ಪ್ರೊ ಕಬಡ್ಡಿ ‘ಉತ್ಸವ’ಕ್ಕೆ ವೇದಿಕೆ ಸಜ್ಜು

ವಿಶಾಖ ಪಟ್ಟಣ: ಹಲವು ದಿನಗಳಿಂದ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಕಬಡ್ಡಿ ಲೀಗ್ ಮೂರನೇ ಆವೃತ್ತಿಗೆ ಶನಿವಾರ ಚಾಲನೆ ದೊರೆಯಲಿದೆ.
ಎಂಟು ತಂಡಗಳ ನಡುವೆ ಒಟ್ಟು 60 ಪಂದ್ಯಗಳು ನಡೆಯಲಿವೆ. ಎರಡು ವರ್ಷಗಳ ಹಿಂದೆಯಷ್ಟೇ ಆರಂಭವಾದ ಕಬಡ್ಡಿ ಲೀಗ್ಗೆ ಕಡಿಮೆ ಅವಧಿಯಲ್ಲಿ ಸಾಕಷ್ಟು ಪ್ರಚಾರ ಲಭಿಸಿದೆ. ಆದ್ದರಿಂದ 2016ರಿಂದ ವರ್ಷಕ್ಕೆ ಎರಡು ಬಾರಿಲೀಗ್ ನಡೆಸಲು ಸಂಘಟಕರು ತೀರ್ಮಾನಿಸಿದ್ದಾರೆ.
ಇಲ್ಲಿನ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿ ರುವ ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ಮತ್ತು ತೆಲುಗು ಟೈಟಾನ್ಸ್ ತಂಡಗಳು ಪೈಪೋಟಿ ನಡೆಸಲಿವೆ. ಅನೂಪ್ ಕುಮಾರ್ ನಾಯಕತ್ವದ ಮುಂಬಾ ತಂಡ 2014ರಲ್ಲಿ ರನ್ನರ್ಸ್ ಅಪ್ ಆಗಿತ್ತು. ಹೋದ ವರ್ಷ ಪ್ರಶಸ್ತಿ ಜಯಿಸಿತ್ತು. ಈ ಬಾರಿಯೂ ಟ್ರೋಫಿ ಉಳಿಸಿಕೊಳ್ಳುವ ಗುರಿ ಹೊಂದಿರುವ ಮುಂಬಾ ಗೆಲುವಿನ ಆರಂಭ ಪಡೆಯುವ ಲೆಕ್ಕಾಚಾರ ಹೊಂದಿದೆ.
‘ರೈಡಿಂಗ್ ವಿಭಾಗ ನಮ್ಮ ತಂಡದ ಶಕ್ತಿ. ಮಣ್ಣಿನಂಕಣದಲ್ಲಷ್ಟೇ ಕಬಡ್ಡಿ ಆಡಿ ಅನುಭವವಿದ್ದ ನಮಗೆ ಲೀಗ್ ಹೊಸ ವೇದಿಕೆ ಒದಗಿಸಿಕೊಟ್ಟಿದೆ. ಲೀಗ್ ನಿಂದಾಗಿ ಮ್ಯಾಟ್ ಮೇಲೆ ಆಡು ವಂತಾಗಿದೆ. ದೇಶಿ ಕ್ರೀಡೆ ವಿದೇಶ ದಲ್ಲಿಯೂ ಹೆಸರು ಮಾಡಿದೆ. ಲೀಗ್ನಲ್ಲಿ ಆಡುವುದೇ ಅತ್ಯಂತ ಹೆಮ್ಮೆ ಎನ್ನುವ ಭಾವ ಆಟಗಾರರಲ್ಲಿ ಮೂಡಿದೆ. ಆದ್ದರಿಂದ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಗುರಿ ನಮ್ಮದು’ ಎಂದು ಅನೂಪ್ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.
ಪ್ರಮುಖ ರೈಡರ್ಗಳಾದ ರಾಹುಲ್ ಚೌಧರಿ, ಪ್ರಶಾಂತ್ ಕುಮಾರ್ ರೈ, ಸುಕೇಶ್ ಹೆಗ್ಡೆ, ರಾಹುಲ್ ಕುಮಾರ್, ರವಿತ್ ಕುಮಾರ್ ಅವರನ್ನು ಒಳಗೊಂಡಿರುವ ಟೈಟಾನ್ಸ್ ತಂಡಕ್ಕೆ ಒಮ್ಮೆಯೂ ಫೈನಲ್ ಪ್ರವೇಶಿಸಲು ಸಾಧ್ಯವಾಗಿಲ್ಲ. ಹೋದ ವರ್ಷ ಸೆಮಿಫೈನಲ್ನಲ್ಲಿ ಬೆಂಗಳೂರು ಬುಲ್ಸ್ ಎದುರು ಸೋತಿತ್ತು. ಅದಕ್ಕೂ ಮೊದಲು ಲೀಗ್ ಹಂತದಿಂದಲೇ ಹೊರ ಬಿದ್ದಿತ್ತು.
