ಬುಧವಾರ, ಜನವರಿ 29, 2020
29 °C

ಪ್ರಥಮ ಪತ್ರಿಕಾ ಛಾಯಾಗ್ರಾಹಕಿ

ಸಿ. ಜಿ. ಮಂಜುಳಾ Updated:

ಅಕ್ಷರ ಗಾತ್ರ : | |

ಕಳೆದ ಭಾನುವಾರ ನಿಧನರಾದ ಹೊಮೈ ವ್ಯಾರಾವಾಲಾ ಭಾರತದ ಪ್ರಥಮ ಮಹಿಳಾ ವೃತ್ತಿಪರ ಪತ್ರಿಕಾ ಛಾಯಾಗ್ರಾಹಕಿ. ಅವರ ನಿಧನದೊಂದಿಗೆ ಛಾಯಾಚಿತ್ರಗ್ರಹಣದ ಯುಗವೊಂದು ಅಂತ್ಯವಾದಂತಾಗಿದೆ.1938ರಿಂದ 1970ರವರೆಗಿನ ಭಾರತದ ಐತಿಹಾಸಿಕ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ  ಹಿಡಿದವರು ಅವರು. ಬ್ರಿಟಿಷ್ ಆಡಳಿತದ ಕೊನೆಯ ದಿನಗಳು ಹಾಗೂ ಹೊಸ ರಾಷ್ಟ್ರದ ಹುಟ್ಟು, ಬೆಳವಣಿಗೆಗಳನ್ನು ಅವರ ಚಿತ್ರಗಳು ದಾಖಲಿಸಿವೆ.ಮೂರು ದಶಕಗಳಿಗೂ ಹೆಚ್ಚಿನ ಈ ಅವಧಿಯಲ್ಲಿ, ಪತ್ರಿಕಾ ಛಾಯಾಗ್ರಹಣ ಎಂಬುದು ಪೂರ್ಣ ಪುರುಷ ಜಗತ್ತೇ ಆಗಿತ್ತು. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಹೀಗಿದ್ದೂ ಆ ಕಾಲದಲ್ಲಿ ಹೊಮೈ,  ಮೊದಲ ಹಾಗೂ ಏಕೈಕ ಮಹಿಳಾ ಪತ್ರಿಕಾ ಛಾಯಾಚಿತ್ರಗ್ರಾಹಕರಾಗಿದ್ದರು ಎಂಬುದೇ ಹೆಗ್ಗಳಿಕೆ.ಗುಜರಾತ್‌ನ ನವ್‌ಸಾರಿಯಲ್ಲಿ 1913ರ ಡಿ.9ರಂದು ಪಾರ್ಸಿ ಕುಟುಂಬದಲ್ಲಿ ಹೊಮೈ ಜನನ. ಹೊಮೈ ತಂದೆ ಪಾರ್ಸಿ- ಉರ್ದು ನಾಟಕ ಕಂಪೆನಿಯಲ್ಲಿ ನಟರಾಗಿದ್ದರು. ನಂತರ ಮುಂಬೈನಲ್ಲಿ ವಿದ್ಯಾಭ್ಯಾಸ. ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ಸ್ ನಿಂದ ಕಲೆಯಲ್ಲಿ ಡಿಪ್ಲೊಮಾ.ಹದಿಹರೆಯದ ಹುಡುಗಿಯಾಗಿದ್ದಾಗಲೇ ಛಾಯಾಗ್ರಾಹಕ ಮಾಣೇಕ್ ಷಾ ಜೊತೆ ಪ್ರೇಮವಿವಾಹ. ಹೀಗಾಗಿ, ಹೊಮೈಗೂ ಛಾಯಾಚಿತ್ರಗ್ರಹಣದಲ್ಲಿ ಆಸಕ್ತಿ ಬೆಳೆಯಿತು. ಆಕೆ ತನ್ನ ಪತಿಗೆ ಸ್ನೇಹಿತರೊಬ್ಬರು ಉಡುಗೊರೆ ನೀಡಿದ್ದ ರೋಲಿಫ್ಲೆಕ್ಸ್ ಕ್ಯಾಮೆರಾ ಬಳಸಲು ಆರಂಭಿಸಿದರು. ನಂತರ  ಸ್ಪೀಡ್‌ಗ್ರಾಫಿಕ್ ಬಳಸಿದರು. ಈ ಎರಡೂ ಕ್ಯಾಮೆರಾಗಳು ವಿಶ್ವದಾದ್ಯಂತ ಎಲ್ಲಾ ಪತ್ರಿಕಾ ಛಾಯಾಗ್ರಾಹಕರೂ ಬಳಸುವಂತಹದ್ದೇ ಆಗಿದ್ದವು.ಆರಂಭದ ದಿನಗಳಲ್ಲಿ, ಹೊಮೈ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಬರುತ್ತಿದ್ದರು. ಮಾಣೇಕ್ ಷಾ, ಮನೆಯ ಡಾರ್ಕ್‌ರೂಮ್‌ನಲ್ಲಿ ಗಂಟೆಗಟ್ಟಲೆ ಸರಿಯಾದ ಛಾಯೆಗಳಿಗಾಗಿ ಶ್ರಮಿಸುತ್ತಿದ್ದರು. ಛಾಯಾಗ್ರಹಣ ಹಾಗೂ ಪತ್ರಿಕಾಛಾಯಾಗ್ರಹಣ ಕ್ಷೇತ್ರದಲ್ಲಿ ಹೊಮೈ ಮತ್ತು ಮಾಣೇಕ್ ಷಾ ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತಿದ್ದರು.

