ಶನಿವಾರ, ಜೂನ್ 19, 2021
28 °C
ಭಿನ್ನಾಭಿಪ್ರಾಯ ಶಮನ; ಒಗ್ಗಟ್ಟು ಪ್ರದರ್ಶನ

ಪಕ್ಷದ ನಿರ್ಧಾರಕ್ಕೆ ಬದ್ಧ: ವಿಜಯಶಂಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಪಕ್ಷದ ಸೂಚನೆಯೇ ಅಂತಿಮವಾಗಿದ್ದು, ವರಿಷ್ಠರ ಆಣತಿಯಂತೆ ಹಾಸನ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂದು ನೋವು ಮರೆಮಾಚಿದ ಧ್ವನಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಎಚ್. ವಿಜಯಶಂಕರ್‌ ಪಕ್ಷದ ನಿಲುವಿಗೆ ಬದ್ಧತೆ ವ್ಯಕ್ತಪಡಿಸಿದರು. ನಗರದ ಅರಮನೆ ಉತ್ತರದ್ವಾರದ ಕೋಟೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಕ್ಷೇತ್ರದಲ್ಲಿ ಅಭ್ಯರ್ಥಿ ಸಾಂಕೇತಿಕ ಮಾತ್ರ. ಉಳಿದೆಲ್ಲವೂ ಪಕ್ಷವನ್ನು ಅವಲಂಬಿಸಿರುತ್ತದೆ. ಮೈಸೂರು ಜಿಲ್ಲೆಯ ರಾಜಕಾರಣದೊಂದಿಗೆ 35 ವರ್ಷಗಳ ಒಡನಾಟ ಇದೆ. ಈಗ ರಾಜಕೀಯ ಜೀವನ ಹಾಸನ ಜಿಲ್ಲೆಗೆ ವರ್ಗಾವಣೆಯಾಗಿದೆ. ಪಕ್ಷದ ನಿರ್ಧಾರವನ್ನು ತಲೆಬಾಗಿ ಸ್ವೀಕರಿಸಿದ್ದೇನೆ ಎಂದರು.ಮೈಸೂರು–ಕೊಡಗು ಕ್ಷೇತ್ರದ ಕಾರ್ಯಕರ್ತರು ಒಗ್ಗೂಡಿ ಪಕ್ಷದ ಅಭ್ಯರ್ಥಿ ಪ್ರತಾಪಸಿಂಹ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಬಿಡುವು ಸಿಕ್ಕಾಗ ಮೈಸೂರಿನಲ್ಲಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.ಪಕ್ಷವು ಶಾಸಕ, ಸಂಸದ, ಸಚಿವ, ವಿಧಾನ ಪರಿಷತ್‌ ಸದಸ್ಯತ್ವ – ಹೀಗೆ ಎಲ್ಲ ಸ್ಥಾನವನ್ನು ಕರುಣಿಸಿದೆ. ನಿಷ್ಠಾವಂತ ಕಾರ್ಯಕರ್ತನಾಗಿ ಸಂಘಟನೆಯ ಕೆಲಸ ನಿರ್ವಹಿಸುವುದು ಆದ್ಯ ಕರ್ತವ್ಯವಾಗಿದೆ. ದೇಶದಲ್ಲಿನ ಸವಾಲುಗಳಿಗೆ ಹೊಸ ಪರ್ಯಾಯ ಶಕ್ತಿಯ ಅಗತ್ಯ ಇದೆ. ಪಕ್ಷ ನೀಡಿರುವ ಹೊಸ ಸವಾಲನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂದರು.ಒಗ್ಗಟ್ಟು ಪ್ರದರ್ಶನ

ಸಭೆಯಲ್ಲಿ ಪಾಲ್ಗೊಂಡಿದ್ದ ಮೈಸೂರು– ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪಸಿಂಹ, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ವಿಧಾನ ಪರಿಷತ್‌ ಸದಸ್ಯ ಗೋ. ಮಧುಸೂದನ, ಬಿಜೆಪಿ ಮೈಸೂರು ಜಿಲ್ಲಾ ನಗರ ಘಟಕದ ಇ. ಮಾರುತಿರಾವ್‌ ಪವಾರ್‌, ಗ್ರಾಮಾಂತರ ಘಟಕದ ಅಧ್ಯಕ್ಷ ಹೇಮಂತಕುಮಾರ್‌ ಗೌಡ, ಮುಖಂಡರಾದ ಸುಜಾ ಕುಶಾಲಪ್ಪ, ರೀನಾ ಪ್ರಕಾಶ್‌, ಸಿದ್ದರಾಜು ಇತರರು ಕೈ ಎತ್ತಿ ವಿಜಯ ಸಂಕೇತ ತೋರಿಸಿ ಒಗ್ಗಟ್ಟು ಪ್ರದರ್ಶಿಸಿದರು.‘ಹಳ್ಳಿ ಹಕ್ಕಿ’ ಆಟ ನಡೆಯದು: ಕೆ.ಜಿ. ಬೋಪಯ್ಯ ಮಾತನಾಡಿ, ‘ಕ್ಷೇತ್ರಕ್ಕೆ ‘ಸಿಂಹ’ ಬಂದಾಯ್ತು, ಇನ್ನು ‘ಹಳ್ಳಿ ಹಕ್ಕಿ’ ಆಟ ಏನೂ ನಡೆಯದು’ ಎಂದು ಪರೋಕ್ಷವಾಗಿ ಸಂಸದ ಅಡಗೂರು ಎಚ್‌. ವಿಶ್ವನಾಥ್‌ ಅವರಿಗೆ ಕುಟುಕಿದರು.ಇಲಿಯಲ್ಲ ನರಿ: ವಿಧಾನ ಪರಿಷತ್‌ ಸದಸ್ಯ ಗೋ. ಮಧುಸೂದನ ಮಾತನಾಡಿ, ಕ್ಷೇತ್ರದಲ್ಲಿ ಏರ್ಪಟ್ಟಿರುವುದು ಹುಲಿ–ಸಿಂಹದ ಕಾಳಗ ಅಲ್ಲ. ಪ್ರತಿಸ್ಪರ್ಧಿ ಅಭ್ಯರ್ಥಿ ಹುಲಿಯೂ ಅಲ್ಲ; ಇಲಿಯೂ ಅಲ್ಲ. ಅದೊಂದು ನರಿ. ಅವರು ಎಲ್ಲರನ್ನೂ ದೂರ ಮಾಡಿಕೊಂಡಿದ್ದಾರೆ ಎಂದು ಎಚ್‌. ವಿಶ್ವನಾಥ್‌ ಅವರಿಗೆ ಪರೋಕ್ಷವಾಗಿ ಚುಚ್ಚಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.