ಸೋಮವಾರ, ಮೇ 10, 2021
26 °C

ಪಾಕ್‌ನಲ್ಲಿ ಬದಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆರೆ-ಹೊರೆ ಚೆನ್ನಾಗಿರಬೇಕು ಎನ್ನುವುದು ಎಲ್ಲರ ಬಯಕೆ. ಆದರೆ ನಮ್ಮ ನೆರೆರಾಷ್ಟ್ರವಾದ ಪಾಕಿಸ್ತಾನ ಸದಾ ಕಿರಿಕಿರಿಯ ದೇಶವಾಗಿಯೇ ಕಾಡುತ್ತಿದೆ. ಅಲ್ಲಿ ಏನೇ ಬದಲಾವಣೆಯಾದರೂ ಅದು ಭಾರತದ ಮೇಲೆ ಪರಿಣಾಮ ಬೀರುತ್ತದೆ.ಎಷ್ಟೋ ಅಡ್ಡಿ ಆತಂಕಗಳ ನಡುವೆ ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನವಾಜ್ ಷರೀಫ್ ಅವರ ಪಿಎಂಎಲ್-ಎನ್ ಪಕ್ಷ ಹೆಚ್ಚು ಸಂಖ್ಯೆಯಲ್ಲಿ ಗೆಲ್ಲುವುದರೊಂದಿಗೆ ಅಧಿಕಾರ ಸೂತ್ರ ಹಿಡಿದಿದೆ. ನವಾಜ್ ಷರೀಫ್ ಮತ್ತೆ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಭಾರತದೊಂದಿಗೆ ಶಾಂತಿ ಮಾತುಕತೆ ಪುನರಾರಂಭಿಸುವುದಾಗಿ ಅವರು ಚುನಾವಣೆಯ ಸಮಯದಲ್ಲೇ ಹೇಳಿದ್ದರು. ಪಾಕಿಸ್ತಾನದ ಪ್ರಧಾನಿಗಳು ಹೇಳುವುದೊಂದು, ಮಾಡುವುದೊಂದು ಎನ್ನುವುದನ್ನು ಇತಿಹಾಸದ ಪುಟಗಳೇ ಹೇಳುತ್ತವೆ. ನವಾಜ್ ಅವರ ಮುಂದಿನ ಹೆಜ್ಜೆಗಳನ್ನು ಕಾದುನೋಡಬೇಕು.ಭಾರತದೊಳಗೆ ನುಸುಳುವ ಹಾಗೂ ಯೋಜಿತ ದಾಳಿ ನಡೆಸುವ ಭಯೋತ್ಪಾದಕರನ್ನು ದಮನ ಮಾಡುವ ಕೆಲಸವನ್ನು ಅವರು ಕಟ್ಟುನಿಟ್ಟಾಗಿ ಮಾಡುವುದು ಇಂದಿನ ತುರ್ತಾಗಿದೆ. ಭಯೋತ್ಪಾದನಾ ನಿಗ್ರಹ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಅವರು ನೀಡಿರುವ ಮಾಹಿತಿ ಆಘಾತಕಾರಿಯಾಗಿದೆ. ಸಿಖ್ ಉಗ್ರವಾದಕ್ಕೆ ಮರುಜೀವ ನೀಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ.ದೇಶದಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಯುವಕರಿಗೆ ಐಎಸ್‌ಐ ತರಬೇತಿ ನೀಡುತ್ತಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ನವಾಜ್ ಷರೀಫ್ ಅವರು ಅಧಿಕಾರ ಸ್ವೀಕರಿಸಿದ ದಿನವೇ ಭಾರತ ಈ ಪ್ರತಿಕ್ರಿಯೆ ನೀಡಿರುವುದು ಹೊಸ ಪ್ರಧಾನಿಗಳಿಂದ ಭಾರತ ನಿರೀಕ್ಷಿಸುತ್ತಿರುವುದೇನು ಎನ್ನುವ ಅಂಶವನ್ನು ಹೇಳುತ್ತದೆ.