ಶುಕ್ರವಾರ, ಮೇ 20, 2022
27 °C

ಪ್ರಜ್ಞಾಪೂರ್ವಕ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ಪ್ರಜ್ಞಾ ನೃತ್ಯ ನಿರ್ದೇಶಕರ ಇಶಾರೆಯಂತೆ ಸೊಂಟ, ಎದೆ ಕುಣಿಸುತ್ತಿದ್ದರು. ನೆಲದ ತುಂಬ ಮರಳು. ಅಲ್ಲಲ್ಲಿ ಈಚಲುಮರ. ಪ್ರಜ್ಞಾ ಕೂದಲು ಆಡಲೆಂದು ಫ್ಯಾನ್ ಹಾಕಿದರೆ, ಅಲ್ಲೆಲ್ಲಾ ದೂಳೋ ದೂಳು. ಹಾಸನದ ಶನಿಮಹಾತ್ಮನ ದೇವಸ್ಥಾನದ ಪೂಜಾರಿ ರೇವಣ್ಣನವರು ಬರೆದ ಈಚಲಮರದವ್ವನ ಹಾಡಿನ ಚಿತ್ರೀಕರಣ ರಾಕ್‌ಲೈನ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಸಂದರ್ಭವದು.‘90’ ಚಿತ್ರದ ಟಾಕಿ ಭಾಗವೆಲ್ಲಾ ಮುಗಿದಿದ್ದು, ಬಾಕಿ ಇರುವುದು ಎರಡು ಹಾಡುಗಳ ಚಿತ್ರೀಕರಣವಷ್ಟೆ. ಅದರಲ್ಲಿ ಒಂದು ಈ ಈಚಲಮರದವ್ವನ ಹಾಡು. ಮೊನ್ನೆ ಮೊನ್ನೆವರೆಗೂ ನಾಯಕಿಯಾಗಿ ಕಾಣಿಸಿಕೊಂಡಿದ್ದ ಪ್ರಜ್ಞಾ ಹೀಗೆ ದಿಢೀರನೆ ಐಟಂ ಹುಡುಗಿಯಾಗಲು ಕಾರಣ ಸಾಧು ಕೋಕಿಲಾ ಕೃಪೆ. ತಮ್ಮ ಮುಂದಿನ ಚಿತ್ರ ‘ಅನಾರ್ಕಲಿ’ಯಲ್ಲಿ ಪ್ರಜ್ಞಾ ನಾಯಕಿಯಾಗುವುದು ಖಾತರಿ. ಆ ದೊಡ್ಡ ಅವಕಾಶ ಕೊಡುತ್ತಿರುವ ಕಾರಣ ‘90’ ಚಿತ್ರದ ಒಂದು ಹಾಡಿಗೆ ಕುಣಿದರೆ ಕಳೆದುಕೊಳ್ಳುವುದೇನು ಎಂಬ ತೀರ್ಮಾನಕ್ಕೆ ಪ್ರಜ್ಞಾ ಹಾಗೂ ಅವರ ತಾಯಿ ಬಂದಿದ್ದಾರೆ.ಸೂರ್ಯ ಕಂತುವ ಹೊತ್ತಿನಲ್ಲಿ ಪ್ರಜ್ಞಾ ಸೊಂಟವನ್ನೇನೋ ಬಳುಕಿಸುತ್ತಿದ್ದರು. ತಲೆಯಲ್ಲಿ ಮಾತ್ರ ಮರುದಿನ ಎರಡನೇ ಪಿಯೂಸಿ ಪರೀಕ್ಷೆ ಬರೆಯುವ ಚಿಂತೆ. ‘ಕರೆಸ್ಪಾಂಡೆನ್ಸ್’ನಲ್ಲಿ ಪ್ರಜ್ಞಾ ಪಿಯೂಸಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಪರೀಕ್ಷಾ ಕೇಂದ್ರ ಯಾವುದೆಂಬುದು ಕೂಡ ಥಟ್ಟನೆ ನೆನಪಾಗದಷ್ಟು ಅವರು ಚಿತ್ರೀಕರಣದಲ್ಲಿ ತನ್ಮಯರಾಗಿದ್ದರು.ಸಂಸಾರಸ್ಥರೆಲ್ಲಾ ತಮ್ಮ ಚಿತ್ರಕ್ಕೆ ಬರಲಿ ಎಂಬ ಕಾರಣಕ್ಕೆ ‘90’ ಚಿತ್ರದ ಶೀರ್ಷಿಕೆಯನ್ನು ತುಸು ಸುಧಾರಿಸಲು ನಿರ್ಮಾಪಕ ಸಾಧು ಕೋಕಿಲಾ ತೀರ್ಮಾನಿಸಿದ್ದಾರೆ. ‘90 ಕುಡಿ ಪಲ್ಟಿ ಹೊಡಿ’, ‘90- ಚಟ್ಟ ರೆಡಿ, ತಮಟೆ ಹೊಡಿ’ ಇವೇ ಮುಂತಾದ ಘೋಷವಾಕ್ಯಗಳನ್ನು ಚಿತ್ರದ ಶೀರ್ಷಿಕೆಯ ಭಾಗವಾಗಿಸಿಕೊಳ್ಳುವುದು ಅವರ ಉದ್ದೇಶ. ..