ಭಾನುವಾರ, ಮಾರ್ಚ್ 7, 2021
22 °C
ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿ: ಈಗಿರುವ ಯಂತ್ರಗಳ ಬದಲಾವಣೆ

ಪಡಿತರ: ನಿಖರ ಮಾಹಿತಿಗೆ ಆಧಾರ್‌ ಜೋಡಣೆ

ಪಿ.ವಿ.ಪ್ರವೀಣ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಪಡಿತರ: ನಿಖರ ಮಾಹಿತಿಗೆ ಆಧಾರ್‌ ಜೋಡಣೆ

ಬೆಂಗಳೂರು: ಪಡಿತರ ಚೀಟಿಯ ಸಿಂಧುತ್ವ ಪರಿಶೀಲನೆ  ಹಾಗೂ ಪಡಿತರ ವಿತರಣೆಯ ವಿವರಗಳನ್ನು ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ಒದಗಿಸುವ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ಆದ್ಯತಾ ಕುಟುಂಬಗಳ (ಬಿಪಿಎಲ್‌ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರು) ಸದಸ್ಯರ ಆಧಾರ್‌ ಬಯೊಮೆಟ್ರಿಕ್‌ ಮಾಹಿತಿಯನ್ನೂ ಬಳಸಿಕೊಳ್ಳಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮುಂದಾಗಿದೆ.ಈಗಿರುವ ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್‌) ವಿದ್ಯುನ್ಮಾನ ಮಾಪಕ ಯಂತ್ರಗಳ ಬದಲಿಗೆ ಲಘು ಯಂತ್ರಗಳನ್ನು ಬಳಸಲು ಇಲಾಖೆ ನಿರ್ಧರಿಸಿದೆ. ಉಡುಪಿ ಜಿಲ್ಲೆಯಲ್ಲಿ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ‘ಲಘು ಯಂತ್ರಗಳ ಖರೀದಿಗೆ ಶೀಘ್ರವೇ ಟೆಂಡರ್‌ ಕರೆಯುತ್ತೇವೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.‘ಉಡುಪಿ ಜಿಲ್ಲೆಯಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚು. ಪಡಿತರ ಚೀಟಿಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವ  ಪ್ರಕ್ರಿಯೆಗೂ ಇಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಹಾಗಾಗಿ ಹೊಸ ಯಂತ್ರಗಳ ಬಳಕೆಯನ್ನು ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರುತ್ತೇವೆ. ಇದರ ಸಾಧಕ ಬಾಧಕಗಳನ್ನು ನೋಡಿಕೊಂಡು ರಾಜ್ಯದಾದ್ಯಂತ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು. ಈ ಸಲುವಾಗಿಯೇ ಆಧಾರ್‌ ಮಾಹಿತಿ ಕಲೆ ಹಾಕುತ್ತಿದ್ದೇವೆ’ ಎಂದು ತಿಳಿಸಿದರು. ‘ರಾಜ್ಯದಲ್ಲಿರುವ 20 ಸಾವಿರ ನ್ಯಾಯಬೆಲೆ ಅಂಗಡಿಗಳ ಪೈಕಿ 3,877 ಅಂಗಡಿಗಳಲ್ಲಿ ಪಿಒಎಸ್‌ ಯಂತ್ರಗಳನ್ನು ಅಳವಡಿಸಲಾಗಿದೆ. ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಸದಸ್ಯರ ಬೆರಳಚ್ಚು  (ಬಯೊಮೆಟ್ರಿಕ್‌) ಮಾಹಿತಿಯನ್ನು  ಈ ಯಂತ್ರಗಳಿಗೆ ಜೋಡಿಸಲಾಗಿದೆ.ಈ ಯಂತ್ರಗಳನ್ನು ಬಳಸುವ ನ್ಯಾಯಬೆಲೆ ಅಂಗಡಿಗಳಲ್ಲಿ ಯಾರಾದರೂ ಪಡಿತರ ಖರೀದಿಸಿದರೆ, ಆ ಮಾಹಿತಿ ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ. ಆದರೆ, ಒಬ್ಬ ವ್ಯಕ್ತಿ  ಎರಡು ಕಡೆ ಬಯೊಮೆಟ್ರಿಕ್‌ ಮಾಹಿತಿ ಒದಗಿಸಿ, ಎರಡು ಕಾರ್ಡ್‌ ಪಡೆದುಕೊಂಡಿದ್ದರೆ ಅದನ್ನು ಪತ್ತೆ ಹಚ್ಚಲು  ಕಷ್ಟವಾಗುತ್ತಿದೆ.  ಒಬ್ಬ ವ್ಯಕ್ತಿ ಎರಡು ಆಧಾರ್‌ ಸಂಖ್ಯೆಯನ್ನು ಹೊಂದುವುದು ಸಾಧ್ಯವಿಲ್ಲ. ಹಾಗಾಗಿ ನಾವು  ಆಧಾರ್‌ ಸಂಖ್ಯೆಯ ಬಯೊಮೆಟ್ರಿಕ್‌ ಮಾಹಿತಿಯನ್ನು ಪಡಿತರ ವಿತರಣೆ ವ್ಯವಸ್ಥೆಗೂ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.  ಕಾರ್ಯನಿರ್ವಹಣೆ ಹೇಗೆ?: ‘ಹೊಸ ಯಂತ್ರಗಳಲ್ಲಿ ಆಯಾ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಕುಟುಂಬಗಳ ಆಧಾರ್‌ ಮಾಹಿತಿಯನ್ನು ಜೋಡಿಸಲಾಗುತ್ತದೆ. ಕುಟುಂಬದ ಸದಸ್ಯರು ನ್ಯಾಯಬೆಲೆ ಅಂಗಡಿಗೆ ತೆರಳಿ ಬೆರಳಚ್ಚು ನೀಡಿದಾಗ, ಅದು ಅವರ ಆಧಾರ್‌ ಬಯೋಮೆಟ್ರಿಕ್‌ಗೆ ಹೊಂದಿಕೆಯಾದರೆ ಮಾತ್ರ ಪಡಿತರ ಪಡೆಯಬಹುದು. ಅವರು ಪಡಿತರ ಖರೀದಿಸುತ್ತಿದ್ದಂತೆಯೇ ಆ ಮಾಹಿತಿ ಇಲಾಖೆಯ ವೆಬ್‌ಸೈಟ್‌ ಮೂಲಕ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುತ್ತದೆ. ಅದೇ ವ್ಯಕ್ತಿ ಇನ್ನೊಂದು ಕಡೆ ಕಾರ್ಡ್‌ ಹೊಂದಿದ್ದರೆ  ಪಡಿತರ ಖರೀದಿ ಸಮಯದಲ್ಲಿ  ಅದು ಬೆಳಕಿಗೆ ಬರುತ್ತದೆ’ ಎಂದು ವಿವರಿಸಿದರು.‘ಈಗ ಬಳಸುತ್ತಿರುವ ಪಿಒಎಸ್‌ ಯಂತ್ರ  ಗಾತ್ರದಲ್ಲಿ ದೊಡ್ಡದು. ಅದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೆ ದುರಸ್ತಿ ಕೂಡಾ ಕಷ್ಟ. ಹೊಸ ಯಂತ್ರ ಗಾತ್ರದಲ್ಲಿ ಸಣ್ಣದು. ಬಸ್‌ ಕಂಡಕ್ಟರ್‌ಗಳ ಬಳಿಯ ಟಿಕೆಟ್ ವಿತರಣಾ ಸಾಧನದ ಗಾತ್ರದಲ್ಲಿರುವ ಈ ಯಂತ್ರಗಳನ್ನು ಕೈಯಲ್ಲೇ ನಿರ್ವಹಿಸಬಹುದು. ಇದರ ಮೂಲಕ ಗ್ರಾಹಕರಿಗೆ ಮುದ್ರಿತ ಬಿಲ್‌ ಕೂಡಾ ನೀಡಬಹುದು’ ಎಂದರು.ರಿಯಾಯಿತಿ ದರದಲ್ಲಿ ಒದಗಿಸುವ ಪಡಿತರ ಅರ್ಹರಿಗೆ ಮಾತ್ರ ಲಭಿಸ ಬೇಕು.  ದುರ್ಬಳಕೆ  ತಡೆಗೆ ತಂತ್ರಜ್ಞಾನ ಬಳಕೆಗೆ ಇಲಾಖೆ ಸದಾ ಸಿದ್ಧ.

ದಿನೇಶ್‌ ಗುಂಡೂರಾವ್‌,

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.