ಸೋಮವಾರ, ಮಾರ್ಚ್ 8, 2021
29 °C

`ಪಂಚ ತತ್ವ'ದ ವಸ್ತ್ರ ವಿನ್ಯಾಸಕ

ಸಂದರ್ಶನ: ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

`ಪಂಚ ತತ್ವ'ದ ವಸ್ತ್ರ ವಿನ್ಯಾಸಕ

ಗೌರಂಗ್ ಶಾ, ಕಳೆದೊಂದು ದಶಕದಿಂದ ವಸ್ತ್ರ ವಿನ್ಯಾಸ ಕ್ಷೇತ್ರದಲ್ಲಿ ತುರುಸಿನ ಸ್ಪರ್ಧೆ, ಸವಾಲು ಒಡ್ಡುತ್ತಿರುವ ವಿನ್ಯಾಸಕರಲ್ಲಿ ಒಬ್ಬರು. ಸಾಮಾನ್ಯವಾಗಿ ಉತ್ತರ ಭಾರತದ ವಿನ್ಯಾಸಕರು ಬಾಲಿವುಡ್‌ನಲ್ಲೂ, ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್ ಶೋಗಳಲ್ಲೂ ಅಗ್ರಸ್ಥಾನ ಕಾಯ್ದುಕೊಳ್ಳುವುದು ಸಾಮಾನ್ಯ. ಆದರೆ ಹೈದರಾಬಾದ್ ಮೂಲದ ಗೌರಂಗ್ ತಮ್ಮ ಕಸುಬುದಾರಿಕೆ ಮತ್ತು ವಿಶಿಷ್ಟ ಶೈಲಿಯ ನೇಯ್ಗೆಯ ಮೂಲಕವೇ ಅವರೆಲ್ಲರಿಗೆ ಸಮಬಲ ಪ್ರತಿಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ.ಗೌರಂಗ್, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತಮ್ಮ ವಿನ್ಯಾಸದ `ಪಾಂಚಾಲಿ' ಸಂಗ್ರಹದ ಪ್ರದರ್ಶನ, ಮಾರಾಟವನ್ನು ಹೋಟೆಲ್ ಐಟಿಸಿ ಗಾರ್ಡೆನಿಯಾದಲ್ಲಿ ಕಳೆದ ವಾರಾಂತ್ಯ ಏರ್ಪಡಿಸಿದ್ದರು. ಇದೇ ವೇಳೆ `ಮೆಟ್ರೊ'ದೊಂದಿಗೆ ತಮ್ಮ ಅನುಭವ ಹಂಚಿಕೊಂಡರು.

ಬೆಂಗಳೂರಿಗೆ ಮೊದಲ ಬಾರಿಗೆ ಬಂದಿದ್ದೀರಿ. ಈ ಪ್ರದರ್ಶನದಲ್ಲಿರುವ ಸಂಗ್ರಹದ ಹೈಲೈಟ್ ಏನು?

ಈ ಸಂಗ್ರಹವನ್ನು `ಪಾಂಚಾಲಿ` ಎಂದು ಹೆಸರಿಸಿದ್ದೇನೆ. ಸೀರೆ, ಭಾರತೀಯ ಪರಂಪರೆಯ ಪ್ರತೀಕ. ಹಳೆಯ ಕಾಲದ ವಿನ್ಯಾಸಗಳು ಈಗ ಮತ್ತೆ ಯುವಜನರಿಗೂ ಮೆಚ್ಚುಗೆಯಾಗುತ್ತಿವೆ. ಇದು ಫ್ಯಾಷನ್ ಮತ್ತು ವಿನ್ಯಾಸ ಲೋಕದ ಸತ್ಯವೂ ಹೌದು. ಹಳತು ಹೊನ್ನು ಎಂಬ ಮಾತು ಇಲ್ಲಿ ಬಹಳ ಅನ್ವಯವಾಗುತ್ತದೆ. ಈ ಸೂತ್ರವೇ ಈ ಸಂಗ್ರಹದ ವೈಶಿಷ್ಟ್ಯ. ಅಂದರೆ ಹಳೆಯ ಮತ್ತು ಹೊಸ ವಿನ್ಯಾಸದ ಸಮಪಾಕ. ಜತೆಗೆ, ಕಾಂಜೀವರಂ, ಬನಾರಸ್, ಉಪ್ಪಾಡ, ಕೋಟಾ ಮತ್ತು ಪೈಥಿನಿಯನ್ನು ಪಂಚ ತತ್ವಗಳಾಗಿ ಪರಿಭಾವಿಸಿ `ಪಾಂಚಾಲಿ'ಯಲ್ಲಿ ಬಳಸಲಾಗಿದೆ.ಜಾಮ್ದಾನಿಯಂತಹ ಪಾರಂಪರಿಕ ನೇಯ್ಗೆಯ ಸೀರೆಗಳು ಈಗ ಎಲ್ಲೆಡೆ ಸಿಗುತ್ತವೆ. ನಿಮ್ಮ ವಿನ್ಯಾಸದ ಸೀರೆಗಳ ವೈಶಿಷ್ಟ್ಯವೇನು?

