ಸೋಮವಾರ, ಮಾರ್ಚ್ 1, 2021
30 °C

ಪಂಚಾಯಿತಿಗೆ ಗ್ರಾಮಸ್ಥರ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂಚಾಯಿತಿಗೆ ಗ್ರಾಮಸ್ಥರ ಮುತ್ತಿಗೆ

ಮುಂಡರಗಿ: ತಾಲ್ಲೂಕಿನ ಕಲಕೇರಿ ಗ್ರಾಮದ ಜನತಾ ಪ್ಲಾಟಿನ ಬಡ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡುವಲ್ಲಿ ಗ್ರಾಮ ಪಂಚಾಯಿತಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಮುಂಡರಗಿ ತಾಲ್ಲೂಕಿನ ಕಲಕೇರಿ ಗ್ರಾಮಸ್ಥರು ಬುಧವಾರ ತಾಲ್ಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರು ಮುಂಡರಗಿ ಪಟ್ಟಣದ ಕೆಇಬಿ ಹತ್ತಿರವಿರುವ ಗಣೇಶ ದೇವಸ್ಥಾನದಿಂದ ಪ್ರತಿಭಟನೆ ಪ್ರಾರಂಭಿಸಿದರು.ಸರ್ಕಾರದ ವಿವಿಧ ಹಂತದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಕೂಗುತ್ತಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ಕೊಪ್ಪಳ ಕ್ರಾಸ್‌ನಲ್ಲಿ ಜಮಾಯಿಸಿದರು.  ನಂತರ ತಾಲ್ಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳು ಬಡ ಜನತೆಗಾಗಿ ಮೀಸಲಿರುವ ಉದ್ಯೋಗ ಖಾತ್ರಿ ಯೋಜನೆಯನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಂಡಿದ್ದು, ಬಡವರಿಗೆ ಸಲ್ಲ ಬೇಕಾಗಿದ್ದ ಕೋಟ್ಯಂತರ ರೂಪಾಯಿ ನುಂಗಿಹಾಕಿದ್ದಾರೆ ಎಂದು ದೂರಿದರು. ಗ್ರಾಮ ಪಂಚಾತಿ ಅಧಿಕಾರಿಗಳು ಕಲಕೇರಿ ಗ್ರಾಮದ ಜನತಾ ಪ್ಲಾಟ್‌ನ ನಿವಾಸಿಗಳಿಗೆ ಇದುವರೆಗೂ ಕೇವಲ ಉದ್ಯೋಗ ಖಾತ್ರಿಯ ಪುಸ್ತಕಗಳನ್ನು ಮಾತ್ರ ವಿತರಿಸಿದ್ದು, ಫಲಾನುಭವಿಗಳ ಹೆಸರಿನಲ್ಲಿ ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ತೋರಿಸಿದ್ದಾರೆ. ಆದರೆ, ವಾಸ್ತವವಾಗಿ ಜನತಾ ಪ್ಲಾಟ್‌ನ ಯಾವ ಸದಸ್ಯರಿಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಒಂದು ರೂಪಾಯಿ ನೀಡಿಲ್ಲ ಎಂದು ಆರೋಪಿಸಿದರು.ಗ್ರಾಮದ ಕೆಲವು ಪಟ್ಟಭದ್ರ ಹಿತಾ ಸಕ್ತಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಬಡ ಕೂಲಿ ಕಾರ್ಮಿಕರು ನಿರ್ವಹಿಸಬೇಕಾದ ಕಾಮಗಾರಿಗಳನ್ನು ಜೆಸಿಬಿ  ಸಹಾಯದಿಂದ ಪೂರೈಸಿ ಉದ್ಯೋಗ ಖಾತ್ರಿಯ ಲಕ್ಷಾಂತರ ರೂಪಾಯಿ ಹಣ ನುಂಗಿ ಹಾಕಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾ ಯಿಸಿದರು.ಕಲಕೇರಿ ಗ್ರಾಮದ ಹೊರ ವಲಯದಲ್ಲಿ 1986ರಲ್ಲಿ ಸರಕಾರ ಬಡ ಜನರಿಗೆ ಸುಮಾರು 500 ಜನತಾ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ, ಗ್ರಾಮ ಪಂಚಾಯಿತಿ ಜನತಾ ಪ್ಲಾಟ್‌ಗೆ ಇದುವರೆಗೂ ಉತ್ತಮವಾದ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ, ಶುದ್ಧವಾದ ಕುಡಿಯುವ ನೀರು ಪೂರೈಸದೇ ಸಾರ್ವಜನಿಕರಿಗೆ ಅನ್ಯಾಯ ಎಸಗಿದೆ. ಮನೆಗಳ ಹಕ್ಕು ಪತ್ರ ನೀಡದೆ ಜನತಾ ಪ್ಲಾಟ್ ನಿವಾಸಿಗಳನ್ನು ಸತಾಯಿಸುತ್ತಿದ್ದಾರೆ ಎಂದು ದೂರಿದರು.ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆ ಅಧ್ಯಕ್ಷ ಬಸವರಾಜ ನವಲಗುಂದ, ಕಲಕೇರಿ ಸಾರ್ವಜನಿಕ ಹಿತ ರಕ್ಷಣಾ ವೇದಿಕೆ ಸಂಚಾಲಕ ಅಬ್ದುಲ್ ಅಡವಿಸೋಮಾಪುರ, ರಾಜಿಮಾ ವಡ್ಡಟ್ಟಿ, ಮರಿಯಪ್ಪ ನಾಯ್ಕ, ರಜಿಯಾಬೇಗಂ ಮಕಾಂ ದಾರ, ಸುವರ್ಣಾ ಪತ್ತಾರ, ಸೈಯದಸಾಬ್ ಮಲಕಬಾಯಿ, ಪಕ್ಕೆರಸಾಬ್ ವಡ್ಡಟ್ಟಿ, ಜಾಪರ್‌ಸಾಬ್ ಮಕಾಂದಾರ, ನಿಂಗಪ್ಪ ರಡ್ಡೇರ,  ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.