ಮಂಗಳವಾರ, ಮೇ 11, 2021
20 °C

ಪೊಲೀಸರಿಗೇ ಜೀವಭಯ!

ಜಿ.ಟಿ. ಸತ್ಯನಾರಾಯಣ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮರಿ: ಸಮೀಪದ ಬಾಕೋಡು ಪೊಲೀಸ್ ಉಪ ಠಾಣೆ ಮತ್ತು ಸಿಬ್ಬಂದಿಗಳ ವಾಸ್ತವ್ಯಕ್ಕೆ ನಿರ್ಮಿಸಿದ ವಸತಿಗೃಹಗಳು ಸಂಪೂರ್ಣ ಶಿಥಿಲಗೊಂಡಿದ್ದು, ಜನರಿಗೆ ರಕ್ಷಣೆ ನೀಡುವ ಪೊಲೀಸರೇ ಸ್ವತಃ ಜೀವಭಯದಲ್ಲಿ ಸೇವೆ ಮಾಡುವಂತಾಗಿದೆ!ಕರೂರು ಮತ್ತು ಬಾರಂಗಿ ಹೋಬಳಿಯ ಒಳಗೊಂಡ ದ್ವೀಪ ಪ್ರದೇಶದ 198 ಹಳ್ಳಿಗಳ ವ್ಯಾಪ್ತಿಗೆ ಇರುವುದು ಒಂದೇ ಪೊಲೀಸ್ ಉಪ ಠಾಣೆ. ಬ್ಯಾಕೋಡಿನಲ್ಲಿ ಇರುವ ಉಪ ಠಾಣೆಯಲ್ಲಿ ಒಬ್ಬ ಹೆಡ್‌ಕಾನ್‌ಸ್ಟೇಬಲ್, ನಾಲ್ಕು ಮಂದಿ ಕಾನ್‌ಸ್ಟೇಬಲ್ ಒಳಗೊಂಡ ಐದು ಹುದ್ದೆಗಳಿಗೆ ಅವಕಾಶ ನೀಡಲಾಗಿದೆ.ಪೊಲೀಸರ ವಾಸ್ತವ್ಯಕ್ಕಾಗಿ ಐದು ವಸತಿಗೃಹಗಳನ್ನು 2 ದಶಕ ಹಿಂದೆ ನಿರ್ಮಿಸಲಾಗಿದ್ದರೂ, ಈವರೆಗೂ ಇವುಗಳ ಕನಿಷ್ಠ ದುರಸ್ತಿಯೂ ನಡೆದಿಲ್ಲ. ಪರಿಣಾಮವಾಗಿ ವಸತಿಗೃಹಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿ ಆಗಲೋ-ಈಗಲೋ ಬೀಳುವ ಹಂತದಲ್ಲಿವೆ. ಐದು ವಸತಿಗೃಹದಲ್ಲಿ ನಾಲ್ಕು ಕಟ್ಟಡಗಳ ಮೇಲ್ಛಾವಣಿಯ ಮರದ ರೀಪು ಮತ್ತು ಪಕಾಸುಗಳು ಗೆದ್ದಲಿಗೆ ಆಹಾರವಾಗಿ ಮುರಿಯುವ ಹಂತದಲ್ಲಿದ್ದರೆ, ಕಿಟಕಿ, ಬಾಗಿಲು, ಕಾಣೆಯಾಗಿವೆ. ವಿದ್ಯುತ್ ಸಂಪರ್ಕಕ್ಕೆ ಅಗತ್ಯವಾದ ವೈರಿಂಗ್ ವ್ಯವಸ್ಥೆಯು ಇಲ್ಲವಾಗಿದೆ.