ಯಾವುದೇ ನೇಯ್ಗೆಯ ಸೀರೆ ಬೆಂಗಳೂರು ಅಥವಾ ದೇಶದ ಯಾವುದೇ ನಗರದಲ್ಲಿ ಲಭ್ಯವಾಗಬಹುದು. ನೇಯ್ಗೆಯಲ್ಲಿ ವಿದ್ಯುತ್‌ಚಾಲಿತ ಮಗ್ಗ (ಪವರ್‌ಲೂಮ್) ಎಲ್ಲಾ ಕಡೆ ಬಳಕೆಯಾಗುತ್ತದೆ. ಆದರೆ ಪ್ರತಿ ಎಳೆಯನ್ನೂ, ಕಸೂತಿಯನ್ನೂ ಕೈಯಿಂದಲೇ ಮಾಡುವುದು ಪಕ್ಕಾ ಕೈಮಗ್ಗ (ಹ್ಯಾಂಡ್‌ಲೂಮ್). ನನ್ನ ಸಂಗ್ರಹದ ಜಾಮ್ದಾನಿ ಸೀರೆಗಳನ್ನು ಹೀಗೆ ನೇಕಾರರು ಕೈಯಿಂದಲೇ ಸಿದ್ಧಪಡಿಸಿರುವುದು. ಜಾಮ್ದಾನಿ ನೇಯ್ಗೆ ನಶಿಸುತ್ತಿರುವ ನಮ್ಮ ಪಾರಂಪರಿಕ ನೇಯ್ಗೆಗಳ ಪಟ್ಟಿಯಲ್ಲಿದೆ.ಕಲಾಂಕರಿ ಬ್ಲಾಕ್ ಪ್ರಿಂಟ್‌ಗಳನ್ನು ರೇಷ್ಮೆಯಲ್ಲಿ ಪಡಿಮೂಡಿಸಿದ್ದೀರಿ. ಇದರ ಮಹತ್ವವೇನು?

ಆಂಧ್ರಪ್ರದೇಶದ ಸಾಂಪ್ರದಾಯಿಕ ಕಲಾಂಕರಿ, ಚಿಕಂಕರಿ, ಮತ್ತಿತರ ಸಾಂಪ್ರದಾಯಿಕ ಶೈಲಿಗಳನ್ನು ಬ್ಲೆಂಡ್ ಮಾಡಿ ಆಧುನಿಕ ವಿನ್ಯಾಸದಲ್ಲಿ ಬಳಸಿಕೊಂಡಿದ್ದೇನೆ. ಈ ಪ್ರಯೋಗ ಅಷ್ಟಾಗಿ ನಡೆದಿಲ್ಲ. ಕಾಂಜೀವರಂ ಸೀರೆಯಲ್ಲಿ ಕಲಾಂಕರಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿದಾಗ ನಮ್ಮ ಸ್ಥಳೀಯ ಪ್ರತಿಭೆ, ಪರಂಪರೆ ಜಗಜ್ಜಾಹೀರಾಗುತ್ತದೆ. ನನ್ನ ಉದ್ದೇಶವೂ ಇದುವೇ.ನಿಮ್ಮ ಪರಿಕಲ್ಪನೆಯನ್ನು ವಸ್ತ್ರದಲ್ಲಿ ವಿನ್ಯಾಸಗೊಳಿಸುವ ತಂಡದ ಬಗ್ಗೆ ಹೇಳಿ?

ಆರು ಮಂದಿ ಸಂಶೋಧನಾ ವಿದ್ಯಾರ್ಥಿಗಳು ನನ್ನ ಜತೆಗಿದ್ದಾರೆ. ಕಿರಿಯರಿಗೆ ಪ್ರೋತ್ಸಾಹ ಕೊಡಬೇಕು ಎಂಬ ಉದ್ದೇಶದಿಂದ ಅವರಿಗೆ ಅವಕಾಶ ಕೊಟ್ಟಿದ್ದೇನೆ. ನೂರು ಮಗ್ಗಗಳು ನನ್ನ ವಿನ್ಯಾಸದ ಸೀರೆ ಮತ್ತು ಉಡುಪುಗಳ ನೇಯ್ಗೆಯಲ್ಲಿ ತೊಡಗಿಸಿಕೊಂಡಿವೆ. ಆದರೆ ಜಾಮ್ದಾನಿಯಂತಹ ಅತಿ ಸೂಕ್ಷ್ಮ, ಕಸುಬುದಾರಿಕೆಯ ಕೆಲಸಗಳನ್ನು ಮಾಡಲೆಂದೇ ಒಬ್ಬರು ಗಂಡ ಹೆಂಡತಿ ನನ್ನ ಜತೆಗಿದ್ದಾರೆ. ನಾನು ನೈಸರ್ಗಿಕ ಬಣ್ಣಗಳನ್ನಷ್ಟೇ ಬಳಸುತ್ತೇನೆ. ನನ್ನ ಪರಿಕಲ್ಪನೆಯ ವಿನ್ಯಾಸ ಮತ್ತು ಗುಣಮಟ್ಟದೊಂದಿಗೆ ಯಾವತ್ತೂ ರಾಜಿ ಮಾಡಿಕೊಂಡಿಲ್ಲ.ನಿಮ್ಮ ಸಂಗ್ರಹದ ಒಂದೊಂದು ಸೀರೆ ಸಿದ್ಧಪಡಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ?

