ಬುಧವಾರ, ಮೇ 12, 2021
17 °C

ಪೌಷ್ಟಿಕ ಆಹಾರ ನೀಡಿ: ಮಕ್ಕಳ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಕೌಶಲ ತರಬೇತಿ, ಕ್ರೀಡಾ ಚಟುವಟಿಕೆಗಳು ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ನೀಡುವ ಜೊತೆಗೆ ಎಲ್ಲಾ ಮಕ್ಕಳಿಗೂ ಪೌಷ್ಟಿಕ ಆಹಾರ ದೊರೆಯಬೇಕು. ಶೈಕ್ಷಣಿಕ ಹಾಗೂ ಆರೋಗ್ಯ ಸೌಲಭ್ಯ ಎಲ್ಲಾ ಮಕ್ಕಳಿಗೂ ಸಾರ್ವತ್ರಿಕವಾಗಿ ದೊರೆಯುವಂತೆ ಮಾಡಬೇಕು ಎಂದು ಸ್ವಯಂ ಸೇವಾ ಸಂಸ್ಥೆಗಳು ಸಂಗ್ರಹಿಸಿರುವ ಜನಾಭಿಪ್ರಾಯದಲ್ಲಿ ರಾಜ್ಯದ ಮಕ್ಕಳು ಆಗ್ರಹಿಸಿದ್ದಾರೆ ಎಂದು ಬೆಂಗಳೂರು ಗ್ರಾಮೀಣ ಶೈಕ್ಷಣಿಕ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮ ಮತ್ತು ಸಂಪರ್ಕ ವಿಭಾಗದ ವ್ಯವಸ್ಥಾಪಕಿ ಟಿ. ಪ್ರಿಯಾ ತಿಳಿಸಿದರು. ಬೆಂಗಳೂರು ಗ್ರಾಮೀಣ ಶೈಕ್ಷಣಿಕ ಮತ್ತು ಅಭಿವೃದ್ಧಿ ಸಂಸ್ಥೆ ಸೇರಿದಂತೆ ಇತರೆ ಸ್ವಯಂ ಸೇವಾ ಸಂಸ್ಥೆಗಳು ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಮಕ್ಕಳು: ಆಡಳಿತ ಹಾಗೂ ಸಮಾನತೆ ಕುರಿತಂತೆ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದರು.ಸರ್ಕಾರ ಜಾರಿಗೆ ತರುವ ಯೋಜನೆಗಳು ಹಾಗೂ ನೀಡುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ವಿಶೇಷ ಗಮನವಹಿಸಿ, ಸ್ಥಳೀಯವಾಗಿ ಯೋಜನೆಗಳು ಹಾಗೂ ಕಾರ್ಯಕ್ರಮಗಳ ನಿರ್ವಹಣೆ ಹಾಗೂ ನಿರ್ಧಾರದ ಬಗ್ಗೆ ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡಬೇಕು. ಅಗತ್ಯ ಜನರಿಗೆ ಸರಿಯಾಗಿ ಉದ್ಯೋಗ ಹಾಗೂ ವೇತನ ನೀಡಬೇಕು ಎಂದು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.`ಚೈಲ್ಡ್ ರೈಟ್ಸ್ ಸಂಸ್ಥೆ'ಯ ಕಾರ್ಯನಿರ್ವಾಹ ನಿರ್ದೇಶಕ ವಾಸುದೇವ ಶರ್ಮಾ ಮಾತನಾಡಿ, ವಿಶ್ವಸಂಸ್ಥೆಯ `ಸಹಸ್ರಮಾನದ ಅಭಿವೃದ್ಧಿಯ ಗುರಿಗಳು' ಘೋಷಣೆ 2015ರಲ್ಲಿ ಕೊನೆಗೊಳ್ಳಲಿದೆ. ಹೀಗಾಗಿ ವಿಶ್ವಸಂಸ್ಥೆಯ ಘೋಷಣೆ ಹಾಗೂ 2015ರ ನಂತರ ಜನರ ಅಗತ್ಯಗಳ ಬಗ್ಗೆ ಜನರಿಂದಲೇ ಅಭಿಪ್ರಾಯ ಸಂಗ್ರಹ  ಮಾಡುವಂತೆ ವಿಶ್ವಸಂಸ್ಥೆ ಆದೇಶ ನೀಡಿದೆ ಎಂದರು.ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮೀಣ ಶೈಕ್ಷಣಿಕ ಮತ್ತು ಅಭಿವೃದ್ಧಿ ಸಂಸ್ಥೆ, ಬಾಸ್ಕೋ ಸ್ವಯಂ ಸೇವಾ ಸಂಸ್ಥೆ ಹಾಗೂ `ಚೈಲ್ಡ್ ರೈಟ್ಸ್ ಸಂಸೆ'್ಥ ಬೆಂಗಳೂರು ಸೇರಿದಂತೆ ಬೆಳಗಾವಿ ಹಾಗೂ ಬಳ್ಳಾರಿಗಳಲ್ಲಿ ಮಕ್ಕಳ ಅಭಿವೃದ್ಧಿಗಾಗಿ ಸಿಗಬೇಕಿದ್ದ ಹಕ್ಕಿನ ಜಾರಿ, ಮಕ್ಕಳ ಪೋಷಣೆ, ರಕ್ಷಣೆ, ಆರೋಗ್ಯ, ಪೌಷ್ಟಿಕತೆ, ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕುರಿತಂತೆ ಸಾರ್ವಜನಿಕರು, ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತರ ಜೊತೆ ಗುಂಪು ಚರ್ಚೆ ನಡೆಸಿ, ಅಭಿಪ್ರಾಯಸಂಗ್ರಹಿಸಿವೆ ಎಂದರು.ರಾಜ್ಯದಲ್ಲಿ ತಯಾರಿಸಿದ ಜನಾಭಿಪ್ರಾಯದ ವರದಿಯನ್ನು `ವಾದಾ ನಾ ತೋಡೋ ಅಭಿಯಾನಕ್ಕೆ' ಕಳುಹಿಸಿಕೊಡ ಲಾಗುವುದು. ಅಲ್ಲಿ ಇಡೀ ದೇಶದ ಜನರ ಅಭಿಪ್ರಾಯವನ್ನು ಒಟ್ಟುಗೂಡಿಸಿದ ನಂತರ ಅದನ್ನು ವಿಶ್ವಸಂಸ್ಥೆಗೆ ತಲುಪಿಸಲಾಗುತ್ತದೆ ಎಂದು ಅವರು ವಿವರಿಸಿದರು.`ಡ್ರೀಮ್ ಎ ಡ್ರೀಮ್' ನ ಸಹ ವ್ಯವಸ್ಥಾಪಕಿ ನಿತ್ಯಾ ಗುರುಕುಮಾರ್, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಉಮೇಶ್ ಆರಾಧ್ಯ, ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಟ್ರಸ್ಟಿ ಡಾ.ಆರ್.ಪದ್ಮಿನಿ, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ  ಸಂಘಗಳ ಸದಸ್ಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.