ಸೋಮವಾರ, ಜೂನ್ 21, 2021
23 °C

ಪರ್ಯಾಯ ಸಮಾಜ ಕಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ವ್ಯವಸ್ಥೆಯನ್ನು ಟೀಕೆ ಮಾಡಿ, ಧಿಕ್ಕರಿಸುವ ಬದಲು ಪರ್ಯಾಯ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಿದೆ ಎಂದು ಸಂದರ್ಶಕ ಪ್ರಾಧ್ಯಾಪಕ ಮ.ನ.ಜವರಯ್ಯ ಅಭಿಪ್ರಾಯಪಟ್ಟರು.ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಆಶ್ರಯದಲ್ಲಿ ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ `ಮಹಿಳೆಯರನ್ನು ಕುರಿತು ಅಕ್ಕಮಹಾದೇವಿ ಮತ್ತು ಅಂಬೇಡ್ಕರ್~ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾಜದಲ್ಲಿನ ಶೋಷಣೆ, ಅಸಮಾನತೆಯನ್ನು ಬಹುಪಾಲು ಬುದ್ಧಿಜೀವಿಗಳು ಟೀಕೆ ಮಾಡುತ್ತಾರೆ. ಇದರಿಂದ ಜನರಿಗೆ ಪರ್ಯಾಯ ವ್ಯವಸ್ಥೆ ಕಾಣುತ್ತಿಲ್ಲ. 12ನೇ ಶತಮಾನದಲ್ಲಿದ್ದ ಶರಣೆ ಅಕ್ಕಮಹಾದೇವಿ ವಚನ ಸಾಹಿತ್ಯದ ಮೂಲಕ, ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಸಮಾನತೆ ತರುವ ಮೂಲಕ ಪರ್ಯಾಯವನ್ನು ಸಮಾಜದ ಮುಂದೆ ಇಟ್ಟಿದ್ದಾರೆ. ಅದನ್ನು ಜಾರಿಗೆ ತರುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.ಅಕ್ಕನ ವಚನಗಳಲ್ಲಿ ಬಂಡಾಯ, ವಿಡಂಬನೆ ಇದೆ. ಮಹಿಳಾ ಶೋಷಣೆಯ ವಿರುದ್ಧ ಧಿಕ್ಕಾರವಿದೆ. ಆದರೂ ಅವರು ಸಮಾಜವನ್ನು ಒಪ್ಪಿಕೊಂಡು ನಡೆದರು. ಹೀಗಾಗಿ ಅವರ ವಚನಗಳಲ್ಲಿ ಅಷ್ಟೇ ಪ್ರಖರವಾದ ವೈಚಾರಿಕತೆ, ಸಾಹಿತ್ಯ ಸೌಂದರ್ಯ ಕಾಣಬಹುದು ಎಂದರು.ಮಹಿಳೆಗೆ ಸಮಾನತೆ ಸಿಗದೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂಬ ಸತ್ಯ ಅಂಬೇಡ್ಕರ್‌ಗೆ ತಿಳಿದಿತ್ತು. ಹೀಗಾಗಿ ಮನುಸ್ಮೃತಿ ಪ್ರಶ್ನೆ ಮಾಡುತ್ತಾ ಸಂವಿಧಾನದ ಆಶಯಗಳನ್ನು ಕಂಡುಕೊಂಡರು. ಹೀಗಾಗಿ ಅಕ್ಕ ಹಾಗೂ ಅಂಬೇಡ್ಕರ್ ಅವರನ್ನು ತೌಲನಿಕವಾಗಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.ಪ್ರಾಂಶುಪಾಲ ಪ್ರೊ.ಎನ್.ಪಿ.ಪದಕಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಸೋಮಶೇಖರ್, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಎ.ಶಿವಣ್ಣ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.