ಮಂಗಳವಾರ, ಜೂನ್ 22, 2021
22 °C

ಪಾಲಿಕೆಯ ನೂತನ ಸಭಾಗೃಹ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: “ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಐತಿಹಾಸಿಕವಾದ ಮಹತ್ವವಿದೆ. ಈ ಪಾಲಿಕೆಯ ಕಟ್ಟಡ 100 ವರ್ಷದ ಹಳೆಯ ಕಟ್ಟಡವಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ನೂತನ ಸಭಾಗೃಹವನ್ನು ನಿರ್ಮಿಸಿದ್ದರಿಂದ ಪಾಲಿಕೆಯ ಕಟ್ಟಡಕ್ಕೆ ಮತ್ತಷ್ಟು ಕಳೆ ಬಂದಂತಾಗಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸುವರ್ಣ ಮಹೋತ್ಸವದ ಅಂಗವಾಗಿ ಇಲ್ಲಿನ ಪಾಲಿಕೆಯ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಲಾದ ಸಭಾಗೃಹವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ಮಹಾನಗರ ಪಾಲಿಕೆಯು ಐತಿಹಾಸಿಕ ಮಹತ್ವವನ್ನು ಒಳಗೊಂಡಿರುವುದರಿಂದ ಇಲ್ಲಿನ ಜನರಿಗೆ ಮೂಲಸೌಕರ್ಯಗಳನ್ನು ಒದಗುಸುವ ನಿಟ್ಟಿನಲ್ಲಿ 100 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದೆ.

 

ಮುಂಬರುವ ದಿನಗಳಲ್ಲಿ ಈ ಅನುದಾನವನ್ನು 200 ಕೋಟಿ ರೂಪಾಯಿಗಳಿಗೆ ಹೆಚ್ಚಿಸುವಂತೆ ಒತ್ತಾಯ ಮಾಡಲಾಗಿದೆ. ಕಳೆದ ದಿನಗಳಲ್ಲಿ ಮಹಾನಗರದಲ್ಲಿ 10 ದಿನಗಳಿಗೊಮ್ಮೆ ಕುಡಿಯುವ ನೀರಿನ ಸೌಕರ್ಯವಿತ್ತು ಆದರೆ ಈಗ 3 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುವಂತೆ ವ್ಯವಸ್ಥೆಯನ್ನು ಮಹಾ ನಗರದ ಜನತೆಗೆ ಕಲ್ಪಿಸಲಾಗಿದೆ.

 

ಮುಂಬರುವ ದಿನಗಳಲ್ಲಿ 24 ತಾಸು ಕುಡಿಯುವ ನೀರು ಪೂರೈಕೆ ಮಾಡುವಂತ ಯೋಜನೆಯನ್ನು ಕೈಗೆತ್ತಿಕೊಳ್ಳ ಲಾಗಿದೆ. ಮಾರ್ಚ್ 1 ರಿಂದ 31 ರ ಒಳಗೆ ನೀರಿನ ಕರ ಬಾಕಿಯನ್ನು ತುಂಬಿದರೆ ಅದರ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಅವರು ಹೇಳಿದರು.ಸಂಸದ ಪ್ರಹ್ಲಾದ ಜೋಶಿ ಸುವರ್ಣ ಮಹೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿ, ನಗರಗಳ ಅಭಿವೃದ್ಧಿಯಲ್ಲಿ ಪಕ್ಷಭೇದ ಮರೆತು ಕೆಲಸ ಮಾಡಬೇಕಿದೆ. ಮುಂದಿನ ದಿನ ಗಳಲ್ಲಿ ಮಹಾನಗರಗಳಿಗೆ ಜನರ ವಲಸೆ ಜಾಸ್ತಿಯಾಗುವುದರಿಂದ ಕರ್ನಾಟಕದಲ್ಲಿಯೇ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯನ್ನು ನಂಬರ್ ಒನ್ ಪಾಲಿಕೆಯನ್ನಾಗಿ ಮಾಡಬೇಕು ಎಂದರು.ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, 1962ರಲ್ಲಿ ಮಹಾನಗರ ಪಾಲಿಕೆಯು ಅಸ್ತಿತ್ವಕ್ಕೆ ಬಂತು. ಅಂದಿನಿಂದ ಇಂದಿನವರೆಗೆ ಸಾರ್ವಜನಿಕರಿಗೆ ಸಂಬಂಧಪಟ್ಟ ಎಲ್ಲ ಕೆಲಸಗಳನ್ನು ನಿರ್ವಹಿಸಿಕೊಂಡು 50 ವರ್ಷಗಳನ್ನು ಪೂರೈಸಿದೆ. ಇದರ ಜೊತೆಗೆ ಸಾರ್ವಜನಿಕರು ಕೈ ಜೋಡಿಸಬೇಕಿದೆ~ ಎಂದ ಅವರು, `ಪಾಲಿಕೆಯ ಮುಂಬರುವ ನೂತನ ಮೇಯರ್‌ಗಳು ಪಾಲಿಕೆಯ ಅಧಿವೇಶನದಲ್ಲಿ ಜನಪ್ರತಿನಿಧಿಗಳನ್ನು ಕರೆದು ಸಾರ್ವಜನಿಕರಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರಬೇಕು~ ಎಂದು ಸಲಹೆ ನೀಡಿದರು.ಶಾಸಕ ಚಂದ್ರಕಾಂತ ಬೆಲ್ಲದ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು, ಪಾಲಿಕೆ ವಿರೋಧಪಕ್ಷದ ನಾಯಕ ದೀಪಕ ಚಿಂಚೋರೆ ಮಾತನಾಡಿದರು.ಮೇಯರ್ ಪೂರ್ಣಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಶಾಸಕಿ ಸೀಮಾ ಮಸೂತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಶಾಸಕ ವೀರಭದ್ರಪ್ಪ ಹಾಲಹರವಿ, ಹುಬ್ಬಳ್ಳಿ-ಧಾರವಾಡ ನಗರಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದತ್ತಾ ಡೋರ್ಲೆ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ವಿಜಯಲಕ್ಷ್ಮೀ ಲೂತಿಮಠ, ವೀರನಗೌಡ ಪಾಟೀಲ, ಪ್ರಕಾಶ ಗೋಡಬೋಲೆ, ವಿಜಯಾನಂದ ಶೆಟ್ಟಿ, ಶಿವು ಹಿರೇಮಠ, ಸರೋಜ ಪಾಟೀಲ ಮತ್ತಿತರರು ಸಮಾರಂಭದಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.