ಬುಧವಾರ, ಜೂನ್ 16, 2021
26 °C

ಪಡಿತರ ಚೀಟಿ ಗೊಂದಲ: ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಪಡಿತರ ವಿತರಣೆಗೆ ಆಗ್ರಹಪಡಿಸಿ ಮತ್ತು  ಪಡಿತರ ಚೀಟಿದಾರರು ವಿದ್ಯುತ್ ಸಂಪರ್ಕದ ಆರ್‌ಆರ್ ಸಂಖ್ಯೆಯವಿವರ ನೀಡಬೇಕು ಎಂಬ ನಿಬಂಧನೆ ಕೈಬಿಡಲು ಆಗ್ರಹಪಡಿಸಿ ಜಿಲ್ಲಾ ರೈತ ಸಂಘದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಕೆಲವು ನ್ಯಾಯಬೆಲೆ ಅಂಗಡಿಗಳು ಪಡಿತರ ಚೀಟಿ ಜೊತೆಗೆ ವಿದ್ಯುತ್ ಬಿಲ್, ಕಂದಾಯ ಪಾವತಿ ರಸೀದಿಯನ್ನು ನೀಡಬೇಕು. ಇಲ್ಲದಿದ್ದಲ್ಲಿ ಪಡಿತರ ನೀಡುವುದಿಲ್ಲ ಎಂದು ಷರತ್ತು ವಿಧಿಸುತ್ತಿವೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಂಥ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಜಿಲ್ಲಾಧಿಕಾರಿಗಳು ರೈತ ಸಂಘಕ್ಕೆ ಪ್ರತಿಕ್ರಿಯಿಸಿದ್ದಾರೆ. ಮುಂದೆ ಗ್ರಾಮೀಣ ಪ್ರದೇಶದಲ್ಲಿ ಪಡಿತರ ವಿತರಣೆಗೆ ತಕರಾರು ಮಾಡಿದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಬೆಳಿಗ್ಗೆ ನಗರದಲ್ಲಿ ಬಸ್‌ನಿಲ್ದಾಣ ಬಳಿಯ ವೃತ್ತದಲ್ಲಿ ಮಾನವ ಸರಪಳಿಯನ್ನು ರಚಿಸಿದ ರೈತರು ತಮ್ಮಬೇಡಿಕೆಯ ಬಗೆಗೆ ಸರ್ಕಾರದ ಗಮನಸೆಳೆದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಕೋಣಸಾಲೆ ನರಸರಾಜು, ಶಂಭೂನಹಳ್ಳಿ ಸುರೇಶ್, ಹನಿಯಂಬಾಡಿನಾಗರಾಜು,  ಕೀಲಾರ ಸೋಮಶೇಖರ್, ಕೃಷ್ಣಪ್ಪ, ಬಿ.ಬೊಮ್ಮೇಗೌಡ ಮತ್ತಿತರರಿದ್ದರು.ತಹಶೀಲ್ದಾರ್‌ಗೆ ಮನವಿ

ಮದ್ದೂರು: ಪಡಿತರ ಚೀಟಿ ವಿತರಣೆಯಲ್ಲಿನ ಗೊಂದಲ ನಿವಾರಣೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಟಿ.ಬಿ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಿದರು.ಪಡಿತರ ವ್ಯವಸ್ಥೆಯ ಲೋಪ ಕುರಿತು ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಅಲ್ಲಿಂದ ತಾಲ್ಲೂಕು ಕಚೇರಿಗೆ ಆಗಮಿಸಿ ಅಲ್ಲಿ ಕೆಲ ಕಾಲ ಧರಣಿ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ಜಿಲ್ಲಾ ಘಟಕದ ಅಧ್ಯಕ್ಷ ಕೋಣಸಾಲೆ ನರಸರಾಜು ಮಾತನಾಡಿ, ರಾಜ್ಯದಲ್ಲಿ ಇಂದಿಗೂ ಶಾಶ್ವತ ಪಡಿತರ ಚೀಟಿ ನೀಡಿಲ್ಲ. ತಾತ್ಕಾಲಿಕ ಪಡಿತರ ಚೀಟಿ ನೀಡಿದ್ದು, ಈ ಚೀಟಿಯನ್ನು ಸರ್ಕಾರದ ಯಾವುದೇ ಸವಲತ್ತುಗಳಿಗೆ ಪರಿಗಣಿಸುತ್ತಿಲ್ಲ. ಹೀಗಾಗಿ ಬಡಜನರಿಗೆ ಸರ್ಕಾರಿ ಸವಲತ್ತುಗಳು ದೊರಕುತ್ತಿಲ್ಲ. ಈ ಕೂಡಲೇ ಪಡಿತರ ಚೀಟಿ ವಿತರಣೆಯಲ್ಲಿನ ಗೊಂದಲ ನಿವಾರಣೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ರೈತಸಂಘದ ರಾಜ್ಯ ಕಾರ್ಯದರ್ಶಿ ವಿ.ಅಶೋಕ್ ಮಾತನಾಡಿದರು.ರೈತ ಮುಖಂಡರಾದ ಜಿ.ಅಶೋಕ್, ಶಂಕರ್, ಯರಗನಹಳ್ಳಿ ರಾಮಕೃಷ್ಣಯ್ಯ, ಕೆ.ಜಿ.ಉಮೇಶ್, ಶಂಕರ್, ಜಯಮ್ಮ, ತಾಯಮ್ಮ, ಸುಶೀಲಮ್ಮ, ಶಂಕರೇಗೌಡ, ಕೆ.ರಾಮಕೃಷ್ಣೇಗೌಡ, ಬೋರಮ್ಮ ಇತರರು ಇದ್ದರು.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ: ಪ್ರತಿಭಟನೆ

ಮದ್ದೂರು: ಸಮೀಪದ ಹುಲಿಗೆರೆಪುರ ಗ್ರಾಮದೇವತೆ ಹಬ್ಬದ ಸಂದರ್ಭದಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ನಲ್ಲಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಗಳನ್ನು ಹರಿದು ಚರಂಡಿಗೆ ಹಾಕಿರುವ ಕ್ರಮ ಖಂಡಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.ವಿಚಾರ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು ಕಿಡಿಗೇಡಿಗಳ ಕೃತ್ಯದ ವಿರುದ್ಧ ಕಿಡಿಕಾರಿದರು. ಅಷ್ಟರಲ್ಲಿ ಪಟ್ಟಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಉದ್ರಿಕ್ತ ಗ್ರಾಮಸ್ಥರನ್ನು ಸಮಾಧಾನಪಡಿಸಿದರು.

ಗ್ರಾಮದಲ್ಲಿ ಬಿಗುವಿನ ವಾತಾವರಣ ಉದ್ಭವಿಸಿದ್ದು, ಯಾವುದೇ ಅಹಿತಕರ ಘಟನೆ ಜರುಗದಂತೆ ಪಿಎಸ್‌ಐ ಮಹೇಶ್ ಹಾಗೂ ಸಿಬ್ಬಂದಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.