ಶುಕ್ರವಾರ, ಏಪ್ರಿಲ್ 23, 2021
21 °C

ಪಡಿತರ ಚೀಟಿಗೆ ಇನ್ನೂ ಕಾಯಬೇಕು!

ಎಂ. ನವೀನ್ ಕುಮಾರ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ ರಾಜ್ಯದಲ್ಲಿ ಇನ್ನೂ 6,26,772 ಅರ್ಜಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಇದುವರೆಗೂ ಪಡಿತರ ಚೀಟಿ ವಿತರಣೆ ಮಾಡಿಲ್ಲ.

ಆಹಾರ ಧಾನ್ಯ ಮಾತ್ರವಲ್ಲದೆ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಪಡಿತರ ಚೀಟಿ ಅಗತ್ಯವಾಗಿದೆ. ಹೀಗಾಗಿ ಈ ಯೋಜನೆಗಳ ಲಾಭ ಪಡೆಯಲು ಅರ್ಹರಾಗಿದ್ದರೂ ಪಡಿತರ ಚೀಟಿ ಇಲ್ಲದ ಕಾರಣ ಅರ್ಜಿ ಸಲ್ಲಿಸಲಾಗದೆ ಸೌಲಭ್ಯ ವಂಚಿತರಾಗಬೇಕಾಗಿದೆ. ಈಗಿನ ಪರಿಸ್ಥಿತಿಯನ್ನು ನೋಡಿದರೆ ಅರ್ಜಿದಾರರು ಇನ್ನೂ ಕೆಲವು ತಿಂಗಳು ಕಾಯುವುದು ಅನಿವಾರ್ಯವಾಗಿದೆ.

ಬಡತನ ರೇಖೆಗಿಂತ ಕೆಳಗಿನವರ ಪಡಿತರ ಚೀಟಿಗೆ (ಬಿಪಿಎಲ್) ಅರ್ಜಿ ಸಲ್ಲಿಸ್ದ್ದಿದರೂ ಬಡತನ ರೇಖೆಗಿಂತ ಮೇಲಿರುವವರ (ಎಪಿಎಲ್) ಚೀಟಿಯನ್ನು ನೀಡಿರುವ ಪ್ರಕರಣಗಳೂ ಹೆಚ್ಚಾಗಿವೆ. ಪಡಿತರ ಚೀಟಿ ಸಿಕ್ಕರೂ ಅದು ಬಿಪಿಎಲ್ ಅಲ್ಲದ ಕಾರಣ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ.

ಹೊಸ ಪಡಿತರ ಚೀಟಿ ನೀಡಲು 2011 ನವೆಂಬರ್‌ನಲ್ಲಿ ಮೊದಲ ಬಾರಿಗೆ ಇಲಾಖೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. 31,09,864 ಜನರು ಅರ್ಜಿ ಸಲ್ಲಿಸಿದ್ದರು. ಅಂತಿಮ ಪರಿಶೀಲನೆಯ ನಂತರ 18,46,423 ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ತಾಂತ್ರಿಕ ದೋಷ, ಒಬ್ಬನೇ ವ್ಯಕ್ತಿ ಹಲವು ಅರ್ಜಿಗಳನ್ನು ಸಲ್ಲಿಸಿದ್ದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಗಳು ತಿರಸ್ಕೃತಗೊಂಡಿದ್ದವು.

ಆ ನಂತರ ಉಳಿದ 12,63,441 ಅರ್ಜಿದಾರರಿಗೆ ಪಡಿತರ ಚೀಟಿ ನೀಡಲು ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಮಧ್ಯದಲ್ಲಿ ಹಲವು ಬಾರಿ ಕೆಲಸ ಸ್ಥಗಿತಗೊಂಡಿತ್ತು. ಎಪಿಎಲ್ ಮತ್ತು ಬಿಪಿಎಲ್ ನಿರ್ಧಾರ ಮಾಡುವಲ್ಲಿನ ಅಸ್ಪಷ್ಟತೆಯೂ ಶೀಘ್ರಗತಿಯ ಕೆಲಸಕ್ಕೆ ಅಡಚಣೆಯಾಗಿತ್ತು.

ಇಡೀ ರಾಜ್ಯಕ್ಕೆ ಒಂದೇ ಕಂಪ್ಯೂಟರ್ ಸರ್ವರ್ ಇದ್ದ ಕಾರಣ ಅದು ಆಗಾಗ್ಗೆ ಕೈಕೊಡುತ್ತಿತ್ತು. ಆದ್ದರಿಂದ ವಿಭಾಗವಾರು ಸರ್ವರ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ತಾಂತ್ರಿಕ ಸಹಾಯಕರನ್ನೂ ಇಲಾಖೆ ನೇಮಕ ಮಾಡಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗದಿರುವುದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ.

ತಿದ್ದುಪಡಿ ಸಮಸ್ಯೆ: ಸರ್ವರ್ ದೋಷ ಸೇರಿದಂತೆ ಹಲವು ತಾಂತ್ರಿಕ ದೋಷ ಮತ್ತು ಗೊಂದಲದಿಂದ ಪಡಿತರ ಚೀಟಿ ವಿತರಣೆ ವಿಳಂಬವಾಗಿದೆ. ಆದರೆ ಇದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ತಿದ್ದುಪಡಿ. ಅಂದರೆ ಹೆಸರು, ವಿಳಾಸ ಮುಂತಾದವುಗಳನ್ನು ತಪ್ಪಾಗಿ ನೀಡಿ, ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆಯೂ ಹೆಚ್ಚಿದೆ. ಅಲ್ಲದೆ ಭಾವಚಿತ್ರ ತೆಗೆಸಲು ಮತ್ತು ಬಯೋಮೆಟ್ರಿಕ್ ಗುರುತು ನೀಡಲು ಇನ್ನೂ ಕೆಲವರು ಬಂದಿಲ್ಲ ಎಂಬುದು ಇಲಾಖೆಯ ಅಧಿಕಾರಿಗಳ ಅಳಲು.

ತಿಂಗಳಲ್ಲಿ ಕಾರ್ಡ್: `ನವೆಂಬರ್‌ನಲ್ಲಿ ಬಂದಿದ್ದ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿ ರೇಷನ್ ಕಾರ್ಡ್ ನೀಡಲಾಗಿದ್ದು ಯಾವೊಂದು ಅರ್ಜಿಯೂ ಬಾಕಿ ಇಲ್ಲ. ಆ ನಂತರ ಬಂದ ಅರ್ಜಿದಾರರಿಗೆ ಕಾರ್ಡ್ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಇಲಾಖೆಯ ಎಲ್ಲ ಸಿಬ್ಬಂದಿ ಕಾರ್ಡ್ ತಯಾರಿಸುವ ವಿವಿಧ ಹಂತದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಒಂದು ತಿಂಗಳಿನಲ್ಲಿ ಕಾರ್ಡ್ ವಿತರಣೆ ಪೂರ್ಣವಾಗುತ್ತದೆ' ಎಂದು ಇಲಾಖೆಯ ಕಾರ್ಯದರ್ಶಿ ಬಿ.ಎ. ಹರೀಶ್ ಗೌಡ `ಪ್ರಜಾವಾಣಿ'ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.