ಬುಧವಾರ, ಜುಲೈ 15, 2020
22 °C

ಪರಿಹಾರ ನೀಡದ ಗುಲ್ಬರ್ಗ ವಿಭಾಗದ ಬಸ್ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಹಾರ ನೀಡದ ಗುಲ್ಬರ್ಗ ವಿಭಾಗದ ಬಸ್ ಜಪ್ತಿ

ಸಿಂಧನೂರು: ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಅಪರಾಧಿಗಳು ಅಥವಾ ಆ ವ್ಯಕ್ತಿ ಹಣ ತೊಡಗಿಸಲ್ಪಟ್ಟ ವಿಮಾ ಕಂಪನಿಯವರು ಪರಿಹಾರ ಕೊಡಬೇಕಾಗಿದ್ದು ಅವರ ಕರ್ತವ್ಯ.ಆದರೆ  ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗುಲ್ಬರ್ಗ ಜಿಲ್ಲಾ ನಿಯಂತ್ರಣಾಧಿಕಾರಿಗಳು ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡದೇ ನ್ಯಾಯಾಲಯದ ನೊಟೀಸನ್ನು ಸಹ ನಿರ್ಲಕ್ಷ್ಯಿಸಿದ ಕಾರಣದಿಂದ ಮಂಗಳವಾರ ಸಂಜೆ ಸಂಸ್ಥೆಯ ಬಸ್‌ನ್ನು ಜಪ್ತಿ ಮಾಡಲಾಗಿದೆ.ಮಂಗಳವಾರ ಮಧ್ಯಾಹ್ನ ಸಿಂಧನೂರು ತಾಲ್ಲೂಕಿನ ರಾಮತ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೊಪ್ಪಳಕ್ಯಾಂಪ್‌ನಲ್ಲಿ ಕೆರೆ ಕಾಮಗಾರಿಯನ್ನು ನಿರ್ವಹಿಸಿದ ಗುತ್ತಿಗೆದಾರ ಬಿ.ಸಿ.ಮಾಲಿ ಪಾಟೀಲ್ ಅವರಿಗೆ ಗುತ್ತಿಗೆ ಹಣ ನೀಡದ ಜಿಲ್ಲಾ ಪಂಚಾಯತ್ ಎಂಜನೀಯರಿಂಗ್ ಇಲಾಖೆಯ ಲಾರಿಯನ್ನು ಜಪ್ತಿ ಮಾಡಲಾಗಿತ್ತು. ಈ ಎರಡು ಪ್ರಕರಣಗಳಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಂಡಿರುವ ನ್ಯಾಯಾಲಯ ಅಪರಾಧ ಮಾಡಿದವರಿಗೆ ಶಿಕ್ಷೆ ತಪ್ಪಿದ್ದಲ್ಲ ಎನ್ನುವ ಸಂದೇಶವನ್ನು ರವಾನಿಸಿದಂತಾಗಿದೆ.ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವ ವಿಷಯದಲ್ಲಿ ಸ್ಪಂದಿಸದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗುಲ್ಬರ್ಗ ಡಿಪೋ ಬಸ್‌ನ್ನು ಸಿಂಧನೂರು ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಮಂಗಳವಾರ ರಾತ್ರಿ 8.30 ಗಂಟೆಗೆ ಜಪ್ತಿ ಮಾಡಲಾಗಿದೆ.ಚಿಂಚೋಳಿಯಿಂದ ಗುಲ್ಬರ್ಗ, ಸಿಂಧನೂರು ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಕೆ.ಎ.32, ಎಫ್. 1651 ಬಸ್‌ನ್ನು ನ್ಯಾಯಾಲಯದ ಸಿಬ್ಬಂದಿ ಆದೇಶ ಜಾರಿಕರ್ತರಾದ ಎಂ.ಡಿ.ಜಾನಿ, ಶೇಖರಯ್ಯಸ್ವಾಮಿ ಮತ್ತಿತರರು ಸಿಂಧನೂರು ಬಸ್ ನಿಲ್ದಾಣದಲ್ಲಿ ಗುಲ್ಬರ್ಗ ವಿಭಾಗದ ಬಸ್ ಕಂಡಕ್ಟರ್ ಮತ್ತು ಡ್ರೈವರ್‌ಗೆ ನ್ಯಾಯಾಲಯದ ಆದೇಶವನ್ನು ತೋರಿಸಿ ಜಪ್ತಿ ಮಾಡಿದರು. ಪ್ರಕರಣದ ಹಿನ್ನೆಲೆ: 2006ರಲ್ಲಿ ಸಿಂಧನೂರು ತಾಲ್ಲೂಕಿನ ಹುಡಾ ಗ್ರಾಮದ ಕರಿವೀರಮೂರ್ತಿ ಎನ್ನುವ ವ್ಯಕ್ತಿಯು ತಿಂಥಿಣಿ ಮೌನೇಶನ ಜಾತ್ರೆಗೆ ಹೋಗುವ ಸಂದರ್ಭದಲ್ಲಿ ತಿಂಥಿಣಿ ಬಳಿ ಆತನ ಮೇಲೆ ಬಸ್ ಹರಿದ ಪರಿಣಾಮ ಮೃತಪಟ್ಟಿದ್ದ. 2007ರಲ್ಲಿ ಮೋಟಾರ ವಾಹನ ಅಪಘಾತಕ್ಕೆ ಸಂಬಂಧಿಸಿದ ಕಾನೂನಿನನ್ವಯ ಅರ್ಜಿ ಸಲ್ಲಿಸಲಾಗಿತ್ತು. ಸಿಂಧನೂರು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಕನುಮಯ್ಯ ಮೃತ ವ್ಯಕ್ತಿಯ ಕುಟುಂಬದವರಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗುಲ್ಬರ್ಗ ಜಿಲ್ಲಾ ನಿಯಂತ್ರಣಾಧಿಕಾರಿ 4.75ಲಕ್ಷ ಪರಿಹಾರ ಕೊಡುವಂತೆ ಆದೇಶ ನೀಡಿದ್ದರು.ಆದರೆ ಸಂಸ್ಥೆಯ ಅಧಿಕಾರಿ ನಿಗದಿತ ಸಮಯದಲ್ಲಿ ಪರಿಹಾರದ ಹಣ ಪಾವತಿಸಲಿಲ್ಲ. ಅಲ್ಲದೇ ನ್ಯಾಯಾಲಯಕ್ಕೂ ಹಾಜರಾಗಲಿಲ್ಲ. ನ್ಯಾಯಾಲಯದಿಂದ ನೊಟೀಸ್ ಕಳುಹಿಸಿದರೂ ಸ್ಪಂದಿಸಲಿಲ್ಲ. ಆ ಕಾರಣ ಮೃತ ವ್ಯಕ್ತಿಯ ತಾಯಿ ಗಿರಿಜಮ್ಮ ಆರೋಪಿಗಳ ಆಸ್ತಿ ಜಪ್ತಿಗೆ ಅರ್ಜಿ ಹಾಕುವ ಮೂಲಕ ನ್ಯಾಯಾಲಯದ ಆದೇಶ ಪಡೆದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.