ಸೋಮವಾರ, ಮಾರ್ಚ್ 8, 2021
24 °C
ವಿಶ್ವಕಪ್ ಕಂಚಿನ ಪದಕ ವಿಜೇತ ಕರ್ನಾಟಕದ ಶೂಟರ್; ಸ್ಪರ್ಧೆಗಾಗಿ ಸ್ಪೇನ್‌ಗೆ ತೆರಳಿದಾಗ ಈ ಆಘಾತ

ಪ್ರಕಾಶ್‌ಗೆ ಮುಖದ ಪಾರ್ಶ್ವವಾಯು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಕಾಶ್‌ಗೆ ಮುಖದ ಪಾರ್ಶ್ವವಾಯು

ಬೆಂಗಳೂರು: ವಿಶ್ವಕಪ್‌ನಲ್ಲಿ ಪದಕ ಗಳಿಸಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆ ಹೊಂದಿರುವ ಶೂಟರ್ ಪಿ.ಎನ್.ಪ್ರಕಾಶ್ ಅವರು ಸ್ಪೇನ್‌ನ ಗ್ರೆನಡಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಷಿಪ್ ವೇಳೆ `ಮುಖದ ಪಾರ್ಶ್ವವಾಯು' ಸಮಸ್ಯೆಗೆ ಒಳಗಾಗಿದ್ದಾರೆ.ಸೋಮವಾರ ಮಧ್ಯಾಹ್ನ ಅವರು ನಗರಕ್ಕೆ ವಾಪಸಾಗಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು 37 ವರ್ಷ ವಯಸ್ಸಿನ ಪ್ರಕಾಶ್‌ಗೆ ಸಲಹೆ ನೀಡಿದ್ದಾರೆ. `ಜುಲೈ 3ರಂದು ಈ ಚಾಂಪಿಯನ್‌ಷಿಪ್ ಆರಂಭವಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಗ್ರೆನಡಾಕ್ಕೆ ಹೋಗಿದ್ದ ಪ್ರಕಾಶ್ ಈ ಸಮಸ್ಯೆಗೆ ಒಳಗಾಗಿದ್ದಾನೆ. ಬಲಗಣ್ಣಿನ ರೆಪ್ಪೆ ಮುಚ್ಚಲು ಸಾಧ್ಯವಾಗುತ್ತಿಲ್ಲ' ಎಂದು ಪ್ರಕಾಶ್ ಅವರ ತಂದೆ ಪಿ.ಎನ್.ಪಾಪಣ್ಣ `ಪ್ರಜಾವಾಣಿ'ಗೆ ತಿಳಿಸಿದರು.`ಸ್ಪೇನ್‌ನಲ್ಲಿಯೇ ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆಯವರು ನನ್ನ ಪುತ್ರನನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಇದು ಪಾರ್ಶ್ವವಾಯು ಅಲ್ಲ; ಬೆಲ್ಸ್ ಪಾಲ್ಸಿ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಅಷ್ಟು ಮಾತ್ರವಲ್ಲದೇ, ಎರಡನೇ ಬಾರಿ ಮತ್ತೊಂದು ಆಸ್ಪತ್ರೆಯ ವೈದ್ಯರ ಪ್ರತಿಕ್ರಿಯೆ ಪಡೆಯಲಾಗಿದೆ. ಅದರಲ್ಲೂ ಬೆಲ್ಸ್ ಪಾಲ್ಸಿ ಎಂಬುದು ಖಚಿತವಾಗಿದೆ' ಎಂದು ಅವರು ಹೇಳಿದರು.

`ಪ್ರಕಾಶ್ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಶೇಕಡಾ 15ರಷ್ಟು ಗುಣಮುಖನಾಗಿದ್ದಾನೆ. ಮತ್ತೆ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾನೆ. ಆದರೆ ಅವನಿಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ. ಮಂಗಳವಾರ ಮತ್ತೆ ವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತೇನೆ' ಎಂದು ಕೋಚ್ ಕೂಡ ಆಗಿರುವ ಪಾಪಣ್ಣ ವಿವರಿಸಿದರು.

ನವೆಂಬರ್‌ನಲ್ಲಿ ಮ್ಯೂನಿಕ್‌ನಲ್ಲಿ ಐಎಸ್‌ಎಸ್‌ಎಫ್ ವಿಶ್ವಕಪ್ ಚಾಂಪಿಯನ್‌ಷಿಪ್ ನಡೆಯಲಿದೆ. ಅದಕ್ಕಾಗಿ ಇನ್ನೂ ನಾಲ್ಕು ತಿಂಗಳು ಇದೆ. ಚೇತರಿಸಿಕೊಂಡ ಬಳಿಕ ಆ ಚಾಂಪಿಯನ್‌ಷಿಪ್‌ನತ್ತ ಗಮನ ಹರಿಸಬಹುದು. ಸದ್ಯಕ್ಕೆ ಶೂಟಿಂಗ್ ಕಣಕ್ಕೆ ಇಳಿಯದಿರುವಂತೆ ವೈದ್ಯರು ಸೂಚನೆ ನೀಡಿದ್ದಾರೆ ಎಂದೂ ಅವರು ತಿಳಿಸಿದರು.ಪ್ರಕಾಶ್ ಸಾಧನೆ ಏನು...?

