ಗುರುವಾರ , ಮೇ 26, 2022
28 °C

ಪೌರ ಕಾರ್ಮಿಕರ ಸೇವಾ ಭದ್ರತೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಪೌರ ಕಾರ್ಮಿಕರನ್ನು ದಿನಗೂಲಿ ಆಧಾರದಲ್ಲಿ ಗುತ್ತಿಗೆಗೆ ನೇಮಿಸುವನ್ನು ನಿಷೇಧಿಸಿ, ಸಂಪೂರ್ಣ ಸೇವಾ ಭದ್ರತೆ ಒದಗಿಸಬೇಕು ಎಂದು ಕಾಂಗ್ರೆಸ್ ಶಾಸಕ ವಿ.ಶ್ರೀನಿವಾಸ ಪ್ರಸಾದ್ ಸರ್ಕಾರವನ್ನು ಆಗ್ರಹಿಸಿದರು.ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸದ್ಯದ ಪರಿಸ್ಥಿತಿಯಲ್ಲಿ ಪೌರ ಕಾರ್ಮಿಕರಿಗೆ ರಕ್ಷಣೆಯೇ ಇಲ್ಲ. ಯಾವ ರಾಜಕಾರಣಿಯೂ ಅವರ ಬಗ್ಗೆ ಚಿಂತಿಸುತ್ತಿಲ್ಲ. ಹತ್ತಾರು ವರ್ಷಗಳಿಂದ ದಿನಗೂಲಿ ನೌಕರರಾಗಿರುವ ಅವರ ಸೇವೆ ಕಾಯಂ ಮಾಡಲು ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪೌರ ಕಾರ್ಮಿಕರು ಬಡವರೊಳಗೆ ಬಡವರು, ಶೋಷಿತರೊಳಗೆ ಶೋಷಿತರೂ ಆಗಿದ್ದಾರೆ. ಅವರಿಗೆ ಪ್ರತ್ಯೇಕ ಮೀಸಲಾತಿ ಒದಗಿಸಲು ಸಾಧ್ಯ ಆಗದಿದ್ದರೆ, ಉತ್ತಮ ಜೀವನಕ್ಕೆ ಬೇಕಾದ ಸವಲತ್ತುಗಳನ್ನಾದರೂ ನೀಡಿ. ಎಲ್ಲ ಪೌರ ಕಾರ್ಮಿಕರಿಗೂ ವಸತಿ ಮತ್ತು ಅವರ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸಲು ಸರ್ಕಾರ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.ಕೊಳೆಗೇರಿ ನಿಷೇಧಿಸಿ: ಕೊಳೆಗೇರಿಗಳಿಗೆ ಮೂಲಸೌಕರ್ಯ ಒದಗಿಸುವ ವಿಷಯದಲ್ಲೂ ಸರ್ಕಾರ ನಿರಾಸಕ್ತಿ ತೋರುತ್ತಿದೆ. ಪರಿಣಾಮವಾಗಿ ನಗರ ಪ್ರದೇಶಗಳಲ್ಲಿ ದಿನೇ ದಿನೇ ಕೊಳೆಗೇರಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಹೊಸ ಕೊಳೆಗೇರಿಗಳು ತಲೆ ಎತ್ತದಂತೆ ನಿಷೇಧ ಹೇರಬೇಕು ಎಂದರು.‘ಆಪರೇಷನ್ ಕಮಲ’, ಶಾಸಕರ ಬಂಡಾಯ, ಅನರ್ಹತೆ ಮತ್ತಿತರ ವಿಷಯಗಳನ್ನು ಬಜೆಟ್ ಮೇಲಿನ ಚರ್ಚೆ ವೇಳೆಯೇ ಪ್ರಸ್ತಾಪಿಸಿದ ಅವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ರಾಜಕೀಯ ದುರುದ್ದೇಶದ ಬಜೆಟ್: ಜೆಡಿಎಸ್‌ನ ಎಂ.ಕೆ. ಶಿವಲಿಂಗೇಗೌಡ ಮಾತನಾಡಿ, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜಕೀಯ ದುರುದ್ದೇಶದಿಂದ ಈ ಬಜೆಟ್ ಮಂಡಿಸಿದ್ದಾರೆ. ಈ ಆರೋಪ ಸುಳ್ಳಾದರೆ ಅವರು ಕೆಲಸ ಮಾಡಿ ತೋರಿಸಲಿ. ‘ಕೃಷಿ ಬಜೆಟ್’ ಮಂಡಿಸಿ ಸುಮ್ಮನಾಗಬಾರದು. ರೈತರ ಒಳಿತಿಗಾಗಿ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.