ವಸತಿಗೃಹಗಳ ಶೌಚಾಲಯಗಳು ಸಂಪೂರ್ಣ ಹಾಳಾಗಿದ್ದು, ಉಪಯೋಗಕ್ಕೆ ಬಾರದಂತಾಗಿವೆ. ಆದರೆ, ಉಳಿದಿರುವ ಒಂದು ಕಟ್ಟಡ ಕೊಂಚ ಉತ್ತಮವಾಗಿದ್ದು, ಇಕ್ಕಾಟದ ಈ ಕೊಠಡಿಯೇ ಪೊಲೀಸರ ವಾಸ್ತವ್ಯದ ಸ್ಥಳವಾಗಿ ಮಾರ್ಪಟ್ಟಿದ್ದು, ಕೆಲ ಪೊಲೀಸರು ಅನಿವಾರ್ಯವಾಗಿ ಬಾಡಿಗೆ ಮನೆಯ ಮೊರೆ ಹೋಗಿದ್ದಾರೆ.ಇನ್ನು ಉಪ ಠಾಣೆಯ ಸ್ಥಿತಿಯು ಭಿನ್ನವಿಲ್ಲ. ಕಟ್ಟಡ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿರುವ ಕಾರಣ ಮಳೆಗಾಲದಲ್ಲಿ ವಿಪರೀತ ಸೋರುವುದರಿಂದ ಪಾದಮಟ್ಟದ ನೀರಿನಲ್ಲಿ  ಕೆಲಸ ಮಾಡಬೇಕಾದ ಅನಿವಾರ್ಯತೆ ಪೊಲೀಸರದು.ಠಾಣೆಯ ಮುಂಭಾಗದ ಛಾವಣಿ ಕುಸಿದು ಮೂರು ವರ್ಷ ಕಳೆದಿದೆ. ನೆಲಕ್ಕೆ ಬೀಳದಂತೆ ತಡೆಯಲು ಮರದ ತುಂಡನ್ನು ನಿಲ್ಲಿಸಲಾಗಿದೆ. ಮೇಲ್ಛಾವಣಿ ಕುಸಿದು ಬೀಳುವ ಭಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಇಡೀ ಠಾಣೆಯೇ ಗೆದ್ದಲ ಸಾಮ್ರಾಜ್ಯ ಆಗಿರುವಾಗ ಕಡತ ಕಾಪಾಡಿಕೊಳ್ಳುವುದೇ ಸವಾಲಾಗಿದೆ.ಇನ್ನು ಉಪ ಠಾಣೆಗೆ ದೂರವಾಣಿ ಸೌಲಭ್ಯವೂ ಇಲ್ಲ. ತುರ್ತು ಸಂದೇಶ ರವಾನೆಗೆ ಅಗತ್ಯವಾದ ವೈರಲೆಸ್ ಸೇವೆಕೆಟ್ಟು ಕೂತಿದೆ. ಕಳೆದ ವರ್ಷ ವೈರಲೆಸ್ ಸೇವೆಗೆ ಅಗತ್ಯವಾದ ಟವರ್ ನಿರ್ಮಿಸಿದರೂ ಉಪಯೋಗ ಕಾಣದಾಗಿದೆ.ಠಾಣೆಯ ದುರಸ್ತಿಗೆ ಇಲಾಖಾ ಅನುದಾನ ಬಿಡುಗಡೆ ಮಾಡಬೇಕಿದೆ. ವಸತಿಗೃಹಗಳ ನಿರ್ಮಾಣಕ್ಕೆ ಪೊಲೀಸ್ ಹೌಸಿಂಗ್ ಬೋರ್ಡ್ ಸೊಸೈಟಿಯಿಂದ ಪ್ರಕ್ರಿಯೆ ಆರಂಭವಾಗಬೇಕಿದೆ. ಆದರೆ, ಯಾವಾಗ? ಎಂಬ ಪ್ರಶ್ನೆಗೆ ಇಲಾಖೆಯ ಹಿರಿಯ ಅಧಿಕಾರಿಗಳೇ ಉತ್ತರಿಸಬೇಕಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.