ಭಾನುವಾರ, ಮೇ 16, 2021
22 °C

ಪುಸ್ತಕ ಓದುವುದರಿಂದ ಸಿಗುವ ಸಂತಸವೇ ವಿಭಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಅತ್ಯಾಧುನಿಕ ತಂತ್ರಜ್ಞಾನ ಬಂದರೂ ಪುಸ್ತಕ ಓದುವುದರಿಂದ ಸಿಗುವ ಸಂತಸ ಸಿಗುವುದಿಲ್ಲ. ನನ್ನಲ್ಲಿರುವ ತಿಳಿವಳಿಕೆಯೂ ಪುಸ್ತಕ ಓದುವುದರಿಂದಲೇ ಬಂದದ್ದು~ ಎಂದು ಚಿತ್ರನಟ ಪುನೀತ್ ರಾಜ್‌ಕುಮಾರ್ ನುಡಿದರು.ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಇಂಡ್ಯಾ ಕಾಮಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಏರ್ಪಡಿಸಿದ್ದ `ಪುಸ್ತಕ ಪ್ರಪಂಚ~ದ ಸಮಾರೋಪದಲ್ಲಿ ಅವರು ಮಾತನಾಡಿದರು.`ಮೊಬೈಲ್ ಫೋನ್, ಐಪಾಡ್, ಕಂಪ್ಯೂಟರ್‌ಗಳು ಬಳಕೆಯಲ್ಲಿವೆ. ಐಪಾಡ್‌ಗಳಲ್ಲೂ ಪುಸ್ತಕಗಳನ್ನು ಓದುವ ಅವಕಾಶ ಕಲ್ಪಿಸಿರುವುದು, ಪುಸ್ತಕ ಸಂಸ್ಕೃತಿಯ ಮಹತ್ವವನ್ನು ತೋರಿಸುತ್ತದೆ~ ಎಂದರು.`ನನ್ನ ತಂದೆ ಡಾ.ರಾಜ್‌ಕುಮಾರ್ ಅವರ ಹೆಸರಿನ ಟ್ರಸ್ಟ್ ಮೂಲಕ ಇಂಥ ಕಾರ್ಯಕ್ರಮಗಳನ್ನು ಸಂಘಟಿಸಲು ವಿಶ್ವವಿದ್ಯಾಲಯ ನೆರವು ಕೋರಿದರೆ ನೀಡಲು ಸಿದ್ಧ~ ಎಂದು ಭರವಸೆ ನೀಡಿದರು.ವಿ.ವಿ. ಕುಲಪತಿ ಡಾ.ಎನ್.ಪ್ರಭುದೇವ್ ಮಾತನಾಡಿ, `ಈ ಬಾರಿಯ ಪುಸ್ತಕ ಮೇಳದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಸಾಂದರ್ಭಿಕ ಪುಸ್ತಕಗಳು ಹೆಚ್ಚು ಸಂಖ್ಯೆಯಲ್ಲಿ ಇರಲಿಲ್ಲ. ಈ ಲೋಪವನ್ನು ಮುಂಬರುವ ಪುಸ್ತಕ ಮೇಳದಲ್ಲಿ ಸರಿಪಡಿಸಿಕೊಳ್ಳಲಾಗುವುದು~ ಎಂದರು.ರಾಜ್ಯ ಸರ್ಕಾರ ಪುಸ್ತಕ ಸಂಸ್ಕೃತಿಯನ್ನು ಜನರಲ್ಲಿ ಬೆಳೆಸುವ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಸ್ತಾವನೆಯೊಂದನ್ನು ತಯಾರಿಸಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ. `ಓದು ಕರ್ನಾಟಕ~ ಎಂಬ ಶೀರ್ಷಿಕೆಯ ಈ ಪ್ರಸ್ತಾವನೆಯಂತೆ ಪ್ರತಿ ತಾಲ್ಲೂಕು ಕೇಂದ್ರಗಳಿಗೆ ಒಂದೊಂದು ಸಂಚಾರಿ ಗ್ರಂಥಾಲಯಗಳನ್ನು ಸ್ಥಾಪಿಸುವುದು ಮತ್ತು ಎಲ್ಲ ತಾಲ್ಲೂಕುಗಳಿಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಂಥಾಲಯ ಸ್ಥಾಪಿಸಬೇಕೆನ್ನುವ ಸಲಹೆಗಳು ಇದರಲ್ಲಿ ಸೇರಿವೆ ಎಂದರು.ಕುಲಸಚಿವ ಡಾ.ಆರ್.ಎಂ.ರಂಗನಾಥ್ ಸ್ವಾಗತಿಸಿದರು. ಸಿಂಡಿಕೇಟ್ ಸದಸ್ಯರಾದ ಡಾ.ಕೆ.ಬಿ.ವೇದಮೂರ್ತಿ, ಗಿರೀಶ್, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಆರ್.ಸುಬ್ರಹ್ಮಣ್ಯ, ಗ್ರಂಥಪಾಲಕ ಡಾ.ಪಿ.ವಿ.ಕೊಣ್ಣೂರ, ಇಂಡ್ಯಾ ಕಾಮಿಕ್ಸ್‌ನ ಮುಖ್ಯಸ್ಥ ಬಿ.ಎಸ್.ರಘುರಾಮ್ ಉಪಸ್ಥಿತರಿದ್ದರು.ಅತ್ಯುತ್ತಮ ಮಳಿಗೆಗಳಿಗೆ ಪ್ರಶಸ್ತಿ

ಪುಸ್ತಕ ಪ್ರದರ್ಶನ ಮೇಳದಲ್ಲಿ ಭಾಗವಹಿಸಿದ್ದ 250 ಪ್ರಕಾಶನ ಸಂಸ್ಥೆಗಳಲ್ಲಿ ಏಳು ಸಂಸ್ಥೆಗಳಿಗೆ ನಾಲ್ಕುವಿಭಾಗಗಳಲ್ಲಿ ಅತ್ಯುತ್ತಮ ಮಳಿಗೆಗಳೆಂದು ಆಯ್ಕೆ ಮಾಡಿ ಪ್ರಶಸ್ತಿಗಳನ್ನು ನೀಡಲಾಯಿತು.ಕನ್ನಡ ವಿಭಾಗ: ಸಾಹಿತ್ಯ ಭಂಡಾರ, ಹೇಮಂತ ಸಾಹಿತ್ಯ.ಇಂಗ್ಲಿಷ್ ವಿಭಾಗ: ಹ್ಯಾಚೆಟ್ ಇಂಡಿಯಾ, ಆಕ್ಸ್‌ಫರ್ಡ್ ಬುಕ್ ಸ್ಟೋರ್.ಇತರೆ ವಿಭಾಗ: ಎಡಬ್ಲ್ಯೂಯು ಸೇಬರ್ ಕ್ಯಾಸಲ್ ಮತ್ತು ಪೇಜ್ 3.ವಿಶೇಷ ಪ್ರಶಸ್ತಿ: ಪಾಂಡವಪುರದ ಅಂಕೇಗೌಡ ಜ್ಞಾನ ಪ್ರತಿಷ್ಠಾನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.