ಬುಧವಾರ, ಮೇ 19, 2021
26 °C
ಮೂರು ತಾಸುಗಳಲ್ಲಿ ಐದು ಕಡೆ ಕಿಡಿಗೇಡಿಗಳ ದುಷ್ಕೃತ್ಯ

ಪೊಲೀಸ್ ಸೋಗಿನಲ್ಲಿ ಒಡವೆ ದೋಚಿದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು, ನಗರದ ವೈಯಾಲಿಕಾವಲ್, ಸೆಂಟ್ರಲ್, ಮಲ್ಲೇಶ್ವರ ಮತ್ತು ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಮೂರು ತಾಸುಗಳ ಅಂತರದಲ್ಲಿ ಐದು ಕಡೆ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.ಸಜ್ಜನ್‌ರಾವ್ ವೃತ್ತ ಸಮೀಪ ದುಷ್ಕರ್ಮಿಗಳು ಹುಚ್ಚಮ್ಮ ಎಂಬುವರ ಗಮನ ಬೇರೆಡೆ ಸೆಳೆದು ಸುಮಾರು 60 ಗ್ರಾಂ ತೂಕದ ಚಿನ್ನಾಭರಣ ದೋಚಿದ್ದಾರೆ. ಕುಮಾರಸ್ವಾಮಿ ಲೇಔಟ್ ನಿವಾಸಿಯಾದ ಹುಚ್ಚಮ್ಮ, ಸಜ್ಜನ್‌ರಾವ್ ವೃತ್ತದ ಬಳಿಯ ಟ್ರಾವೆಲ್ಸ್ ಏಜೆನ್ಸಿಯೊಂದರಲ್ಲಿ ಸ್ವಚ್ಛತಾ ಕಾರ್ಯ (ಹೌಸ್ ಕೀಪಿಂಗ್) ನಿರ್ವಹಿಸುತ್ತಾರೆ. ಬುಧವಾರ ಬೆಳಿಗ್ಗೆ 11.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಪೊಲೀಸರ ಸೋಗಿನಲ್ಲಿ ಬಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.ವೈಯಾಲಿಕಾವಲ್: ಈಜುಕೊಳ ಬಡಾವಣೆಯಲ್ಲಿ ಕಳ್ಳರು ಇಂದುಮತಿ ಎಂಬುವರ 70 ಗ್ರಾಂ ತೂಕದ ಚಿನ್ನದ ಸರ ದೋಚಿದ್ದಾರೆ. ಈಜುಕೊಳ ಬಡಾವಣೆಯ ನಾಲ್ಕನೇ ಅಡ್ಡರಸ್ತೆ ನಿವಾಸಿಯಾದ ಇಂದುಮತಿ ಸಮೀಪದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ಮಧ್ಯಾಹ್ನ 1.45ರ ಸುಮಾರಿಗೆ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದರು.ಈ ವೇಳೆ ಶ್ರೀರಾಮ ದೇವಸ್ಥಾನದ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಇಂದುಮತಿ ಅವರನ್ನು ಅಡ್ಡಗಟ್ಟಿದ್ದಾರೆ.  `ಪಕ್ಕದ ರಸ್ತೆಯಲ್ಲಿ ಚಿನ್ನಾಭರಣಕ್ಕಾಗಿ ಮಹಿಳೆಯೊಬ್ಬರ ಕೊಲೆ ನಡೆದಿದೆ. ಅಲ್ಲದೇ, ಈ ರಸ್ತೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚಿದೆ. ಹೀಗಾಗಿ ಸರ ಕಳಚಿ ಬ್ಯಾಗ್‌ನಲ್ಲಿಟ್ಟುಕೊಳ್ಳಿ' ಎಂದು ಹೇಳಿದ್ದಾರೆ.