ಸೋಮವಾರ, ಮಾರ್ಚ್ 8, 2021
31 °C

ಪ್ರೇಮದ ಜೊತೆಗೆ ವಿದ್ಯುತ್‌ ಸಂಚಾರ!

ಸಂದರ್ಶನ: ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಪ್ರೇಮದ ಜೊತೆಗೆ ವಿದ್ಯುತ್‌ ಸಂಚಾರ!

ದರ್ಶನ್ ಅಭಿನಯದ ‘ವಿರಾಟ್’ ಇಂದು ತೆರೆ ಕಾಣುತ್ತಿದೆ. ‘ಜಗ್ಗುದಾದಾ’ ಚಿತ್ರೀಕರಣಕ್ಕೆಂದು ಮುಂಬೈಗೆ ಹೊರಡುವ ಅವಸರದಲ್ಲಿದ್ದ ಅವರು, ಕೊಂಚ ಬಿಡುವು ಮಾಡಿಕೊಂಡು ‘ಚಂದನವನ’ದ ಜತೆ ಮಾತಾಡಿದರು.* ಇಲ್ಲಿ ‘ವಿರಾಟ್’ ಬಿಡುಗಡೆಯಾಗುತ್ತಿದೆ. ಈ ಸಮಯದಲ್ಲಿ ನೀವು ಮುಂಬೈಗೆ ಹೊರಟಿದ್ದೀರಿ..?

ಅದು ಮೊದಲೇ ಪ್ಲ್ಯಾನ್ ಆಗಿತ್ತು. ಹೀಗಾಗಿ ‘ವಿರಾಟ್‌’ ಬಿಡುಗಡೆ ದಿನದ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಮೂರು ದಿನ ಅಲ್ಲಿ ‘ಜಗ್ಗು ದಾದಾ’ ಶೂಟಿಂಗ್ ಮುಗಿಸಿ ಮತ್ತೆ ಬಂದು, ಪ್ರಚಾರದಲ್ಲಿ ಭಾಗವಹಿಸುತ್ತೇನೆ.

* ಇದು ಮೂರು ವರ್ಷಗಳ ಹಿಂದೆ ಶುರುವಾದ ಚಿತ್ರ. ಈಗಲೂ ಪ್ರಸ್ತುತ ಅನಿಸುವಂತಿದೆಯೇ?

ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಲವ್‌ ಸ್ಟೋರಿ ಜತೆಗೊಂದು ಸಂದೇಶವಿದೆ. ವಿದ್ಯುತ್ ಕೊರತೆಯನ್ನು ನಾವು ಈಗಲೂ ಅನುಭವಿಸುತ್ತಿದ್ದೇವೆ, ಅಲ್ಲವೇ? ಅದನ್ನೇ ಆಧರಿಸಿದ ಕಥೆ ಇದೆ. ಇನ್ನು ಐದು ವರ್ಷ ಬಿಟ್ಟು ಹೇಳಿದರೂ ಆಗಲೂ ಪ್ರಸ್ತುತ ಅನಿಸುವಂತೆಯೇ ಇರುತ್ತದೆ. ಜತೆಗೊಂದಿಷ್ಟು ಪ್ರೀತಿ–ಪ್ರೇಮದ ಕಥಾನಕವೂ ಇದೆ. ನಾನು ಮೊನ್ನೆಯಷ್ಟೇ ಡಬ್ಬಿಂಗ್ ಮಾಡುವಾಗ ನೋಡಿದೆ. ಈಗಲೂ ಸರಿಯಾಗಿಯೇ ಇದೆ ಅನಿಸಿತು. ಹಾಡುಗಳು ಮೂರು ವರ್ಷಗಳಷ್ಟು ಹಳೆಯವು, ಅಷ್ಟೇ. ನಮ್ಮಲ್ಲಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ನಾವು ಹೇಗೆ ವಿದ್ಯುತ್ ಉತ್ಪಾದಿಸಬಹುದು ಎಂಬ ದಾರಿಗಳನ್ನೂ ಅದರಲ್ಲಿ ಹೇಳಿದ್ದೇವೆ. ಇಡೀ ಸಿನಿಮಾ ಅದರ ಮೇಲೆ ನಡೆಯುತ್ತದೆ. ಹಾಗೆಂದು ಇದು ಕಲಾತ್ಮಕ ಸಿನಿಮಾ ಅಲ್ಲ!* ಅಂದರೆ ಕಲಾತ್ಮಕ ಸಿನಿಮಾದಲ್ಲಿ ಅಭಿನಯಿಸಲು ಆಸಕ್ತಿ ಇಲ್ಲವೇ?

