ಭಾನುವಾರ, ಏಪ್ರಿಲ್ 11, 2021
22 °C

ಪದಕದ ಮೇಲೆ ನನ್ನ ಹೆಸರು ಮೊದಲೇ ಬರೆದಿತ್ತು: ಸೈನಾ ನೆಹ್ವಾಲ್

ಪ್ರಜಾವಾಣಿ ವಾರ್ತೆ/ ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಇದು ಅದೃಷ್ಟದ ಪದಕವೇ ಎಂಬ ಪ್ರಶ್ನೆಯನ್ನು ದಯವಿಟ್ಟು ಕೇಳಬೇಡಿ. ಏಕೆಂದರೆ ನನ್ನ ಈ ಸಾಧನೆಯ ಹಿಂದೆ 13 ವರ್ಷಗಳ ಕಠಿಣ ಶ್ರಮವಿದೆ. ಅಪ್ಪ, ಅಮ್ಮನ ತ್ಯಾಗವಿದೆ. ಕೋಚ್‌ಗಳ ದುಡಿಮೆ ಇದೆ. ಒಲಿಂಪಿಕ್ಸ್ ಪದಕದ ಮೇಲೆ ಯಾವಾಗಲೋ ಸೈನಾ ನೆಹ್ವಾಲ್ ಎಂದು ಬರೆದಾಗಿತ್ತು~-ಲಂಡನ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆಗೆ ಕಾರಣವಾಗಿರುವ ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಹೃದಯದಾಳದ ಮಾತಿದು. `ಅದೃಷ್ಟದ ಪದಕ~ ಎಂದು ಹೇಳುತ್ತಿರುವ ಬಗ್ಗೆ ಅವರಿಗೆ ಬೇಸರವಿದೆ. ಆದರೆ ಇಷ್ಟು ವರ್ಷಗಳ ಕಠಿಣ ಪ್ರಯತ್ನದಿಂದಾಗಿ ಈ ಪದಕ ಒಲಿದಿದೆ ಎಂಬ ಖುಷಿಯೂ ಇದೆ.2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾಗಲೇ ನೆಹ್ವಾಲ್ ಪ್ರತಿಭೆ ಏನೆಂಬುದು ಗೊತ್ತಾಗಿತ್ತು. ಏಕೆಂದರೆ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಮತ್ತೊಬ್ಬರು ಈ ಸಾಧನೆ ಮಾಡಿರಲಿಲ್ಲ. ಅದು ಅವರ ಮೊದಲ ಒಲಿಂಪಿಕ್ಸ್ ಆಗಿತ್ತು ಎಂಬುದು ವಿಶೇಷ. ಚೀನಾ, ಇಂಡೊನೇಷ್ಯಾ, ಡೆನ್ಮಾರ್ಕ್‌ನ ಆಟಗಾರ್ತಿಯರ ಭದ್ರ ಕೋಟೆಯೊಳಗೆ ನುಗ್ಗಬಹುದು ಎಂಬುದನ್ನು ಅವರು ಉಳಿದವರಿಗೆ ತೋರಿಸಿಕೊಟ್ಟರು.ಸೈನಾ ಬ್ಯಾಡ್ಮಿಂಟನ್ ಆರಂಭಿಸಿದ್ದು ಒಂಬತ್ತನೇ ವಯಸ್ಸಿನಲ್ಲಿ. 13 ವರ್ಷಗಳ ಬಳಿಕ ಅದಕ್ಕೆ ಪ್ರತಿಫಲ ದೊರೆತಿದೆ. ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಭಾರತದ ಎರಡನೇ ಮಹಿಳೆ ಎನಿಸಿರುವ ಸೈನಾ `ಪ್ರಜಾವಾಣಿ~ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.* ಲಂಡನ್‌ನಿಂದ ಪದಕದೊಂದಿಗೆ ಹಿಂತಿರುಗಿರುವ ನಿಮ್ಮ ಮನೆಯಲ್ಲಿ ಮೊದಲ ದಿನದ ವಾತಾವರಣ ಹೇಗಿತ್ತು?

