ಶನಿವಾರ, ಜೂನ್ 6, 2020
27 °C

ಪಂಡಿತ ಗೌರವ

ಲಕ್ಷ್ಮಣ ಕೊಡಸೆ Updated:

ಅಕ್ಷರ ಗಾತ್ರ : | |

ಪಂಡಿತ ಗೌರವ

ಕನ್ನಡದ ಹಿರಿಯ ವಿದ್ವಾಂಸ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಹೊರತಂದ ಗೌರವ ಗ್ರಂಥ ಇದು. `ಜೀವಿ~ ಎಂದೇ ಸಾಹಿತ್ಯವಲಯದಲ್ಲಿ ಪರಿಚಿತರಾಗಿರುವ ವೆಂಕಟಸುಬ್ಬಯ್ಯನವರಿಗೆ ಸಂಭಾವನಾ ಗ್ರಂಥಗಳು ಹೊಸದಲ್ಲ. ಈಗಾಗಲೇ `ಸಾಹಿತ್ಯಜೀವಿ~ ಮತ್ತು `ಶಬ್ದಸಾಗರ~ ಎಂಬ ಎರಡು ಗ್ರಂಥಗಳು ಪ್ರಕಟವಾಗಿವೆ. ಶಿಷ್ಯರು, ಅಭಿಮಾನಿಗಳು, ವಿದ್ವಾಂಸರು ಅವರ ಬದುಕು ಬರಹಗಳನ್ನು ಕುರಿತಾಗಿ ಪರಿಚಯಿಸುವ ಲೇಖನಗಳನ್ನು ಬರೆದಿದ್ದಾರೆ. ಇವುಗಳ ಉಪಯುಕ್ತತೆ ಎಷ್ಟಿದೆ ಎಂದರೆ ಅಭಿನಂದನಾ ಗ್ರಂಥಗಳಾಗಿದ್ದರೂ ಎರಡನೆಯ ಮುದ್ರಣ ಕಂಡಿವೆ. ಈ ಸರಣಿಯಲ್ಲಿ ಹೊರಬಂದಿದೆ `ವಿದ್ವಜ್ಜೀವಿತ~.

`ವಿದ್ವಜ್ಜೀವಿತ~ ಕರಾವಳಿ ಜಿಲ್ಲೆಗಳ ವಿದ್ವಾಂಸರು `ಜೀವಿ~ ಅವರ ಕೃತಿಗಳನ್ನು ಕುರಿತು ಬರೆದ ಅಭಿನಂದನಾ ಲೇಖನಗಳ ಸಂಗ್ರಹ. ವಿದ್ವತ್ತಿಗೆ ಸಂಬಂಧಿಸಿ ಪ್ರಾದೇಶಿಕತೆಗೆ ಆಸ್ಪದ ಇದ್ದಂತೆ ಇಲ್ಲ. ಕಾರಂತರ ಕುರಿತಾಗಿ ಕರಾವಳಿ ಜಿಲ್ಲೆಗಳ ಲೇಖಕರು ಇಂಥ ಮನ್ನಣೆಯನ್ನು ನೀಡಿದ್ದಿದೆ. ಅದು ಪ್ರಾದೇಶಿಕತೆಗೆ ಸಂಬಂಧಿಸಿದ ಅಭಿಮಾನದ ಪ್ರದರ್ಶನ. ಆದರೆ ಕರಾವಳಿ ಪ್ರದೇಶಕ್ಕೆ ಹೊರತಾದ ವಿದ್ವಾಂಸರೊಬ್ಬರ ಕೃತಿಗಳನ್ನು ಆಧರಿಸಿ ಕರಾವಳಿಯ ವಿದ್ವಾಂಸರು ಮಾಡಿದ ವಿಮರ್ಶೆಗಳ ಸಂಕಲನ ಈ ಕಾರಣದಿಂದ ಪ್ರತ್ಯೇಕ ಎನಿಸಿಕೊಳ್ಳುತ್ತದೆ.