1942ರಿಂದ ದೆಹಲಿಯ ಬ್ರಿಟಿಷ್ ಇನ್‌ಫರ್ಮೇಷನ್ ಸರ್ವೀಸ್ (ಬಿಐಎಸ್)ನಲ್ಲಿ ಹೊಮೈ , ಮಾಣೇಕ್ ಷಾ ಕೆಲಸ ಮಾಡಲು ಆರಂಭಿಸಿದರು. ಹೊಮೈ ಅವರಿಗೆ ಬಿಐಎಸ್‌ನ ಪೂರ್ಣಾವಧಿ ಕೆಲಸದ ಜೊತೆಗೆ  ಫ್ರೀಲಾನ್ಸ್ ಅಸೈನ್‌ಮೆಂಟ್‌ಗೂ ಅವಕಾಶವಿತ್ತು.“ಬಹಳಷ್ಟು ಜನ ನಾನು ರಾಜಕೀಯ ಛಾಯಾಗ್ರಹಣ ಮಾತ್ರ ಮಾಡಿರುವುದಾಗಿ ಭಾವಿಸುತ್ತಾರೆ. ಆದರೆ ಸಮಾಜದ ಪ್ರತಿಷ್ಠಿತರ ಸಾಮಾಜಿಕ ಸಮಾರಂಭಗಳು, ಖ್ಯಾತನಾಮರ ಚಿತ್ರಗಳನ್ನು ಮುಂಬೈನ `ಆನ್‌ಲುಕರ್~ ಮ್ಯಾಗಜೀನ್‌ಗೆ ನೀಡುತ್ತಿದ್ದೆ. ಮಾನವೀಯ ಆಸಕ್ತಿಯ ಫೋಟೊ ಫೀಚರ್‌ಗಳನ್ನು ವಿವಿಧ ಪತ್ರಿಕೆಗಳು ಪ್ರಕಟಿಸಿವೆ” ಎಂದು ಹೊಮೈ ಹೇಳಿಕೊಂಡಿದ್ದಾರೆ.ದೆಹಲಿಯಾದ್ಯಂತ ಹೊಮೈ ಅವರು ಸೈಕಲ್‌ನಲ್ಲಿ ಸಂಚರಿಸುತ್ತಿದ್ದರು. ಸೀರೆ ಉಟ್ಟ ಈ ಕೃಶಾಂಗಿಯ ಭುಜಗಳಲ್ಲಿ ಕ್ಯಾಮೆರಾಗಳು ಮತ್ತು ಎಕ್ವಿಪ್‌ಮೆಂಟ್ ಇರುತ್ತಿದ್ದ ಎರಡು ದೊಡ್ಡ ಚೀಲಗಳು ಇಳಿಬಿಟ್ಟಿರುತ್ತಿದ್ದವು. ಜೊತೆಗೆ ಹೊಸ ಫ್ಲ್ಯಾಷ್‌ಬಲ್ಬ್‌ಗಳು ಮತ್ತು ಫ್ಯೂಸ್ಡ್ ಬಲ್ಬ್ ಇಟ್ಟ ಎರಡು ಬಾಕ್ಸ್‌ಗಳೂ ಸದಾ ಇರುತ್ತಿತ್ತು.

