ಬುಧವಾರ, ಜನವರಿ 22, 2020
21 °C

ಪಡಿತರ ಅಂಗಡಿಯಲ್ಲಿ ‘ರೇಷನ್‌ ಗುಮಾಸ್ತ’...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡಿತರ ಅಂಗಡಿಯಲ್ಲಿ ‘ರೇಷನ್‌ ಗುಮಾಸ್ತ’...

ತುಮಕೂರು: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರಿಗೂ ಕಲ್ಪತರು ನಾಡಿಗೂ ಅವಿನಾಭಾವ ಸಂಬಂಧವಿತ್ತು. ಇಂಟರ್‌ ಮೀಡಿಯೇಟ್‌ ಶಿಕ್ಷಣವನ್ನು ತುಮಕೂರಿನಲ್ಲಿ ಪೂರೈಸಿದ್ದ ಅವರು ಇಲ್ಲಿ ಕೆಲ ಕಾಲ ಸರ್ಕಾರ ನಡೆಸುತ್ತಿದ್ದ ಪಡಿತರ ಅಂಗಡಿಯಲ್ಲಿ ‘ರೇಷನ್‌ ಗುಮಾಸ್ತ’ರಾಗಿ ಕೆಲಸ ಮಾಡಿದ್ದರು. ಈ ಹಣವೇ ಅವರ ಉನ್ನತ ಶಿಕ್ಷಣಕ್ಕೆ ದಾರಿಮಾಡಿತ್ತು.ಜಿಎಸ್‌ಎಸ್‌ ಅವರ ತಂದೆ ಕೊರಟಗೆರೆ ತಾಲ್ಲೂಕು ಅಕ್ಕಿರಾಂಪುರ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಹಾಗಾಗಿ ಜಿಎಸ್‌ಎಸ್‌ಗೂ ಕಲ್ಪತರು ನಾಡಿಗೂ ನಂಟು ಬೆಸೆಯಿತು. ಅವರ ತಂದೆ ಇಲ್ಲಿಂದ ವರ್ಗವಾದ ಬಳಿಕ ಇಂಟರ್‌ಮೀಡಿಯೇಟ್‌ ಓದಲು ಸಿದ್ದಗಂಗಾ ಮಠ ಆಶ್ರಯ (1941–44) ನೀಡಿತ್ತು. ಇದರಿಂದಾಗಿ ಡಾ.ಶಿವಕುಮಾರ ಸ್ವಾಮೀಜಿ ಬಗ್ಗೆ ಪ್ರೀತಿ ಬೆಳೆದಿತ್ತು. ಸ್ವಾಮೀಜಿ ಕುರಿತು ‘ಸಿದ್ದಗಂಗಾ ಶ್ರೀ ಚರಣದಲ್ಲಿ’ ಎಂಬ ಕವನ ಕೂಡ ರಚಿಸಿದ್ದಾರೆ.ಇಂಟರ್‌ಮೀಡಿಯೇಟ್‌ ಶಿಕ್ಷಣದ ನಂತರ ಮೂರು ತಿಂಗಳ ಕಾಲ ನಿಟ್ಟೂರಿನ ಸರ್ಕಾರಿ ರೇಷನ್‌ ಅಂಗಡಿಯಲ್ಲಿ ರೇಷನ್‌ ಗುಮಾಸ್ತರಾಗಿ ₨ 60ರಿಂದ ₨ 70  ಸಂಪಾದಿಸಿದ್ದನ್ನೂ  ಆಪ್ತರಲ್ಲಿ ನೆನಪು ಮಾಡಿಕೊಳ್ಳುತ್ತಿದ್ದರು.  ಈ ಹಣ ಇಟ್ಟುಕೊಂಡು ಉನ್ನತ ಶಿಕ್ಷಣಕ್ಕಾಗಿ ಮೈಸೂರಿಗೆ ತೆರಳಿದ್ದರು.

ಗುಬ್ಬಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ರೇಷನ್‌ ಅಂಗಡಿಯಲ್ಲಿ ಕೆಲಸ ಮಾಡಿದ್ದ ನೆನಪುಗಳನ್ನು ಆಪ್ತವಾಗಿ ಬಿಚ್ಚಿಟ್ಟಿದ್ದರು.ಜಿಲ್ಲೆಯ ಕಲ್ಲೂರಿನವರಾದ ವಿಮರ್ಶಕ ಕೆ.ಜೆ.ನಾಗರಾಜಪ್ಪ ಅವ­ರೊಂದಿಗೆ ವಿಶೇಷ ಸ್ನೇಹ ಹೊಂದಿದ್ದರು. ತುಮಕೂರಿನ ಅವರ ಮನೆಯಲ್ಲಿ ದಿನಗಟ್ಟಲೆ ಕೂತು ಸಾಹಿತ್ಯದ ಕುರಿತು ಚರ್ಚೆ ನಡೆಸುತ್ತಿದ್ದರು ಎಂದು ಅವರ ಸಂಬಂಧಿ, ಲೇಖಕ ನಟರಾಜ್‌ ಬೂದಾಳ್ ನೆನಪು ಮಾಡಿಕೊಳ್ಳುತ್ತಾರೆ.

ದೇವರಾಯನ ದುರ್ಗದಲ್ಲಿ ಹಸು ಮೇಯಿಸಲು ಹೋಗಿ ಹಸು ಕಳೆದುಕೊಂಡು ರಾತ್ರಿಯೆಲ್ಲ ಕಾಡಿನಲ್ಲೇ ಉಳಿದ ಹುಡುಗನ್ನೊಬ್ಬನ ನಿಜ ಕಥೆ ಆಧರಿಸಿ ಕಾಡಿನ ಕತ್ತಲಲ್ಲಿ ಎಂಬ ಕವನ ಕೂಡ ರಚಿಸಿದ್ದಾರೆ.ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಕುರಿತು ವಿಶೇಷ ಗೌರವ ಹೊಂದಿದ್ದ ಜಿಎಸ್‌ಎಸ್‌, ಸ್ವಾಮೀಜಿಗೆ ಶತಮಾನ ತುಂಬಿದ ನೆನಪಿಗೆ ತಂದ 111 ಕೃತಿಗಳನ್ನು ಸಂಪಾದಿಸಿದ್ದರು.

ಪ್ರತಿಕ್ರಿಯಿಸಿ (+)