ಮಂಗಳವಾರ, ಮೇ 11, 2021
25 °C

ಪೊಲೀಸ್... ಪೊಲೀಸ್... ಸಾಕಾಯ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎದುರಿಗೆ ಸಿಕ್ಕವರು `ನೀವು ಪೊಲೀಸ್ ಇನ್‌ಸ್ಪೆಕ್ಟರ್ ಅಲ್ವಾ?~ ಎಂದು ಕೇಳುವಷ್ಟು ಪೊಲೀಸ್ ಅಧಿಕಾರಿ ಪಾತ್ರ ತೊಟ್ಟಿದ್ದಾರೆ ಶಂಕರ್ ನಾರಾಯಣ. ಕೈಯಲ್ಲಿ ದಂಡ ಹಿಡಿದುಕೊಂಡು ದರ್ಪ ತೋರಿಸುವ, ಶೋಧಕ ಬುದ್ಧಿಯಿಂದ ಅಪರಾಧ ಪತ್ತೆ ಮಾಡುವ ಪಾತ್ರಗಳನ್ನು ಮಾಡಿ ಸಾಕಾಗಿದೆ.ಇನ್ನು ಮುಂದೆ ಅಭಿನಯ ಸಾಮರ್ಥ್ಯಕ್ಕೆ ಸವಾಲಾಗುವಂಥ ಒಳ್ಳೆಯ ಕ್ಯಾರೆಕ್ಟರ್ ಮಾಡುವುದು ಈ ನೀಳಕಾಯದ ನಟನ ತುಡಿತ. ಇಲ್ಲಿಯವರೆಗೆ ಸಿನಿಮಾ ಹಾಗೂ ಟೆಲಿವಿಷನ್‌ನಲ್ಲಿ ಪಡೆದ ಅನುಭವ ಸಾಕಷ್ಟು. ಆದರೂ ಸಿಕ್ಕ ಪಾತ್ರಗಳು ನೀಡಿದ್ದು ಅಲ್ಪ ತೃಪ್ತಿ. ಸತ್ವವುಳ್ಳ ನಟನೆಯನ್ನು ಹಿರಿತೆರೆಯಲ್ಲಿ ತೋರುವ ಕನಸು ಕಂಡಿರುವ ಸಹಜ ಅಭಿನಯ ಚತುರನ ಮನದಿಂದ ಹರಿದ ಮಾತುಗಳು...ರಂಗಭೂಮಿಯಿಂದ ಪಯಣ

ಹೊಟ್ಟೆಪಾಡಿನ ಉದ್ಯೋಗ ಹುಡುಕಲು ಕಲಿತಿದ್ದು ಕಂಪ್ಯೂಟರ್ ತಂತ್ರಜ್ಞಾನ. ಆದರೆ ಕಾಲೇಜ್ ದಿನಗಳಲ್ಲಿ ಹಚ್ಚಿದ ಬಣ್ಣದ ಹುಚ್ಚಿನಿಂದ ಬಿಡಿಸಿಕೊಳ್ಳಲು ಆಗಲಿಲ್ಲ. ರಂಗಶಿಕ್ಷಣ ಪಡೆದು ಕೈಯಲ್ಲಿ ಡಿಪ್ಲೊಮಾ ಸರ್ಟಿಫಿಕೇಟ್ ಹಿಡಿದುಕೊಂಡಿದ್ದೂ ಆಯಿತು. ರಂಗಭೂಮಿಯ ಜೊತೆಗೆ ನಂಟು ಉಳಿಸಿಕೊಂಡು ಟೆಲಿವಿಷನ್ ಹಾಗೂ ಸಿನಿಮಾಗಳ ಕಡೆಗೂ ನೋಟ ಹರಿಯಿತು. ಮೊದಲು ನಟನಾಗಲಿಲ್ಲ.ಬದಲಿಗೆ ಅವಕಾಶ ಸಿಕ್ಕಿದ್ದು ಸಹಾಯಕ ನಿರ್ದೇಶಕನಾಗಲು. ಆಗ ದೂರದರ್ಶನದಲ್ಲಿ ಧಾರಾವಾಹಿಗಳು ಪ್ರಸಾರ ಆಗುತ್ತಿದ್ದುದು ವಾರಕ್ಕೊಂದು ಕಂತು ಮಾತ್ರ. ಆದ್ದರಿಂದ ಕೆಲಸವೂ ತೀರ ಕಡಿಮೆ. ಒಮ್ಮೆ ಚಾನೆಲ್‌ಗಳ ಸಂಖ್ಯೆ ಹೆಚ್ಚಿದಂತೆ ನಟನಾಗುವ ಕನಸುಗಳೂ ಗರಿಗೆದರಿದವು. ಒಂದೆಡೆ ರಂಗಚಟುವಟಿಕೆ; ಇನ್ನೊಂದೆಡೆ ಸೀರಿಯಲ್‌ಗಳಲ್ಲಿ ನಟನಾಗಿ, ಸಹಾಯಕ ನಿರ್ದೇಶಕನಾಗಿ, ಕಾರ್ಯನಿರ್ವಾಹಕ ನಿರ್ಮಾಪಕನಾಗಿ, ನಿರ್ಮಾಣ ವ್ಯವಸ್ಥಾಪಕನಾಗಿ ಅವರು ನಿಭಾಯಿಸಿದ ಜವಾಬ್ದಾರಿಗಳು ಹಲವು.ಧಾರಾವಾಹಿ ಅಂದು-ಇಂದು