 

ಬೀದಿಯಲ್ಲಿ ಜನರ ವಿಚಿತ್ರ ದೃಷ್ಟಿಗಳು ಎದುರಾಗುತ್ತಿದ್ದವು. `ಚಿತ್ರ ತೆಗೆಯುವ ವೇಳೆ ಸಹಛಾಯಾಗ್ರಾಹಕರ ಕಾಲುಗಳು ನನ್ನ ಸೀರೆ ತುದಿಗೆ ತೊಡರಿ ತೊಡರಿ ನನ್ನ ಬಹಳಷ್ಟು ಸೀರೆಗಳು ಹರಿದ ನಂತರ ಸೆಲ್ವಾರ್ ತೊಡಲು ಆರಂಭಿಸಿದೆ~ ಎಂದು ಹೊಮೈ ಹೇಳಿಕೊಂಡಿದ್ದಾರೆ.ಬಹುತೇಕ  ಹೊಮೈ ಅವರ ಚಿತ್ರಗಳು ವ್ಯಕ್ತಿಗಳನ್ನು ಸೀದಾಸಾದಾ ಸಂದರ್ಭಗಳಲ್ಲಿ (`ಕ್ಯಾಂಡಿಡ್~) ಸೆರೆಹಿಡಿದಿವೆ. ಅವು ಬೆಚ್ಚಗಿನ ಆತ್ಮೀಯತೆಯನ್ನು ಹೊರಸೂಸುವಂಥವು. ಹೀಗಾಗಿ ಪ್ರಭಾವಿ ವ್ಯಕ್ತಿಗಳ ಜೊತೆಗೆ ಅವರಿಗೆ ತುಂಬಾ ಸ್ನೇಹವಿತ್ತೇನೊ ಎಂದು ಅನೇಕರು ಭಾವಿಸುವುದಿತ್ತು.ಆದರೆ, ತಾವು ಚಿತ್ರ ತೆಗೆಯುತ್ತಿರುವ ವ್ಯಕ್ತಿಗಳಿಂದ ಅಂತರವನ್ನು ಅವರು ಉದ್ದೇಶ ಪೂರ್ವಕವಾಗಿಯೇ ಕಾಯ್ದುಕೊಳ್ಳುತ್ತಿದ್ದರು. `ನಿಜ ಹೇಳಬೇಕೆಂದರೆ ನಾನು ಚಿತ್ರ ತೆಗೆಯಬೇಕಾದ ವ್ಯಕ್ತಿ ಜೊತೆ ಕುಶಲೋಪರಿಗಿಳಿಯುತ್ತಿರಲಿಲ್ಲ.

 

ಮೂಲೆಯಲ್ಲಿ ನಿಂತು ಎಲ್ಲವನ್ನೂ ವೀಕ್ಷಿಸುತ್ತಾ ಅವಕಾಶಗಳು ಒದಗಿದಂತೆ ಚಿತ್ರಗಳನ್ನು ತೆಗೆಯುತ್ತಿದ್ದೆ. ಇತರ ಛಾಯಾಗ್ರಾಹಕರು ಚಿತ್ರ ತೆಗೆದಾದ ನಂತರ ಹೊರಟು ಬಿಡುತ್ತಿದ್ದರು. ಆದರೆ ನಾನು ಮತ್ತೊಂದು ಅಸಾಧಾರಣ ಚಿತ್ರಕ್ಕಾಗಿ ಕಾಯುತ್ತಿರುತ್ತಿದ್ದೆ.