ಹೊಸ ತಂಡದ ಹೊಸ ಕನಸು: ಮೊದಲ ಎರಡು ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್ ತಂಡಗಳಲ್ಲಿದ್ದ ಕೆಲ ಆಟಗಾರರು ಈಗ ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ. ಕೆಲ ಅನುಭವಿಗಳು ಬುಲ್ಸ್ಗೆ ಬಂದಿದ್ದಾರೆ. ಎರಡು ವರ್ಷ ಪ್ರಶಸ್ತಿ ಸನಿಹ ಬಂದು ನಿರಾಸೆ ಕಂಡಿರುವ ಬುಲ್ಸ್ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲಲಿ ಎಂಬುದು ಬೆಂಗಳೂರು ತಂಡದ ಅಭಿಮಾನಿಗಳ ಆಸೆ.
ಈ ಆಸೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಬುಲ್ಸ್ ಒಂದು ತಿಂಗಳಿಂದ ಉದ್ಯಾನನಗರಿಯಲ್ಲಿ ಅಭ್ಯಾಸ ನಡೆಸಿದೆ. ಸುರ್ಜಿತ್ ನರ್ವಾಲ್ ನಾಯಕತ್ವದ ಬುಲ್ಸ್ ಶನಿವಾರ ನಡೆಯುವ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಎದುರು ಪೈಪೋಟಿ ನಡೆಸಲಿದೆ.
ಬುಲ್ಸ್ ತಂಡದಲ್ಲಿ ದೀಪಕ್ ಕುಮಾರ್ ದಹಿಯಾ, ವೈಭವ್ ಕಾಳೆ, ವಿನೋತ್ ಕುಮಾರ್, ಡಿಫೆಂಡರ್ ಲೆಫ್ಟ್ ಕಾರ್ನರ್ ವಿಜೇಂದರ್ ಸಿಂಗ್, ಆಲ್ರೌಂಡರ್ ಪ್ರೀತಮ್ ಚಿಲಾರ್ ಮತ್ತು ಶಶಾಂಕ್ ವಾಂಖೆಡೆ ಅವರಂಥ ಪ್ರತಿಭಾನ್ವಿತ ಆಟಗಾರರು ಇದ್ದಾರೆ.
ಎದುರಾಳಿ ಡೆಲ್ಲಿ ತಂಡವೂ ಬಲಿಷ್ಠ ವಾಗಿದೆ. ಕನ್ನಡಿಗ ಹೊನ್ನಪ್ಪ ಗೌಡ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವ ಡೆಲ್ಲಿ ತಂಡ 2014ರಲ್ಲಿ ಆರನೇ ಸ್ಥಾನ ಮತ್ತು ಹೋದ ವರ್ಷ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಮೂರನೇ ಆವೃತ್ತಿಯಲ್ಲಿ ಪ್ರಶಸ್ತಿಯ ಕನಸು ನೇಯ್ಯಲು ಈ ತಂಡ ಸಜ್ಜಾಗಿದೆ.
‘ನಮ್ಮ ತಂಡದ ಆಟಗಾರರಲ್ಲಿ ಯಾವುದೇ ಗಾಯದ ಸಮಸ್ಯೆ ಇಲ್ಲ. ಸರ್ವೀಸಸ್ ತಂಡದ ಕೆಲ ಆಟಗಾರರು ನಮ್ಮಲ್ಲಿ ಬಂದಿದ್ದಾರೆ. ಆದ್ದರಿಂದ ಮೊದಲ ಎರಡು ವರ್ಷಗಳಿಗಿಂತ ಈ ಬಾರಿ ತಂಡ ಬಲಿಷ್ಠವಾಗಿದೆ’ ಎಂದು ಹೊನ್ನಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟೂರ್ನಿಯ ಇನ್ನಿತರ ತಂಡಗಳಾದ ಜೈಪುರ ಪಿಂಕ್ ಪ್ಯಾಂಥರ್ಸ್, ಪಟ್ನಾ ಪೈರೇಟ್ಸ್, ಬಂಗಾಳ ವಾರಿಯರ್ಸ್, ಪುಣೇರಿ ಪಲ್ಟನ್ ತಂಡಗಳು ಅನುಭವಿ ಆಟಗಾರರನ್ನು ತಮ್ಮತ್ತ ಸೆಳೆದು ಕೊಂಡಿವೆ. ಬುಲ್ಸ್ನಲ್ಲಿದ್ದ ಮಂಜಿತ್ ಚಿಲಾರ್ ಮತ್ತು ಅಜಯ್ ಠಾಕೂರ್ ಪುಣೆ ತಂಡ ಸೇರಿಕೊಂಡಿದ್ದಾರೆ.
ಆದ್ದರಿಂದ ಈ ಬಾರಿಯ ಕಬಡ್ಡಿ ಲೀಗ್ ಮೊದಲೆರೆಡು ಆವೃತ್ತಿಗಳಿಗಿಂತ ಸೊಗಸಾಗಿರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ರೈಡಿಂಗ್ ಮೋಡಿ ಮೂಲಕ ಎಲ್ಲರನ್ನು ಸೆಳೆದಿರುವ ಕಾಶಿಲಿಂಗ್ ಅಡಕೆ, ರಾಹುಲ್ ಚೌಧರಿ, ಅಜಯ್ ಠಾಕೂರ್, ಅನೂಪ್ ಕುಮಾರ್ ಮತ್ತು ರಾಜೇಶ್ ನರ್ವಾಲ್ ಅವರ ಆಟದ ಸೊಬಗು ಟೂರ್ನಿಯ ರಂಗು ಹೆಚ್ಚಿಸಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.