ಪಡಿತರದಲ್ಲಿ ಜೋಳ ವಿತರಣೆ: ಹೋರಾಟಕ್ಕೆ ನಿರ್ಧಾರ
ವಿಜಾಪುರ: ಉತ್ತರ ಕರ್ನಾಟಕದ ಜನರಿಗೆ ಪಡಿತರ ಅಕ್ಕಿಯ ಬದಲಾಗಿ ಒಂದು ರೂಪಾಯಿ ದರದಲ್ಲಿ ಜೋಳ ವಿತರಿಸಬೇಕು ಎಂದು ಜಿಲ್ಲೆಯ ಪ್ರಗತಿಪರ ಮತ್ತು ರೈತ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ಮಂಗಳವಾರ ಇಲ್ಲಿ ಸಭೆ ಸೇರಿದ ಈ ಸಂಘಟನೆಗಳವರು, ಆಯಾ ಪ್ರದೇಶದ ಆಹಾರ ಪದ್ಧತಿ ಅನುಸಾರ ಉತ್ತರ ಕರ್ನಾಟಕದಲ್ಲಿ ಜೋಳ, ಹಳೆ ಮೈಸೂರು ಭಾಗದಲ್ಲಿ ರಾಗಿ ವಿತರಿಸುವಂತೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಮತ್ತು ಇದೇ 8ರಂದು ನಗರದಲ್ಲಿ ರರ್ಯಾಲಿ ನಡೆಸಲು ನಿರ್ಧರಿಸಿದರು.
`ಛತ್ತೀಸಗಡದಿಂದ ರೂ 27 ದರದಲ್ಲಿ ಅಕ್ಕಿ ಖರೀದಿಸಿ ತರುವುದಕ್ಕಿಂತ ಸ್ಥಳೀಯವಾಗಿ ರೂ 18ರಿಂದ 20 ದರದಲ್ಲಿ ದೊರೆಯುವ ಜೋಳ ಖರೀದಿಸಿ ಅದನ್ನು ಪಡಿತರ ಚೀಟಿದಾರರಿಗೆ ವಿತರಿಸಬೇಕು. ಇದರಿಂದ ಜೋಳ ಬೆಳೆಯುವ ರೈತರಿಗೆ ಅನುಕೂಲವಾಗುವುದರ ಜೊತೆಗೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಂದಾಜು ರೂ 500 ಕೋಟಿ ಉಳಿತಾಯವಾಗಲಿದೆ' ಎಂದು ರೈತ ಮುಖಂಡ ಪಂಚಪ್ಪ ಕಲಬುರ್ಗಿ ಆಗ್ರಹಿಸಿದರು.
`ಪಡಿತರ ಅಕ್ಕಿ ಬದಲಿಗೆ ಜೋಳ ವಿತರಿಸುವುದರಿಂದ ಜೋಳದ ಕಣಿಕೆ (ದಂಟು) ಹೆಚ್ಚಾಗಿ ನಮ್ಮ ಜಾನುವಾರುಗಳ ಮೇವಿನ ಕೊರತೆಯೂ ನೀಗಲಿದೆ' ಎಂದು ಜಿಲ್ಲಾ ಕೃಷಿ ಮತ್ತು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಗುಡ್ಡೋಡಗಿ ಹೇಳಿದರು.
`ಕರ್ನಾಟಕ ರಾಜ್ಯ ಬಿಳಿಜೋಳ ಅಭಿವೃದ್ಧಿ ಸಮಿತಿ ರಚಿಸಿಕೊಂಡು ಹೋರಾಟ ನಡೆಸಲಾಗುವುದು. ಈ ಭಾಗದ ಎಲ್ಲ ಶಾಸಕರಿಗೂ ಪತ್ರ ಬರೆದು ಮನವಿ ಮಾಡಲಾಗುವುದು. ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು' ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ವಿ. ಪಾಟೀಲ ಹೇಳಿದರು. ರವೀಂದ್ರ ಬಿಜ್ಜರಗಿ, ವಿಶ್ವನಾಥ ಭಾವಿ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.