ಮಂಗಳವಾರ, ಏಪ್ರಿಲ್ 13, 2021
32 °C

ಪತ್ರಕರ್ತನ ಬಂಧನ ಆಘಾತಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮಾರ್ನಿಂಗ್  ಮಿಸ್ಟ್~ ಹೋಮ್ ಸ್ಟೇ ಮೇಲೆ ದಾಳಿ ನಡೆಯುವ ಸುದ್ದಿ ಮೊದಲೇ ತಿಳಿದಿದ್ದರೂ ಅದನ್ನವರು ಪೊಲೀಸರಿಗೆ ತಿಳಿಸಲಿಲ್ಲವೆಂಬ ನೆಪವೊಡ್ಡಿ ಪತ್ರಕರ್ತ ನವೀನ್ ಸೂರಿಂಜೆಯನ್ನು ಬಂಧಿಸಿರುವ ಸುದ್ದಿ ಆಘಾತಕಾರಿಯಾಗಿದೆ.ಇದು ಪ್ರಜಾಪ್ರಭುತ್ವ ಮತ್ತು ನಾಗರೀಕ ಸಂಹಿತೆಗಳೆರಡಕ್ಕೂ ಮಾಡುತ್ತಿರುವ ಅವಮಾನವೆಂದೇ ನಾವು ಭಾವಿಸುತ್ತೇವೆ. ಒಬ್ಬ ಪತ್ರಕರ್ತನಾಗಿ ಮತ್ತು ನಾಗರಿಕನಾಗಿ ನವೀನ್ ಸೂರಿಂಜೆ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ ಮತ್ತು ದಾಳಿಯ ಬಗ್ಗೆ ಮಾಹಿತಿ ನೀಡಲು ಪೊಲೀಸರಿಗೆ ಅವರು ಮೊಬೈಲ್ ಕರೆ ಮಾಡಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ.`ಮಾರ್ನಿಂಗ್ ಮಿಸ್ಟ್~ ಮೇಲಿನ ದಾಳಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೂಲಭೂತವಾದದ ಕಾಮಾಲೆ ಕಣ್ಣಿನ ಸೃಷ್ಟಿಯಾಗಿದೆ. ಎಳೆ ಹರೆಯದ ಹುಡುಗ-ಹುಡುಗಿಯರ ಹುಟ್ಟು ಹಬ್ಬದ ಸಹಜ ಸಂಭ್ರಮಾಚರಣೆಗೆ `ರೇವ್ ಪಾರ್ಟಿ~ ಇತ್ಯಾದಿಯಾಗಿ ಸುಳ್ಳುಸುಳ್ಳೇ ಬಣ್ಣ ಕಟ್ಟಿ ಅವರ ಮೇಲೆ ದಾಳಿ ಮಾಡಿದ ಮತ್ತು ಹೆಣ್ಣು ಮಕ್ಕಳೊಂದಿಗೆ ಮೃಗೀಯವಾಗಿ ವರ್ತಿಸಿದ ಆರೋಪಿಗಳ ಬಂಧನ ಮತ್ತು ವಿಚಾರಣೆಯನ್ನು ನಿಷ್ಪಕ್ಷಪಾತವಾಗಿ ನಡೆಸುವುದು ಬಿಟ್ಟು ಈ ಪ್ರಕರಣವನ್ನು ಜಗತ್ತಿನೆದುರಿಗೆ ತೆರೆದಿಟ್ಟ ನವೀನ ಸೂರಿಂಜೆಯವರನ್ನೇ ಬಂಧಿಸಿರುವುದು ಏನನ್ನು ಸೂಚಿಸುತ್ತದೆ? ನ್ಯಾಯದಾನ ಪದ್ಧತಿಯ ವಿಪರ್ಯಾಸವಷ್ಟೆ.ಹೆಣ್ಣು ಮಕ್ಕಳ ಸಹಜ ಸಂತೋಷಕ್ಕೆ ಬರೆ ಇಡುವ, ಅವರ ಮೇಲೆ ಆಕ್ರಮಣ ನಡೆಸುವ ಕಾರ್ಯಗಳು ಇತ್ತೀಚಿನ ದಿನಗಳಲ್ಲಿ ಸದಾ ನಡೆಯುತ್ತಲೇ ಇವೆ. ಆದರೆ ಎಲ್ಲಿಯೂ ಅದು ಸುದ್ದಿಯಾಗದಂತೆ ಮತ್ತು ಆಕ್ರಮಣ ಮಾಡಿದವರಿಗೆ ಶಿಕ್ಷೆಯಾಗದಂತೆ ಬಲಾಢ್ಯ ಶಕ್ತಿಗಳು ನೋಡಿಕೊಳ್ಳುತ್ತಾ ಬಂದಿವೆ.