ತವರಿಗೆ ಹಿಂತಿರುಗಿದ ದಿನ ನಾನು ಮಲಗಿದ್ದು ರಾತ್ರಿ 1 ಗಂಟೆಗೆ. ಬಂಧುಗಳು, ಸ್ನೇಹಿತರಿಂದ ಮನೆ ತುಂಬಿ ಹೋಗಿತ್ತು. ಎಲ್ಲರೂ ಪದಕ ಮುಟ್ಟಿ ನೋಡಿ ನನ್ನನ್ನು ಅಪ್ಪಿಕೊಳ್ಳುತ್ತಿದ್ದರು. ಸಂದರ್ಶನಕ್ಕಾಗಿ ಅಪ್ಪ, ಅಪ್ಪ, ಸಹೋದರಿಯ ಮೊಬೈಲ್‌ಗೂ ಕರೆ ಮಾಡುತ್ತಿದ್ದಾರೆ.  ಮೊಬೈಲ್‌ನ ಇನ್‌ಬಾಕ್ಸ್ ಅಭಿನಂದನೆಗಳ ಸಂದೇಶದಿಂದ ತುಂಬಿ ಹೋಗಿದೆ. ಇದು ಸಹಜ. ಎಲ್ಲರಿಗೂ ನಿಧಾನಕ್ಕೆ ಪ್ರತಿಕ್ರಿಯಿಸುತ್ತೇನೆ. ಆದರೆ ಪದಕ ಗೆದ್ದ ನಿಜವಾದ ಖುಷಿ ನನ್ನೊಳಗೆ ಈಗ ಶುರುವಾಗಿದೆ.* ನಿಮ್ಮ ಕುಟುಂಬದಲ್ಲಿ ಮೊದಲ ಪದಕ ಮುಟ್ಟಿದ್ದು ಯಾರು? ಪ್ರತಿಕ್ರಿಯೆ ಹೇಗಿತ್ತು?

ಅಪ್ಪನಿಗೆ ಮೊದಲು ಪದಕ ಕೊಟ್ಟೆ. ಆ ಪದಕವನ್ನು ತಮ್ಮ ಎದೆಗೆ ಒತ್ತಿಕೊಂಡ ಅವರು ಅಳಲು ಶುರು ಮಾಡಿದರು. ಇಷ್ಟು ದಿನಗಳ ತಮ್ಮ ತ್ಯಾಗಕ್ಕೆ ಪ್ರತಿಫಲ ದೊರೆತ ಸಂಭ್ರಮ ಅವರ ಮುಖದಲ್ಲಿತ್ತು. ಅವರೊಂದಿಗೆ ನಾನು ಅತ್ತೆ.* ಒಲಿಂಪಿಕ್ಸ್ ಬೆಳ್ಳಿ ಪದಕದ ಜೊತೆ ಸೈನಾ... ಈಗ ಜೀವನ ಯಾವ ರೀತಿ ಇದೆ?


ಪದಕ ಗೆದ್ದ ರಾತ್ರಿ ಪದೇಪದೇ ಎಚ್ಚರವಾಗುತಿತ್ತು. ಪದಕ ನೋಡಿ ಮತ್ತೆ ಮಲಗುತ್ತಿದ್ದೆ. ಈಗಲೂ ಪದಕವನ್ನು ಜೊತೆಯಲ್ಲಿಯೇ ಇಟ್ಟುಕೊಂಡಿದ್ದೇನೆ. ಪದೇಪದೇ ಮುಟ್ಟಿ ನೋಡುತ್ತಿರುತ್ತೇನೆ. ಅದನ್ನು ನೋಡಿದಾಗಲೆಲ್ಲಾ ಮನಸ್ಸು ಮಗುವಿನಂತಾಗುತ್ತದೆ.* ಚೀನಾದ ವಾಂಗ್ ಕ್ಸಿನ್ ಎದುರಿನ ಪಂದ್ಯ ಮುಂದುವರಿದಿದ್ದರೆ ನಿಮ್ಮ ಪ್ರಕಾರ ಫಲಿತಾಂಶ ಏನಾಗಬಹುದಿತ್ತು?