ಕನ್ನಡ ವಿದ್ವತ್ ಪ್ರಪಂಚಕ್ಕೆ ಜೀವಿ ಅವರ ಕೊಡುಗೆ ಅಸಾಧಾರಣ. ನಿಘಂಟು ಕ್ಷೇತ್ರಕ್ಕೆ ಸಂಬಂಧಿಸಿಯೇ 12 ಕೃತಿಗಳನ್ನು ಅವರು ಸ್ವತಂತ್ರವಾಗಿ ಇಲ್ಲವೇ ಇತರ ವಿದ್ವಾಂಸರ ಜೊತೆ ಸೇರಿ ರಚಿಸಿದ್ದಾರೆ. ವಿಮರ್ಶೆ, ಸಾಹಿತ್ಯ ಚರಿತ್ರೆ, ಶಾಸ್ತ್ರಸಾಹಿತ್ಯ, ಹಳಗನ್ನಡದ ಕೃತಿಗಳ ಪರಿಷ್ಕರಣ, ಸಂಪಾದನೆ, ನೆನಪುಗಳ ದಾಖಲೆ, ಸಾಹಿತ್ಯ ಕಮ್ಮಟಗಳಲ್ಲಿ ಸಂಪಾದನೆ, ಅನುವಾದ, ಸಮಗ್ರ ಸಾಹಿತ್ಯ ಮಾಲಿಕೆಯಲ್ಲಿ ಸಂಪಾದನೆ, ಮಕ್ಕಳ ಸಾಹಿತ್ಯ, ಸಂಶೋಧನೆ- ಹೀಗೆ ವಿದ್ವತ್ತಿನ ಎಲ್ಲ ಕ್ಷೇತ್ರದಲ್ಲಿ ಕೃತಿರಚನೆ ಮಾಡಿದ ಹೆಗ್ಗಳಿಕೆ ಅವರದು. ಕನ್ನಡದ ಪ್ರಾಚೀನ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಅದರ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲ ವಿದ್ವಾಂಸರಲ್ಲಿ ಜೀವಿ ಅಗ್ರಗಣ್ಯರು. ಅವರ ಎಲ್ಲ ಕೃತಿಗಳ ಕುರಿತಾದ ಪರಿಚಯಾತ್ಮಕ ಲೇಖನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಜೀವಿ ಅವರ ಕೃತಿಗಳನ್ನು ಕರಾವಳಿ ಜಿಲ್ಲೆಗಳ ಎಲ್ಲ ವಯೋಮಾನದ ವಿದ್ವಾಂಸರೂ ಇಲ್ಲಿ ವಿವೇಚಿಸಿದ್ದಾರೆ. ಹಿರಿಯರಾದ ಪಿ.ಶ್ರೀಕೃಷ್ಣಭಟ್, ಅಮೃತ ಸೋಮೇಶ್ವರ, ಎಂ.ರಾಮಚಂದ್ರ, ಯು.ಪಿ. ಉಪಾಧ್ಯಾಯ, ಕಬ್ಬಿನಾಲೆ ವಸಂತ ಭಾರದ್ವಾಜ, ಪಾದೇಕಲ್ಲು ವಿಷ್ಣುಭಟ್ಟ, ಎ.ವಿ.ನಾವಡ ಮೊದಲಾದವರಲ್ಲದೆ ಯುವಪೀಳಿಗೆಯ ಬಿ.ಜನಾರ್ದನ ಭಟ್, ಅಜಕ್ಕಳ ಗಿರೀಶ ಭಟ್, ಧನಂಜಯ ಕುಂಬ್ಳೆ ಮುಂತಾಗಿ 36 ಮಂದಿ ವಿದ್ವಾಂಸರು ಈ ವಿಶಿಷ್ಟ ಗೌರವ ಗ್ರಂಥಕ್ಕೆ ಕೈ ಜೋಡಿಸಿದ್ದಾರೆ.