 

ಪುರುಷರ ಜಗತ್ತಿನಲ್ಲಿ ಸಾಂಪ್ರ ದಾಯಿಕ ಸಮಾಜದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂಬುದು ನನಗೆ ಗೊತ್ತಿತ್ತು. ಹೀಗಾಗಿ ಯಾರಿಗೂ ತಪ್ಪುಸಂದೇಶ ರವಾನೆಯಾಗಬಾರದೆಂದು ಈ `ನಿರ್ದಾಕ್ಷಿಣ್ಯ~ದ ವ್ಯಕ್ತಿತ್ವ ಬೆಳೆಸಿಕೊಂಡಿದ್ದೆ~ ಎಂದಿದ್ದಾರೆ ಹೊಮೈ. ಹೀಗಿದ್ದೂ ಅವರು ಫೋಟೊ ತೆಗೆದಿದ್ದಂತಹ ಅನೇಕ ವ್ಯಕ್ತಿಗಳು ಅವರನ್ನು ಗುರುತಿಸುತ್ತಿದ್ದರು.

 

ಒಮ್ಮೆ ಅವರು ಅಧಿಕೃತ ಕಾರ್ಯಕ್ರಮದ ಮೇರೆಗೆ ಪಂಡಿತ್ ನೆಹರೂರ ಛಾಯಾಚಿತ್ರ ತೆಗೆಯಲು ದೆಹಲಿಯಿಂದ ಹೊರಗೆ ಪ್ರಯಾಣ ಮಾಡಬೇಕಾಯಿತು. `ಆಗ ನೆಹರೂ ನನ್ನನ್ನು ನೋಡಿ,` ತುಮ್ ಯಹ್ಞಾಂ ಭಿ ಆ ಗಯೀ~ ಎಂದಿದ್ದರು~ ಎಂಬುದನ್ನು ನೆನೆಸಿಕೊಂಡಿದ್ದಾರೆ.ಮೌಂಟ್‌ಬ್ಯಾಟೆನ್‌ನಿಂದ ಮಾರ್ಷಲ್ ಟಿಟೊ ವರೆಗೆ, ರಾಣಿ ಎಲಿಜಬೆತ್‌ನಿಂದ ಜಾಕ್ವೆಲಿನ್ ಕೆನಡಿವರೆಗೆ, ಕ್ರುಶ್ಚೇವ್‌ನಿಂದ ಕೊಸಿಗಿನ್‌ವರೆಗೆ, ಐಷೆನ್‌ಹೊವರ್‌ನಿಂದ ನಿಕ್ಸನ್‌ವರೆಗೆ ಐತಿಹಾಸಿಕ ವಿದ್ಯಮಾನ ಗಳು ಹಾಗೂ ವ್ಯಕ್ತಿಗಳನ್ನು ಹೊಮೈ ಅವರ ಕ್ಯಾಮೆರಾ ಕಣ್ಣು ದಾಖಲಿಸಿದೆ.

 

20ನೇ ಶತಮಾನದ ಇತಿಹಾಸದ ದಿಕ್ಕು ರೂಪಿಸಿದ ಅಟ್ಲೀ, ನಾಸೆರ್, ಚೌ ಎನ್ ಲಾಯ್, ಹೋ ಚಿ ಮಿನ್ ಮತ್ತಿತರರೂ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. 1947ರಲ್ಲಿ ಸ್ವತಂತ್ರ ಭಾರತದ ಮೊದಲ ಧ್ವಜಾರೋಹಣವನ್ನು ಚಿತ್ರೀಕರಿಸಿದವರು ಅವರು.

