿದರು.ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಈ ಮಸೂದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರೂ, ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಜಿಲ್ಲಾ ಪಂಚಾಯಿತಿ ಸದಸ್ಯರು ಮಾತನಾಡಿರುವುದು ಸರಿಯಾಗಿಯೇ ಇದೆ. ಸಾಧ್ಯವಾದರೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿಕೊಡುವುದಕ್ಕೆ ಯಾವುದೇ ಅಭ್ಯಂತರ ಇಲ್ಲ ಎಂದರು.ಕಾಂಗ್ರೆಸ್ ಶಾಸಕ ಶ್ರೀನಿವಾಸ ಮಾತನಾಡಿ, ಸರ್ಕಾರದ ಕ್ರಮ ಸರಿಯಾಗಿಯೇ ಇದೆ. ಗ್ರಾಮ ಸಭೆ ಮತ್ತು ವಾರ್ಡ್‌ಸಭೆಗಳು ಸರಿಯಾಗಿ ನಡೆಯಬೇಕೆಂಬ ಉದ್ದೇಶದಿಂದ ಮಸೂದೆಗೆ ತಿದ್ದುಪಡಿ ತರಲಾಗಿದೆ. ಅಧ್ಯಕ್ಷರು ಮತ್ತು ಸದಸ್ಯರ ಅನರ್ಹಗೊಳಿಸುವು ದಲ್ಲದೆ ಅಧಿಕಾರಿಗಳ ವಿರುದ್ಧಕ್ರಮಕ್ಕೂ ಅವಕಾಶ ಇದೆ ಎಂದು ಮಸೂದೆ ತಿದ್ದುಪಡಿಯನ್ನು ಸಮರ್ಥಿಸಿಕೊಂಡರು. ಆದರೆ  ಸದಸ್ಯರಾದ ಕಲ್ಮರಡಪ್ಪ ಮತ್ತು ಶಿವ ಶಂಕರ್ ಮತ್ತೆ ಮಸೂದೆ ತಿದ್ದುಪಡಿಗೆ ವಿರೋಧಿಸಿದಾಗ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು.  ಕುಡಿಯುವ ನೀರು: ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿಧ್ವನಿಸಿತು. ಕಳೆದ ಮೂರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ಬಗೆಹರಿ ಸಲು ಸಾಧ್ಯವಾಗಿಲ್ಲ ಎಂದು ಸದಸ್ಯ ಕಲ್ಮರಡಪ್ಪ ಹೇಳಿದರೆ, ಟಾಸ್ಕ್‌ಫೋರ್ಸ್‌ ಸಮಿತಿ ಮಾಹಿತಿ ಬೇಕಾಗಿರುವುದರಿಂದ ಸಭೆಗೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಕರೆಸಬೇಕು. ಟಾಸ್ಕ್‌ಫೋರ್ಸ್‌ ಸಮಿತಿಗೆ ಜಿ.ಪಂ. ಸದಸ್ಯರನ್ನು  ಸದಸ್ಯರನ್ನಾಗಿಸಲು ಸದಸ್ಯೆ ಸವಿತಾ ರಮೇಶ್ ಒತ್ತಾಯಿಸಿದರು.ಜಿಲ್ಲಾಧಿಕಾರಿಗಳು ಸಭೆಗೆ ಬಂದು ಮಾಹಿತಿ ನೀಡಲಿದ್ದಾರೆ. ಮುಂದಿನ ಸಭೆಗೆ ತಹಶೀಲ್ದಾರ್ ಅವರನ್ನು ಕರೆಸುವ ವ್ಯವಸ್ಥೆ ಮಾಡಲಾಗುವುದು ಎಂದು ಜಿ.ಪಂ. ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದರು.ಅಷ್ಟರಲ್ಲೆ ಸಭೆಗೆ ಆಗಮಿಸಿದ ಜಿಲ್ಲಾಧಿಕಾರಿ ವಿ.ಯಶವಂತ್, 2012-13ನೆಯ ಸಾಲಿಗೆ ಕಡೂರು ತಾಲ್ಲೂಕು ಹಾಗೂ ತರೀಕೆರೆ, ಚಿಕ್ಕಮಗಳೂರು ಮತ್ತು ಮೂಡಿಗೆರೆಯ ಎರಡು ಹೋಬಳಿಗಳು ಬರಪೀಡಿತ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿವೆ. ಇವುಗಳ ಅಭಿವೃದ್ಧಿಗೆ ಸರ್ಕಾರ 35.48 ಕೋಟಿ ರೂಪಾಯಿ ಬಿಡುಗಡೆಗೊಳಿಸಿತ್ತು. ಅದರಲ್ಲಿ 19.67 ಕೋಟಿ ರೂಪಾಯಿ ನೀಡಲಾಗಿದೆ. 15.75 ಕೋಟಿ ರೂಪಾಯಿ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು.ಈ ಪ್ರದೇಶಗಳಲ್ಲಿ 1132 ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗಕ್ಕೆ 7.35ಕೋಟಿ ರೂಪಾಯಿ ನೀಡಲಾಗಿದೆ. ಮೇವಿಗಾಗಿ 1.55ಕೋಟಿ ರೂಪಾಯಿಗಳನ್ನು ಪಶುಪಾಲನಾ ಇಲಾಖೆಗೆ ನೀಡಿದ್ದು, ಟ್ಯಾಂಕರ್ ಮೂಲಕ ಕುಡಿಯುವ ನೀರು ನೀಡಲು ತರೀಕೆರೆ ಮತ್ತು ಕಡೂರು ತಾಲ್ಲೂಕಿಗೆ ತಲಾ 30ಲಕ್ಷ ರೂಪಾಯಿ, ಚಿಕ್ಕಮಗಳೂರು ಮತ್ತು ಮೂಡಿಗೆರೆ ತಾಲ್ಲೂಕಿಗೆ ತಲಾ 10 ಲಕ್ಷ ರೂಪಾಯಿ ನೀಡಲಾಗಿದೆ ಎಂದರು.ತರೀಕೆರೆ ತಾಲ್ಲೂಕಿನ 28ಗ್ರಾಮಗಳು ಕಡೂರು ತಾಲ್ಲೂಕಿನಲ್ಲಿ 37 ಹಾಗೂ ಚಿಕ ್ಕ ಮಗಳೂರು ತಾಲ್ಲೂಕಿನಲ್ಲಿ 18ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಇದಕ್ಕಿಂತ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳು ತಪ್ಪುಮಾಹಿತಿ ನೀಡುತ್ತಿದ್ದಾರೆಂದು ಜಿ.ಪಂ. ಸದಸ್ಯ ಕಲ್ಮರಡಪ್ಪ ಹೇಳಿದರೆ, ಅಧಿಕಾರಿಗಳು ಕಚೇರಿಯಲ್ಲೆ ಕುಳಿತು ಗ್ರಾಮಗಳ ಪಟ್ಟಿ ತಯಾರಿಸಿದ್ದಾರೆ. ತರೀಕೆರೆ ತಾಲ್ಲೂಕಿನಲ್ಲಿ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.