ಶನಿವಾರ, ಮಾರ್ಚ್ 6, 2021
21 °C
ಸ್ಥಳೀಯರ ಅಸಮಾಧಾನ: ಯುಪಿಸಿಎಲ್ ಪೈಪ್‌ಲೈನ್ ತೆರವಿಗೆ ಆಗ್ರಹ

ಪಡುಬಿದ್ರಿ: ಸಮುದ್ರ ಕೊರೆತ ತಡೆಗೆ ಸಣ್ಣ ಕಲ್ಲು

ಪ್ರಜಾವಾಣಿ ವಾರ್ತೆ / -ಅಬ್ದುಲ್ ಹಮೀದ್,ಪಡುಬಿದ್ರಿ Updated:

ಅಕ್ಷರ ಗಾತ್ರ : | |

ಪಡುಬಿದ್ರಿ: ಸಮುದ್ರ ಕೊರೆತ ತಡೆಗೆ ಸಣ್ಣ ಕಲ್ಲು

ಪಡುಬಿದ್ರಿ: ಪ್ರತೀ ವರ್ಷದಂತೆ ಈ ಬಾರಿಯೂ ಕಡಲ್ಕೊರೆತ ಕರಾವಳಿಯಲ್ಲಿ ಕಾಣಿಸಿಕೊಂಡಿದ್ದು,  ಕಡಲ್ಕೊರೆತ ಉಂಟಾಗಿರುವ ಪ್ರದೇಶಗಳಲ್ಲಿ ಕಲ್ಲುಗಳನ್ನು ಹಾಕುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಆದರೆ ಹಾಕುತ್ತಿರುವ ಕಲ್ಲುಗಳು ತೀರ ಸಣ್ಣದ್ದಾಗಿದ್ದು, ಇದರಿಂದ ಈ ಪರಿಸರದ ವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಡುಬಿದ್ರಿ ಸಮೀಪದ ಎರ್ಮಾಳು ತೆಂಕ ಗ್ರಾ.ಪಂ. ವ್ಯಾಪ್ತಿಯ ತೊಟ್ಟಂ ಹಾಗೂ ಬಡಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಎರಡು ವಾರಗಳ ಹಿಂದೆ ಕಡಲ್ಕೊರೆತ ಕಾಣಿಸಿಕೊಂಡಿತ್ತು. ಈ ವೇಳೆ ತೆಂಕ ಗ್ರಾಮದ ಯುಪಿಸಿಎಲ್ ಪೈಪ್‌ಲೈನ್ ಪ್ರದೇಶದ ಬಳಿ ಮೀನುಗಾರಿಕಾ ರಸ್ತೆಯೇ ಸಮುದ್ರ ಪಾಲಾಗಿತ್ತು. ಹಲವು ತೆಂಗಿನ ಮರಗಳು ಸಮುದ್ರದ ಒಡಲು ಸೇರಿದ್ದವು.ಕಳೆದ ಬಾರಿ ಕಡಲ್ಕೊರೆತ ತಡೆಯಲು ಹಾಕಿದ್ದ ಕಲ್ಲುಗಳು ಸಮುದ್ರ ಪಾಲಾಗಿದ್ದವು. ಇದರಿಂದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಭೇಟಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಹಿತ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಅಧಿಕಾರಿಗಳನ್ನು ಆಗ್ರಹಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ವಿನಯಕುಮಾರ್ ಸೊರಕೆಯವರು ಸ್ಥಳದಲ್ಲೇ ಕೂಡಲೇ ಕಲ್ಲು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಅವರಿಗೆ ಆದೇಶಿಸಿದರು. ಬಳಿಕ ಕಲ್ಲುಗಳನ್ನು ಹಾಕುವ ಪ್ರಕ್ರಿಯೆಗೆ ಚಾಲನೆ ದೊರೆಯಿತು.