ಫಲಿತಾಂಶ ಏನು ಬೇಕಿದ್ದರೂ ಆಗಬಹುದಿತ್ತು. ವಾಂಗ್ ಕ್ಸಿನ್ ಮೊದಲ ಗೇಮ್‌ನಲ್ಲಿ ತುಂಬಾ ತುಂಬಾ ಸುಸ್ತಾಗಿದ್ದರು. ಪದೇಪದೇ ನೀರು ಕೇಳುತ್ತಿದ್ದರು. ಆದರೆ ಅವರಿಗೆ ಗಾಯವಾಗಿದ್ದು ನನಗೂ ಬೇಸರ ತರಿಸಿತು.ಪದಕ ಬಂದಿದ್ದು ಅದೃಷ್ಟದ ಬಲದಿಂದ ಎನ್ನುವುದಕ್ಕಿಂತ ಅದು ನನ್ನ ದಿನವಾಗಿತ್ತು ಅಷ್ಟೆ. ಪದಕದ ಮೇಲೆ ನನ್ನ ಹೆಸರು ಈ ಮೊದಲೇ ಬರೆದಿತ್ತು. ಎಲ್ಲರೂ ಹೇಳುವ ರೀತಿ ಅದೃಷ್ಟ ಇದ್ದಿದ್ದರೆ ನಾನು 13 ವರ್ಷ ಶ್ರಮ ಹಾಕುವುದೇ ಬೇಡವಾಗಿತ್ತು. ಆದರೆ ಇದು ಒಲಿಂಪಿಕ್ಸ್. 204 ದೇಶಗಳು ಪಾಲ್ಗೊಂಡ ಕ್ರೀಡಾಕೂಟದಲ್ಲಿ ಬಂದ ಪದಕ.  * ಒಲಿಂಪಿಕ್ಸ್‌ನಲ್ಲಿ ಒಂದು ದಿನ ಪದಕ ಗೆಲ್ಲುತ್ತೇನೆ ಎಂಬ ವಿಶ್ವಾಸ ಯಾವಾಗ ಬಂತು?

ನನ್ನ ಅಮ್ಮ ಕೂಡ ಕ್ರೀಡಾಪಟು. ಒಲಿಂಪಿಕ್ಸ್ ಬಂದಾಗಲೆಲ್ಲಾ ನನ್ನನ್ನು ತೊಡೆಯ ಮೇಲೆ ಕೂರಿಸಿಕೊಂಡು ತೋರಿಸುತ್ತಿದ್ದರು. ನೀನು ಈ ರೀತಿ ಸ್ಪರ್ಧಿಸಿ ಗೆಲ್ಲಬೇಕು ಎನ್ನುತ್ತಿದ್ದರು. ನನ್ನ ಮೊದಲ ಒಲಿಂಪಿಕ್ಸ್‌ನಲ್ಲಿಯೇ (ಬೀಜಿಂಗ್) ಕ್ವಾರ್ಟರ್ ಫೈನಲ್ ತಲುಪಿದೆ.  ಅದು ನನ್ನಲ್ಲಿ ಸ್ಫೂರ್ತಿ ತುಂಬಿತು. ಹೆಚ್ಚು ಪ್ರಯತ್ನ ಹಾಕಿದರೆ ಪದಕ ಗೆಲ್ಲಬಹುದು ಎಂಬ ವಿಶ್ವಾಸ ಮೂಡಿಸಿತು. ನಾನು ಒಬ್ಬ ಸಾಮಾನ್ಯ ಹುಡುಗಿ. ಪೋಷಕರು ಹಾಗೂ ಕೋಚ್‌ಗಳ ತ್ಯಾಗ, ಜನರ ಶುಭಾಶಯ ನನ್ನನ್ನು ಒಬ್ಬ ಚಾಂಪಿಯನ್ ಆಗಿ ರೂಪಿಸಿವೆ.* ಪದಕ ಗೆದ್ದಾಯಿತು. ಮದುವೆಯ ವಿಚಾರ... ಯಾರಿಂದಲಾದೂ ಪ್ರಸ್ತಾಪ ಬಂದಿದೆಯೇ?

ಪ್ರಸ್ತಾಪ ಪ್ರತಿ ವರ್ಷ ಬರುತ್ತಲೇ ಇರುತ್ತೇವೆ. ಸದ್ಯ ಮದುವೆ ಬಗ್ಗೆ ನಾನಂತೂ ಚಿಂತಿಸಿಲ್ಲ. ಆ ಹೊಣೆಯನ್ನು ಪೂರ್ತಿ ಅಪ್ಪನಿಗೆ ಬಿಟ್ಟಿದ್ದೇನೆ. ಅವರು ಹೇಳಿದಂತೆ ನಡೆದುಕೊಳ್ಳುತ್ತೇನೆ.  * ಪದಕ ಗೆದ್ದಾಗಿದೆ. ಇನ್ನು ನಿಮ್ಮ ಜೀವನ ಶೈಲಿಯ್ಲ್ಲಲಿ ಬದಲಾವಣೆ ಆಗಬಹುದಾ?