ಅವರ ಮಾತನ್ನು ನಂಬಿದ ಇಂದುಮತಿ ಸರ ಕಳಚುತ್ತಿದ್ದಂತೆ ಕಾಗದದಲ್ಲಿ ಮಡಚಿ ಕೊಡುವುದಾಗಿ ಸರ ಪಡೆದ ಕಿಡಿಗೇಡಿಗಳು, ಮಡಚಿದ ಖಾಲಿ ಕಾಗದವನ್ನು ಬ್ಯಾಗ್‌ನಲ್ಲಿಟ್ಟು ಪರಾರಿಯಾಗಿದ್ದಾರೆ. ಇಂದುಮತಿ ಮನೆಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಇದಾದ 15 ನಿಮಿಷಗಳ ನಂತರ ದುಷ್ಕರ್ಮಿಗಳ ತಂಡ ಈಜುಕೊಳ ಬಡಾವಣೆಯ 11ನೇ ಅಡ್ಡರಸ್ತೆಗೆ ತೆರಳಿ ಲಕ್ಷ್ಮಿನಾಥ್ ಎಂಬುವರಿಂದ 40 ಗ್ರಾಂ ತೂಕದ ಚಿನ್ನದ ಸರ ದೋಚಿದೆ. ದಿನಸಿ ಅಂಗಡಿ ಇಟ್ಟುಕೊಂಡಿರುವ ಲಕ್ಷ್ಮಿನಾಥ್ ಅವರು, ಮಧ್ಯಾಹ್ನ 2 ಗಂಟೆ ಸುಮಾರಿಗೆ ಊಟಕ್ಕೆ ಹೋಗುವಾಗ ನಕಲಿ ಪೊಲೀಸರು ಅವರನ್ನೂ ಅಡ್ಡಗಟ್ಟಿ ಅದೇ ಮಾದರಿಯಲ್ಲಿ ಸರ ದೋಚಿದ್ದಾರೆ.ಮಧ್ಯಾಹ್ನ 2.30ಕ್ಕೆ: ಮಲ್ಲೇಶ್ವರ ಮುಖ್ಯರಸ್ತೆಯಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ದುಷ್ಕರ್ಮಿಗಳು ಹೇಮಾವತಿ (54) ಎಂಬುವರ 110 ಗ್ರಾಂನ ಚಿನ್ನದ ಸರ ದೋಚಿದ್ದಾರೆ.ಕಲಾಸಿಪಾಳ್ಯ ನಿವಾಸಿಯಾದ ಹೇಮಾವತಿ, ಬಿಇಎಲ್‌ನ ನಿವೃತ್ತ ವ್ಯವಸ್ಥಾಪಕ ಉಮಾಶಂಕರ್ ಎಂಬುವರ ಪತ್ನಿ. ದಂಪತಿ ಶಾಪಿಂಗ್ ಮಾಡಲು ಕಾರಿನಲ್ಲಿ ಮಲ್ಲೇಶ್ವರಕ್ಕೆ ಬಂದಿದ್ದರು. ಪತ್ನಿಯನ್ನು ಮಾಲ್ ಒಂದರ ಬಳಿ ಇಳಿಸಿದ ಉಮಾಶಂಕರ್, ಕಾರು ನಿಲುಗಡೆ ಮಾಡಿ ಬರುವುದಾಗಿ ಮಾಲ್‌ನ ಆವರಣದೊಳಗೆ ಹೋಗಿದ್ದಾರೆ. ಆಗ ಹೇಮಾವತಿ ಅವರ ಬಳಿ ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು, ಅವರ ಗಮನ ಬೇರೆಡೆ ಸೆಳೆದು ಆಭರಣ ದೋಚಿದ್ದಾರೆ. ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಧ್ಯಾಹ್ನ 2.45ಕ್ಕೆ: ಮಾಗಡಿ ರಸ್ತೆಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಶಕುಂತಲಾ (60) ಎಂಬುವರಿಂದ ದುಷ್ಕರ್ಮಿಗಳು, 164 ಗ್ರಾಂ ತೂಕದ ಒಡವೆಗಳನ್ನು ದೋಚಿದ್ದಾರೆ.ಅವೆನ್ಯೂ ರಸ್ತೆ ನಿವಾಸಿಯಾದ ಶಕುಂತಲಾ ಅವರು, ಮಾಗಡಿ ರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ಹೋಗುವಾಗ ನಾಲ್ಕು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. `ನಾಲ್ಕು ಮಂದಿ ಅಪರಿಚಿತರು ಪೊಲೀಸರೆಂದು ಹೇಳಿಕೊಂಡು ವಂಚಿಸಿದರು. ದುಷ್ಕರ್ಮಿಗಳ ಪೈಕಿ ಮೂವರು ಹಿಂದಿ ಭಾಷೆಯನ್ನು ಹಾಗೂ ಒಬ್ಬ ಕನ್ನಡ ಮಾತನಾಡುತ್ತಿದ್ದರು' ಎಂದು ಶಕುಂತಲಾ ಅವರು ದೂರಿನಲ್ಲಿ ತಿಳಿಸಿದ್ದಾರೆ.ಆಪರೇಷನ್ ಚೀತಾ

