ಭಾನುವಾರ, ಮೇ 29, 2022
21 °C

ಪರೀಕ್ಷೆ ಭಯ ಹೋಗಲಾಡಿಸಲು ವೆಬ್‌ ಪಾಠ

ರೇಷ್ಮಾ ಶೆಟ್ಟಿ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳ ಪರೀಕ್ಷಾ ಭಯವನ್ನು ಹೋಗಲಾಡಿಸಿ, ಸುಲಭವಾಗಿ ಪರೀಕ್ಷೆ  ಬರೆಯಲು ಸಹಾಯ ಮಾಡಬೇಕು ಎಂಬ ಉದ್ದೇಶದಿಂದ   ಹುಟ್ಟಿಕೊಂಡಿದ್ದು ‘examfear.com’ ಎಂಬ ಅಂರ್ತಜಾಲ ತಾಣ. ಈ ತಾಣದಲ್ಲಿ 9,10,11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಹೇಳಲಾಗುತ್ತದೆ. ಕ್ಲಾಸ್, ಟ್ಯೂಷನ್ ಎಂಬ ಒತ್ತಡದ ಮಧ್ಯೆ ಸುಮ್ಮನೆ ಕಂಪ್ಯೂಟರ್‌ ಪರದೆ ಮುಂದೆ ಕುಳಿತು ವಿಡಿಯೊಗಳನ್ನು ನೋಡುವ  ಮೂಲಕ ವಿದ್ಯಾರ್ಥಿಗಳು ಪಾಠ ಕಲಿಯಬಹುದು.ಈ ಅಂರ್ತಜಾಲ ತಾಣದ ರೂವಾರಿ ರೋಶಿನಿ ಮುಖರ್ಜಿ. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಇವರಿಗೆ ಮೊದಲಿನಿಂದಲೂ ಶಿಕ್ಷಕ ವೃತ್ತಿಯ ಮೇಲೆ ವಿಪರೀತ ವ್ಯಾಮೋಹ. ಶಾಲೆಗೆ ಹೋಗಿ ಕಲಿಸದೆ ಮನೆಯಲ್ಲೇ ಕುಳಿತು ಕಲಿಸಬೇಕು ಎಂಬ ಉದ್ದೇಶದಿಂದ ಈಕೆ ಆಯ್ದುಕೊಂಡಿದ್ದು  ಅಂತರ್ಜಾಲ ಶಿಕ್ಷಣ.ಏಕ ಅಧ್ಯಾಪಕಿಯಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದು ರೋಶಿನಿಯವರ ಹೆಗ್ಗಳಿಕೆ. 2011ರಲ್ಲಿ ಇವರು ಹಾಗೂ ಇವರ ಪತಿ ಎಕ್ಸಾಂ ಫಿಯರ್‌ ಜಾಲತಾಣ ಪ್ರಾರಂಭಿಸಿದರು. ಮೊದಲು ಇಬ್ಬರು ತಮ್ಮ ಬಿಡುವಿನ ವೇಳೆಯಲ್ಲಿ 9,10 ಹಾಗೂ ಪ್ರಥಮ, ದ್ವಿತೀಯ ವರ್ಷದ ಪಿಯುಸಿ ಪಠ್ಯಕ್ರಮಕ್ಕೆ ಅನುಗುಣವಾಗಿ ವಿಡಿಯೋಗಳನ್ನು ಮಾಡಿ ಅಪ್‌ಲೋಡ್‌  ಮಾಡುತ್ತಿದ್ದರು. ಪ್ರಸ್ತುತ ರೋಶಿನಿ ವೃತ್ತಿ ತೊರೆದು, ಏಕ್ಸಾಂ ಫಿಯರ್‌ ಮೂಲಕ ಮಕ್ಕಳಿಗೆ ಪಾಠ ಮಾಡುವುದರಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.ಮುಖ್ಯ ಉದ್ದೇಶ ಏನು

ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಿ, ಕಂಪ್ಯೂಟರ್‌ ಪರದೆಯ ಮುಂದೆ ಕುಳಿತು ಯೂಟ್ಯೂಬ್‌ ಸಹಾಯದಿಂದ ವಿದ್ಯಾರ್ಥಿಗಳಿಗೆ ಪಾಠ ಕಲಿಯಲು ಅನುಕೂಲವಾಗುವಂತೆ ಮಾಡುವುದು examfear.comನ ಮುಖ್ಯ ಉದ್ದೇಶ. ಕಲಿಸುವ ವಿಧಾನ