ಈ ಪ್ರಕರಣದಲ್ಲಿ ನವೀನ್ ಸೂರಿಂಜೆ ಅವರ ಕಾರಣದಿಂದಾಗಿ ದಾಳಿ ನಡೆಸಿದ ಅನಾಗರಿಕ ಶಕ್ತಿಗಳು ಶಿಕ್ಷೆಗೆ ಒಳಪಡುವಂತಾಗಿರುವುದೇ ಅವರನ್ನು ಬಂಧನಕ್ಕೊಳಪಡಿಸಲು ಕಾರಣ ಎಂಬುದು ಸ್ಪಷ್ಟ.ಇದು ತನ್ನ ಮಹಿಳಾ ವಿರೋಧಿಯಾದ ಮತೀಯ ಮೂಲಭೂತವಾದ, ಬೇಜವಾಬ್ದಾರಿತನ, ನಿಷ್ಕ್ರಿಯತೆಗಳನ್ನು ಮರೆಮಾಚಿಕೊಳ್ಳಲು ಪತ್ರಕರ್ತನೊಬ್ಬನ ತಲೆದಂಡ ಪಡೆಯಲು ವ್ಯವಸ್ಥೆ ನಡೆಸುತ್ತಿರುವ ಯೋಜಿತ ಸಂಚಿನಂತೆ ನಮಗೆ ಕಾಣುತ್ತಿದೆ.ಈ ಇಡೀ ಪ್ರಕರಣದಲ್ಲಿ ನಿಜವಾದ ತಪ್ಪಿತಸ್ಥರನ್ನು ಶಿಕ್ಷಿಸಿ  ನವೀನ್ ಸೂರಿಂಜೆಯವರನ್ನು ಈ ಕೂಡಲೇ ಬಂಧನದಿಂದ  ಬಿಡುಗಡೆ ಮಾಡಬೇಕು  ಎಂಬುದು ನಮ್ಮೆಲ್ಲರ ಒತ್ತಾಯಪೂರ್ವಕ ಹೇಳಿಕೆಯಾಗಿದೆ.  - ಸಾರಾ ಅಬೂಬಕರ್, ವೈದೇಹಿ, ಬಿ.ಎನ್. ಸುಮಿತ್ರಾಬಾಯಿ, ಪ್ರತಿಭಾ ನಂದಕುಮಾರ್, ಎಚ್. ನಾಗವೇಣಿ, ಸವಿತಾನಾಗಭೂಷಣ, ಎಂ.ಎಸ್. ಆಶಾದೇವಿ, ಸಬೀಹಾ ಭೂಮಿಗೌಡ, ಸುನಂದ ಕಡಮೆ, ರೂಪ ಹಾಸನ, ಡಾ.ಎಚ್. ಎಸ್. ಅನುಪಮಾ, ಎಸ್. ಬಾಗೇಶ್ರೀ, ಸಬಿತಾ ಬನ್ನಾಡಿ, ರಾಜಲಕ್ಷ್ಮಿ ಕೋಡಿಬೆಟ್ಟು, ಪಿ.ಭಾರತೀದೇವಿ, ಅಕ್ಷತಾ ಹುಂಚದಕಟ್ಟೆ. ಸುಕನ್ಯಾ ಕಳಸ, ಕೆ. ಶಾರದಾ ಭಟ್, ಕೆ. ತಾರಾ ಭಟ್. ರಾಧಾದಾಸ್, ಕುಂದಾಪುರ ತಾಲೂಕು ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ; ಶಾಹೀದಾ ಎ, ನ್ಯಾಶನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷರು; ಝರೀನಾ, ನ್ಯಾಶನಲ್ ವಿಮೆನ್ಸ್ ಫ್ರಂಟ್ ಜಿಲ್ಲಾಧ್ಯಕ್ಷರು;  ಸಂಚಾಲಕರು,ಸ್ವಾಭಿಮಾನಿ ಮಹಿಳಾ ವೇದಿಕೆ; ಸಂಚಾಲಕರು, ಉಡುಪಿ ದಲಿತ ಮಹಿಳಾ ವೇದಿಕೆ .

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.