ಅಲ್ಲದೆ ಅತ್ಯಾಧುನಿಕ ಆಯುಧಗಳನ್ನು ಬೃಹತ್ ಪ್ರಮಾಣದಲ್ಲಿ ಹಾಗೂ ಆರ್‌ಡಿಎಕ್ಸ್ ಸೇರಿದಂತೆ ಸ್ಫೋಟಕಗಳನ್ನು  ಪಾಕ್‌ಗಡಿ ಮೂಲಕ ಭಾರತದೊಳಗೆ ರವಾನಿಸುತ್ತಿದೆ ಎಂಬ ಅಂಶವನ್ನು ಗೃಹಸಚಿವರೇ ಬಹಿರಂಗ ಪಡಿಸಿದ್ದಾರೆ. ಭಯೋತ್ಪಾದನೆ ದಮನಕ್ಕೆ ದೃಢ ನಿರ್ಧಾರ ತೆಗೆದುಕೊಳ್ಳುವ ಗಟ್ಟಿತನವನ್ನು ಹೊಸ ಪ್ರಧಾನಿಯಿಂದ ಭಾರತ ನಿರೀಕ್ಷಿಸುತ್ತಿದೆ.ಈ ಹಿಂದೆ ಕ್ಷಿಪ್ರಕ್ರಾಂತಿಯಲ್ಲಿ ಅಧಿಕಾರ ಕಳೆದುಕೊಂಡು, ಸೆರೆವಾಸವನ್ನೂ ಅನುಭವಿಸಿದ್ದ ನವಾಜ್, ಏಳುವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ನೆಲೆಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದರು. 2007 ರಲ್ಲಿ ಮತ್ತೆ ಪಾಕಿಸ್ತಾನಕ್ಕೆ ಮರಳಿದ ಅವರು, ಮೂರನೇ ಬಾರಿ ಪ್ರಧಾನಿಯಾಗಿದ್ದಾರೆ. ಆದರೆ ಅವರ ಮುಂದಿನ ಹಾದಿಯಲ್ಲಿ ಬರೀ ಮುಳ್ಳುಗಳೇ ಇವೆ.ಪಾಕಿಸ್ತಾನದಲ್ಲಿ ಅಂತಹ ಸುಸ್ಥಿತಿ ಏನೂ ಇಲ್ಲ. ಅಲ್ಲಿನ ಆರ್ಥಿಕ ಪರಿಸ್ಥಿತಿ ಕುಸಿದುಬಿದ್ದಿದೆ. ವಿದ್ಯುತ್ ಸಮಸ್ಯೆ ತಾಂಡವವಾಡುತ್ತಿದೆ. ಕೈಗಾರಿಕೆಗಳು ಉತ್ಪಾದನೆ ಸ್ಥಗಿತಗೊಳಿಸಿವೆ.ಭ್ರಷ್ಟಾಚಾರ ಮಿತಿಮೀರಿದೆ. ನಿರುದ್ಯೋಗದಿಂದಾಗಿ ಯುವಜನರಲ್ಲಿ ಅಶಾಂತಿ ಮೂಡಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ತಾಲಿಬಾನ್ ಉಗ್ರರ ಉಪಟಳವಿದೆ. ಅಲ್ಲದೆ ಅಮೆರಿಕದೊಂದಿಗಿನ ಸಂಬಂಧದಲ್ಲಿ ನವಾಜ್ ಯಾವ ರೀತಿಯ ನಿಲುವು ತಳೆಯುತ್ತಾರೆ ಎನ್ನುವುದೂ ಮುಖ್ಯವಾಗುತ್ತದೆ.ಡ್ರೋನ್ ದಾಳಿಯನ್ನು ನಿಲ್ಲಿಸಬೇಕೆಂದು ಈಗಾಗಲೇ ನವಾಜ್, ಅಮೆರಿಕಕ್ಕೆ ಸೂಚಿಸಿರುವುದು ಅವರ ಮೇಲಿರುವ ಆಂತರಿಕ ಒತ್ತಡವನ್ನು ಹೇಳುತ್ತದೆ. ಪಾಕಿಸ್ತಾನದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಮಿಲಿಟರಿಯ ಭಯ ಕಾಡಿಯೇ ಕಾಡುತ್ತದೆ.ಸೇನೆಯಲ್ಲೂ ನವಾಜ್ ಅವರ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ಹೀಗೆ ತನ್ನ ನೆಲೆಯನ್ನೆ ಮೊದಲು ಭದ್ರಪಡಿಸಿಕೊಳ್ಳಬೇಕಾದ ಸಂಕಟದಲ್ಲಿರುವ ಹೊಸ ಪ್ರಧಾನಿಯಿಂದ ಭಾರತ ಹೆಚ್ಚು ನಿರೀಕ್ಷಿಸುವುದು ಕಷ್ಟ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.