 

ಭಾರತದ ಕಡೆಯ ವೈಸರಾಯ್ ಲಾರ್ಡ್ ಮೌಂಟ್‌ಬ್ಯಾಟೆನ್ ನಿರ್ಗಮನ, ಭಾರತದ ವಿಭಜನೆಯನ್ನು ನಿರ್ಧರಿಸಿದ ಸಭೆ, ನೆಹರೂ ಹಾಗೂ ಮಹಾತ್ಮ ಗಾಂಧಿ  ಅಂತಿಮಯಾತ್ರೆಗಳು ಸೇರಿದಂತೆ ಅನೇಕ ಚಾರಿತ್ರಿಕ ಕ್ಷಣಗಳನ್ನು ಸೆರೆ ಹಿಡಿದ ಕೀರ್ತಿ ಅವರದ್ದು. ಬ್ರಿಟಿಷ್ ಹಾಗೂ ಭಾರತೀಯ ರಾಜಕಾರಣಿಗಳ ಅಪರೂಪದ  ಕ್ಷಣಗಳನ್ನು ಅವರ ಕ್ಯಾಮೆರಾ ದಾಖಲಿಸಿದೆ.ಭಾರತಕ್ಕೆ ಆಗಿನ ಬ್ರಿಟಿಷ್ ಹೈಕಮೀಷನರ್‌ರ ಪತ್ನಿ ಶ್ರಿಮತಿ ಸೈಮನ್ ಅವರ ತುಟಿಗಳ ಮೇಲಿದ್ದ  ಸಿಗರೇಟಿಗೆ ನೆಹರೂ ಅವರು ಬೆಂಕಿ  ಹೊತ್ತಿಸುತ್ತಿರುವ ಚಿತ್ರ ಇದಕ್ಕೆ ಒಂದು ಉದಾಹರಣೆ.   ವೈಡ್ ಆ್ಯಂಗಲ್ ಲೆನ್ಸ್ ಆಗಲಿ ಟೆಲಿ ಫೊಟೊಗಳಾಗಲಿ ಇಲ್ಲದಂತಹ ಕಾಲದಲ್ಲಿ ತಾನು ಚಿತ್ರ ತೆಗೆಯಬೇಕೆಂದಿದ್ದವರ ಬಳಿ ಹೊಮೈ ಅವರು ತೀರಾ ಹತ್ತಿರ ನಿಲ್ಲಬೇಕಾಗುತ್ತಿತ್ತು. `ಕಾಂಪೊಸಿಟ್ ಶಾಟ್~ಗಳನ್ನು ಪಡೆದುಕೊಳ್ಳಲು  ತೀರಾ ದೂರ ಅಥವಾ ಎತ್ತರದ ಸ್ಥಳಗಳಲ್ಲಿ ನಿಲ್ಲಬೇಕಿತ್ತು.

 

