ಶುಕ್ರವಾರ, ಮಾರ್ಚ್ 5, 2021
27 °C
ಅಣೆಕಟ್ಟುಗಳ ಬಳಿ ಸೌಲಭ್ಯ ಕಲ್ಪಿಸಲು ಜಲಸಂಪನ್ಮೂಲ ಇಲಾಖೆ ಸಿದ್ಧತೆ

ಪ್ರವಾಸಿಗರ ಆಕರ್ಷಣೆಗೆ ಹೊಸ ಹೆಜ್ಜೆ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಪ್ರವಾಸಿಗರ ಆಕರ್ಷಣೆಗೆ ಹೊಸ ಹೆಜ್ಜೆ

ಬೆಂಗಳೂರು: ನೀರಾವರಿ ಉದ್ದೇಶಕ್ಕಾಗಿ ನಿರ್ಮಿಸಿರುವ ಜಲಾಶಯಗಳನ್ನು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ರೂಪಿಸಲು ಜಲಸಂಪನ್ಮೂಲ ಇಲಾಖೆ ಸಿದ್ಧತೆ ನಡೆಸಿದೆ.ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿದ ಕೃಷ್ಣರಾಜಸಾಗರ(ಕೆಆರ್‌ಎಸ್‌) ಮತ್ತು ಬೃಂದಾವನ ಉದ್ಯಾನ ಮಾತ್ರ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಬಿನಿ, ಭದ್ರಾ ಅಣೆಕಟ್ಟೆಗಳಲ್ಲಿ ‘ಜಂಗಲ್‌ ಲಾಡ್ಜಸ್‌ ಎಂಡ್‌ ರೆಸಾರ್ಟ್ಸ್’ ಸಂಸ್ಥೆಯ ಐಷಾರಾಮಿ ಹೋಟೆಲ್‌ಗಳಿವೆ. ಆಲಮಟ್ಟಿಯಲ್ಲಿ  ಉದ್ಯಾನ ಬಿಟ್ಟರೆ ಪ್ರವಾಸಿಗರನ್ನು ಆಕರ್ಷಿಸುವ ಸೌಲಭ್ಯಗಳಿಲ್ಲ.ಬಯಸಿದಷ್ಟು ಹೊತ್ತು ಆಟವಾಡುವಷ್ಟು ನೀರು, ಕಣ್ಮನ ತಣಿಸುವ ಮನೋಹರ ದೃಶ್ಯ, ಆಹ್ಲಾದಕರ ವಾತಾವರಣ ಸೇರಿದಂತೆ ಪ್ರವಾಸಿಗರ ಬರಸೆಳೆಯುವ ಎಲ್ಲಾ ಅರ್ಹತೆಗಳಿದ್ದರೂ ಜಲಾಶಯಗಳನ್ನು ಕೇಂದ್ರೀಕರಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಗಳ ಅನುಷ್ಠಾನಕ್ಕೆ ಇಲ್ಲಿಯವರೆಗಿನ ಸರ್ಕಾರಗಳು ಆಸಕ್ತಿ ತೋರಿಲ್ಲ.ಜಲಾಶಯಗಳ ನೀರನ್ನು ಕೃಷಿ ಉಪಯೋಗಕ್ಕೆ, ಕುಡಿಯುವ ನೀರಿಗೆ, ಹೆಚ್ಚೆಂದರೆ ವಿದ್ಯುತ್‌ ಉತ್ಪಾದನೆಗೆ ಮಾತ್ರ ಬಳಸಲಾಗಿದೆ. ಇದೇ ಮೊದಲ ಬಾರಿಗೆ ಜಲಾಶಯಗಳ ಹಿನ್ನೀರು, ಅಣೆಕಟ್ಟಿನಿಂದ ಹೊರಗೆ ಧುಮ್ಮಿಕ್ಕುವ ನೀರು ಮತ್ತು ಜಲಾಶಯಗಳ ಕೆಳಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಿ ಹೊರರಾಜ್ಯ ಮತ್ತು ವಿದೇಶಿ ಪ್ರವಾಸಿಗರನ್ನು ಸೆಳೆಯಲು ಇಲಾಖೆ ಆಸಕ್ತಿ ತೋರಿದೆ.ಕೃಷ್ಣಾ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ ಹಾಗೂ ಕಾವೇರಿ ನೀರಾವರಿ ನಿಗಮಗಳು ತಮ್ಮ ವ್ಯಾಪ್ತಿಯ ಜಲಾಶಯಗಳನ್ನು ಆಧರಿಸಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಪ್ರತ್ಯೇಕವಾಗಿ ಪ್ರಸ್ತಾವನೆ ಸಿದ್ಧಪಡಿಸಿವೆ.ಆಲಮಟ್ಟಿ ಜಲಾಶಯದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಯೋಜನೆಗಳ ಅನುಷ್ಠಾನಕ್ಕೆ ಟೆಂಡರ್‌ ಕರೆಯಲು ಅನುಮೋದನೆ ನೀಡಲಾಗಿದೆ. ಕೃಷ್ಣಾ ಭಾಗ್ಯ ಜಲನಿಗಮದಿಂದ ಭೂಮಿ ಹಸ್ತಾಂತರ, ಲಾಭ ಹಂಚಿಕೆಗೆ ಸಂಬಂಧಿಸಿ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ. ಇದನ್ನು ಆಧರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಭದ್ರಾ, ಮಲಪ್ರಭಾ, ಘಟಪ್ರಭಾ, ಹೇಮಾವತಿ ಜಲಾಶಯಗಳಿಗೆ ಪ್ರತ್ಯೇಕ ಯೋಜನೆಗಳನ್ನು ರೂಪಿಸಲಾಗಿದೆ. ಕೆಆರ್‌ಎಸ್‌ ಅಣೆಕಟ್ಟಿನ ಆಸುಪಾಸು ಪ್ರವಾಸೋದ್ಯಮಕ್ಕೆ ಪೂರಕವಾಗಿ ಮೂಲಸೌಕರ್ಯ ಹೆಚ್ಚಿಸಿ, ಬೃಂದಾವನ ಉದ್ಯಾನಕ್ಕೆ ಪ್ರವಾಸಿಗರನ್ನು ಆಕರ್ಷಿಸಲು  ಮಾಸ್ಟರ್‌ಪ್ಲಾನ್‌  ಮತ್ತು ಸಮಗ್ರ ಯೋಜನಾ ವರದಿ ತಯಾರಿಸಲು ಕಾವೇರಿ ನೀರಾವರಿ ನಿಗಮ ಟೆಂಡರ್‌ ಕರೆದಿತ್ತು. ಇದೇ ವರ್ಷದ ಮೇ ತಿಂಗಳಿನಲ್ಲಿ ಇಬ್ಬರು ಟೆಂಡರುದಾರರ ತಾಂತ್ರಿಕ ಬಿಡ್‌ಗೆ ಅನುಮೋದನೆ ನೀಡಲಾಗಿದೆ. ಆರ್ಥಿಕ ಬಿಡ್‌ ತೆರೆಯುವುದು ಇನ್ನಷ್ಟೇ ಬಾಕಿ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.