ಜಾಮ್ದಾನಿ, ಉಪ್ಪಾಡ ಮತ್ತು ಪೈಥಿನಿ ಸೀರೆಗಳನ್ನು ಕೈಯಲ್ಲಿ ಚಿತ್ತಾರ, ವಿನ್ಯಾಸ ಮಾಡಿ ಸಿದ್ಧಪಡಿಸುವುದೊಂದು ತಪಸ್ಸು. ಒಂದು ಸೀರೆಗೆ ಎಂಟರಿಂದ ಒಂಬತ್ತು ತಿಂಗಳು ಕನಿಷ್ಟ ಕಾಲಾವಧಿ. ಒಂದೂವರೆ ವರ್ಷ ತೆಗೆದುಕೊಂಡದ್ದೂ ಇದೆ. ಜಾಮ್ದಾನಿಯ ಚಿತ್ತಾರ ಬಹಳ ಸೂಕ್ಷ್ಮ. ನಾನು ಕಾಗದದಲ್ಲಿ ಹಾಕಿಕೊಟ್ಟ ಕರಡುಚಿತ್ರವನ್ನು ನೋಡಿ ನೋಡಿ ಸೀರೆಯಲ್ಲಿ ಕಸೂತಿ, ಚಿತ್ತಾರ ಮಾಡುತ್ತಾರೆ. ಇದು ನಿಧಾನಪ್ರಕ್ರಿಯೆ. ಆಮೇಲೆ ಡ್ರೈ ಮತ್ತು ಡೈಯಿಂಗ್.ಫ್ಯಾಷನ್ ಜಗತ್ತಿನಲ್ಲಿ ಗಟ್ಟಿ ಛಾಪು ಮೂಡಿಸಿದ್ದು ಹೇಗೆ?

ಪರ್ಯಾಯವಿಲ್ಲದ ಆಯ್ಕೆಯೊಂದನ್ನು ಗ್ರಾಹಕರ ಮುಂದಿಟ್ಟಿದ್ದೇ ನನ್ನ ಯಶಸ್ಸಿಗೆ ಕಾರಣ. ಅಂದರೆ, ಸಾಂಪ್ರದಾಯಿಕ, ಪಾರಂಪರಿಕ ಚಿತ್ತಾರ, ನೇಯ್ಗೆಯ ಮಹತ್ವ, ಮೌಲ್ಯಗಳನ್ನು ನನ್ನ ಕೆಲಸದ ಮೂಲಕ ಪರಿಚಯಿಸಿದೆ. ಬಾಲಿವುಡ್ ನಟಿಯರು ಇದನ್ನು ಮೆಚ್ಚಿದರು. ಕಳೆದೆರಡು ವರ್ಷದಿಂದ ಫ್ಯಾಷನ್ ಶೋಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ.ಫ್ಯಾಷನ್ ಲೋಕದಲ್ಲಿ ಅಚ್ಚುಮೆಚ್ಚಿನ ಪಾಶ್ಚಿಮಾತ್ಯ ಉಡುಗೆಗಳನ್ನು ನೀವ್ಯಾಕೆ ವಿನ್ಯಾಸ ಮಾಡುವುದಿಲ್ಲ?

ನಿಜ, ಸೀರೆಯನ್ನು ಹೊರತುಪಡಿಸಿದರೆ ಅನಾರ್ಕಲಿ, ಗೌನ್, ಸ್ಟ್ರೇಟ್ ಫಿಟ್, ಜಂಪ್ ಸ್ಯೂಟ್‌ನಂತಹ ಉಡುಪುಗಳನ್ನಷ್ಟೇ ವಿನ್ಯಾಸ ಮಾಡುತ್ತೇನೆ. ಇಲ್ಲಿ ರೇಷ್ಮೆಯ ಫ್ಯಾಬ್ರಿಕ್‌ಗಿಂತಲೂ ಖಾದಿ, ಖಾದಿ ಸಿಲ್ಕ್‌ಗೆ ನನ್ನ ಆದ್ಯತೆ.ನಿಮ್ಮ ಬ್ರಾಂಡ್‌ನ್ನು ಬಹುವಾಗಿ ಮೆಚ್ಚಿರುವ ಸೆಲೆಬ್ರಿಟಿಗಳು?