ದಶಕಗಳ ಹಿಂದೆ 15 ಇಲ್ಲವೆ 30 ನಿಮಿಷಗಳ ಒಂದು ಅವತರಣಿಕೆ. ಅದೂ ವಾರಕ್ಕೆ ಒಮ್ಮೆ. ಅದಕ್ಕಾಗಿ ಜನ ಕಾಯುತ್ತಿದ್ದರು. ನಾನು ಮೊದಲು ನಿರ್ಮಾಣ ವ್ಯವಸ್ಥಾಪಕ ಆಗಿದ್ದು ಪಾರ್ವತಮ್ಮ ರಾಜ್‌ಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್ ಮೂಲಕ.

 

ಸುಮಾರು ಹದಿಮೂರು ವರ್ಷಗಳ ಹಿಂದಿನ ಮಾತದು. ಆನಂತರ ಸಿನಿಮಾದಲ್ಲಿಯೂ ಪ್ರೊಡಕ್ಷನ್ ಮ್ಯಾನೇಜರ್ ಕೆಲಸ. ಆಗ ಜನಮೆಚ್ಚುಗೆ ಗಳಿಸಿದ್ದ `ಖುಷಿ~ ಚಿತ್ರದ ಮೂಲಕ ಸಿನಿಮಾ ರಂಗದ ಒಳಜಗತ್ತು ಅರಿಯತೊಡಗಿದೆ. ಆದರೆ ಟೀವಿಯಲ್ಲಿ ಸ್ವಲ್ಪ ಹೆಚ್ಚು ಕೆಲಸವೇ ಇತ್ತು. ಈಗಿನಷ್ಟು ಅಲ್ಲದಿದ್ದರೂ ಕೆಲವು ಧಾರಾವಾಹಿಗಳ ನಿರ್ಮಾಣಕ್ಕೆ ನನ್ನ ಅಳಿಲು ಸೇವೆ. ಇಂದು ಸಾಕಷ್ಟು ಸೀರಿಯಲ್‌ಗಳು. ಸ್ಪರ್ಧೆಯೂ ಹೆಚ್ಚಿದೆ. ಹೊಸಬರೂ ಬಂದಿದ್ದಾರೆ.ನಟನೆಯ ಬದುಕು

ನಾಟಕದಿಂದಲೇ ನಟನೆ ಆರಂಭ. `ಈಟಿವಿ~ಯ `ಮುಕ್ತ~ ನನ್ನ ಅಭಿನಯದ ಆಸಕ್ತಿಗೆ ಇನ್ನಷ್ಟು ಬಲ ನೀಡಿದ್ದು. ಸತ್ವವುಳ್ಳ ಪಾತ್ರ ಮಾಡಿದ ತೃಪ್ತಿ. ಆನಂತರ `ಮಾಂಗಲ್ಯ~, `ಅರುಂಧತಿ~ ಹಾಗೂ `ಅನುವಾದ~ದಲ್ಲಿಯೂ ಜನರು ಗುರುತಿಸುವಂಥ ಕ್ಯಾರೆಕ್ಟರ್‌ಗಳು ಸಿಕ್ಕಿದ್ದು ಅದೃಷ್ಟ.ಮೊದಲ ಸಿನಿಮಾ ಉಪೇಂದ್ರ ಅವರ `ಓಂ~. ಅಲ್ಲಿಂದ ಇತ್ತೀಚೆಗೆ ಬಿಡುಗಡೆಯಾದ ಓಂಪ್ರಕಾಶ್ ರಾವ್ ಅವರ `ಎಕೆ56~ವರೆಗೆ  ಮೂವತ್ತಕ್ಕೂ ಹೆಚ್ಚು ಫಿಲ್ಮ್ ಮಾಡಿದ್ದೇನೆ. `ವಂಶಿ~ಯಲ್ಲಿನ ಪಾತ್ರ ಹೆಚ್ಚು ಇಷ್ಟ. ಬಾಕಿ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ಪೊಲೀಸ್ ಅಧಿಕಾರಿಯಾಗಿ.ಚೌಕಟ್ಟು ಒಡೆಯಬೇಕು