ಗ್ರಂಥಕ್ಕೆ ವಿಶೇಷ ಮೌಲಿಕತೆಯನ್ನು ನೀಡಿರುವುದು `ಜೀವಿ~ ಅವರ ಸಂದರ್ಶನದ ಭಾಗ. ಕನ್ನಡ ಭಾಷೆಯ ಹಿಂದಿನ ಮತ್ತು ಈಗಿನ ಅವಸ್ಥೆಯನ್ನು ಭಾಷಾ ಪಾಂಡಿತ್ಯದ ಹಿನ್ನೆಲೆಯಲ್ಲಿ ವಿಶ್ಲೇಷಿಸಿರುವ ಭಾಗ ನಿಘಂಟು ಮತ್ತು ಭಾಷಾ ವಿದ್ಯಾರ್ಥಿಗಳಿಗೆ ಸಂಗ್ರಾಹ್ಯ ಯೋಗ್ಯವಾದದ್ದು. `ಇಗೋ ಕನ್ನಡ~ ಸಾಮಾಜಿಕ ನಿಘಂಟಿನ ಪರಿಕಲ್ಪನೆ ಮತ್ತು ವಿಶ್ಲೇಷಣೆ, `ಎರವಲು ಪದಕೋಶ~, `ಕ್ಲಿಷ್ಟ ಪದಕೋಶ~ ಮೊದಲಾದವು ಕನ್ನಡ ಭಾಷಾಭ್ಯಾಸಿಗಳು ಮರೆಯಲಾಗದಂತಹ ಕೃತಿಗಳು.

ಸಂದರ್ಶನದಲ್ಲಿ ಅವರು ವ್ಯಕ್ತಪಡಿಸಿದ ಕೆಲವು ಅಭಿಪ್ರಾಯಗಳು ಗಮನಾರ್ಹವಾಗಿವೆ. ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿ ಅವರು `ಕನ್ನಡವನ್ನು ಕಡ್ಡಾಯವಾಗಿ ಮಾತೃಭಾಷೆಯಾಗಿ ಕಲಿಯುವ ಹಾಗೆ ಮಾಡಿಬಿಡಿ. ಆಮೇಲೆ ಶಿಕ್ಷಣ ಮಾಧ್ಯಮದ ವಿಚಾರ: ಕನ್ನಡ ಬೇಕಾದರೆ ಕನ್ನಡ ಮಾಧ್ಯಮ ಇಟ್ಟುಕೊಳ್ಳಿ, ಇಂಗ್ಲಿಷ್ ಬೇಕಾದರೆ ಇಂಗ್ಲಿಷ್ ಮಾಧ್ಯಮ ಇಟ್ಟುಕೊಳ್ಳಿ. ಕನ್ನಡವನ್ನು ಪ್ರಥಮ ಭಾಷೆಯಾಗಿ ಚೆನ್ನಾಗಿ ಕಲಿಸಿ. ಮಾಧ್ಯಮ ನಿಮಗೆ ಯಾವುದು ಬೇಕಾದರೂ ತೆಗೆದುಕೊಳ್ಳಿ. ನಗರ ಪ್ರದೇಶದಲ್ಲಿ ಇಂಗ್ಲಿಷ್ ಮೀಡಿಯಮ್ ಇರುತ್ತದೆ.  ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮ ಇರುತ್ತದೆ. ಮುಖ್ಯ ವಿಷಯ ಇದು: ಕನ್ನಡ ಕಲಿಯಲೇ ಬೇಕು ಎಂದು ಕಡ್ಡಾಯ ಮಾಡಿ. ಉಳಿದಂತೆ ಶಿಕ್ಷಣ ಮಾಧ್ಯಮದ ಕುರಿತಾದ ನಿರ್ಧಾರ ತೆಗೆದುಕೊಳ್ಳುವುದಕ್ಕೆ  ತಂದೆತಾಯಿಗಳಿಗೆ ಬಿಡಿ..~ (ಪುಟ 311) ಎಂದು ಸ್ಪಷ್ಟವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಭಾಷೆಗೆ ಸಂಬಂಧಪಟ್ಟಂತೆ ಅಧಿಕೃತವಾಗಿ ಮಾತಾಡಬಲ್ಲ ಹಿರಿಯ ಭಾಷಾ ತಜ್ಞರಾಗಿ ಜೀವಿ ಅವರು ವ್ಯಕ್ತಪಡಿಸಿದ ನಿಲುವು ಚರ್ಚೆಗೆ ಯೋಗ್ಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.