ಗುರುವಾರ , ಏಪ್ರಿಲ್ 22, 2021
22 °C

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರ ಆಯ್ಕೆ ಸಭೆ ಮುಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ತೆರವಾಗಿದ್ದ ನಿರ್ದೇಶಕರ ಒಂದು ಸ್ಥಾನದ ಆಯ್ಕೆ ಪ್ರಕ್ರಿಯೆ ಸಂಬಂಧ ಅಧ್ಯಕ್ಷ ಮತ್ತು ಸದಸ್ಯರ ನಡುವೆ ಒಮ್ಮತ ಮೂಡದ ಕಾರಣ ಸಭೆಯನ್ನು ಮುಂದೂಡಿದ ಘಟನೆ ಬುಧವಾರ ನಡೆದಿದೆ.ಪಿಎಲ್‌ಡಿ ಬ್ಯಾಂಕ ಕಚೇರಿಯಲ್ಲಿ ಬುಧವಾರ ನಡೆದ ಸದಸ್ಯರ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದರ ಹಿನ್ನೆಲೆಯಲ್ಲಿ ವ್ಯವಸ್ಥಾಪಕರು ಜಿಲ್ಲಾ ಉಪಪ್ರಬಂಧಕರ ಸಮ್ಮುಖದಲ್ಲಿಯೇ ಪ್ರಕ್ರಿಯೆ ಪೂರ್ಣಗೊಳಿಸಲು ಮುಂದಾಗಿದ್ದರು.ಕಳೆದ ಒಂದು ವರ್ಷದ ಹಿಂದೆ ಅಧ್ಯಕ್ಷರಾಗಿದ್ದ ಸಿದ್ದಣ್ಣಾ ಚೌಲ ಅವರು ಅಪಘಾತದಲ್ಲಿ ಮೃತಪಟ್ಟಿದ್ದರಿಂದ ತೆರವಾಗಿದ್ದ ಆ  ಒಂದು ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಮಾಡಲು ಬುಧವಾರ ಸದಸ್ಯರ ಸಭೆ ಕರೆಯಲಾಗಿತ್ತು.

ಹತ್ತು ಜನ ನಿರ್ದೇಶಕರನ್ನು ಹೊಂದಿದ್ದ ಪಿಎಲ್‌ಡಿ ಬ್ಯಾಂಕಿನಲ್ಲಿ ಬುಧವಾರದ ಸಭೆಗೆ 9 ಜನ ಹಾಜರಾಗಿದ್ದರು.ಅವರಲ್ಲಿ 6 ಜನರು ಬಸವರಾಜ ಪಾಟೀಲ್ ಗೋಳಾ(ಬಿ) ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲು ಸಹಮತ ಹೊಂದಿದ್ದರು. ಆದರೆ, ಆಗ ಹಾಲಿ ಅಧ್ಯಕ್ಷ ಹಣಮಂತ ಕಾಬಡೆ ಮತ್ತು ಇತರ ಇಬ್ಬರು ಸದಸ್ಯರು ಸಭೆಯ ಪೂರ್ವಭಾವಿಯಾಗಿ ನಿರ್ದೇಶಕರ ಆಯ್ಕೆ ಕುರಿತು ನೋಟಿಸ್ ನೀಡಿಲ್ಲ. ಅದಕ್ಕಾಗಿ  ಸಭೆಯನ್ನು ಮುಂದೂಡುವಂತೆ ಸಲಹೆ ಮಾಡಿದರು.ಇದಕ್ಕೆ ಇತರ ಸದಸ್ಯರಿಂದ ಪ್ರತಿರೋಧ ವ್ಯಕ್ತವಾದಾಗ ನಿರ್ದೇಶಕರಾದ ಶಿವಶರಣಪ್ಪ ಬಿರಾದಾರ, ಬಸವರಾಜ ಪಾಟೀಲ್ ಸಭೆ ಬಹಿಷ್ಕರಿಸಿ ಹೊರ ನಡೆದರು. ಅಧ್ಯಕ್ಷರು ಹಾಗೂ ಎದುರು ಬಣದ ನಿರ್ದೇಶಕರ ನಡುವೆ ಒಮ್ಮತ ಮೂಡದ ಕಾರಣ ವ್ಯವಸ್ಥಾಪಕ ನಾಗಣ್ಣಾ ಎಲ್ದೆ ನೂತನ ನಿರ್ದೇಶಕರ ಆಯ್ಕೆಯನ್ನು ಜಿಲ್ಲಾ ಉಪಪ್ರಬಂಧಕರ ಜೊತೆ ಚರ್ಚಿಸಿ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಕಚೇರಿಯಿಂದ ಹೊರ ನಡೆದರು. ನಿರ್ದೇಶಕರಾದ ಮಹಾದೇವ ಪಾಟೀಲ್, ದೇವಿದಾಸ ಆಡೆ, ಮಲ್ಲಮ್ಮ ಪಾಟೀಲ್, ಬಸಯ್ಯ ಸ್ವಾಮಿ ಇತರರಿದ್ದರು.ಆಗ ಸದಸ್ಯರ ನಡುವೆ ಮತ್ತು ಹೊರ ನಿಂತ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ತಕ್ಷಣ ಪಿಎಸ್‌ಐ ಹಾಲೇಶ ನೇತೃತ್ವದಲ್ಲಿ ಬಂದ ಪೊಲೀಸರು ವಾತಾವರಣ ತಿಳಿಗೊಳಿಸಿದರು.ಜೆಡಿಎಸ ಮುಖಂಡರಾದ ಅಶೋಕ ಗುತ್ತೇದಾರ, ವಿಜಯಕುಮಾರ ಕೋಥಳಿಕರ, ಲಕ್ಷ್ಮಣ ಬೀಳಗಿ ಮತ್ತು ಕಾಂಗ್ರೆಸ್‌ನ ಮುಖಂಡರಾದ ಪಿಎಲ್‌ಡಿ ಬ್ಯಾಂಕ ಮಾಜಿ ಅಧ್ಯಕ್ಷ ಈರಣ್ಣಾ ಹತ್ತರಕಿ, ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರರಾವ ದೇಶಮುಖ, ಮೋಹನಗೌಡ ಪಾಟೀಲ್, ಗುರುನಾಥ ಸನ್ಮುಖ, ದತ್ತಾ ಹೊನ್ನಹಳ್ಳಿ, ಸಿದ್ದುಗೌಡ ಪಾಟೀಲ್ ಗುಳ್ಳೋಳ್ಳಿ, ಪಂಡಿತ ಶೇರಿಕಾರ ಇತರ ಮುಖಂಡರು ಹೊರಗೆ ಇದ್ದುದು ಕಂಡುಬಂದಿತು.ಬ್ಯಾಂಕ ವ್ಯವಸ್ಥಾಕರನ್ನು  ಹಿಂಬಾಲಿಸಿದ 6 ಜನ ನಿದೇರ್ಶಕರು ಕೂಡಾ ಗುಲ್ಬರ್ಗಕ್ಕೆ ಧಾವಿಸಿ ಜಿಲ್ಲಾ ಉಪಪ್ರಬಂಧಕರನ್ನು ಭೇಟಿ ಮಾಡಿ, ಬಸವರಾಜ ಪಾಟೀಲ್ ಗೋಳಾ(ಬಿ) ಅವರನ್ನು ನಿರ್ದೇಶಕರನ್ನಾಗಿ ಪ್ರಕಟಿಸಬೇಕು ಮತ್ತು ಕಾನೂನು ಉಲ್ಲಂಘನೆ ಮಾಡಿರುವ ವ್ಯವಸ್ಥಾಪಕರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.