ವಿದ್ಯಾ ಬಾಲನ್, ಕಿರಣ್ ಖೇರ್, ಸೋನಂ ಕಪೂರ್, ಸೋನಾಲಿ ಬೇಂದ್ರೆ, ಅಶ್ವಿನಿ ಪೊನ್ನಪ್ಪ, ತಪಸಿ ಪನ್ನು, ಚಿತ್ರಾಂಗದಾ, ಪ್ರಿಯಾಮಣಿ ಮುಂತಾದ ನಟಿಯರನ್ನು ಮುಖ್ಯವಾಗಿ ಹೆಸರಿಸಬಹುದು. ವಿದ್ಯಾ ಬಾಲನ್ ಕೆಲದಿನಗಳ ಹಿಂದೆ ಕೇರಳದಲ್ಲಿ ಪಾಲ್ಗೊಂಡ ಖಾಸಗಿ ಸಮಾರಂಭಕ್ಕಾಗಿ ಸಿದ್ಧಪಡಿಸಿದ ಕಾಂಜೀವರಂ ಹಳತು ಮತ್ತು ಹೊಸ ವಿನ್ಯಾಸದ್ದು. ಕಡುನೀಲಿ ಬಣ್ಣದ ಮೈ, ಕಡು ಗುಲಾಬಿ ಬಣ್ಣ ತೆಳುವಾದ ಸಲ್ವೇಜ್, ಭಾರೀ ಅಂಚು ಮತ್ತು ಸೆರಗು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಈ ಬಾರಿಯ ಲಾಕ್ಮೆ ಫ್ಯಾಷನ್ ಸಪ್ತಾಹಕ್ಕೆ ತಯಾರಿ ಹೇಗೆ ನಡೆದಿದೆ?

ಈ ಬಾರಿ 12 ಔಟ್‌ಫಿಟ್‌ಗಳು ಮತ್ತು 16 ಸೀರೆಗಳನ್ನು ಪ್ರದರ್ಶಿಸಲಿದ್ದೇನೆ. ಕಳೆದ ಬಾರಿಯ ಸಪ್ತಾಹದಲ್ಲಿ ಅತ್ಯುತ್ತಮ ಸ್ಪಂದನ ವ್ಯಕ್ತವಾಯಿತು. ಕಿರಣ್ ಖೇರ್ ನನ್ನ ಬ್ರಾಂಡ್‌ಗೆ ರಾಯಭಾರಿಯಾಗಿದ್ದರು. ಕಾಂಜೀವರಂ- ಕಲಾಂಕರಿ ಕಾಂಬಿನೇಶನ್ ಅವರಿಗೆ ಬಹಳ ಇಷ್ಟವಾಗಿದೆ.ಬೆಂಗಳೂರಿನಲ್ಲಿ ನಿಮ್ಮ ಲೇಬಲ್‌ನ ಮಳಿಗೆ ತೆರೆಯುವಿರಾ?

ಹೈದರಾಬಾದ್ ಮತ್ತು ಮುಂಬೈನಲ್ಲಿ ನನ್ನ ಮಳಿಗೆಗಳಿವೆ. ದೆಹಲಿಯಲ್ಲಿ ಈ ವರ್ಷಾಂತ್ಯದಲ್ಲಿ ತೆರೆಯಲಿದ್ದೇನೆ. ಮುಂದಿನ ಆಯ್ಕೆ ಬೆಂಗಳೂರು. ಇದೇ ಮೊದಲ ಬಾರಿಗೆ ಏರ್ಪಡಿಸಿದ ಪ್ರದರ್ಶನ, ಮಾರಾಟಕ್ಕೆ ಗ್ರಾಹಕರಿಂದ ವ್ಯಕ್ತವಾಗಿರುವ ಈ ಸ್ಪಂದನ ನನಗೆ ಇನ್ನಷ್ಟು ಪ್ರೇರಣೆ ಕೊಡುತ್ತಿದೆ. ವರ್ಷಕ್ಕೊಂದು ಬಾರಿಯಾದರೂ ಇಲ್ಲಿಗೆ ಬರುವ ಮನಸ್ಸಾಗಿದೆ.

ಗೌರಂಗ್ ಅವರ ಸಂಗ್ರಹಗಳ ಬಗ್ಗೆ ತಿಳಿದುಕೊಳ್ಳಲು ಸಂಪರ್ಕಿಸಿ: www.gaurang.info http://www.facebook.com/pages/Gaurang

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.