ವಿಭಜನೆಗೆ ಮುಂಚೆ ಜಿನ್ನಾ ಅವರ ಕಡೆಯ ಪತ್ರಿಕಾಗೋಷ್ಠಿಯಲ್ಲಿ ಅವರು `ಟಾಪ್ ಆ್ಯಂಗಲ್ ಷಾಟ್~ಗಳನ್ನು ಪಡೆದುಕೊಳ್ಳಲು ನಿರ್ಧರಿಸಿದರು. ಕೋಣೆಯ ಮೂಲೆಯಲ್ಲಿದ್ದ ಮರದ ಪ್ಯಾಕಿಂಗ್ ಪೆಟ್ಟಿಗೆಗಳ ಮೇಲೆ ನಿಂತು ಚಿತ್ರ ತೆಗೆಯಲು ತೊಡಗಿದರು. ಪ್ಯಾಕಿಂಗ್ ಪೆಟ್ಟಿಗೆಗಳು ಜಾರಿ ಆಕೆ ಜಿನ್ನಾ ಪಾದದಡಿ ಉರುಳಿಬಿದ್ದರು.ಆಗ  ಕಕ್ಕಾಬಿಕ್ಕಿಯಾದ  ಜಿನ್ನಾ ಪ್ರತಿಕ್ರಿಯೆ ` ಹೋ ಏನೂ ಪೆಟ್ಟಾಗಲಿಲ್ಲ ತಾನೆ~. ಇದಾದ ಅನೇಕ ವರ್ಷಗಳ ನಂತರ ಜನರಲ್ ಆಯೂಬ್ ಖಾನ್, ಪಾಕಿಸ್ತಾನದ ಅಧ್ಯಕ್ಷರಾಗಿ ಭಾರತಕ್ಕೆ ಬಂದಾಗ ಹೊಮೈ ಅವರು ನೆಹರು ಜೊತೆ ಆಯೂಬ್‌ರ ಚಿತ್ರವನ್ನು ತಮ್ಮ ಅಚ್ಚುಮೆಚ್ಚಿನ `ಲೋ ಆ್ಯಂಗಲ್ ಪೊಸಿಷನ್~ನಿಂದ  ಕ್ಲಿಕ್ಕಿಸಿದರು. ಇತರ ಛಾಯಾಗ್ರಾಹಕರ ಕಾಲುಗಳ ಮಧ್ಯೆ ಸಿಕ್ಕಿಕೊಂಡು ಎದ್ದೇಳಲು ಕಷ್ಟಪಡುತ್ತಿದ್ದ ಅವರನ್ನು ಕಂಡ ಜನರಲ್ ಹೀಗೆ ಹೇಳಿದ್ದರಂತೆ. `ಛೇ ಎಂತಹದಿದು. ಸ್ತ್ರೀರಕ್ಷಣೆಯ (ಅನ್‌ಷಿವಲ್ರಸ್) ಮನೋಭಾವವೇ ಇಲ್ಲವಲ್ಲ .... ಆ ಮಹಿಳೆಗೆ ಎದ್ದೇಳಲೇ ಅವಕಾಶ ನೀಡುತ್ತಿಲ್ಲವಲ್ಲಾ..~ ಆಗ,  ನೆಹರೂ ಹೇಳಿದ್ದು ಹೀಗೆ ` ಅದೇನೂ ತೊಂದರೆ ಇಲ್ಲ. ಆಕೆ ಕೆಲಸ ಮಾಡುವ ವಿಧಾನವೇ ಹಾಗೆ...~.ಭಾರಿ ಕ್ಯಾಮೆರಾ ಹೊತ್ತು ತಿರುಗುವುದಾಗಲಿ, ಕುರ್ಚಿ ಮೇಲೆ ಹತ್ತಿ ಫೋಟೊ ತೆಗೆಯುವುದಾಗಲಿ, ತಡರಾತ್ರಿವರೆಗೆ ಫೋಟೊಗಳನ್ನು ಸಂಸ್ಕರಿಸುತ್ತಾ ನಿಗದಿತ ಗಡುವಿಗೆ ಫೋಟೊ ತಲುಪಿಸುವ ಕಾರ್ಯಗಳಿಗಾಗಲಿ ಹಿಂಜರಿಯುತ್ತಿರಲಿಲ್ಲ. ಈ ಗುಣಗಳೇ ಅವರನ್ನು ಪಕ್ಕಾ ವೃತ್ತಿಪರ ಪತ್ರಿಕಾಛಾಯಾಗ್ರಾಹಕಿಯಾಗಿ ಬೆಳೆಸಿದ್ದು.