ಬುಧವಾರ, ಏಪ್ರಿಲ್ 14, 2021
25 °C

ಪ್ರವಾಸಿ ತಾಣವಾಗಿ ಶಿವಗಂಗೆ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: `ಪ್ರಕೃತಿ ಸೌಂದರ್ಯದ ಐತಿಹಾಸಿಕ ನಿಗೂಢತೆಯನ್ನು ಹೊಂದಿರುವ ಶಿವಗಂಗೆ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭಾನುವಾರ ಭರವಸೆ ನೀಡಿದರು.ತಾಲ್ಲೂಕಿನ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಕಂಬಾಳು ಸಂಸ್ಥಾನ ಮಠದ ನೂತನ ಪಟ್ಟಾಧಿಕಾರ ಮಹೋತ್ಸವ ಮತ್ತು ಸಿದ್ದಗಂಗಾ ಶ್ರೀಗಳ ಗುರುವಂದನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.`ಶಿವ ಸಂಗಮ~ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ, `ಕ್ಷೇತ್ರದ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ನೆರವು ನೀಡುವ ಮೂಲಕ ಅದರ ಭವ್ಯ ಪರಂಪರೆಯನ್ನು ಮರು ಸ್ಥಾಪಿಸಲು ಸಹಕರಿಸಲಿದೆ~ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ವಿ.ನಾಗರಾಜು ಹಾಗೂ ಸಚಿವ ಎಂ.ಪಿ. ರೇಣುಕಾಚಾರ್ಯ, ಮೇಲಣಗವಿ ಮಠದ ಮಲಯ ಶಾಂತಮುನಿಶಿವಾಚಾರ್ಯ, ನೂತನ ಶ್ರೀಗಳಾದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಅಭಿನಂದಿಸಿದರು.ಈ ಸಂದರ್ಭದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ, ಬಂಡೇಮಠದ ಬಸವಲಿಂಗ ಸ್ವಾಮೀಜಿ, ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ ಮಹೋತ್ಸವ ಕುರಿತು ಮಾತನಾಡಿದರು. ಮಾಜಿ ಸಚಿವರಾದ ಶಂಕರನಾಯಕ್, ಅಂಜನಮೂರ್ತಿ, ಕಂಬಾಳು ಮಠದ ಹಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ವೇದಿಕೆಯಲ್ಲಿದ್ದರು.ಶಿವಸಂಗಮ ಸಂಚಿಕೆಯ ಸಂಪಾದಕ ಸಚ್ಚಿದಾನಂದಮೂರ್ತಿ, ಪಾಲನೇತ್ರ ಕಂಬಾಳು ಸಂಚಿಕೆಯ ಲೇಖಕ ಡಾ.ನಂಜುಂಡಸ್ವಾಮಿ, ಬಿ.ಎಸ್.ಕೆಂಪರಾಜು, ಸೋಲೂರಿನ ಗಿರೀಶ್, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎನ್.ತಿಪ್ಪಣ್ಣ, ನಾರಾಯಣಸ್ವಾಮಿರೆಡ್ಡಿ ಅವರನ್ನು  ಸನ್ಮಾನಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.