ಗುರುವಾರ , ಮೇ 19, 2022
20 °C

ಪ್ರಾರ್ಥನಾ ಸ್ಥಳ ಬೆಂಕಿಗಾಹುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ (ಪಿಟಿಐ): ಸುಮಾರು 200 ವರ್ಷಗಳ ಇತಿಹಾಸ ಇರುವ ಇಲ್ಲಿನ ಪ್ರಸಿದ್ಧ ದಸ್ತಗೀರ್ ಸಾಹಿಬ್ ಪವಿತ್ರ ಮಂದಿರವು ಸೋಮವಾರ ಮುಂಜಾನೆ ಹಠಾತ್ ಕಾಣಿಸಿಕೊಂಡ ಬೆಂಕಿಗೆ ಆಹುತಿಯಾಗಿದೆ.ಇಲ್ಲಿನ ಕನ್ಯಾರ ಪ್ರದೇಶದಲ್ಲಿರುವ ಮಂದಿರವು ಕಟ್ಟಿಗೆಯಿಂದ ನಿರ್ಮಾಣವಾಗಿದೆ. ಹೀಗಾಗಿ ಬೆಂಕಿ ಕ್ಷಣಾರ್ಧದಲ್ಲಿ ಆವರಿಸಿಕೊಂಡಿತು ಎಂದು ಪ್ರಕೃತಿ ವಿಕೋಪ ನಿರ್ವಹಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.ಇಲ್ಲಿಯ ಪ್ರಸಿದ್ಧ ಧರ್ಮಬೋಧಕ ಗಾವುಸ್-ಉಲ್-ಅಜಂ ಸೇರಿದಂತೆ 11ನೇ ಶತಮಾನದ ವಿಶ್ವದ ಹಲವು ಪ್ರಸಿದ್ಧ ಧರ್ಮಬೋಧಕರ ಸ್ಮಾರಕಗಳು ಇಲ್ಲಿವೆ. ಅವುಗಳೆಲ್ಲ ನೆಲಮಾಳಿಗೆಯಲ್ಲಿದ್ದರಿಂದ ಯಾವುದೇ ಹಾನಿ ಉಂಟಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಮಂದಿರಕ್ಕೆ ಬೆಂಕಿ ತಗುಲಿದ ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಆದರೆ ಅಷ್ಟರಲ್ಲೇ ಮಂದಿರ ನಾಶಗೊಂಡಿತ್ತು. ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.ಸ್ಥಳೀಯರಿಂದ ಪ್ರತಿಭಟನೆ: ಮಂದಿರಕ್ಕೆ ಬೆಂಕಿ ತಗುಲಿದ ವಿಷಯ ತಿಳಿದ ನಂತರವೂ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳದವರು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.  ಅಲ್ಲದೆ ಅಗ್ನಿ ಶಾಮಕ ಸಿಬ್ಬಂದಿ ಮೇಲೆ ಹಾಗೂ ಕನ್ಯಾರ ಪೊಲೀಸ್ ಠಾಣೆಯ ಮೇಲೂ ಕಲ್ಲು ತೂರಾಟ ನಡೆಸಿದ ಪರಿಣಾಮ ಹಲವು ನಾಗರಿಕರು ಹಾಗೂ 11 ಸಿಬ್ಬಂದಿಗೆ ಗಾಯಗಳಾಗಿವೆ. ಪ್ರತಿಭಟನಾ ನಿರತ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಆಗಬಾರದು ಮತ್ತು ಕಾನೂನು ಕಾಪಾಡುವ ಉದ್ದೇಶದಿಂದ ಕನ್ಯಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕರ್ಫ್ಯೂ ತರಹದ ನಿರ್ಬಂಧನೆಗಳನ್ನು ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ತನಿಖೆಗೆ ಆದೇಶ: ದಸ್ತಗೀರ್ ಸಾಹಿಬ್ ಮಂದಿರಕ್ಕೆ ಬೆಂಕಿ ತಗುಲಿದ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳುವಂತೆ ಜಮ್ಮು ಕಾಶ್ಮೀರ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.ತನಿಖೆಯ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು. ಈ ವಿಷಯದಲ್ಲಿ ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿರುವ ಕಾನೂನು ಸಚಿವ ಮೊಹಮ್ಮದ್ ಸಗರ್, ಮುಸ್ಲಿಂ ವಕ್ಫ್ ಮಂಡಳಿ ಮಂದಿರದ ಪುನರ್‌ನಿರ್ಮಾಣ ಕಾರ್ಯವನ್ನು ಸದ್ಯದಲ್ಲೇ ಪ್ರಾರಂಭಿಸಲಿದೆ ಎಂದು ಭರವಸೆ ನೀಡಿದ್ದಾರೆ.ಮುಷ್ಕರ: ಈ ಅವಘಡ ವಿರೋಧಿಸಿ ಹಲವಾರು ಪ್ರತ್ಯೇಕತಾವಾದಿ ಗುಂಪುಗಳು ಮಂಗಳವಾರ ಮುಷ್ಕರಕ್ಕೆ ಕರೆ ನೀಡಿವೆ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.