ಗುರುವಾರ , ಮೇ 19, 2022
21 °C

ಪಾಲಿಕೆ ನಾಮನಿರ್ದೇಶನ ಸದಸ್ಯರ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಮ ನಿರ್ದೇಶನ ಮಾಡಲಾಗಿದ್ದ ಎಲ್ಲ 20 ಸದಸ್ಯರನ್ನು ವಜಾಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಬಿಬಿಎಂಪಿಯಲ್ಲಿ ಒಟ್ಟು 21 ಜನ ನಾಮನಿರ್ದೇಶನಗೊಂಡ ಸದಸ್ಯರು ಇದ್ದರು. ಅವರಲ್ಲಿ ಆರ್. ಶರತ್‌ಚಂದ್ರ ಜನವರಿ 28ರಂದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಸರ್ಕಾರ ಅದನ್ನು ಅಂಗೀಕರಿಸಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೇ 14ರಂದು ನಿಗಮ, ಮಂಡಳಿ ಸೇರಿದಂತೆ ಎಲ್ಲ ಕಡೆಗಳಲ್ಲಿ ಸರ್ಕಾರದಿಂದ ನಾಮನಿರ್ದೇಶನ ಮಾಡಲಾದ ಸದಸ್ಯರಿಂದ ರಾಜೀನಾಮೆ ಪಡೆಯುವಂತೆ ಸುತ್ತೋಲೆ ಹೊರಡಿಸಿತ್ತು.ಬಿಬಿಎಂಪಿ ಆಯುಕ್ತರು ಸರ್ಕಾರದ ಈ ಸುತ್ತೋಲೆಯನ್ನು ನಾಮನಿರ್ದೇಶನಗೊಂಡ ಸದಸ್ಯರ ಗಮನಕ್ಕೆ ತಂದರೂ ಇದುವರೆಗೆ ಅವರು ರಾಜೀನಾಮೆ ನೀಡಿರಲಿಲ್ಲ. ಹೀಗಾಗಿ ಅವರ ಸದಸ್ಯತ್ವವನ್ನು ತಕ್ಷಣವೇ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎನ್.ಗೋಪಾಲಯ್ಯ ಅಧಿಸೂಚನೆಯಲ್ಲಿ ವಿವರಿಸಿದ್ದಾರೆ.`ಸರ್ಕಾರದ ಈ ತೀರ್ಮಾನದಿಂದ ಅಚ್ಚರಿಯಾಗಿದೆ. ಮುಂದೆ ನಾವು ಇಡಬೇಕಾದ ಹೆಜ್ಜೆ ಕುರಿತು ಚರ್ಚಿಸಲು ಬುಧವಾರ ಬೆಳಿಗ್ಗೆ ಸಭೆ ಸೇರಲಿದ್ದೇವೆ' ಎಂದು ವಜಾಗೊಂಡ ನಾಮನಿರ್ದೇಶಿತ ಸದಸ್ಯ ಎನ್.ಜಿ. ಕೃಷ್ಣಾರೆಡ್ಡಿ ಹೇಳಿದರು.`ನಾಮನಿರ್ದೇಶಿತ ಸದಸ್ಯರ ರಾಜೀನಾಮೆ ಕೇಳಿದ್ದೇವೆಯೇ ಹೊರತು ವಜಾ ಮಾಡಿಲ್ಲ ಎಂದು ಸರ್ಕಾರವು ಹೈಕೋರ್ಟ್‌ಗೆ ತಿಳಿಸಿದ ಬೆನ್ನಹಿಂದೆಯೇ ನಮ್ಮನ್ನು ವಜಾ ಮಾಡಲಾಗಿದೆ. ಈ ಮೂಲಕ ನ್ಯಾಯಾಲಯವನ್ನೂ ತಪ್ಪು ದಾರಿಗೆ ಎಳೆದಿದೆ' ಎಂದು ವಜಾಗೊಂಡ ಮತ್ತೊಬ್ಬ ಸದಸ್ಯ ಬಿ.ಎನ್. ರಾಘವೇಂದ್ರ ತಿಳಿಸಿದರು. ವಜಾಗೊಂಡ ಸದಸ್ಯರು ಸರ್ಕಾರ ಕೈಗೊಂಡ ಕ್ರಮದ ವಿರುದ್ಧ ಬುಧವಾರ ಮತ್ತೆ ಹೈಕೋರ್ಟ್ ಮೊರೆ ಹೋಗಲಿದ್ದಾರೆ ಎಂದು ಹೇಳಲಾಗಿದೆ.ವಜಾಗೊಂಡ ಸದಸ್ಯರು

ಸರ್ಕಾರದ ಆದೇಶದಿಂದ ದ್ವಾರಕನಾಥ್ (ದಾಲು), ಎನ್.ಜಿ. ಕೃಷ್ಣಾರೆಡ್ಡಿ, ಜಿ.ವಿ. ಚಿನ್ನಗಿರಿಯಪ್ಪ, ಎಸ್.ಸಿ.ವಿಶ್ವನಾಥಗೌಡ, ಬಿ.ಎನ್. ರಾಘವೇಂದ್ರ, ಜಿ.ಗೋಪಾಲಕೃಷ್ಣ, ಬಿ.ವಿ.ರಾಮಕೃಷ್ಣ, ಎಲ್.ಶ್ರೀನಿವಾಸ್, ಎಸ್. ಲಕ್ಷ್ಮಿಸಾಗರ, ಕೆ.ಸಿ. ವೆಂಕಟೇಶ್, ಡಿ.ರಮೇಶ್, ಎಂ.ಕೆಂಪೇಗೌಡ, ಎನ್.ಎ. ನಾರಾಯಣಸ್ವಾಮಿ, ಆರ್. ಮುನಿರಾಜು, ಎನ್. ಶ್ರೀನಿವಾಸ್, ಗೌರಮ್ಮ, ಕೆ.ಪ್ರಕಾಶ್, ಲತಾ ಮಲ್ಯ ಮತ್ತು ಶ್ರೀನಿವಾಸ್ ಎಂ. ನಾರಾಯಣಸ್ವಾಮಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.