ಚಿತ್ರದ ತುಂಬಾ ಕುಡಿತ ತೋರಿಸಿ ಕೊನೆಗೆ ನೀತಿ ಹೇಳಿದರೆ ಏನು ಪ್ರಯೋಜನ ಎಂಬ ಪ್ರಶ್ನೆ ಕಿವಿಮೇಲೆ ಬಿದ್ದಿದ್ದೇ ಸಾಧು ಉತ್ತರಿಸಲು ಕುರ್ಚಿಯ ತುದಿಗೆ ಬಂದು ಕೂತರು. ತಮ್ಮ ಚಿತ್ರದಲ್ಲಿ ಒಂದೊಂದು ಸನ್ನಿವೇಶವೂ ಕುಡಿತದ ದುಷ್ಪರಿಣಾಮವನ್ನು ಥಟ್ಟನೆ ಹೇಳುತ್ತದೆಂಬುದು ಅವರ ಸಮಜಾಯಿಷಿ. ಅದಕ್ಕೆ ಉದಾಹರಣೆಯಾಗಿ ಅವರು ಒಂದು ಸನ್ನಿವೇಶವನ್ನೇ ಬಿಚ್ಚಿಟ್ಟರು- ಕುಡುಕ ಮಗನನ್ನು ಕಂಡು ರೋಸಿಹೋಗಿ, ಅವನ ತಾಯಿಯೂ ಬಾರ್‌ಗೆ ಹೋಗುತ್ತಾಳೆ. ಮಗ ಕುಡಿಯುವ ಜಾಗದಲ್ಲೇ ಕೂತು ಕುಡಿಯತೊಡಗುತ್ತಾಳೆ.ಅದನ್ನು ನೋಡಿ ಚಕಿತಗೊಳ್ಳುವ ಮಗ, ‘ನೀನೂ ಕುಡಿಯೋದಾ’ ಎನ್ನುತ್ತಾನೆ. ‘ಇನ್ನೇನ್ ಮಾಡ್ಲಿ ಮಗ... ನೀನಂತೂ ನಾ ಹೇಳಿದ್ ಮಾತ್ ಕೇಳೊಲ್ಲ’ ಅಂದಾಗ, ಮಗನ ಮನಸ್ಸು ಪರಿವರ್ತನೆಯಾಗುತ್ತದೆ. ಚಿತ್ರದ ಮೊದಲರ್ಧ ಮಜಾ, ಎರಡನೇ ಅರ್ಧ ಸೀರಿಯಸ್ಸು ಎಂದು ಸ್ಪಷ್ಟನೆ ಕೊಟ್ಟವರು ನಿರ್ದೇಶಕ ಲಕ್ಕಿ ಶಂಕರ್. ಇನ್ನೂ ಎರಡು ಮೂರು ಸಿನಿಮಾ ಮಾಡುವಷ್ಟು ಕಥೆಗಳು ಈ ಚಿತ್ರಕ್ಕೆ ಯೋಚಿಸುವಾಗಲೇ ಅವರಲ್ಲಿ ಮೂಡಿದವಂತೆ.ಎರಡು ಪಟ್ಟಾಪಟ್ಟಿ ಚೆಡ್ಡಿ ಧರಿಸಿ, ಮೇಲೆ ಅಂಗಿಯೇ ಇಲ್ಲದೆ ಬರೀ ಕೋಟು ತೊಟ್ಟಿದ್ದ, ಕುತ್ತಿಗೆಗೆ ಒಂದು ಟೈ ಕೂಡ ಕಟ್ಟಿಕೊಂಡಿದ್ದ ಬಿರಾದಾರ್, ‘ಈ ಚಿತ್ರದಲ್ಲೂ ಭಿಕ್ಷುಕನ ಪಾತ್ರ... ಹೀಗೆ ಡಿಫರೆಂಟಾಗಿ ಕಾಣುತ್ತಿದ್ದೇನೆ’ ಎಂದು ತಮ್ಮನ್ನು ತಾವೇ ಗೇಲಿ ಮಾಡಿಕೊಂಡರು. ಬಾರ್ ಮುಂದೆ ಬಕ್ರಾ ಮಾಡುವ ಪಾತ್ರಧಾರಿಯಾಗಿರುವ ಕುರಿ ಪ್ರತಾಪ್‌ಗೆ ಆಡಲು ಮಾತುಗಳೇನೂ ಇರಲಿಲ್ಲ.ಸಾಧು ಪ್ರಕಾರ ಪ್ರಜ್ಞಾ ಕುಣಿಯುತ್ತಿದ್ದದ್ದು ಐಟಂ ಸಾಂಗ್ ಅಲ್ಲ. ಅದರ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದ್ದು, ಬಬಿತಾ ಪುತ್ರಿ ಲಕ್ಷ್ಯ ನರ್ತಿಸಲು ಬರಲಿದ್ದಾರೆ.‘90’ ಮುಗಿದ ಮೇಲೆ ಸಾಧು ‘ಅನಾರ್ಕಲಿ’ಯನ್ನು ನಿರ್ಮಿಸಿ, ನಿರ್ದೇಶಿಸಲಿದ್ದಾರೆ. ಡಿಫರೆಂಟ್ ಪ್ರೇಮಕಥೆಯ ಈ ಚಿತ್ರದ ನಾಯಕ ದಿಗಂತ್. ನಾಯಕಿ ಪ್ರಜ್ಞಾ.

g


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.