`ದುಷ್ಕರ್ಮಿಗಳು ಪೊಲೀಸರ ಸೋಗಿನಲ್ಲಿ ಸರಗಳವು ಮಾಡುತ್ತಿರುವ ಪ್ರವೃತ್ತಿ ಹೆಚ್ಚಾಗಿದೆ. ಇಂತಹ ಪ್ರಕರಣಗಳಲ್ಲಿ ಅವರ ಮುಖ್ಯ ಗುರಿ ಒಂಟಿ ಮಹಿಳೆಯರು ಅಥವಾ ವೃದ್ಧರೇ ಆಗಿರುತ್ತಾರೆ. ಇದೇ ರೀತಿ ಪೊಲೀಸರ ಸೋಗಿನಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಇರಾನಿ ಮೂಲದ ಕೆಲ ದುಷ್ಕರ್ಮಿಗಳನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಆದರೆ, ಆ ಗುಂಪಿನ ಕೆಲ ಸದಸ್ಯರು ತಲೆಮರೆಸಿಕೊಂಡಿದ್ದರು. ಅವರೇ ಪುನಃ ಇಂತಹ ಕೃತ್ಯದಲ್ಲಿ ತೊಡಗಿರುವ ಸಾಧ್ಯತೆ ಇದೆ' ಎಂದು ಹಿರಿಯ ಅಧಿಕಾರಿಗಳು `ಪ್ರಜಾವಾಣಿ' ಗೆ ತಿಳಿಸಿದರು.`ಹಿಂದೆ ಸರಣಿಯಾಗಿ ಸರಗಳವು ಮಾಡುತ್ತಿದ್ದ ಆರೋಪಿಗಳನ್ನು ಪತ್ತೆ ಮಾಡಲು `ಆಪರೇಷನ್ ಚೀತಾ' ಎಂಬ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಾಚರಣೆ ಯಶಸ್ವಿಯೂ ಆಗಿತ್ತು. ಅಂತಹುದೇ ವಿಶೇಷ ಕಾರ್ಯಾಚರಣೆಯನ್ನು ಪುನಃ ಆರಂಭಿಸಬೇಕಿದೆ' ಎಂದರು.ಗಮನ ಬೇರೆಡೆ ಸೆಳೆಯುವುದು ಹೀಗೆ

ಪೊಲೀಸರ ಸೋಗಿನಲ್ಲಿ ಬೈಕ್‌ನಲ್ಲಿ ಬರುವ ದುಷ್ಕರ್ಮಿಗಳು, ನಿರ್ಜನ ಪ್ರದೇಶದಲ್ಲಿ ಕೃತ್ಯಕ್ಕೆ ಸಂಚು ರೂಪಿಸುತ್ತಾರೆ. ಆ ರಸ್ತೆಯಲ್ಲಿ ಬರುವ ಒಂಟಿ ಮಹಿಳೆಯರು ಹಾಗೂ ವೃದ್ಧರ ಬಳಿ ತಮ್ಮನ್ನು ಪೊಲೀಸರು ಎಂದು ಪರಿಚಯಿಸಿಕೊಳ್ಳುತ್ತಾರೆ.`ಇಲ್ಲಿನ ಸುತ್ತಮುತ್ತಲ ಸರಗಳ್ಳರ ಹಾವಳಿ ಹೆಚ್ಚಿದೆ. ಆಭರಣಗಳನ್ನು ಕಳಚಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ' ಎಂದು ಹೇಳುತ್ತಾರೆ. ಅವರ ಮಾತನ್ನು ನಂಬುವ ಸಾರ್ವಜನಿಕರು, ಒಡವೆಗಳನ್ನು ಕಳಚಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಲು ಮುಂದಾಗುತ್ತಾರೆ. ಆಗ ಅವರಿಗೆ ನೆರವಾಗುವ ನೆಪದಲ್ಲಿ ಆಭರಣಗಳನ್ನು ಪಡೆದುಕೊಳ್ಳುವ ನಕಲಿ ಪೊಲೀಸರು, ಅವುಗಳನ್ನು ಬ್ಯಾಗ್‌ನಲ್ಲಿ ಹಾಕಿದಂತೆ ಮಾಡಿ ಪರಾರಿಯಾಗುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.