ರೋಶಿನಿ ತಮ್ಮ ಮನೆಯ ಕೊಠಡಿಯಲ್ಲೇ ಕುಳಿತು ತಾವು ಒಬ್ಬರೇ ಪಾಠ ಮಾಡುತ್ತಾರೆ. ಅದನ್ನು ಮೈಕ್ರೋಫೋನ್‌ನಲ್ಲಿ ರೆರ್ಕಾಡ್ ಮಾಡಿ ಸಾಫ್ಟ್‌ವೇರ್‌ನಲ್ಲಿ  ಎಡಿಟ್‌ ಮಾಡಿ, ಅದನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌  ಮಾಡುತ್ತಾರೆ.  ಈ ವಿಡಿಯೊಗಳಿಗೆ ಚಂದಾದಾರರಾಗಲು ಯಾವುದೇ ಶುಲ್ಕವಿರುವುದಿಲ್ಲ.  ಈಗಾಗಲೇ ಸುಮಾರು 73,000 ಮಂದಿ ಎಕ್ಸಾಂ ಫಿಯರ್‌ ಗೆ ಯೂಟ್ಯೂಬ್‌ನಲ್ಲಿ ಚಂದಾದಾರರಾಗಿದ್ದಾರೆ.ತರಗತಿಗಳಲ್ಲಿ ಪಾಠ ಮಾಡುವಂತೆ ಪ್ರತಿದಿನ  ಅನುಕ್ರಮವಾಗಿ ಪಾಠ ಮಾಡಿ, ಅದನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡುತ್ತಾರೆ. ‘ಇದರಿಂದ ವಿದ್ಯಾರ್ಥಿಗಳಿಗೆ ಶಾಲೆಯ ಪಠ್ಯಕ್ರಮದಂತೆಯೇ ಪಾಠ ಕಲಿಯಲು ನೆರವಾಗುತ್ತದೆ’ ಎನ್ನುವುದು ರೋಶಿನಿ ಅವರ ಅಭಿಪ್ರಾಯ. ಪರೀಕ್ಷಾ ದೃಷ್ಟಿಯಿಂದ ಮಾತ್ರ ಓದುವ ವಿದ್ಯಾರ್ಥಿಗಳಿಗೆ ಈ ಏಕ್ಸಾಂ ಫಿಯರ್‌ ಆಡಿಯೊಗಳಿಂದ ಹೆಚ್ಚಿನ ಅನುಕೂಲವಾಗಲಿದೆ. ಸಿಇಟಿಯಂತಹ ಪ್ರವೇಶ ಪರೀಕ್ಷೆಗಳಿಗೆ ಸಿದ್ಧರಾಗಲು ಕೂಡ ಇದು ಸಹಾಯಕ.ಒಂದು ತಿಂಗಳಿಂದ examfear.comನಲ್ಲಿ ದೇಣಿಗೆ  ಕೊಡುವವರಿಗಾಗಿಯೇ ಒಂದು ಲಿಂಕ್‌ ಅನ್ನು ಸೇರಿಸಲಾಗಿದೆ. ಆ ಲಿಂಕ್‌ ಮೂಲಕ   ಹಲವು ಶಿಕ್ಷಣ ಅಭಿಮಾನಿಗಳು ತಮ್ಮ ಕೈಲಾದ ಕೊಡುಗೆ ನೀಡುವ ಮೂಲಕ ತಮ್ಮ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ ಎಂದು ಸಂತೋಷದಿಂದ ಹೇಳುತ್ತಾರೆ ರೋಶಿನಿ.ಪ್ರಸ್ತುತ ಈ ಆಡಿಯೊಗಳು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯ ಇವೆ. ನಗರ, ಪಟ್ಟಣಗಳ ಮಕ್ಕಳೇ ಹೆಚ್ಚಾಗಿಈ ಪಾಠಗಳನ್ನು ಅನುಸರಿಸುತ್ತಿದ್ದಾರೆ.  ಮುಂದಿನ ದಿನಗಳಲ್ಲಿ   ಹಳ್ಳಿಗಳಲ್ಲಿರುವ ಮಕ್ಕಳಿಗೂ ಅನುಕೂಲವಾಗುವಂತೆ ಪ್ರಾದೇಶಿಕ ಭಾಷೆಗಳಲ್ಲೂ ಆಡಿಯೊಗಳನ್ನು ರೆರ್ಕಾರ್ಡ್‌ ಮಾಡಿ, ಉಚಿತವಾಗಿ ಕಲಿಸುವ ಮಹತ್ವಾಕಾಂಕ್ಷೆ ರೋಶಿನಿ ಅವರಿಗೆ ಇದೆ.  

*

ಕಬ್ಬಿಣದ ಕಡಲೆಗಳು

ಪರೀಕ್ಷೆ ಭಯ ಎಲ್ಲರನ್ನೂ ಕಾಡುತ್ತದೆ. ಅದರಲ್ಲೂ ವಾರ್ಷಿಕ ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಕಂಗೆಡಿಸುತ್ತವೆ.  ರಾಸಾಯನ ಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ವಿಷಯಗಳು ಅನೇಕರಿಗೆ ಕಬ್ಬಿಣದ ಕಡಲೆಗಳಂತೆ. ಈ ವಿಷಯಗಳನ್ನು ಸ್ವಲ್ಪ ಸರಳವಾಗಿ ವಿದ್ಯಾರ್ಥಿಗಳಿಗೆ  ಕಲಿಸುವ ಉದ್ದೇಶ ಏಕ್ಸಾಂ ಫಿಯರ್‌ನ ರೋಶನಿ ಅವರದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.