`ಡಾಲ್ಡಾ  13~ ಹೆಸರಲ್ಲಿ ಹೊಮೈ ಅವರ ಚಿತ್ರಗಳು ಪ್ರಕಟವಾಗುತ್ತಿದ್ದವು. ಈ ವಿಚಿತ್ರ ಹೆಸರಿಗೂ ಒಂದು ಕಥೆ ಇದೆ. ಅವರ  ಫಿಯೆಟ್ ಕಾರಿನ ಲೈಸೆನ್ಸ್ ನಂಬರ್ `ಡಿಎಲ್‌ಡಿ 13~. ಅದನ್ನು ಹೇಳುವಾಗ `ಡಾಲ್ಡಾ ಥರ್ಟೀನ್~ ಎಂಬಂತೆ ಕೇಳಿಸುತ್ತಿತ್ತು. ಅದನ್ನೇ  ತಮ್ಮ `ಕಾವ್ಯನಾಮ~ವಾಗಿಸಿಕೊಂಡರು.1970ರಲ್ಲಿ ಪತಿಯ ನಿಧನದ ಒಂದು ವರ್ಷದ ನಂತರ ವೃತ್ತಿಗೆ ಹೊಮೈ  ವಿದಾಯ ಹೇಳಿದರು. ಮತ್ತೆಂದೂ ಅವರು ಫೋಟೊ ಕ್ಲಿಕ್ಕಿಸಲಿಲ್ಲ. ಆ ನಂತರ ಬರೋಡಾದಲ್ಲಿ ಒಂಟಿಯಾಗಿ ಮೂರು ದಶಕ ಅನಾಮಧೇಯ ಬದುಕನ್ನೇ ಬದುಕಿದರು. ಇದ್ದ ಒಬ್ಬ ಮಗನೂ 1989ರಲ್ಲಿ ಕ್ಯಾನ್ಸರ್‌ನಿಂದ ತೀರಿಕೊಂಡರು. ತಮ್ಮ 98ರ ವಯಸ್ಸಿನ ಕಡೆಯ ದಿನಗಳವರೆಗೂ ತಮ್ಮೆಲ್ಲಾ ಕೆಲಸಗಳನ್ನೂ ತಾವೇ ಮಾಡಿಕೊಳ್ಳುತ್ತಿದ್ದಂತಹ ಅಸಾಧಾರಣ ಮಹಿಳೆ ಅವರು.ಅಡುಗೆ, ಕಾರ್ಪೆಂಟಿಂಗ್, ಪ್ಲಂಬಿಂಗ್, ಎಲೆಕ್ಟ್ರಿಕ್ ಫಿಟ್ಟಿಂಗ್ ಹಾಗೂ ಕಾರಿನ ಸಣ್ಣಪುಟ್ಟ ರಿಪೇರಿಗಳನ್ನು ಸ್ವತಃ ತಾವೇ ಮಾಡಿಕೊಳ್ಳುತ್ತಿದ್ದರು. ಎಂಬ್ರಾಯಿಡಿರಿ, ನಿಟ್ಟಿಂಗ್‌ನಲ್ಲೂ ಅದಮ್ಯ ಆಸಕ್ತಿ. `ಸಣ್ಣ ಸಣ್ಣ ಪ್ರಯೋಗಗಳು ನನ್ನನ್ನು ಸದಾ ಕ್ರಿಯಾಶೀಲವಾಗಿರಿಸುತ್ತವೆ~ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.ತಮ್ಮೆಲ್ಲಾ  ಛಾಯಾಚಿತ್ರಗಳ ಸಂಗ್ರಹವನ್ನು ನವದೆಹಲಿ ಮೂಲದ `ಆಲ್ಕಾಜಿ ಫೌಂಡೇಷನ್ ಫಾರ್ ದಿ ಆರ್ಟ್ಸ್~ ಗೆ ಹೊಮೈ ನೀಡಿದ್ದಾರೆ. ಇದು `ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್~ ಸಹಯೋಗದಲ್ಲಿ ಅವರ ಛಾಯಾಚಿತ್ರ ಪ್ರದರ್ಶನವನ್ನು ಕಳೆದ ವರ್ಷ ಬೆಂಗಳೂರಿನಲ್ಲಿ ನಡೆಸಿತ್ತು.

 

ಸಬೀನಾ ಗಾಡಿಹೋಕ್ ಬರೆದ `ಇಂಡಿಯಾ ಇನ್ ಫೋಕಸ್: ದಿ ಕ್ಯಾಮೆರಾ ಕ್ರೋನಿಕಲ್ಸ್ ಆಫ್ ಹೊಮೈ ವ್ಯಾರಾವಾಲಾ~ ಪುಸ್ತಕದಲ್ಲಿ  ಹೊಮೈ ಅವರ ಎಲ್ಲಾ ಕಪ್ಪು ಬಿಳುಪಿನ `ಸೆಪಿಯಾ~ ನೆನಪುಗಳು ಜೀವತಳೆದು ಮೈದಳೆದಿರುವುದು ಅವರನ್ನು ಅಮರರನ್ನಾಗಿಸಿದೆ.

ಪ್ರತಿಕ್ರಿಯಿಸಿ (+)