ಶುಕ್ರವಾರ, ಮೇ 27, 2022
22 °C

ಪಕ್ಷದ ಜಗಳ ಬೀದಿಗೆ ಬೇಡ, ಒಳಗೆ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವುದು ಖಚಿತ ಎಂದು ಸಂಸದ ರಮೇಶ ಜಿಗಜಿಣಗಿ ಭವಿಷ್ಯ ನುಡಿದರು. ತಾಲ್ಲೂಕಿನ ರಾಂಪುರ ಪಿ.ಎ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ ರಾಜ್ಯಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.ಮುಂಬರುವ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿ ಅಧಿಕಾರ ಹಿಡಿದುಕೊಳ್ಳುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದಲ್ಲಿನ ಜಗಳ ಬೀದಿಗೆ ತರಬೇಡಿ, ಒಳಗಡೆ ಇರಲಿ ಎಂದು ಬಿಜೆಪಿ ಮುಖಂಡರಿಗೆ ಸಲಹೆ ನೀಡಿದರು.ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ ಎನ್ನುವ ಕಾಂಗ್ರೆಸ್ಸಿಗರು ತಮ್ಮ ಪಕ್ಷದಲ್ಲಿ ಏನಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ದೇಶದಲ್ಲಿ ಕಾಂಗ್ರೆಸ್ ಸರ್ವ ನಾಶಗೊಳ್ಳುವುದು ಶತಸಿದ್ದ ಎಂದು ತಿಳಿಸಿದರು.ಬಸವನಬಾಗೇವಾಡಿ ಶಾಸಕ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ತಮ್ಮ ಪಕ್ಷದಲ್ಲಿ ಗೊಂದಲವಿಲ್ಲ ಎಂಬುದಕ್ಕೆ ಈಚೆಗಿನ ವಿಧಾನಪರಿಷತ್ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಿ ಜಯ ಸಾಧಿಸಿರುವುದೇ ಸಾಕ್ಷಿ. ಪಕ್ಷದ ಶಕ್ತಿ ಕುಂದಿಲ್ಲ. ಅದರೆ ಪಕ್ಷಕ್ಕೆ ಹಿಡಿದ ಗ್ರಹಣ ಸರಿದಿದೆ. ಹೀಗಾಗಿ ಯಾವತ್ತೂ ಬಿಜೆಪಿ ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಮಾಧಾನಪಡಿಸಿದರು.ಮುಂಬರುವ ವರ್ಷ ಚುನಾವಣಾ ವರ್ಷವಾಗಿದ್ದರಿಂದ ಕಾರ್ಯಕರ್ತರು ಗಟ್ಟಿಗೊಂಡು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕೇಳಿಕೊಂಡರು.ಜಿಲ್ಲೆಯ ಮುಳವಾಡ ಏತ ನೀರಾವರಿ ಯೋಜನೆಗೆ ಈಗಾಗಲೇ ಟೆಂಡರ್ ಆಗಿದೆ. ಇದಕ್ಕಾಗಿ ಸರ್ಕಾರ ರೂ. 931ಕೋಟಿ ಕಾಯ್ದಿರಿಸಿದೆ. ಅಲ್ಲದೇ ರಾಜ್ಯದ ನೀರಾವರಿಗೆ ಸರ್ಕಾರ  ರೂ. 17ಸಾವಿರ ಕೋಟಿ ತೆಗೆದಿರಿಸಿದೆ.  ಇದರಲ್ಲಿ  ರೂ. 12 ಸಾವಿರ ಕೋಟಿ ರೂಪಾಯಿ ವಿಜಾಪುರ ಜಿಲ್ಲೆಯ  ನೀರಾವರಿ ಯೋಜನೆಗೆ ಕಾಯ್ದಿರಿಸಲಾಗಿದೆ ಎಂದರು.ಸಿಂದಗಿ ಶಾಸಕ ರಮೇಶ ಭೂಸನೂರ ಬಿಜೆಪಿ ಅತ್ಯಂತ ಬಲಾಢ್ಯ ಪಕ್ಷವಾಗಿ ಹೊರಹೊಮ್ಮಿದ್ದರೂ ಪಕ್ಷದ ನಾಯಕರಲ್ಲಿನ ಕಚ್ಚಾಟದಿಂದ ಸೊರಗಿದೆ. ಆದರೆ ಈಗ ನಾಯಕರು ಒಕ್ಕಟ್ಟಿನ ಮಂತ್ರ ಪಠಣ ನಡೆದಿದೆ ಎಂದು ಹೇಳಿದರು.ತಮ್ಮ ನಾಲ್ಕು ವರ್ಷದ ಅಧಿಕಾರಾವಧಿಯಲ್ಲಿ ಶೇ.80ರಷ್ಟು ಅಭಿವೃದ್ಧಿ ಮಾಡಿದ್ದೇನೆ. ಪಕ್ಷದ ಕಾರ್ಯಕರ್ತರಿಗೆ ನನ್ನಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸುವಂತೆ ಅವರು ಮನವಿ ಮಾಡಿಕೊಂಡರು.ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ಪಕ್ಷಕ್ಕೆ ಅಧಿಕಾರ ಒಂದೇ ಗುರಿಯಾಗಿಲ್ಲ. ಜೊತೆಗೆ ರಾಷ್ಟ್ರೀಯತೆ, ಸೈದ್ಧಾಂತಿಕ ತಳಹದಿ ಮುಖ್ಯವಾಗಿದೆ ಎಂದು ತಿಳಿಸಿದರು.ಜಮಖಂಡಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಬಿಜೆಪಿಗೆ ನಿಜವಾದ ಆಸ್ತಿಯೇ ಕಾರ್ಯಕರ್ತರು ಎಂದರು.ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರ್ಬಲ ಪ್ರಧಾನಿ ಸಿಂಗ್ ಅವರಿಂದ ದೇಶದ ಅಭಿವೃದ್ಧಿ ಅಸಾಧ್ಯ. ಕಾಂಗ್ರೆಸ್ ಸರ್ಕಾರದ ಅವನತಿ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಮಂಗಳಾದೇವಿ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ಕಲ್ಲೂರ, ಹಣಮಂತ ಬಿರಾದಾರ, ರೈತ ಮೋರ್ಚಾ ಪ್ರಮುಖ ಬಸವರಾಜ ಕುಂಬಾರ, ತಾ.ಪಂ. ಅಧ್ಯಕ್ಷೆ ಕಲ್ಲವ್ವ ಬುಳ್ಳಾ  ಉಪಸ್ಥಿತರಿದ್ದರು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ಪೂಜಾರ ಸ್ವಾಗತಿಸಿದರು. ಬಿಜೆಪಿ ಬೆಳಗಾವಿ ವಿಭಾಗದ ಪ್ರಮುಖ ಅಶೋಕ ಅಲ್ಲಾಪೂರ ನಿರೂಪಿಸಿದರು. ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಎಸ್.ಮಠ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.