ಭಾನುವಾರ, ಫೆಬ್ರವರಿ 28, 2021
30 °C

ಪಾಕ್‌ಗೆ ತಾಲಿಬಾನಿಗಳು ನುಸುಳಬಹುದು:ಏರ್ ಚೀಫ್ ಮಾರ್ಷಲ್ ಎನ್.ಎ.ಕೆ ಬ್ರೌನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕ್‌ಗೆ ತಾಲಿಬಾನಿಗಳು ನುಸುಳಬಹುದು:ಏರ್ ಚೀಫ್ ಮಾರ್ಷಲ್ ಎನ್.ಎ.ಕೆ ಬ್ರೌನ್

ಬೆಂಗಳೂರು: ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಸಶಸ್ತ್ರ ಪಡೆಗಳು ಆಫ್ಘಾನಿಸ್ತಾನವನ್ನು ತೊರೆದ ನಂತರ, ತಾಲಿಬಾನಿಗಳು ಪಾಕಿಸ್ತಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನುಸುಳುವ ಸಾಧ್ಯತೆ ಇದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎನ್.ಎ.ಕೆ ಬ್ರೌನ್ ಹೇಳಿದರು.ಇಲ್ಲಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ (ಎಚ್‌ಎಎಲ್) ಶನಿವಾರ ಆಯೋಜಿಸಿದ್ದ ಏರ್ ಚೀಫ್ ಮಾರ್ಷಲ್ ಎಲ್.ಎಂ. ಖತ್ರೆ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಭಾರತ- ಪಾಕಿಸ್ತಾನದ ನಡುವಿನ ವಾಘಾ ಗಡಿಯತ್ತ ತಾಲಿಬಾನ್ ಉಗ್ರಗಾಮಿಗಳು ಬರುವ ಸಾಧ್ಯತೆ ಇದೆ.

 

ಇದು ಜಮ್ಮು ಮತ್ತು ಕಾಶ್ಮೀರಕ್ಕೂ ಅಪಾಯ ತಂದೊಡ್ಡಬಲ್ಲದು~ ಎಂದು ಹೇಳಿದರು.ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ಕಾರಣ, ಬಾಹ್ಯಾಕಾಶ ಸಮರ ಎದುರಿಸುವ ವಾಯುಪಡೆಯ ಸಾಮರ್ಥ್ಯ ಹೆಚ್ಚಿಸುವ ಕಾರ್ಯಕ್ಕೆ ಅಗತ್ಯ ಉತ್ತೇಜನ ದೊರೆತಿಲ್ಲ ಎಂದು ಬ್ರೌನ್ ಬೇಸರ ವ್ಯಕ್ತಪಡಿಸಿದರು.`ಮಿಲಿಟರಿಯ ಬಳಕೆಗಾಗಿ ಜಿಸ್ಯಾಟ್ 7ಎ ಮತ್ತು ಜಿಸ್ಯಾಟ್ 7ಸಿ ಉಪಗ್ರಹ ಉಡಾವಣೆ ಮಾಡುವ ಸಂಬಂಧ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಜೊತೆ ಮಾತುಕತೆ ನಡೆಸಲಾಗಿದೆ. ಆದರೆ ಈ ಉಪಗ್ರಹಗಳ ಉಡಾವಣೆ ಶೀಘ್ರದಲ್ಲಿ ಆಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.ನಾಗರಿಕ ಅವಶ್ಯಕತೆಗಳಿಗೆ ಉಪಗ್ರಹಗಳನ್ನು ಬಳಸುವ ವಿಷಯದಲ್ಲಿ ದೇಶ ಪ್ರಗತಿ ಸಾಧಿಸಿದೆ. ಆದರೆ ಬೇಹುಗಾರಿಕಾ ಉಪಗ್ರಹಗಳ ಅಭಿವೃದ್ಧಿಯಲ್ಲಿ ಈ ಪ್ರಮಾಣದ ಅಭಿವೃದ್ಧಿ ಸಾಧ್ಯವಾಗಿಲ್ಲ. ಚೀನಾ ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ ಎಂದರು.ಫ್ರಾನ್ಸ್ ನಿರ್ಮಿತ 126 ಮಧ್ಯಮ ಬಹುಪಯೋಗಿ ಯುದ್ಧ ವಿಮಾನ `ರಫೇಲ್~ ಖರೀದಿಗಾಗಿ 2012-13ನೇ ಸಾಲಿನಲ್ಲಿ 10 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಒಪ್ಪಂದದ ಪ್ರಕ್ರಿಯೆ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.ಇದಕ್ಕೂ ಮುನ್ನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಪಾಕಿಸ್ತಾನ ಮತ್ತು ಚೀನಾ ನಮ್ಮ ದೇಶದ ಭದ್ರತೆಗೆ ಸವಾಲಾಗಿದ್ದರೂ, ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ನಮ್ಮ ದೇಶದ ಭದ್ರತೆ ಹಾಗೂ ಆರ್ಥಿಕ ಸ್ಥಿರತೆಯನ್ನು ಬಯಸುತ್ತಿವೆ~ ಎಂದು ಅಭಿಪ್ರಾಯಪಟ್ಟರು.ದಶಕಗಳಿಂದ ಉಳಿದುಕೊಂಡಿರುವ ಗಡಿ ವಿವಾದವನ್ನು ಬಗೆಹರಿಸಿಕೊಳ್ಳಲು ಚೀನಾ ದೇಶಕ್ಕೆ ಮನಸ್ಸಿಲ್ಲ. ವಿವಾದವನ್ನು ತನ್ನದೇ ಆದ ಮಾರ್ಗದಲ್ಲಿ ಬಗೆಹರಿಸಿಕೊಳ್ಳುವ ಆಸೆ ಚೀನಾಕ್ಕಿದೆ. ಎರಡೂ ದೇಶಗಳು ಆರ್ಥಿಕವಾಗಿ ಬಲಾಢ್ಯ ಆಗುತ್ತಿರುವಂತೆ, ಗಡಿ ಸಮಸ್ಯೆ ವಿವಾದದ ಮೂಲವಾಗಿ ಪರಿಣಮಿಸಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.ತನ್ನ ನೆರೆಯಲ್ಲಿ ಅಣ್ವಸ್ತ್ರಗಳಿಂದ ಸಜ್ಜಿತವಾದ ಎರಡು ರಾಷ್ಟ್ರಗಳನ್ನು ಹೊಂದಿರುವುದು ಜಗತ್ತಿನಲ್ಲಿ ಭಾರತ ಮಾತ್ರ. ಈ ಎರಡೂ ನೆರೆ ರಾಷ್ಟ್ರಗಳ ಜೊತೆ ಭಾರತ ಯುದ್ಧ ನಡೆಸಿದೆ ಎಂದು ಹೇಳಿದರು.ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಡಾ.ಪಿ.ಎಸ್. ಕೃಷ್ಣನ್, ಎಚ್‌ಎಎಲ್ ಅಧ್ಯಕ್ಷ ಆರ್.ಕೆ. ತ್ಯಾಗಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.