...ನಾನು ಅಂಥ ಸಿನಿಮಾಗಳನ್ನು ಒಪ್ಪಿಕೊಳ್ಳುವೆ ಎಂದು ಹೇಳಿದ ತಕ್ಷಣವೇ ನಿರ್ದೇಶಕರು – ನಿರ್ಮಾಪಕರು ಬಂದು ಬಿಡುತ್ತಾರೆ. ಸದ್ಯಕ್ಕೆ ನನಗೆ ಅಷ್ಟೊಂದು ಟೈಮ್‌ ಇಲ್ಲ. ಈಗಿನ ಚಿತ್ರಗಳನ್ನು ಮೊದಲು ಪೂರ್ಣಗೊಳಿಸಬೇಕಿದೆ. ಅದಾದ ಬಳಿಕವಷ್ಟೇ ಯೋಚಿಸೋಣ.* ‘ವಿರಾಟ್‌’ನಲ್ಲಿ ಅಭಿಮಾನಿಗಳಿಗೆ ಏನೇನು ಕೊಡಲಿದ್ದೀರಿ?

ದೊಡ್ಡ ದೊಡ್ಡ ಸಂಭಾಷಣೆಗಳು ನನ್ನ ಸಿನಿಮಾದಲ್ಲಿ ಸಾಮಾನ್ಯ. ಆದರೆ ಈ ಚಿತ್ರ ಅದಕ್ಕಿಂತ ವಿಭಿನ್ನ. ಎಲ್ಲ ಮಾತುಗಳೂ ಒಂದೆರಡು, ಹೆಚ್ಚೆಂದರೆ ಮೂರು ಸಾಲು ಮಾತ್ರ. ಪಂಚಿಂಗ್ ಡೈಲಾಗ್ ಇಲ್ಲವೇ ಇಲ್ಲ. ಕಥೆಗೆ ಏನು ಬೇಕೋ ಅಷ್ಟು ಮಾತ್ರ ಇದೆ. ಅಭಿಮಾನಿಗಳಿಗೆ ನಿರಾಸೆ ಆಗದಂತೆ ಶಿಳ್ಳೆ ಗಿಟ್ಟಿಸುವ ಸಂಭಾಷಣೆ ಒಂದೊಂದು ಕಡೆ ಮಾತ್ರ ಇದೆ. ನಾಲ್ಕು ಫೈಟ್‌ಗಳಿವೆ. ಎಲ್ಲವೂ ಎರಡು ಮೂರು ನಿಮಿಷ ಮಾತ್ರ ಇವೆ. ಆದರೆ ಸ್ಟೈಲಿಶ್ ಆಗಿವೆ.* ಒಬ್ಬಿಬ್ಬರಲ್ಲ, ಮೂವರು ನಾಯಕಿಯರು ಇದ್ದಾರೆ..?

ಅಯ್ಯೋ, ನಾನು ಕೇಳಿಲ್ಲ ಸ್ವಾಮಿ..! ಸಿನಿಮಾಕ್ಕೆ ಬೇಕು ಅಂತ ಮೂವರು ನಾಯಕಿಯರ ಪಾತ್ರಗಳಿವೆ. ಸ್ಟೋರಿಯೇ ಆ ಥರ ಇದೆ. ನಾಯಕನ ಸ್ವಭಾವವನ್ನು ಮೂವರು ನಾಯಕಿಯರು ಇಷ್ಟಪಡುತ್ತಾರೆ. ಹೀಗಾಗಿ ವಿದಿಷಾ ಶ್ರೀವಾತ್ಸವ್, ಇಷಾ ಚಾವ್ಲಾ ಮತ್ತು ಚೈತ್ರಾ ಚಂದ್ರನಾಥ್ ಸಿನಿಮಾದಲ್ಲಿ ಇದ್ದಾರೆ.* ಸಿನಿಮಾ ಇಷ್ಟೊಂದು ತಡ ಆಗಲು ಕಾರಣವೇನು?