ಸಿನಿಮಾಗಳಲ್ಲಿ ನನ್ನನ್ನು ಪೊಲೀಸ್ ಅಧಿಕಾರಿಯಾಗಿ ಬ್ರ್ಯಾಂಡ್ ಮಾಡಿಬಿಟ್ಟಿದ್ದಾರೆ. ಆದ್ದರಿಂದ ನಾನೀಗ ಅಂಥ ಪಾತ್ರಗಳನ್ನು ಒಪ್ಪಿಕೊಳ್ಳುವುದನ್ನು ಕಡಿಮೆ ಮಾಡಿದ್ದೇನೆ. ಇನ್ನು ಮುಂದೆ ಅಭಿನಯ ಸಾಮರ್ಥ್ಯಕ್ಕೆ ಸವಾಲಾಗುವಂಥ ಒಳ್ಳೆಯ ಕ್ಯಾರೆಕ್ಟರ್ ಮಾಡಬೇಕೆನ್ನುವುದು ಗಟ್ಟಿ ನಿರ್ಧಾರ.ಪೊಲೀಸ್ ಎನ್ನುವ ಚೌಕಟ್ಟು ಒಡೆದು ಹೊರಗೆ ಬರಬೇಕು. ಅದೇ ನನ್ನ ಉದ್ದೇಶ. ಸಿನಿಮಾಗಳಲ್ಲಿ ನಾಯಕ, ನಾಯಕಿ ಹಾಗೂ ಖಳನಾಯಕನಿಗೆ ಮಾತ್ರ ಮಹತ್ವ. ಆದ್ದರಿಂದ ವಿಭಿನ್ನ ರೀತಿಯ ವಿಲನ್ ಪಾತ್ರಗಳನ್ನಾದರೂ ಮಾಡಬೇಕು ಎನ್ನುವುದು ಆಶಯ.ಸಹಜ ಅಭಿನಯ

ಅತಿರೇಕ ಎನಿಸುವಂಥ ಭಾವ-ಭಂಗಿ ಪ್ರದರ್ಶಿಸುವುದಿಲ್ಲ. ನೋಡುವವರಿಗೆ ಸಹಜ ಎನಿಸಬೇಕು. ವಿಲನ್ ಆಗಿರಲಿ ಇನ್ನಾವುದೇ ಪಾತ್ರ ಸಿಗಲಿ ಅದನ್ನು ನನ್ನದೇ ಆದ ಶೈಲಿಯಲ್ಲಿ ಚೊಕ್ಕಟವಾಗಿ ನೋಡುವವರಿಗೆ ಇಷ್ಟವಾಗುವಂತೆ ನಿಭಾಯಿಸುವ ವಿಶ್ವಾಸವಿದೆ.

 

ಈವರೆಗಿನ ನನ್ನ ಯಾವುದೇ ಸೀರಿಯಲ್ ಇಲ್ಲವೆ ಸಿನಿಮಾ ನೋಡಿ; ಅಲ್ಲಿ ಅಸಹಜ ಎನಿಸುವ ಯಾವುದೇ ದೃಶ್ಯಗಳು ಸಿಗುವುದಿಲ್ಲ. ನೋಡಿದವರಿಗೆ ನಾನು ನಟಿಸುತ್ತಿದ್ದೇನೆ ಎನಿಸಬಾರದು. ದೃಶ್ಯದ ಭಾಗವಾಗಿದ್ದೇನೆಂದು ಅನಿಸಬೇಕು. ಆ ನಿಟ್ಟಿನಲ್ಲಿ ಪ್ರತಿಯೊಂದು ಕ್ಯಾರೆಕ್ಟರ್ ಅನ್ನು ನಿಭಾಯಿಸುತ್ತೇನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.