ನಾನು ಕಳೆದ ಏಳು ವರ್ಷಗಳಿಂದ ಪಾರ್ಟಿಗೆ ಹೋಗಿಲ್ಲ. ಸಿನಿಮಾ ನೋಡಿಲ್ಲ, ರುಚಿಕರ ಊಟ ಮಾಡಿಲ್ಲ. ನನ್ನ ದೈನಂದಿನ ಚಟುವಟಿಕೆಗಳಲ್ಲಿ ಬ್ಯಾಡ್ಮಿಂಟನ್ ಬಿಟ್ಟರೆ ಮತ್ತೊಂದಕ್ಕೆ ಸ್ಥಾನವಿಲ್ಲ. ಸ್ವಲ್ಪ ದಿನ ವಿಶ್ರಾಂತಿ ಪಡೆದು ಮತ್ತೆ ಕಣಕ್ಕಿಳಿಯುತ್ತೇನೆ. ಉತ್ತಮ ಫಾರ್ಮ್‌ನಲ್ಲಿದ್ದೇನೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕು.* ಬ್ಯಾಡ್ಮಿಂಟನ್ ಆರಂಭಿಸಿದಾಗ ನಿಮ್ಮ ತಂದೆ ಸಾಲ ಮಾಡಿದ್ದರು, ಪಿಎಫ್ ಹಣವನ್ನು ಅರ್ಧಕ್ಕೆ ತೆಗೆದಿದ್ದರು ಎಂಬ ಸುದ್ದಿ ಇದೆ. ನಿಜವೇ?

ನಿಜ, ಆದರೆ ಆ ಸಮಯದಲ್ಲಿ ನಾನು ಚಿಕ್ಕ ಹುಡುಗಿ. ಅದನ್ನೆಲ್ಲಾ ಅರ್ಥ ಮಾಡಿಕೊಂಡಿರಲಿಲ್ಲ. ಆಮೇಲೆ ಆ ವಿಷಯ ಗೊತ್ತಾಯಿತು. ಇಂತಹ ವಿಷಯಗಳು ಉತ್ತಮ ಪ್ರದರ್ಶನ ನೀಡಲು ನನಗೆ ಪ್ರೇರಣೆ ನೀಡಿದವು. ಪೋಷಕರ ಕಷ್ಟವನ್ನು ಅರ್ಥ ಮಾಡಿಕೊಂಡು ಮತ್ತಷ್ಟು ಕಠಿಣ ಪ್ರಯತ್ನ ಹಾಕಿದೆ.

ಪಾಲಕರ ಶ್ರಮ...

ನನ್ನ ಬ್ಯಾಡ್ಮಿಂಟನ್ ಜೀವನಕ್ಕಾಗಿ ಅಪ್ಪ ಹಾಗೂ ಅಮ್ಮ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಬೆಳಿಗ್ಗೆ ನಾಲ್ಕೂವರೆಗೆ ಎದ್ದು 20 ಕಿ.ಮೀ ದೂರವಿರುವ ಕ್ರೀಡಾಂಗಣಕ್ಕೆ ಹೋಗಬೇಕಿತ್ತು. ಆಗ ನನಗೆ ಎಂಟು ವರ್ಷ ವಯಸ್ಸು. ಅಪ್ಪನೊಂದಿಗೆ ಸ್ಕೂಟರ್‌ನಲ್ಲಿ ಹೋಗುವಾಗ ನಾನು ನಿದ್ದೆ ಮಾಡುತ್ತ್ದ್ದಿದ್ದೆ. ಇದರಿಂದ ದಿಗಿಲುಗೊಂಡ ಅಮ್ಮ ಕೂಡ ಬೆಳಿಗ್ಗೆ ಅಷ್ಟು ಬೇಗ ಎದ್ದು ನನ್ನನ್ನು ತೊಡೆಯ ಮೇಲೆ ಕೂರಿಸಿಕೊಂಡು ಸ್ಕೂಟರ್‌ನಲ್ಲಿ ಹೋಗಬೇಕಾಯಿತು. ಜೊತೆಗೆ ಶಾಲೆ ಬಿಟ್ಟು ಬರುವವರೆಗೆ ಅಮ್ಮ ಹೊರಗೆ  ಕಾಯುತ್ತಿದ್ದರು. ಮತ್ತೆ ಸಂಜೆ ಅಭ್ಯಾಸ...

 -ಸೈನಾ ನೆಹ್ವಾಲ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.