ಶುಕ್ರವಾರ, ಜೂನ್ 18, 2021
24 °C

ಪತ್ರಕರ್ತರ ಒಕ್ಕೂಟದಿಂದ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರು ವರದಿಗಾರರ ಕೂಟ, ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್ ಕ್ಲಬ್ ಸೇರಿದಂತೆ ಹಲವು ಪತ್ರಕರ್ತರ ಒಕ್ಕೂಟದ ಸದಸ್ಯರು ಶನಿವಾರ ಧರಣಿ ನಡೆಸಿದರು.ನಗರದ ಪ್ರೆಸ್ ಕ್ಲಬ್ ಆವರಣದಿಂದ ಧರಣಿ ಆರಂಭಿಸಿ ಎಂ.ಜಿ ರಸ್ತೆಯ ಗಾಂಧಿ ಪ್ರತಿಮೆವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ನಂತರ ರಾಜಭವನಕ್ಕೆ ತೆರಳಿದ ಪತ್ರಕರ್ತರ ನಿಯೋಗ ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಮನವಿ ಸಲ್ಲಿಸಿತು.ವಕೀಲರ ಗೂಂಡಾಗಿರಿಯಿಂದ ಮಾಧ್ಯಮ ಪ್ರತಿನಿಧಿಗಳು, ಪೊಲೀಸರು, ಸಾರ್ವಜನಿಕರು ಸೇರಿದಂತೆ ನೂರಾರು ಜನ ಗಾಯಗೊಂಡಿದ್ದಾರೆ. ವಕೀಲರು ದುಷ್ಕೃತ್ಯ ನಡೆಸಿರುವುದಕ್ಕೆ ದೃಶ್ಯಗಳು, ಛಾಯಾಚಿತ್ರಗಳು ಸೇರಿದಂತೆ ಸಾಕ್ಷಿಗಳು ಕಣ್ಣೆದುರೇ ಇರುವಾಗ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕಾದ ಅಗತ್ಯವಾದರೂ ಏನಿದೆ.ಇದು ಸರ್ಕಾರ ನಡೆಸುತ್ತಿರುವ ಕಣ್ಣೊರೆಸುವ ತಂತ್ರ ಎಂದು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಜ.17ರಂದು ಮಾಧ್ಯಮದವರು ಹಾಗೂ ಪೊಲೀಸರ ಮೇಲೆ ವಕೀಲರು ಗೂಂಡಾಗಿರಿ ನಡೆಸಿದಾಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸರ್ಕಾರದ ಈ ನಿರ್ಲಕ್ಷ್ಯದ ಕಾರಣ ಯಾರ ಬೆದರಿಕೆಯೂ ಇಲ್ಲದೆ ವಕೀಲರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ನ್ಯಾಯಲಯದ ಆವರಣವನ್ನು ಪ್ರವೇಶಿಸಲು ನಿರ್ಬಂಧಿಸುವ ಹಕ್ಕು ವಕೀಲರಿಗಿಲ್ಲ ಎಂದರು.ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಮಾಧ್ಯಮದವರ ಹಕ್ಕುಗಳನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಪ್ರಯತ್ನ ನಡೆಸಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಪತ್ರಕರ್ತರು ಒತ್ತಾಯಿಸಿದರು.ಪ್ರೆಸ್ ಕ್ಲಬ್‌ನ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಉಪಾಧ್ಯಕ್ಷ ವೈ.ಎಸ್. ಎಲ್. ಸ್ವಾಮಿ, ಕಾರ್ಯದರ್ಶಿ ದೊಡ್ಡಬೊಮ್ಮಯ್ಯ, ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷ ಕೆ.ವಿ.ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಎಂ.ಚಂದ್ರಶೇಖರ್ ಸೇರಿದಂತೆ ವಿವಿಧ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.