ಮಂಗಳವಾರ, ಏಪ್ರಿಲ್ 13, 2021
32 °C

ಪೊನ್ನಂಗಾಲ ತಮ್ಮೆ ಅದ್ದೂರಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಸಮೀಪದ ಕಕ್ಕಬ್ಬೆಯ ಪನ್ನಂಗಾಲ ಗ್ರಾಮದಲ್ಲಿ ಪೊನ್ನಂಗಾಲ ತಮ್ಮೆ ದೇವಿಯ ವಾರ್ಷಿಕ ಉತ್ಸವ ಮಂಗಳವಾರ ಅದ್ದೂರಿಯಿಂದ ನಡೆಯಿತು.ಎರಡು ವರ್ಷಗಳಿಗೊಮ್ಮೆ ಪೊನ್ನಂಗಾಲ ತಮ್ಮೆಯ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಕೊಡಗಿನ ಕುಲದೈವ ಇಗ್ಗುತ್ತಪ್ಪ ದೇವರ ಸಹೋದರಿ ಪೊನ್ನಂಗಾಲ ತಮ್ಮೆ ದೇವಿಯ ಉತ್ಸವದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡರು.

 

ಕೊಡೆ ಹಬ್ಬ ಎಂದು ಕರೆಯಲ್ಪಡುವ ಈ ಉತ್ಸವದಲ್ಲಿ ದೇವರ ಕೊಡೆಯನ್ನು ಸಂಪ್ರದಾಯಬದ್ಧವಾಗಿ ತಂದು ವಿಶಾಲ ಮೈದಾನದಲ್ಲಿ ಊರಲಾಯಿತು. ಪಾಡಿಯ ಕಣಿಯ ಜನಾಂಗದವರು ತಯಾರಿಸಿದ ದೇವರ ಕೊಡೆಯನ್ನು ದೇವಾಲಯದ ಸುತ್ತಲೂ ಸಾಂಪ್ರದಾಯಿಕ ರೀತಿಯಲ್ಲಿ ತಂದು ಬಳಿಕ ವಿಶಾಲ ಮೈದಾನದಲ್ಲಿ ಹಬ್ಬವನ್ನು ಆಚರಿಸಲಾಯಿತು.ದೇವರ ವಿಗ್ರಹವನ್ನು ಹಬ್ಬದ ದಿನ ಶುದ್ಧ ಕಳಶ ಮಾಡಿ ಹೊರಗೆ ತಂದು ದೇವಾಲಯಕ್ಕೆ ಪ್ರದಕ್ಷಿಣೆ ಬರಲಾಯಿತು.

ದೇವರ ವಿಗ್ರಹ ಹೊತ್ತವನು ಕಣ್ಣು ಮುಚ್ಚಿಕೊಂಡು ಪ್ರದಕ್ಷಿಣೆ ಬರುವುದು ಇಲ್ಲಿನ ವೈಶಿಷ್ಟ್ಯ. ಇದರೊಂದಿಗೆ ಕೆಂಪು ಬಟ್ಟೆ ಧರಿಸಿ ಕೊರಳಿಗೆ ಹೂ ಮಾಲೆ, ಕೈಯಲ್ಲಿ ತ್ರಿಶೂಲ, ಕತ್ತಿ ಹಿಡಿದು ಸೊಂಟದಲ್ಲಿ ಡಾಬು ಧರಿಸಿ ಆವೇಶ ಭರಿತರಾಗಿ ಹೂಂಕರಿಸುತ್ತ ಆಯುಧಗಳನ್ನು ಜಳಪಿಸುತ್ತಾ ಪ್ರದಕ್ಷಿಣೆ ಬರುವುದು ಹಲವರನ್ನು ಆಕರ್ಷಿಸಿತು. ಆವೇಶ ಬಂದವರು ಕತ್ತಿಯಿಂದ ತಲೆಗೆ ಕಡಿದುಕೊಳ್ಳುವ ದೃಶ್ಯ ಭಕ್ತರಲ್ಲಿ ಭಯ ಹುಟ್ಟಿಸಿತು. ವಾದ್ಯಗೋಷ್ಠಿ ಸಹಿತ ದೇವಿಯ ಮೆರವಣಿಗೆ, ದೇವಿಯ ಜಳಕ, ಚಾಮುಂಡಿ ಬಲಿ, ಕುರುಂದ ಕಳಿ ಸೇರಿದಂತೆ ವಿವಿಧ ಆಚರಣೆಗಳು ಇಂದು ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.