ಬುಧವಾರ, ಮೇ 12, 2021
17 °C
ದಕ್ಷಿಣ ವಿಭಾಗದ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜಾರಿ

ಪೊಲೀಸರಿಂದ ಮತ್ತೆ `ಸೈಕಲ್ ಬೀಟ್' ಆರಂಭ

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಪೊಲೀಸರು `ಸೈಕಲ್ ಬೀಟ್' (ಸೈಕಲ್‌ನಲ್ಲಿ ಗಸ್ತು ತಿರುಗುವುದು) ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದಾರೆ.ಈಗಾಗಲೇ ದಕ್ಷಿಣ ವಿಭಾಗದ ಠಾಣೆಗಳ ವ್ಯಾಪ್ತಿಯಲ್ಲಿ ಈ ಗಸ್ತು ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಎಲ್ಲಾ ಠಾಣೆಗಳ ವ್ಯಾಪ್ತಿಗೂ ವಿಸ್ತರಿಸಲು ಹಿರಿಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.ದಕ್ಷಿಣ ವಿಭಾಗದ ಠಾಣೆಗಳ ಕಾನ್‌ಸ್ಟೆಬಲ್‌ಗಳು ಈ ಹಿಂದೆ ಠಾಣೆ ವ್ಯಾಪ್ತಿಯ ಮೂರ್ನಾಲ್ಕು  ಕಿ.ಮೀವರೆಗಿನ ಪ್ರದೇಶದಲ್ಲಿ ನಡೆದುಕೊಂಡು ಅಥವಾ ಬೈಕ್‌ಗಳಲ್ಲಿ ಗಸ್ತು ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಸೈಕಲ್ ಮೂಲಕ ಗಸ್ತು ಮಾಡಲಾರಂಭಿಸಿದ್ದಾರೆ. ಹಿರಿಯ ಅಧಿಕಾರಿಗಳು ನಿಗದಿಪಡಿಸಿದ ಪ್ರದೇಶದಲ್ಲಿ ರಾತ್ರಿ ಸುಮಾರು ಒಂಬತ್ತು ಗಂಟೆಯಿಂದ ಬೆಳಗಿನ ಜಾವ ಐದು ಗಂಟೆವರೆಗೆ ಕಾನ್‌ಸ್ಟೆಬಲ್‌ಗಳು ಸೈಕಲ್‌ನಲ್ಲಿ ಸಂಚರಿಸಿ, ಗಸ್ತು ಕಾರ್ಯ ನಿರ್ವಹಿಸುತ್ತಿದ್ದಾರೆ.`ವಿಭಾಗದ ವಿವಿಧ ಬಡಾವಣೆಗಳಲ್ಲಿ ಇತ್ತೀಚೆಗೆ ರಾತ್ರಿ ವೇಳೆ ಹೆಚ್ಚಾಗಿ ಕಳವು ಪ್ರಕರಣಗಳು ನಡೆಯುತ್ತಿದ್ದವು. ಆದ ಕಾರಣ ಕಳವು ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಗಸ್ತು ವ್ಯವಸ್ಥೆಯಲ್ಲಿ ಬದಲಾವಣೆ ತಂದು, ಸೈಕಲ್‌ನಲ್ಲಿ ಗಸ್ತು ನಡೆಸುವಂತೆ ಸಿಬ್ಬಂದಿಗೆ ಸೂಚಿಸಲಾಯಿತು. ಅದೇ ರೀತಿ ಸಿಬ್ಬಂದಿ 15 ದಿನಗಳಿಂದ ಸೈಕಲ್‌ಗಳಲ್ಲಿ ಗಸ್ತು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಭಾಗದ ವ್ಯಾಪ್ತಿಯ ಶೇ 60ರಷ್ಟು ಪ್ರದೇಶದಲ್ಲಿ ಸಿಬ್ಬಂದಿ ಸೈಕಲ್‌ಗಳಲ್ಲೇ ಗಸ್ತು ಮಾಡುತ್ತಿದ್ದಾರೆ' ಎಂದು ದಕ್ಷಿಣ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ `ಪ್ರಜಾವಾಣಿ'ಗೆ ತಿಳಿಸಿದರು.`ಸಿಬ್ಬಂದಿ ಬೈಕ್‌ನಲ್ಲಿ ಸಂಚರಿಸುವ ಸಂದರ್ಭದಲ್ಲಿ ಅವರ ಗಮನ ವಾಹನ ಚಾಲನೆ ಮಾಡುವುದರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಇದರಿಂದಾಗಿ ಅವರು ಅಪರಾಧ ಚಟುವಟಿಕೆಗಳ ಮೇಲೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಕಿರಿದಾದ ರಸ್ತೆಗಳಲ್ಲಿ ಬೈಕ್‌ನಲ್ಲಿ ಸಂಚರಿಸುವುದು ಕಷ್ಟದ ಕೆಲಸ. ಆದರೆ, ಸೈಕಲ್‌ಗಳಲ್ಲಿ ಅತ್ಯಂತ ಕಿರಿದಾದ ರಸ್ತೆಗಳಿಗೂ ಹೋಗಬಹುದು. ಜತೆಗೆ ಅಪರಾಧ ಚಟುವಟಿಕೆಗಳ ಬಗ್ಗೆ ಸಿಬ್ಬಂದಿ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತದೆ' ಎಂದು ಅವರು ಅಭಿಪ್ರಾಯಪಡುತ್ತಾರೆ.`ಅಪರಾಧ ಕೃತ್ಯಗಳನ್ನು ಎಸಗುವವರು ರಾತ್ರಿ ವೇಳೆ ಇಲಾಖೆಯ ಚೀತಾ ಅಥವಾ ಹೊಯ್ಸಳ ವಾಹನದ ಶಬ್ದ ಕೇಳಿಸುತ್ತಿದ್ದಂತೆ ಎಚ್ಚೆತ್ತುಕೊಂಡು ಪರಾರಿಯಾಗುತ್ತಿದ್ದರು. ಇದೀಗ ಸಿಬ್ಬಂದಿ ಸೈಕಲ್‌ನಲ್ಲಿ ಸಂಚರಿಸುವುದರಿಂದ ಅವರ ಬಗ್ಗೆ ಅಪರಾಧ ಕೃತ್ಯಗಳನ್ನು ಎಸಗುವವರಿಗೆ ಮುನ್ಸೂಚನೆ ಸಿಗುವ ಸಾಧ್ಯತೆ ಕಡಿಮೆ' ಎಂದು ಅವರು ಹೇಳುತ್ತಾರೆ.ಒಳ್ಳೆಯ ಪ್ರಯತ್ನ

`ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕಾಗಿ ದಕ್ಷಿಣ ವಿಭಾಗದ ಸಿಬ್ಬಂದಿ ಆರಂಭಿಸಿರುವ ಸೈಕಲ್ ಗಸ್ತು ವ್ಯವಸ್ಥೆಯು ಒಳ್ಳೆಯ ಪ್ರಯತ್ನ. ಈ ಯೋಜನೆಯನ್ನು ನಗರದ ಎಲ್ಲಾ ಉಪ ವಿಭಾಗಗಳಿಗೂ ವಿಸ್ತರಿಸುವ ಚಿಂತನೆ ಇದೆ. ಆದರೆ, ಈ ಗಸ್ತು ವ್ಯವಸ್ಥೆ ಕಡ್ಡಾಯವಲ್ಲ. ಇದನ್ನು ಜಾರಿಗೊಳಿಸುವುದು ಉಪ ವಿಭಾಗಗಳ ಡಿಸಿಪಿಗಳ ವಿವೇಚನೆಗೆ ಬಿಟ್ಟದ್ದು' ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್‌ಪಂತ್ ತಿಳಿಸಿದ್ದಾರೆ.`ಸಿಬ್ಬಂದಿಗೆ ಇಲಾಖೆ ವತಿಯಿಂದ ಸೈಕಲ್‌ಗಳನ್ನು ಕೊಡಿಸಿಲ್ಲ. ಬದಲಿಗೆ ಸಿಬ್ಬಂದಿ ಸ್ವಂತ ಹಣದಲ್ಲಿ ಸೈಕಲ್ ಖರೀದಿಸಿ, ಗಸ್ತು ಮಾಡುತ್ತಿದ್ದಾರೆ. ಈ ಗಸ್ತು ವ್ಯವಸ್ಥೆಯಿಂದ ವೈಯಕ್ತಿಕವಾಗಿ ಸಿಬ್ಬಂದಿಗೂ ಅನುಕೂಲವಾಗಲಿದೆ. ಸಿಬ್ಬಂದಿ ಸೈಕಲ್ ತುಳಿಯುವುದರಿಂದ ಅವರು ದೈಹಿಕ ಕಸರತ್ತು ಮಾಡಿದಂತಾಗುತ್ತದೆ. ಉತ್ತಮ ದೇಹದಾರ್ಢ್ಯತೆ ಮತ್ತು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಗಸ್ತು ವ್ಯವಸ್ಥೆ ಸಿಬ್ಬಂದಿಗೆ ಪರೋಕ್ಷವಾಗಿ ನೆರವಾಗಲಿದೆ' ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.