ದೊಡ್ಡಕಲ್ಲುಗಳಿಂದ ಮಾತ್ರ ತಡೆ ಸಾಧ್ಯ: ಸಮುದ್ರ ಕೊರೆತ ಉಂಟಾದ ಪ್ರದೇಶಕ್ಕೆ ದೊಡ್ಡಕಲ್ಲುಗಳನ್ನು ಹಾಕುವ ಮೂಲಕ ಸಮುದ್ರ ಕೊರೆತ ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ ಇಲ್ಲಿ ಹಾಕಿರುವ ಕಲ್ಲುಗಳು ತೀರಾ ಸಣ್ಣದಾಗಿದ್ದು, ಇದರಿಂದ ಏನೂ ಪ್ರಯೋಜನ ಇಲ್ಲ ಎನ್ನುತ್ತಾರೆ ಸ್ಥಳೀಯ ವಾಸಿಗಳು.ತನಿಖೆಗೆ ಆಗ್ರಹ: ಪ್ರತೀ ಬಾರಿಯೂ ಸಮುದ್ರ ಕೊರೆತ ಉಂಟಾದಾಗ ಸಣ್ಣ ಕಲ್ಲುಗಳನ್ನು ಹಾಕುವ ಮೂಲಕ ಜಿಲ್ಲಾಡಳಿತ ಕೈತೊಳೆದುಕೊಳ್ಳುತ್ತದೆ. ಇದರಿಂದ ಸಮುದ್ರ ಕೊರೆತದ ಹೆಸರಿನಲ್ಲಿ ಸರ್ಕಾರದ ಕೋಟ್ಯಂತರ ರೂಪಾಯಿ ಹಣ ಪೋಲಾಗುತ್ತಿವೆ. ಸಣ್ಣ ಕಲ್ಲುಗಳನ್ನು ಹಾಕಿ ಬಿಲ್ ಪಡೆಯುವ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎಂಬುದು ಸ್ಥಳೀಯರ ಆಗ್ರಹ.ಕಳೆದ ಒಂದು ತಿಂಗಳಿನಿಂದ ಎರ್ಮಾಳಿನಲ್ಲಿ ಕಡಲ್ಕೊರೆತ ತೀವ್ರವಾಗಿತ್ತು. ಇದರಿಂದಾಗಿ ಮೀನುಗಾರಿಕಾ ರಸ್ತೆ ಸಂಪೂರ್ಣ ಸಮುದ್ರ ಪಾಲಾಗಿದೆ. ರಸ್ತೆ ಇಲ್ಲದ್ದರಿಂದ ನಮಗೆ ಅತೀವ ತೊಂರೆ ಆಗುತಿದೆ. ಮನೆಯಲ್ಲಿ ವೃದ್ಧರಿದ್ದು, ರಿಕ್ಷಾ ಚಾಲಕರು ಇಲ್ಲಗೆ ಬರುವಂತಿಲ್ಲ. ಪ್ರತೀ ವರ್ಷವೂ ಕಡಲ್ಕೊರೆತ ಉಂಟಾಗುತ್ತಿದ್ದರೂ ಜಿಲ್ಲಾಡಳಿತ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿಲ್ಲ.ಕಡಲ್ಕೊರೆತ ಉಂಟಾದಾಗ ಸಮುದ್ರಕ್ಕೆ ಕಲ್ಲು ಹಾಕುವ ಪ್ರಕ್ರಿಯೆ ನಡೆಯುತ್ತದೆ. ಕೊರೆತ ಕಡಿಮೆ ಆದಾಗ ಎಲ್ಲರೂ ಮರೆಯುತ್ತಾರೆ. ಈ ಬಾರಿ ಮೀನುಗಾರಿಕಾ ರಸ್ತೆ ಸಂಪೂರ್ಣ ಕಡಲನ್ನು ಸೇರಿದೆ ಸಮುದ್ರ ದಂಡೆಗೆ ಬೃಹತ್ ಕಲ್ಲುಗಳ ಬದಲಿಗೆ ಸಣ್ಣ ಪುಟ್ಟ ಕಲ್ಲುಗಳನ್ನು ಹಾಕುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ ಎನ್ನುತ್ತಾರೆ ಎರ್ಮಾಳು ತೊಟ್ಟಂ ನಿವಾಸಿ ಇಂದಿರಾ.ಪೈಪ್‌ಲೈನ್ ತೆರವಿಗೆ ಆಗ್ರಹ: ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಕಂಪೆನಿಯು ಎರ್ಮಾಳು ತೆಂಕ ತೊಟ್ಟಂನಲ್ಲಿ ಸಮುದ್ರಕ್ಕೆ ಹಾಕಲಾದ ಪೈಪ್‌ಲೈನ್‌ನಿಂದ ಪದೇ ಪದೇ ಈ ಪರಿಸರದಲ್ಲಿ ಕಡಲ್ಕೊರೆತ ಕಾಣಿಸಿಕೊಳ್ಳುತಿದ್ದು, ತಡೆಗೋಡೆ ತೆರವಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.