ಉದ್ಯಾನ ನಗರಿಯ ಬನಶಂಕರಿಯಲ್ಲಿ ನೆಲೆಸಿರುವ ಪ್ರಕಾಶ್ ಏಪ್ರಿಲ್‌ನಲ್ಲಿ ದಕ್ಷಿಣ ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಗ್ದ್ದೆದಿದ್ದರು. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದರು. ಲಂಡನ್, ಮ್ಯೂನಿಕ್, ಮಿಲಾನ್‌ನಲ್ಲಿ ನಡೆದ ವಿಶ್ವಕಪ್ ಚಾಂಪಿಯನ್‌ಗಳಲ್ಲೂ ಪಾಲ್ಗೊಂಡಿದ್ದರು. ಜಲಂಧರ್ ಹಾಗೂ ಪುಣೆಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಬೆಳ್ಳಿ ಪದಕ ಜಯಿಸಿದ್ದರು.ಪ್ರಕಾಶ್ ಈ ಹಿಂದೆ ಮೋಟಾರ್ ಬೈಕ್ ರ‌್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಗ ಒಮ್ಮೆ ಬಿದ್ದು ತೀವ್ರ ಗಾಯಗೊಂಡಿದ್ದರು. ಬಳಿಕ ಅವರು ಶೂಟಿಂಗ್‌ನತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ಆದರೆ ಉದ್ಯೋಗದ ಕಾರಣ ಕೆನಡಾಕ್ಕೆ ತೆರಳಿ ಐದು ವರ್ಷ ಅಲ್ಲಿ ನೆಲೆಸಿದ್ದರು. ಅಲ್ಲಿಂದ ಹಿಂದಿರುಗಿದ ಮೇಲೆ ಮತ್ತೆ ಶೂಟಿಂಗ್ ಕ್ರೀಡೆಯತ್ತ ಗಮನ ಹರಿಸಿದರು.ಕ್ರೀಡಾ ಜೀವನಕ್ಕೆ ತೊಂದರೆ ಇಲ್ಲ: `ಪ್ರಕಾಶ್ ಅವರನ್ನು ಮತ್ತೆ ಸ್ಪರ್ಧಾ ಕಣದಲ್ಲಿ ನೋಡಲು ನಾವು ಇಷ್ಟಪಡುತ್ತೇವೆ. ಈ ಸಮಸ್ಯೆಯಿಂದ ಅವರ ಕ್ರೀಡಾ ಜೀವನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ' ಎಂದು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆಯ ಮುಖ್ಯಸ್ಥ ರಣೀಂದರ್ ಸಿಂಗ್ ತಿಳಿಸಿದ್ದಾರೆ.

ಏನಿದು ಬೆಲ್ಸ್ ಪಾಲ್ಸಿ...?

ಇದು ಮುಖದ ಪಾರ್ಶ್ವವಾಯುವಿನ ಒಂದು ಕಾಯಿಲೆ. ಮುಖದ ನರದ ಸಮಸ್ಯೆ (ಮುಖದ ಸ್ನಾಯುಗಳನ್ನು ನಿಯಂತ್ರಿಸುವ ಏಳನೇ ನರ) ಎಂದೂ ಕರೆಯುತ್ತಾರೆ. ಈ ಸಮಸ್ಯೆಗೆ ಒಳಗಾದ ವ್ಯಕ್ತಿಯ ಮುಖದ ಒಂದು ಭಾಗ ಸೊಟ್ಟಗಾಗುತ್ತದೆ. ಆ ಕಡೆಯ ಕಣ್ಣಿನ ರಪ್ಪೆ ಮುಚ್ಚಲು ಕಷ್ಟವಾಗುತ್ತದೆ. ಈ ಕಾಯಿಲೆಗೆ ನಿರ್ದಿಷ್ಟ ಕಾರಣ ಇಲ್ಲ. ಸೋಂಕಿನಿಂದಲೂ ಬರಬಹುದು. ಇದಕ್ಕೆ ಬೆಲ್ಸ್ ಪಾಲ್ಸಿ ಎಂಬ ಹೆಸರು ಇಟ್ಟಿದ್ದು ಸ್ಕಾಟ್ಲೆಂಡ್‌ನ ದೇಹ ರಚನಾ ಶಾಸ್ತ್ರ ಪರಿಣತ ಚಾರ್ಲ್ಸ್ ಬೆಲ್.ನರತಜ್ಞರು ಏನೆನ್ನುತ್ತಾರೆ?

`ಇದಕ್ಕೆ ಕಾರಣ ಗೊತ್ತಾಗುವುದಿಲ್ಲ. ಸೋಂಕಿನಿಂದಲೂ ಈ ರೀತಿ ಆಗಬಹುದು. ಪಾರ್ಶ್ವವಾಯು (ಸ್ಟ್ರೋಕ್) ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ಬೆಲ್ಸ್ ಪಾಲ್ಸಿ ಮೆದುಳಿನ ಮೇಲೆ ಯಾವುದೇ ಸಮಸ್ಯೆ ಬೀರುವುದಿಲ್ಲ. ಬದಲಾಗಿ ಮುಖದ ನರಕ್ಕೆ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಇದನ್ನು ಮುಖದ ಪಾರ್ಶ್ವವಾಯು ಎಂದು ಕರೆಯಲಾಗುತ್ತದೆ. ಆದರೆ ಇದರಿಂದ ಪೂರ್ಣ ಚೇತರಿಸಿಕೊಳ್ಳುವ ಸಾಧ್ಯತೆಯೂ ಇದೆ. ಫಿಸಿಯೊಥೆರಪಿಯಿಂದ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬಹುದು' ಎಂದು ಗುಲ್ಬರ್ಗ ಬಸವೇಶ್ವರ ವೈದ್ಯಕೀಯ ಕಾಲೇಜಿನ ನರರೋಗ ತಜ್ಞ ಶಶಾಂಕ್ ರಾಮದುರ್ಗ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.