ಶನಿವಾರ, ಮೇ 8, 2021
26 °C

ಪ್ರತಿ ಟನ್ ಕಬ್ಬಿಗೆ ರೂ. 3500 ಬೆಲೆ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಡಾ. ಸಿ.ರಂಗರಾಜನ್ ಸಮಿತಿಯ ವರದಿ ಮತ್ತು ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು. ಪ್ರತಿ ಟನ್ ಕಬ್ಬಿಗೆ ರೂ.3500 ಬೆಲೆ ನಿಗದಿ ಮಾಡಬೇಕು' ಎಂದು ಕೇಂದ್ರ ಸರ್ಕಾರವನ್ನು ಭಾರತೀಯ ಕಬ್ಬು ಬೆಳೆಗಾರರ ಸಂಘವು ಒತ್ತಾಯಿಸಿದೆ.ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಕಬ್ಬು ಬೆಲೆ ನಿಗದಿ (ಎಫ್‌ಆರ್‌ಪಿ) ಕುರಿತು ಚರ್ಚಿಸಲು ಕೇಂದ್ರ ಕೃಷಿ ಬೆಲೆ ನಿಗದಿ ಆಯೋಗದ ಆಶ್ರಯದಲ್ಲಿ ನವದೆಹಲಿಯಲ್ಲಿ ಬುಧವಾರ ಆಯೋಜಿಸಿದ್ದ ಕಬ್ಬು ಬೆಳೆಗಾರರ ಮುಖಂಡರು ಮತ್ತು ಕಬ್ಬು ಅಭಿವೃದ್ಧಿ ನಿರ್ದೇಶನಾಲಯದ ಅಧಿಕಾರಿಗಳ ಸಭೆಯಲ್ಲಿ ಮುಖಂಡರು ಈ ಒತ್ತಾಯ ಮಾಡಿದ್ದಾರೆ.ಕೇಂದ್ರ ಕೃಷಿ ಬೆಲೆ ನಿಗದಿ ಆಯೋಗದ ಅಧ್ಯಕ್ಷ ಅಶೋಕ್ ಗುಲಾಟಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದಿಂದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಶಿವಾನಂದ ಗುರುಮಠ್ ಭಾಗವಹಿಸಿದ್ದರು.`ದೇಶದಾದ್ಯಂತ ಕಬ್ಬಿನ ಉತ್ಪಾದನೆ ಶೇ 20ರಷ್ಟು ಕಡಿಮೆ ಆಗಿದೆ. ಕಬ್ಬಿನ ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಕಾರ್ಖಾನೆ ಮಾಲೀಕರು ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸುತ್ತಿಲ್ಲ.ಇದರಿಂದ ಕಬ್ಬಿನ ಉತ್ಪಾದನೆ ಕುಂಠಿತವಾಗುತ್ತಿದೆ. ರೈತರು ಶೋಷಣೆಗೊಳಗಾಗುತ್ತಿದ್ದಾರೆ' ಎಂದು ಶಾಂತಕುಮಾರ್ ಗಮನ ಸೆಳೆದರು.`ಸಕ್ಕರೆ ಕಾರ್ಖಾನೆಗಳ ಸಕ್ಕರೆ ಇಳುವರಿ ಮತ್ತು ಲಾಭಾಂಶ ಪರಿಶೀಲನೆ ನಡೆಸಲು ರಾಜ್ಯ ಮಟ್ಟದಲ್ಲಿ ತಜ್ಞರ ಸಮಿತಿಯನ್ನು ರಚಿಸಬೇಕು. ಕಬ್ಬು ಬೆಳೆಗಾರರ ಪ್ರತಿನಿಧಿಗಳು ಹಾಗೂ ಕಾರ್ಖಾನೆಗಳ ನಡುವೆ ಕಾನೂನುಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿಯಾಗಬೇಕು. ರೈತರಿಗೆ ಬರಬೇಕಾದ ಕಬ್ಬಿನ ಬಾಕಿ ಹಣ ತಕ್ಷಣವೇ ಪಾವತಿಗೆ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.`ಕಬ್ಬು ಬೆಳೆ ವಿಮೆ ಜಾರಿಗೆ ತಂದು ಬೆಳೆ ವಿಮೆ ಕಂತನ್ನು ರೈತರ ಜೊತೆ ಒಪ್ಪಂದ ಮಾಡಿಕೊಂಡ ಕಾರ್ಖಾನೆಗಳೇ ಭರಿಸಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಕೃಷಿ ಕಾರ್ಯಗಳಿಗೆ ಅಳವಡಿಸಬೇಕು' ಎಂದು ಅವರು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.