ಅದಕ್ಕೆ ಅದರದೇ ಆದ ಕಾರಣ ಸಾಕಷ್ಟಿವೆ. ಹಾಡುಗಳನ್ನು ಶೂಟಿಂಗ್ ಮಾಡಿ, ಅದರ ಹಿಂದೆಯೇ ಎಲ್ಲ ಚಿತ್ರೀಕರಣ ಮಾಡಿಬಿಡಲು ಸಾಧ್ಯವಿಲ್ಲ. ನಿರ್ಮಾಪಕ– ನಿರ್ದೇಶಕರ ಐಡಿಯಾ ಏನೇನು ಇರುತ್ತವೆಯೋ? ಇನ್ನೊಂದು ಮಾತೆಂದರೆ, ನಾನು ಈ ಮೊದಲೆಲ್ಲ ಅವಸರ ಮಾಡುತ್ತಿರಲಿಲ್ಲ. ನನ್ನ ಸಿನಿಮಾ ಅಂದರೆ ನಿರ್ದೇಶಕ – ನಿರ್ಮಾಪಕರಿಗೂ ಅದೇ ಧೋರಣೆ ಇರುವಂತೆ ಕಾಣುತ್ತಿದೆ. ಇದೇ ವಿಳಂಬಕ್ಕೆ ಕಾರಣ. ಹೀಗಾಗಿ ಮೊದಲು ಟೈಂ ಫ್ರೇಮ್ ಹಾಕಿಕೊಳ್ಳಿ; ಅಷ್ಟರೊಳಗೆ ಸಿನಿಮಾದ ಕೆಲಸ ಮುಗಿಸಿಬಿಡಿ ಎಂದು ಈಗ ಕಟ್ಟುನಿಟ್ಟಾಗಿ ಹೇಳುತ್ತಿದ್ದೇನೆ.* ಈ ವರ್ಷದಲ್ಲಿ ಮೂರು ಚಿತ್ರಗಳನ್ನು ಕೊಡುವುದಾಗಿ ಹೇಳಿದ್ದಿರಿ..?

ಖಂಡಿತ... ಈಗ ‘ವಿರಾಟ್’ ಬಿಡುಗಡೆಯಾಗುತ್ತಿದೆ. ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿರುವ ‘ಜಗ್ಗುದಾದಾ’ ಮುಗಿಯುವ ಹಂತದಲ್ಲಿದೆ. ಮೇ ಹೊತ್ತಿಗೆ ತೆರೆ ಮೇಲೆ ಬರಲಿದೆ. ‘ಚಕ್ರವರ್ತಿ’ ಮಾರ್ಚ್‌ ತಿಂಗಳಿನಲ್ಲಿ ಆರಂಭವಾಗಲಿದ್ದು, ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ.* ಜನ್ಮ ದಿನದಂದೇ ‘ಚಕ್ರವರ್ತಿ’ ಸೆಟ್ಟೇರಲಿದೆಯಾ?

ಖಂಡಿತ ಇಲ್ಲ ಸ್ವಾಮಿ... ನನ್ನ ಬರ್ತ್‌ಡೇ ದಿನದಂದು ಮುಹೂರ್ತ ನೆರವೇರಿದ ಸಿನಿಮಾಗಳೆಲ್ಲ ವರ್ಷಗಟ್ಟಲೇ ತಡವಾಗಿ ಬಿಡುಗಡೆ ಆಗಿವೆ. ಅಂಬರೀಷ, ಐರಾವತ, ಜಗ್ಗು ದಾದಾ, ಬೃಂದಾವನ, ಬುಲ್‌ಬುಲ್‌ ಇವೆಲ್ಲ ಜನ್ಮದಿನದಂದೇ ಸೆಟ್ಟೇರಿದ್ದು. ಒಂದು ವರ್ಷದೊಳಗೆ ಇವಾವೂ ಮುಗಿಯಲೇ ಇಲ್ಲ! ಹೀಗಾಗಿ ಈ ಸಲ ಅದನ್ನು ಬಿಟ್ಟು, ಚಿತ್ರ ಶುರು ಮಾಡುತ್ತಿದ್ದೇನೆ.* ‘ಸಿಸಿಎಲ್‌’ನಲ್ಲಿ ಕ್ರಿಕೆಟ್‌ ಆಡುವುದಕ್ಕೆ ಹೋಗಲಿದ್ದೀರಾ?

ಅದಕ್ಕೆಲ್ಲ ಸಾಕಷ್ಟು ಸಮಯ ಬೇಕು. ನನಗೆ ಈಗ ಅಷ್ಟೊಂದು ಟೈಮ್‌ ಇಲ್ಲ. ಒಂದು ಆಟದಲ್ಲಿ ಪಾಲ್ಗೊಳ್ಳಬೇಕೆಂದರೆ ಸಾಕಷ್ಟು ಕಾಲ ಕರಾರುವಾಕ್ಕಾಗಿ ಪ್ರಾಕ್ಟೀಸ್‌ ಮಾಡಲೇಬೇಕು. ಅದಿಲ್ಲದೇ ನೇರವಾಗಿ ಸ್ಟೇಡಿಯಂಗೆ ಹೋಗುವುದು ಸರಿಯಲ್ಲ. ಹೀಗಾಗಿ ಆ ಯೋಚನೆ ಸದ್ಯಕ್ಕೆ ನನಗಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.